ಕೇಂದ್ರ ಸರ್ಕಾರ ನಡೆಸುವ ಸ್ವಚ್ಛತಾ ಸಮೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ದೇಶದ ಟಾಪ್ 10 ಸ್ವಚ್ಛ ನಗರಗಳ ಪಟ್ಟಿಯಲ್ಲಿ ಅರಮನೆ ನಗರಿ ಮೈಸೂರು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
ಸ್ವಚ್ಛತೆಯ ಗೌರವಕ್ಕಾಗಿ ಪೈಪೋಟಿ
ನರೇಂದ್ರ ಮೋದಿಯವರು ದೇಶದ ಚುಕ್ಕಾಣಿ ಹಿಡಿದ ನಂತರ ಈ ಐದು ವರ್ಷಗಳಲ್ಲಿ ಭಾರತ ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಮಾನಸಿಕವಾಗಿ ಸಂಪೂರ್ಣವಾಗಿ ಬದಲಾಗಿದೆ. ಭಾರತವೆಂದರೆ ಮೂಗು ಮುರಿಯುತ್ತಿದ್ದ ಮುಂದುವರಿದ ರಾಷ್ಟ್ರಗಳ ನಾಯಕರು ಇಂದು ವಿವಿಧ ಯೋಗ ಭಂಗಿಗಳನ್ನು ಪ್ರದರ್ಶಿಸಿ ನಮಸ್ಕರಿಸುತ್ತಿದ್ದಾರೆ. ಭಾರತದ ಉತ್ಪನ್ನಗಳೆಂದರೆ ಮೂಗು ಮುರಿಯುತ್ತಿದ್ದ ಭಾರತೀಯರಲ್ಲಿ ಇದೀಗ ಭಾರತದಲ್ಲೇ ತಯಾರಾದ ವಸ್ತುಗಳ ಬಗ್ಗೆ ಹೆಮ್ಮೆ ಮೂಡುತ್ತಿದೆ.
ಅದೇ ರೀತಿ ಮಹಾತ್ಮಾ ಗಾಂಧಿಯವರ ನೆಲದಿಂದ ಬಂದ ನರೇಂದ್ರ ಮೋದಿಯವರು 2014ರ ಅಕ್ಟೋಬರ್ 2, ಗಾಂಧೀ ಜಯಂತಿಯ ದಿನದಂದು ದೇಶದಾದ್ಯಂತ ಸ್ವಚ್ಛ ಭಾರತ ಅಭಿಯಾನ ಉದ್ಘಾಟಿಸಿದರು. ಭಾರತದ ಎಲ್ಲ ಮೂಲೆ ಮೂಲೆಗಳ ಸರ್ಕಾರಿ ಉದ್ಯೋಗಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು, ಸ್ವಯಂ ಸೇವಾ ಸಂಸ್ಥೆಗಳನ್ನೊಳಗೊಂಡ ಇದುವರೆಗಿನ ಅತಿ ದೊಡ್ಡ ಶುಚಿತ್ವ ಅಭಿಯಾನ ಎನ್ನುವ ಹೆಗ್ಗಳಿಕೆಗೆ ಇದು ಪಾತ್ರವಾಯಿತು.
ನೂರಿಪ್ಪತ್ತೈದು ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಮೊದ ಮೊದಲು ಸ್ವಚ್ಛ ಭಾರತ ಅಭಿಯಾನ ಕೇವಲ ತೋರಿಕೆಗಾಗಿ ನಡೆಯುತ್ತಿದೆಯೆಂದು ಕೆಲವರು ಮೂಗು ಮುರಿದರಾದರೂ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಅಭಿಯಾನ ಪ್ರಾರಂಭಿಸುವುದರ ಹಿಂದಿನ ನಿಜವಾದ ಕಾಳಜಿಯನ್ನು ಅರ್ಥ ಮಾಡಿಕೊಂಡಿದ್ದ ಪ್ರಜ್ಞಾವಂತ ನಾಗರಿಕರು ಹಾಗೂ ಮುಖಂಡರಿಂದಾಗಿ ಕೆಲವೇ ಸಮಯದಲ್ಲಿ ವಿಶ್ವದಲ್ಲೇ ಅದೊಂದು ಯಶಸ್ವೀ ಅಭಿಯಾನವೆನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. ಇದೀಗ ದೇಶದಾದ್ಯಂತ ರಾಜ್ಯ ರಾಜ್ಯಗಳ ನಡುವೆ, ನಗರ ನಗರಗಳ ನಡುವೆ, ಪಟ್ಟಣ ಪಟ್ಟಣಗಳ ನಡುವೆ, ಹಳ್ಳಿ ಹಳ್ಳಿಗಳ ನಡುವೆ ಸ್ವಚ್ಛತೆಯ ಗೌರವಕ್ಕೆ ಪಾತ್ರವಾಗಲು ದೊಡ್ಡ ಪೈಪೋಟಿಯೇ ಏರ್ಪಟ್ಟಿದೆ!
