ಭಯೋತ್ಪಾದನೆ ಎಲ್ಲಾ ದೇಶಗಳಿಗೂ ಸಮಸ್ಯೆಯಾಗಿ ಬಾಧಿಸಲ್ಪಡುತ್ತಿರುವ ಒಂದು ದೊಡ್ಡ ಪಿಡುಗು. ಧರ್ಮಯುದ್ಧ (ಜಿಹಾದ್) ಮಾಡುತ್ತಿದ್ದೇವೆ ಎಂಬ ನಂಬಿಕೆಯಲ್ಲಿರುವ ಒಂದಿಷ್ಟು ಜನ ಎಸಗುವ ಪೈಶಾಚಿಕ ಕೃತ್ಯಕ್ಕೆ ಇಡೀ ವಿಶ್ವ ನಲುಗುವ ಸ್ಥಿತಿಗೆ ಬಂದು ನಿಂತಿದೆ. ಒಂದೆಡೆ ಜಗತ್ತು ಆಧುನಿಕ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆಯ ಹಿಂದೆ ಓಡುತ್ತಿದ್ದರೆ, ಒಂದಿಷ್ಟು ಜನ ಇನ್ನೂ ಸ್ವರ್ಗಲೋಕದ ಕನಸಲ್ಲೇ ಬದುಕನ್ನು ನರಕವಾಗಿಸುತ್ತಿದ್ದಾರೆ. ಜನರ ಮನಸ್ಸಲ್ಲಿ ಭಯವನ್ನು ಹುಟ್ಟಿಸಿ ಇಡೀ ಜಗತ್ತನ್ನು ಒಂದು ಧರ್ಮದಡಿ ತರುವ ಪ್ರಯತ್ನ ಮಾಡುತ್ತಿದ್ದಾರೆ. ಸ್ವರ್ಗ ಪಡೆಯುವ ಪ್ರಯತ್ನದಲ್ಲಿ ಇವರು ಕೇವಲ ತಮ್ಮ ಬದುಕನ್ನು ನರಕವಾಗಿಸಿಕೊಂಡಿದ್ದರೆ ಪರವಾಗಿರಲಿಲ್ಲ, ಆದರೆ ಈ ಸುಂದರ ಜಗತ್ತನ್ನೂ ನರಕವಾಗಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದೇ ದುರಂತ. ಅಷ್ಟಕ್ಕೂ ಅವರಿಗೆ ಈ ಸ್ವರ್ಗದ ಆಸೆಯನ್ನು ತುಂಬಿಸಿದವರು ಯಾರು?
ಕಾಫಿರರನ್ನು ಸದೆ ಬಡಿಯಿರಿ, ಇಸ್ಲಾಂಗಾಗಿ ಖಡ್ಗ ಹಿಡಿಯಿರಿ, ಜಿಹಾದ್ ಮಾಡಿ ಸತ್ತರೆ ನಿಮ್ಮ ಮೃತ ದೇಹದಿಂದಲೂ ಸುಗಂಧ ಹೊರಸೂಸುತ್ತದೆ, ಜಿಹಾದಿಗಾಗಿ ಸ್ವರ್ಗದಲ್ಲಿ ವಿಶೇಷ ಸ್ಥಾನವನ್ನು ಕಾಯ್ದಿರಿಸಲಾಗುತ್ತದೆ, ಅಪಾರ ಕನ್ಯೆಯರನ್ನು ಸ್ವರ್ಗದಲ್ಲಿ ನಿಮಗಾಗಿ ಮೀಸಲಿರಿಸಲಾಗುತ್ತದೆ ಎಂಬ ಅಸಂಬದ್ಧತೆಗಳನ್ನು ತಲೆಯೊಳಗೆ ತುಂಬಿಸಿ ಎಳೆ ಮನಸ್ಸುಗಳನ್ನು ಉಗ್ರರಾಗುವಂತೆ ಪ್ರೇರೇಪಿಸಿ ಅವರನ್ನು ಭಾರತದ ವಿರುದ್ಧ ಎತ್ತಿ ಕಟ್ಟುವ ಆ ದುಷ್ಟ ಶಕ್ತಿ ಯಾವುದು? ಬ್ಯಾಟ್ ಬಾಲ್ ಹಿಡಿದುಕೊಂಡು, ಶಾಲೆಗೆ ಹೋಗುತ್ತಾ ಸಾಮಾನ್ಯ ಮಕ್ಕಳಂತೆ ಬಾಲ್ಯ ಕಳೆಯಬೇಕಾದ ಮಕ್ಕಳ ಕೈಗೆ ಖಡ್ಗ ನೀಡಿ, ಅವರ ತಲೆಯೊಳಗೆ ಜಿಹಾದ್ ತುಂಬಿ ವಿನಾಶಕ್ಕೆ ಇಳಿಸುವವರು ಯಾರು? ಪಾಕಿಸ್ಥಾನವೆಂಬ ಉಗ್ರ ಪೋಷಕ ರಾಷ್ಟ್ರ, ಅಲ್ಲಿ ಸುರಕ್ಷಿತವಾಗಿ ಅಡ್ಡಾಡುತ್ತಿರುವ ಭಯೋತ್ಪಾದಕರೆಂಬ ಆಧುನಿಕ ಕಾಲದ ರಕ್ಕಸರು, ಈ ರಕ್ಕಸರ ಅಣತಿಯಂತೆ ಕಾರ್ಯನಿರ್ವಹಿಸುವ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರು. ಇವರುಗಳು ಯುವಕರಿಗೆ ಸ್ವರ್ಗದ ಆಸೆ ತೋರಿಸಿ ಅವರನ್ನು ನರಕದತ್ತ ದೂಡುತ್ತಿದ್ದಾರೆ.
ಕಾಶ್ಮೀರವೆಂಬ ಭೂ ಲೋಕದ ಸ್ವರ್ಗದಲ್ಲಿ ಸ್ವಚ್ಛಂದವಾಗಿ ಬದುಕುವ ಎಲ್ಲಾ ಅವಕಾಶಗಳಿದ್ದರೂ ಕಲ್ಲು ತೂರಾಟ ನಡೆಸುತ್ತಾ, ಭಯೋತ್ಪಾದನೆಗೆ ಬೆಂಬಲ ನೀಡುತ್ತಾ ತಮ್ಮ ಸ್ವಂತ ಬದುಕನ್ನು ನರಕವಾಗಿಸುತ್ತಿರುವ ಯುವಕರ ತಲೆಯಲ್ಲಿ ಜಿಹಾದ್ ಬಿಟ್ಟರೆ ಬೇರೇನೂ ಇಲ್ಲ. ಪ್ರತ್ಯೇಕತಾವಾದಿ ಮುಖಂಡರುಗಳು ಪಾಕಿಸ್ಥಾನದಿಂದ ಹಣ ಪಡೆದುಕೊಂಡು