ಭಾರತವನ್ನು ನೇರವಾಗಿ ಎದುರಿಸಲು ಸಾಧ್ಯವಾಗದ ರಣಹೇಡಿ ಪಾಕಿಸ್ಥಾನ, ಉಗ್ರರನ್ನು ಬಳಸಿಕೊಂಡು ಭಾರತದ ವಿರುದ್ಧ ಕುತಂತ್ರಗಳನ್ನು ಮಾಡುತ್ತಿದೆ. ಪದೇ ಪದೇ ಕದನವಿರಾಮ ಉಲ್ಲಂಘಿಸಿ, ಭಯೋತ್ಪಾದಕರನ್ನು ಅಕ್ರಮವಾಗಿ ಭಾರತದೊಳಕ್ಕೆ ನುಸುಳಿಸಿ ಆಟವಾಡುವ ಉಗ್ರರಾಷ್ಟ್ರವನ್ನು ಇದುವರೆಗೆ ಸಹಿಷ್ಣು ಭಾರತ ಸಹಿಸಿಕೊಂಡಿದ್ದೇ ಹೆಚ್ಚು. ಆದರೆ ಪುಲ್ವಾಮ ದಾಳಿಯಲ್ಲಿ 42 ಯೋಧರನ್ನು ಕಳೆದುಕೊಂಡ ಬಳಿಕ ಭಾರತ ತಾಳ್ಮೆ ಕಳೆದುಕೊಂಡಿದೆ. ತನ್ನ ಸಹೆನಗೂ ಒಂದು ಮಿತಿಯಿದೆ ಎಂದು ಆ ರಾಷ್ಟ್ರಕ್ಕೆ ತೋರಿಸಿಕೊಡುತ್ತಿದೆ. ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಇಡೀ ಜಗತ್ತೇ ಹೇಳುತ್ತಿದ್ದರೂ ಕ್ಯಾರೇ ಅನ್ನದ ಪಾಕಿಸ್ಥಾನಕ್ಕೆ ಭಾರತವೀಗ ಎಂದೂ ಮರೆಯಲಾರದ ಶಿಕ್ಷೆಗಳನ್ನು ನೀಡುತ್ತಿದೆ. ಯುದ್ಧ ಮಾರ್ಗವನ್ನು ಬಿಟ್ಟು ಚಾಣಾಕ್ಷ್ಯ ನೀತಿಯನ್ನು ಅನುಸರಿಸಿ ಶತ್ರು ರಾಷ್ಟ್ರವನ್ನು ದಮನಿಸುವ ಕಾರ್ಯಕ್ಕೆ ಭಾರತ ಸಜ್ಜಾಗುತ್ತಿದೆ. ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಪಾಕಿಸ್ಥಾನಕ್ಕೆ ಹರಿಯುತ್ತಿರುವ ಮೂರು ನದಿಗಳ ನೀರನ್ನು ನಿಲ್ಲಿಸಿ ಬಿಡುತ್ತೇವೆ ಎಂದು ಗದರಿದ್ದಾರೆ. ಇನ್ನೊಂದೆಡೆ ಭಾರತ ಆ ದೇಶಕ್ಕೆ ನೀಡಿದ ಪರಮಾಪ್ತ ರಾಷ್ಟ್ರದ ಸ್ಥಾನಮಾನವನ್ನು ಹಿಂಪಡೆದುಕೊಂಡಿದೆ. ಈ ಮೂಲಕ ಅಲ್ಲಿಂದ ನಮ್ಮ ದೇಶಕ್ಕೆ ಆಗಮಿಸುತ್ತಿದ್ದ ಸರಕುಗಳಿಗೆ ಶೇ.200ರಷ್ಟು ಸುಂಕಗಳನ್ನು ವಿಧಿಸಲಾಗುತ್ತಿದೆ. ನಮ್ಮ ದೇಶಭಕ್ತ ರೈತರು ಆ ದೇಶಕ್ಕೆ ಟೊಮ್ಯಾಟೋ ಪೂರೈಕೆಯನ್ನು ನಿಲ್ಲಿಸಿದ್ದಾರೆ. ಇದರಿಂದ ಅಲ್ಲಿನ ಟೊಮ್ಯಾಮೋ ಬೆಲೆ ಗಗನಕ್ಕೇರಿದೆ. ಅಲ್ಲಿನ ಆಟಗಾರರಿಗೆ ಭಾರತಕ್ಕೆ ಆಗಮಿಸಲು ವೀಸಾ ನಿರಾಕರಿಸಲಾಗಿದೆ. ಇನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಪಾಕಿಸ್ಥಾನವನ್ನು ಸಂಪೂರ್ಣ ಮೂಲೆಗುಂಪು ಮಾಡಲು ಬೇಕಾದ ಕ್ರಮಗಳ ಬಗ್ಗೆ ಗಮನ ಹರಿಸಲಾಗುತ್ತಿದೆ.