ಹೀಗೆ ಸ್ವಚ್ಛ ಭಾರತ ಅಭಿಯಾನವು ನಿರೀಕ್ಷೆಗೂ ಮೀರಿ ಯಶಸ್ಸಿವಾಗುವಲ್ಲಿ ಈ ದೇಶದ ನಾಲ್ಕು ಸಾವಿರಕ್ಕೂ ಹೆಚ್ಚು ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ಸಾಕಷ್ಟು ಜನರು ಸ್ವಯಂ ಪ್ರೇರಿತವಾಗಿ ಯಾವುದೇ ಆಕಾಂಕ್ಷೆಗಳಿಲ್ಲದೆ ಕೈ ಜೋಡಿಸಿದ್ದೇ ಕಾರಣ. ಹಾಗೆಯೇ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡು ದೇಶದ ಸುಂದರ ನಾಳೆಗಳಿಗಾಗಿ ತಮ್ಮದೇ ಆದ ಕೊಡುಗೆ ನೀಡಬಯಸುವ ಆಕಾಂಕ್ಷಿಗಳಿಗೆ ಪ್ರೇರಣಾದಾಯಿಯಾಗಿ ದೇಶದ ಎಲ್ಲಾ ಭಾಗಗಳಲ್ಲೂ ಸ್ವಯಂ ಪ್ರೇರಿತವಾಗಿ ಸಂಪೂರ್ಣ ತನು ಮನ ಧನಗಳೊಂದಿಗೆ ಅನೇಕ ನಾಯಕರು ಹುರಿದುಂಬಿಸುತ್ತಿದ್ದಾರೆ. ಹಾಗೆ ಸ್ವಚ್ಛ ಭಾರತ ಅಭಿಯಾನವನ್ನು ತಮ್ಮ ಸ್ವಂತ ಮನೆಯ ಕಾರ್ಯಕ್ರಮವೆನ್ನುವಂತೆ ನಿರಂತರವಾಗಿ ಪ್ರೀತಿಸಿ, ಪೋಷಿಸಿ, ನಡೆಸಿಕೊಂಡು ಬರುತ್ತಿರುವವರಲ್ಲಿ ಇದೀಗ ತಾನೇ ದೇಶದ ಮೂರನೆಯ ಸ್ವಚ್ಛ ನಾಗರಿಯಾಗಿ ಹೊರ ಹೊಮ್ಮಿರುವ ಸಾಂಸ್ಕೃತಿಕ ನಗರಿ ಮೈಸೂರಿನ ಶ್ರೀ ಹೆಚ್.ವಿ.ರಾಜೀವ್ ಮತ್ತು ಅವರ ನೇತೃತ್ವದ ಹೆಚ್.ವಿ.ರಾಜೀವ್ ಸ್ನೇಹ ಬಳಗ ನಿಸ್ಸಂಶಯವಾಗಿ ಅಗ್ರ ಸಾಲಿನಲ್ಲಿ ನಿಲ್ಲುತ್ತದೆ.