ಇವರ ತಲೆಗೆ ಜಿಹಾದ್ ಎಂಬ ರದ್ದಿಯನ್ನು ತುಂಬಿಸುತ್ತಿದ್ದಾರೆ. ಅವರಿಗೆ ಬೇಕಾಗಿರುವುದು ಶರಿಯತ್ ಕಾನೂನಿಗೆ ಒಳಪಟ್ಟ, ಪಾಕಿಸ್ಥಾನದ ಅಡಿಯಾಳಾಗಿರುವ ಮೂಲಭೂತವಾದಿ ಇಸ್ಲಾಂ ರಾಷ್ಟ್ರದ ಉಗಮ. ಇಂತಹದ್ದೊಂದು ರಾಷ್ಟ್ರ ಉಗಮವಾದರೆ ಅಲ್ಲಿ ರಾಜರಂತೆ ಮೆರೆದಾಡಬಹುದು ಎಂಬ ಈಡೇರದ ಕನಸಿನಲ್ಲಿ ಇವರು ತೇಲುತ್ತಿದ್ದಾರೆ. ಆದರೆ ಇದಕ್ಕಾಗಿ ಇವರು ತಮ್ಮ ದೇಹದ ರಕ್ತವನ್ನು ಹರಿಸುತ್ತಿಲ್ಲ, ತಮ್ಮ ಮಕ್ಕಳನ್ನು ಕಲ್ಲು ತೂರಾಟ ಮಾಡಲು ಇಳಿಸುತ್ತಿಲ್ಲ. ಇತರರ ಮಕ್ಕಳನ್ನು ಬಳಸಿಕೊಂಡು, ಅವರಿಗೊಂದಿಷ್ಟು ಹಣವನ್ನು ನೀಡಿ, ತಲೆಕೆಡಿಸಿ ರಸ್ತೆಗೆ ಬಿಟ್ಟು ಕಲ್ಲು ಹೊಡೆಸುತ್ತಾರೆ. ಜಿಹಾದಿ ಅಫೀಮನ್ನು ತಲೆಗೇರಿಸಿಕೊಂಡ ಈ ಯುವಕರು ತಮ್ಮ ಕೈಯಾರೆ ತಮ್ಮ ಭವಿಷ್ಯವನ್ನು ಛಿದ್ರ ಮಾಡುತ್ತಿದ್ದಾರೆ. ಸುಸೈಡ್ ಬಾಂಬರ್ಗಳಾಗಿ ತಮ್ಮನ್ನೇ ಉಡಾಯಿಸಿಕೊಳ್ಳುವಷ್ಟರ ಮಟ್ಟಿಗೆ ಈ ಯುವಕರ ತಲೆ ಕೆಟ್ಟಿದೆ ಎಂದರೆ, ಇವರ ತಲೆಕಡೆಸಿದವರು ಎಷ್ಟು ಖತರ್ನಾಕ್ಗಳಾಗಿರಬೇಕು. ಪ್ರತ್ಯೇಕತೆ ಬೇಕು ಎಂದು ಬೊಬ್ಬಿಡುತ್ತಾ ತಮ್ಮ ಯುವಜನಾಂಗವನ್ನೇ ಬಲಿಕೊಡುವ ಈ ನೀಚರು ತಮ್ಮ ಸ್ವಂತ ಮಕ್ಕಳಿಗೆ ಮಾತ್ರ ಅಮೆರಿಕಾದಲ್ಲೋ, ಯುಕೆನಲ್ಲೋ ಉನ್ನತ ವ್ಯಾಸಂಗವನ್ನು ಕೊಡಿಸಿ ಸುಖ ಜೀವನವನ್ನು ಅನುಭವಿಸುವಂತೆ ಮಾಡಿದ್ದಾರೆ.