ಪುಲ್ವಾಮ ದಾಳಿಯ ಬಳಿಕ ಭಾರತ ಪಾಕಿಸ್ಥಾನದ ವಿರುದ್ಧ ಕೈಗೊಂಡ ಕ್ರಮಗಳ ಪಟ್ಟಿ ಇಲ್ಲಿದೆ
1.ಪರಮಾಪ್ತ ದೇಶದ ಸ್ಥಾನಮಾನ ಹಿಂಪಡೆಯುವಿಕೆ
ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಹಿನ್ನಲೆಯಲ್ಲಿ ಭಾರತ ಪಾಕಿಸ್ಥಾನಕ್ಕೆ ನೀಡಿದ್ದ ಪರಮಾಪ್ತ ರಾಷ್ಟ್ರದ ಸ್ಥಾನಮಾನವನ್ನು ಹಿಂಪಡೆದುಕೊಂಡಿದೆ. ಎರಡು ದೇಶಗಳ ನಡುವೆ ಸುಲಲಿತ ವ್ಯಾಪಾರಕ್ಕಾಗಿ ಪರಮಾಪ್ತ ರಾಷ್ಟ್ರದ ಸ್ಥಾನಮಾನವನ್ನು ನೀಡಲಾಗಿತ್ತು. ಇದರಡಿ ಪಾಕಿಸ್ಥಾನದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಯಾವುದೇ ಹೆಚ್ಚುವರಿ ಸುಂಕಗಳನ್ನು ವಿಧಿಸಲಾಗುತ್ತಿರಲಿಲ್ಲ. 1996ರಿಂದ ಭಾರತ ವಿಶ್ವ ವ್ಯಾಪಾರ ಸಂಸ್ಥೆಯಾಗಿ ರೂಪುಗೊಂಡ ಬಳಿಕ ಪಾಕಿಸ್ಥಾನಕ್ಕೆ ಈ ಸ್ಥಾನಮಾನವನ್ನು ನೀಡಲಾಗಿದೆ. ಆದರೆ ಇದುವರೆಗೆ ಪಾಕಿಸ್ಥಾನ ಭಾರತಕ್ಕೆ ಈ ಸ್ಥಾನಮಾನವನ್ನು ನೀಡಿಲ್ಲ. ಭಾರತ ಮತ್ತು ಪಾಕಿಸ್ಥಾನಗಳ ನಡುವೆ 2.28 ಬಿಲಿಯನ್ ಡಾಲರ್ ವಹಿವಾಟು ಇದೆ. ಭಾರತಕ್ಕೆ ಪಾಕಿಸ್ಥಾನ 137 ವಸ್ತುಗಳ ರಫ್ತು ಮಾಡುತ್ತದೆ. ಭಾರತ ಆ ದೇಶಕ್ಕೆ ಪ್ರಮುಖವಾಗಿ ಹತ್ತಿ, ರಾಸಾಯನಿಕ, ತರಕಾರಿ, ಹತ್ತಿ ಇತ್ಯಾದಿಗಳನ್ನು ರಫ್ತು ಮಾಡುತ್ತದೆ. ಇದೀಗ ಪರಮಾಪ್ತ ಸ್ಥಾನಮಾನವನ್ನು ಭಾರತ ಕಸಿದುಕೊಂಡು ಹಿನ್ನಲೆಯಲ್ಲಿ ಭಾರತದಲ್ಲಿ ಅಷ್ಟು ಸುಲಲಿತವಾಗಿ ವ್ಯಾಪಾರ ಮಾಡಲು ಪಾಕಿಸ್ಥಾನಕ್ಕೆ ಸಾಧ್ಯವಾಗುವುದಿಲ್ಲ.