2014ರ ಅಕ್ಟೋಬರ್ ಎರಡರ ಗಾಂಧೀ ಜಯಂತಿಯ ದಿನದಂದು ಅಧಿಕೃತವಾಗಿ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತವನ್ನು ಉದ್ಘಾಟಿಸಿದರೆ, ಅದೇ ಸಮಯದಲ್ಲಿ “ಹೆಚ್.ವಿ.ರಾಜೀವ್ ಸ್ನೇಹ ಬಳಗ ಮೈಸೂರು” ಎನ್ನುವ ಹೆಸರಿನೊಂದಿಗೆ ಸ್ವಚ್ಛ ಮೈಸೂರಿಗೆ ಪಣ ತೊಟ್ಟ ಸಮಾನ ಮನಸ್ಕರ ಬಳಗವೊಂದು ಕೂಡಾ ಪ್ರಾರಂಭವಾಯಿತು. 2014 ರ ನವೆಂಬರ್ ಒಂದರಂದು ಬಳಗದ ಮೊದಲ ಸ್ವಚ್ಛ ಮೈಸೂರು ಅಭಿಯಾನದ ನಡೆಸಲಾಯಿತು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಪ್ರತಿ ವಾರಾಂತ್ಯಗಳಲ್ಲೂ ಸ್ವಚ್ಛ ಮೈಸೂರು ಅಭಿಯಾನವನ್ನು ಹೆಚ್.ವಿ.ರಾಜೀವ್ ಸ್ನೇಹ ಬಳಗ ನಡೆಸುತ್ತಲೇ ಬಂದಿದೆ. ವಾರದಲ್ಲಿ ಸಿಗುವ ಒಂದೇ ರಜೆಯ ದಿನದಂದು ಮನೆಯಲ್ಲೇ ಕುಳಿತು ವಿಶ್ರಾಂತಿ ತೆಗೆದುಕೊಳ್ಳೋಣ ಎಂದು ಬಯಸುವ ಇಂದಿನ ನಗರವಾಸಿಗಳ ಮನಃಸ್ಥಿತಿಯ ನಡುವೆಯೂ ಮಹಿಳೆಯರು, ಪುರುಷರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದಂತೆ ಬಳಗದ ಸದಸ್ಯರು ಪ್ರತಿ ವಾರಾಂತ್ಯದಲ್ಲೂ ಒಂದಿಲ್ಲೊಂದು ಕಡೆ ಸೇರಿ, ಆ ಸ್ಥಳವನ್ನು ಸ್ವಚ್ಛ ಮಾಡುವ ಮೂಲಕ ಸ್ವಚ್ಛ ಭಾರತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಕೇವಲ ಮೈಸೂರು ನಗರವಷ್ಟೇ ಅಲ್ಲದೆ ಸುತ್ತ ಮುತ್ತಲಿನ ಪಟ್ಟಣಗಳು, ಹಳ್ಳಿಗಳು, ಪ್ರೇಕ್ಷಣೀಯ ಸ್ಥಳಗಳು, ದೇವಾಲಯ, ನ್ಯಾಯಾಲಯ, ಆಸ್ಪತ್ರೆ ಕಾಲೇಜು ಆವರಣಗಳೂ ಸೇರಿದಂತೆ ಇದುವರೆಗೂ ನೂರಾರು ಕಡೆಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಬಳಗವು ಹಮ್ಮಿಕೊಂಡು ಯಶಸ್ವಿಯಾಗಿಸಿದೆ. ಕೇವಲ ಸ್ಥಳವನ್ನು ಸ್ವಚ್ಛಗೊಳಿಸುವುದಷ್ಟೇ ಅಲ್ಲದೆ ಅಲ್ಲಿನ ನಿವಾಸಿಗಳಿಗೆ ತಿಳುವಳಿಕೆ ನೀಡುವ ಹಾಗೂ ಆ ಸ್ಥಳಗಳಲ್ಲಿ ಕಸದ ತೊಟ್ಟಿಗಳನ್ನು ಅಳವಡಿಸುವ ಕೆಲಸವನ್ನು ಕೂಡಾ ಮಾಡುವ ಮೂಲಕ ಕೇವಲ ಆ ಒಂದೇ ದಿನವಷ್ಟೇ ಅಲ್ಲದೆ ಆ ಸ್ಥಳವನ್ನು ಶಾಶ್ವತವಾಗಿ ಕಸಮುಕ್ತಗೊಳಿಸುವಲ್ಲಿ ಕೂಡಾ ಸ್ನೇಹ ಬಳಗ ಶ್ರಮಿಸುತ್ತಿದೆ.