ಬದುಕಲು ಬೇಕಾದುದೆಲ್ಲವನ್ನೂ ಕಾಶ್ಮೀರಿಗರಿಗೆ ಭಾರತ ಕೊಟ್ಟಿದೆ. ಮೂಲಸೌಕರ್ಯಗಳನ್ನು ವೃದ್ಧಿಸಿ, ಭಯೋತ್ಪಾದನೆಯ ಕರಿನೆರಳಿನಿಂದ ಅದನ್ನು ಹೊರಗಿಡುವ ಪ್ರಯತ್ನ ಮಾಡಿದೆ. ಐಐಟಿ, ಐಐಎಂಗಳನ್ನು ಸ್ಥಾಪನೆ ಮಾಡಲಾಗಿದೆ, ಐಐಟಿ ಮತ್ತು ಐಐಎಂ ಎರಡನ್ನೂ ಹೊಂದಿರುವ ಕೆಲವೇ ಕೆಲವು ರಾಜ್ಯಗಳ ಪೈಕಿ ಜಮ್ಮು ಕಾಶ್ಮೀರವೂ ಒಂದು. ಜಮ್ಮು ಮತ್ತು ಆವಂತಿಪೋರಾದಲ್ಲಿ ಎರಡು ಏಮ್ಸ್ಗಳನ್ನು ತೆರೆಯಲಾಗಿದೆ, ಎರಡು ಏಮ್ಸ್ ಹೊಂದಿರುವ ದೇಶದ ಏಕೈಕ ರಾಜ್ಯ ಇದಾಗಿದೆ. ಜಮ್ಮು ನಗರದಲ್ಲಿ ಐಐಎಂಸಿಯನ್ನೂ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ. ಇಲ್ಲಿನ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವತ್ತವೂ ಹೆಚ್ಚಿನ ಗಮನವನ್ನು ನೀಡಲಾಗಿದೆ. ಆದರೆ ಇದ್ಯಾವುದನ್ನೂ ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವತ್ತ ಇಲ್ಲಿನ ಅನೇಕ ಯುವಕರು ಮನಸ್ಸು ಮಾಡದೇ, ಪಾಕಿಸ್ಥಾನಿ ಏಜೆಂಟ್ಗಳ ಕುತಂತ್ರಕ್ಕೆ ಬಲಿಯಾಗುತ್ತಿರುವುದು ವಿಪರ್ಯಾಸವೇ ಸರಿ.
ಭಾರತ ಒಂದು ಸಹಿಷ್ಣು ರಾಷ್ಟ್ರ. ತನ್ನ ವಿರುದ್ಧ ಪಿತೂರಿ ಮಾಡುವವರನ್ನು ಅದು ಒಮ್ಮೆಗೆ ಶಿಕ್ಷಿಸಿ ಬಿಸಾಡುವುದಿಲ್ಲ. ಬದಲಾಗುವ ಅವಕಾಶವನ್ನು ಅವರಿಗೆ ಸಾಕಷ್ಟು ಸಾರಿ ನೀಡುತ್ತದೆ, ಕಾದು ನೋಡುವ ತಂತ್ರವನ್ನು ಅನುಸರಿಸುತ್ತದೆ. ಕಲ್ಲು ತೂರಾಟಗಾರರು ಅತಿರೇಕಕ್ಕೆ ಹೋದ ಸಂದರ್ಭದಲ್ಲೂ ನಮ್ಮ ಸೈನಿಕರು ಅವರ ಮೇಲೆ ಒಂದೇ ಒಂದು ಬಾರಿ ಗುಂಡು ಹಾರಿಸಿಲ್ಲ, ಇದರಿಂದಲೇ ನಮ್ಮ ಸೈನಿಕರ ಸಹನೆ ಎಷ್ಟರ ಮಟ್ಟಿಗೆ ಇದೆ ಎಂಬುದು ತಿಳಿಯುತ್ತದೆ. ಆದರೆ ಈ ಸಹನೆಯನ್ನು ದೌರ್ಬಲ್ಯ ಎಂದುಕೊಂಡು ಇವರುಗಳು ಭಾರತವನ್ನು ಛಿದ್ರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ನೆರೆಯ ಪಾಕಿಸ್ಥಾನದ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ ಭಾರತದ ಸಹನೆಗೂ ಒಂದು ಮಿತಿ ಇದೆ ಎಂಬುದನ್ನು ಇವರು ಅರ್ಥಮಾಡಿಕೊಳ್ಳಬೇಕು. ಭಾರತ ಸೆಟೆದು ನಿಂತ ದಿನ ಪಾಕಿಸ್ಥಾನಕ್ಕಾಗಲಿ, ಪ್ರತ್ಯೇಕತಾವಾದಿಗಳಾಗಲಿ ಉಸಿರಾಡಲೂ ಅವಕಾಶ ದೊರೆಯಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.