2.ಸುಂಕ ಶೇ.200ರಷ್ಟು ಹೆಚ್ಚಳ
ಭೀಕರ ಭಯೋತ್ಪಾದನಾ ದಾಳಿಯ ಬಳಿಕ ಪಾಕಿಸ್ಥಾನದಿಂದ ಭಾರತಕ್ಕೆ ಬರುತ್ತಿದ್ದ ಎಲ್ಲಾ ವಸ್ತುಗಳ ಮೇಲಿನ ಸುಂಕವನ್ನು ಭಾರತ ಶೇ.200ರಷ್ಟು ಏರಿಕೆ ಮಾಡಿದೆ. ಅದು ರಫ್ತು ಮಾಡುತ್ತಿದ್ದ ಹಣ್ಣು, ಬೀಜಗಳು, ಸಲ್ಫರ್, ಚರ್ಮದ ವಸ್ತುಗಳು, ಮಿನರಲ್ ಓಯಿಲ್, ಸಿಮೆಂಟ್ಗಳ ಮೇಲೆ ಶೇ.200ರಷ್ಟು ಸುಂಕ ವಿಧಿಸಲಾಗಿದೆ. ಇದರಿಂದ ಅಲ್ಲಿನ ಉತ್ಪಾದಕರ ಮೇಲೆ ನೇರ ಪರಿಣಾಮ ಬೀಳಲಿದೆ. ಭಾರೀ ಪ್ರಮಾಣದ ನಷ್ಟವನ್ನೂ ಅವರು ಅನುಭವಿಸಲಿದ್ದಾರೆ.
3.ಶ್ರೀನಗರ-ಮುಜಾಫರ್ಬಾದ್ ಬಸ್ ಸೇವೆ ಸ್ಥಗಿತ
ಪುಲ್ವಾಮ ದಾಳಿಯ ಬಳಿಕ ಭಾರತ ಶ್ರೀನಗರ-ಮುಜಾಫರ್ಬಾದ್ ಬಸ್ ಸೇವೆಯನ್ನೂ ರದ್ದುಗೊಳಿಸಿದೆ. ಈ ಬಸ್ ಪಾಕ್ ಆಕ್ರಮಿತ ಕಾಶ್ಮೀರವನ್ನು ಜಮ್ಮು ಕಾಶ್ಮೀರದೊಂದಿಗೆ ಸಂಪರ್ಕಿಸುತ್ತದೆ. ಇದೀಗ ಈ ಬಸ್ ಸೇವೆ ರದ್ದುಗೊಳ್ಳುತ್ತಿರುವುದರಿಂದ ಭಾರತದ ಅಜ್ಮೇರ್ ದರ್ಗಾ ಸೇರಿದಂತೆ ಇತರ ಭಾಗಗಳಿಗೆ ಭೇಟಿ ಕೊಡಬೇಕೆಂದಿರುವ ಪಾಕಿಸ್ಥಾನಿಯರಿಗೆ ಕಷ್ಟವಾಗಲಿದೆ.
4. ಪಾಕ್ಗೆ ಹರಿಯುತ್ತಿರುವ ನೀರನ್ನು ತಡೆಯಲು ಚಿಂತನೆ
ಮೂರು ನದಿಗಳಿಂದ ಪಾಕಿಸ್ಥಾನಕ್ಕೆ ಹರಿಯುವ ನೀರನ್ನು ಯಮುನೆಯತ್ತ ತಿರುಗಿಸುವ ಎಚ್ಚರಿಕೆಯನ್ನು ಈಗಾಗಲೇ ಭಾರತ ಪಾಕಿಸ್ಥಾನಕ್ಕೆ ನೀಡಿದೆ. ಈ ನಿಟ್ಟಿನಲ್ಲಿ ಗಂಭೀರ ಚಿಂತನೆಯನ್ನೂ ನಡೆಸಲಾಗಿದೆ. ಒಂದು ವೇಳೆ ಇದು ಅನುಷ್ಠಾನಕ್ಕೆ ಬಂದರೆ, ಪಾಕಿಸ್ಥಾನದ ಅರ್ಧ ಭೂಮಿ ಬರಡಾಗಲಿದೆ. ರೈತರು ಒಂದು ಹುಲ್ಲು ಕಡ್ಡಿಯನ್ನೂ ಬೆಳೆಸಲು ಸಾಧ್ಯವಾಗುವುದಿಲ್ಲ. ಇದರಿಂದ ಅಲ್ಲಿ ಕೋಲಾಹಲ ಉಂಟಾಗುವುದಂತೂ ಗ್ಯಾರಂಟಿ.