ಸ್ನೇಹ ಬಳಗದ ಇಪ್ಪತ್ತೈದನೇ ಸ್ವಚ್ಛ ಮೈಸೂರು ಅಭಿಯಾನದ ಪ್ರಯುಕ್ತ ಉದ್ಯೋಗ ಮೇಳವನ್ನು ಹಾಗೂ ನಗರದ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸುವ ಕೆಲಸವನ್ನೂ ಹಮ್ಮಿಕೊಳ್ಳಲಾಗಿತ್ತು. ನೂರೈವತ್ತನೇ ವಾರದ ಅಭಿಯಾನದ ಪ್ರಯುಕ್ತ ನೂರೈವತ್ತು ಪೌರ ಕಾರ್ಮಿಕರನ್ನು ಗೌರವಿಸಲಾಗಿತ್ತು. ಸ್ವತಃ ಮಹಾ ನಗರ ಪಾಲಿಕೆಯ ಸಹಯೋಗದೊಂದಿಗೂ ಸ್ನೇಹ ಬಳಗ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಿದೆ. ಅದೇ ರೀತಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಇನ್ಫೋಸಿಸ್ ಫೌಂಡೇಶನ್ ಮುಂತಾದ ಸಂಸ್ಥೆಗಳ ಜೊತೆಗೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನೆರವೇರಿಸಿದೆ.
ಸ್ನೇಹ ಬಳಗವು ಗಾಂಧೀ ಜಯಂತಿ, ಅಂಬೇಡ್ಕರ್ ಜಯಂತಿ ಮುಂತಾದ ವಿಶೇಷ ದಿನಗಳಂದು ಸ್ವಚ್ಛತಾ ಆಂದೋಲನವನ್ನು ವಿಶಿಷ್ಟ ರೀತಿಯಲ್ಲಿ ಆಯೋಜಿಸುತ್ತಾ ಜನರನ್ನು ತಲುಪುತ್ತಿದೆ. ಇದುವರೆಗೂ ಅನೇಕ ಗಣ್ಯಾತಿ ಗಣ್ಯರು ಬಳಗದ ಸ್ವಚ್ಛತಾ ಆಂದೋಲನದೊಂದಿಗೆ ಕೈ ಜೋಡಿಸಿದ್ದಾರೆ. ಪೂಜ್ಯ ಬಸವಾನಂದ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ವಿಧಾನ ಪರಿಷತ್ ಸದಸ್ಯರಾದ ಶ್ರೀಯುತ ಗೋ. ಮಧುಸೂದನ್ ಮುಂತಾದವರ ಪಾಲ್ಗೊಳ್ಳುವಿಕೆಯೊಂದಿಗೆ ಪ್ರಾರಂಭವಾದ ಮೊದಲ ಸ್ವಚ್ಛ ಮೈಸೂರು ಅಭಿಯಾನದಲ್ಲಿ ಇದುವರೆಗೆ ಯೋಗಗುರು ಶ್ರೀ ವಚನಾನಂದ ಸ್ವಾಮೀಜಿ, ಮೈಸೂರು ಮಹಾರಾಜರಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದಾರೆ. ಅಭಿಯಾನದ ತೊಂಬತ್ತನೇ ಕಾರ್ಯಕ್ರಮದಲ್ಲಿ ಜನಪ್ರಿಯ ಸಂಸದರಾದ ಶ್ರೀ ಪ್ರತಾಪ್ ಸಿಂಹರವರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ, ನೂರನೇ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಭಾಗವಹಿಸಿದ್ದರು. ಹಾಗೆಯೇ ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮೀಜಿಗಳ ಸಾನ್ನಿಧ್ಯದೊಂದಿಗೆ ನೂರೈವತ್ತನೇ ಅಭಿಯಾನ ನೆರವೇರಿತ್ತು. 160ನೇ ಕಾರ್ಯಕ್ರಮದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವ ಕೃಷ್ಣ ಪಾಲ್ ಗುರ್ಜರ್ ಅವರು ಪಾಲ್ಗೊಂಡಿದ್ದರು. ಕೇವಲ ಭಾರತೀಯರಷ್ಟೇ ಅಲ್ಲದೆ ವಿದೇಶೀ ಪ್ರವಾಸಿಗರೂ ಕೂಡಾ ಸ್ವಚ್ಛ ಮೈಸೂರು ಅಭಿಯಾನದಲ್ಲಿ ಭಾಗವಹಿಸುತ್ತಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದವೂ ಸ್ವಚ್ಛ ಮೈಸೂರು ಅಭಿಯಾನಕ್ಕೆ ದೊರಕಿದೆ.
ಸ್ವಚ್ಛ ಮೈಸೂರು ಎಂದ ಮಾತ್ರಕ್ಕೆ ಕೇವಲ ಕಸ ಗುಡಿಸಿ ಸ್ವಚ್ಛವಾಗಿಸುವುದು ಎಂದೇನೂ ಭಾವಿಸಬೇಕಿಲ್ಲ. ಸ್ವಚ್ಛ ಪರಿಸರಕ್ಕಾಗಿ ಗಿಡಗಳನ್ನು ನೆಡುವ, ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ, ಸೀಡ್ ಬಾಲ್ ತಯಾರಿಸುವ, ಉಚಿತ ಆರೋಗ್ಯ ತಪಾಸಣೆ ನಡೆಸುವ ಕಾರ್ಯಗಳನ್ನೂ ಕೂಡಾ ಸ್ನೇಹ ಬಳಗದ ವತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ.
ಹೀಗೆ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಕರೆಗೆ ಓಗೊಟ್ಟು ನಿಸ್ವಾರ್ಥದಿಂದ ಪೊರಕೆ ಹಿಡಿದ ರಾಜೀವ್ ಅವರನ್ನು ಅದೇ ಪೊರಕೆಯೇ ದೆಹಲಿಯವರೆಗೂ ಕರೆಸಿಕೊಂಡಿತ್ತು. NDTV ಬನೇಗಾ ಸ್ವಚ್ಛ ಇಂಡಿಯಾ ಕಾರ್ಯಕ್ರಮದಲ್ಲಿ ಕುಟುಂಬ ಸಮೇತ ದೆಹಲಿಗೆ ಪ್ರಯಾಣಿಸುವ, ಅಲ್ಲಿ ಅಮಿತಾಬ್ ಬಚ್ಚನ್ ಅವರೂ ಸೇರಿದಂತೆ ದೇಶದ ದಿಗ್ಗಜ ಸ್ವಚ್ಛತಾ ರಾಯಭಾರಿಗಳೊಂದಿಗೆ ವೇದಿಕೆ ಹಂಚಿಕೊಳ್ಳುವ ಹಾಗೂ ತಮ್ಮ ಅನುಭವಗಳನ್ನು ದೇಶದ ಜೊತೆಗೆ ಹಂಚಿಕೊಳ್ಳುವ ಅವಕಾಶ ಅವರಿಗೆ ಒದಗಿಬಂದಿತ್ತು.
ಸ್ನೇಹ ಬಳಗದ ಕಾರ್ಯ ವೈಖರಿಯನ್ನು ಕಂಡ ಇಂದಿನ ಕೇಂದ್ರ ರಕ್ಷಣಾ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ತಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಅಭಿಮಾನಿಗಳಿಂದ ತಲಾ ಹತ್ತು ರೂ. ಪಡೆದುಕೊಂಡು ಆ ಹಣವನ್ನು ರಾಜೀವ್ ಅವರ ಬಳಗಕ್ಕೆ ಹಸ್ತಾಂತರಿಸಿದ್ದರು!
“ಶ್ರೀ ಹೆಚ್.ವಿ.ರಾಜೀವ್ ನಮ್ಮ ಕಲ್ಪನೆಗೂ ಮೀರಿ ಸ್ವಚ್ಛ ಭಾರತ ಅಭಿಯಾನಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಅವರ ಸೇವೆ ನಮ್ಮ ಪಕ್ಷಕ್ಕೂ ಹಾಗೂ ಇಡೀ ದೇಶಕ್ಕೂ ಅವಶ್ಯಕ.” ಇದು ಕೇಂದ್ರ ಸಚಿವರಾದ ಶ್ರೀ ಪೀಯೂಷ್ ಗೋಯಲ್ ಅವರ ಮಾತು.
“ಒಂದೇ ದಿನದಲ್ಲಿ ಅತೀ ಹೆಚ್ಚು ಸ್ವಯಂಸೇವಕರೊಂದಿಗೆ ಅತೀ ಹೆಚ್ಚು ಸಸಿಗಳನ್ನು ನೆಟ್ಟಿರುವುದಕ್ಕಾಗಿ ಹಾಗೂ ಅತೀ ಹೆಚ್ಚು ವಾರಾಂತ್ಯಗಳಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ನಿರಂತರವಾಗಿ ನಡೆಸಿದ ಸಾಧನೆಗಾಗಿ ಶ್ರೀ ಹೆಚ್.ವಿ.ರಾಜೀವ್ ಅವರ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲೂ ದಾಖಲಾಗಿದೆ.”
ಇದೀಗ ಸ್ನೇಹ ಬಳಗವು ತನ್ನ 266ನೇ ಸ್ವಚ್ಛ ಮೈಸೂರು ಅಭಿಯಾನವನ್ನು ಮುಗಿಸಿ ಇಂದಿಗೂ ತಮ್ಮ ಮೊದಲ ಕಾರ್ಯಕ್ರಮದಲ್ಲಿದ್ದಷ್ಟೇ ಉತ್ಸಾಹವನ್ನು ಉಳಿಸಿಕೊಂಡು ಮುನ್ನುಗ್ಗುತ್ತಿದೆ. ಇಂದಿನ ಬಿಡುವಿಲ್ಲದ ಜೀವನ ಶೈಲಿಯ ನಡುವೆಯೂ ತಮ್ಮೆಲ್ಲಾ ವೈಯುಕ್ತಿಕ ಕೆಲಸ ಕಾರ್ಯಗಳ ಮಧ್ಯೆ ಪ್ರತೀ ವಾರಾಂತ್ಯದಲ್ಲಿ ಒಂದಿಷ್ಟು ಸಮಯವನ್ನು ಮೀಸಲಿಟ್ಟು ಶ್ರಮಿಸುತ್ತಿರುವ ರಾಜೀವ್ ಸ್ನೇಹ ಬಳಗದ ಪ್ರತಿಯೊಬ್ಬ ಸದಸ್ಯರೂ ಅಭಿನಂದನಾರ್ಹರು. ಸ್ವಚ್ಛತಾ ಸಮೀಕ್ಷೆ ಫಲಿತಾಂಶದಂತೆ ಕಳೆದ ವರ್ಷ ಎಂಟನೆಯ ಸ್ಥಾನದಲ್ಲಿದ್ದ ಮೈಸೂರು ಸಾಕಷ್ಟು ಪೈಪೋಟಿಯ ನಡುವೆಯೂ ಮೂರನೆಯ ಸ್ಥಾನಕ್ಕೆ ಜಿಗಿದಿರುವ ಈ ಸಂದರ್ಭದಲ್ಲಿ ಸ್ವಚ್ಛ ಮೈಸೂರಿಗಾಗಿ ಶ್ರಮಿಸುತ್ತಿರುವ ರಾಜೀವ್ ಸ್ನೇಹ ಬಳಗದ ಎಲ್ಲ ಸದಸ್ಯರಿಗೂ ಹಾಗೂ ಬಳಗವನ್ನು ಮುನ್ನಡೆಸುತ್ತಿರುವ ಶ್ರೀ ಹೆಚ್.ವಿ.ರಾಜೀವ್ ರವರಿಗೂ ಮತ್ತು ಮೈಸೂರಿನ ಎಲ್ಲಾ ಶ್ರಮಜೀವಿ ಪೌರಕಾರ್ಮಿಕರಿಗೂ ಅಭಿನಂದನೆಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.