5. ಪಾಕಿಸ್ಥಾನಿ ಕಲಾವಿದರಿಗೆ ನಿಷೇಧ
ಭಾರತದ ಚಿತ್ರರಂಗದಲ್ಲಿ ನಟನೆ ಮಾಡಿ, ಹಾಡುಗಳನ್ನು ಹಾಡಿ ತಮ್ಮ ದೇಶಕ್ಕೆ ಹೋಗಿ ತೆರಿಗೆ ಕಟ್ಟುತ್ತಿದ್ದ ಪಾಕಿಸ್ಥಾನಿ ನಟರಿಗೆ, ಹಾಡುಗಾರಿಗೆ ಈಗ ಸಂಪೂರ್ಣ ನಿಷೇಧವನ್ನು ಹೇರಲಾಗಿದೆ. ಇದರಿಂದ ಅಲ್ಲಿನ ಸಾಕಷ್ಟು ಕಲಾವಿದರು ನಿರುದ್ಯೋಗಿಗಳಾಗುವುದಂತು ಗ್ಯಾರಂಟಿಯಾಗಿದೆ. ಇವರ ಹಾವಳಿಯಿಂದಾಗಿ ಭಾರತದ ಅನೇಕ ಪ್ರತಿಭಾವಂತರು ತಮ್ಮ ಕೆಲಸಗಳನ್ನು ಕಳೆದುಕೊಳ್ಳುತ್ತಿದ್ದರು, ಆದರೆ ಇನ್ನು ಮುಂದೆ ಖಂಡಿತ ಹಾಗಾಗುವುದಿಲ್ಲ.
ಇಷ್ಟೇ ಅಲ್ಲದೇ, ಇನ್ನೂ ಹಲವಾರು ಕ್ರಮಗಳನ್ನು ತೆಗೆದುಕೊಳ್ಳವತ್ತ ಭಾರತ ಚಿಂತನೆ ಆರಂಭಿಸಿದೆ. ಇದರಲ್ಲಿ ವಿಶ್ವಕಪ್ ಕ್ರಿಕೆಟ್ನಲ್ಲಿ ಪಾಕಿಸ್ಥಾನದ ಜೊತೆ ಆಡದಿರುವ ನಿರ್ಧಾರ, ಅಜ್ಮೇರ್ ದರ್ಗಾಗೆ ಪಾಕಿಸ್ಥಾನಿಯರನ್ನು ಬರದಂತೆ ನೋಡಿಕೊಳ್ಳುವ ನಿರ್ಧಾರಗಳೂ ಸೇರಿವೆ. ಮೇಲ್ನೋಟಕ್ಕೆ ಇವುಗಳು ಸಣ್ಣ ಕ್ರಮಗಳು ಅನಿಸಿದರು ಮುಂಬರುವ ದಿನಗಳಲ್ಲಿ ಈ ಕ್ರಮಗಳು ಪಾಕಿಸ್ಥಾನಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿವೆ. ಅಮೆರಿಕಾದಂತ ರಾಷ್ಟ್ರ ಭಯೋತ್ಪಾದಕರ ವಿರುದ್ಧ ಕ್ರಮಕೈಗೊಳ್ಳಿ ಎಂದು ಆರ್ಥಿಕ ನೆರವು ನೀಡಿದರೆ, ಅದೇ ನೆರವನ್ನು ಬಳಸಿ ಉಗ್ರರನ್ನು ಪೋಷಣೆ ಮಾಡುತ್ತಿರುವ ರಾಷ್ಟ್ರ ಪಾಕಿಸ್ಥಾನ. ಇಂತಹ ರಾಷ್ಟ್ರ ಈಗಾಗಲೇ ಕತ್ತೆಗಳನ್ನು ಮಾರಿ ತನ್ನ ಆರ್ಥಿಕ ಸಂಕಷ್ಟವನ್ನು ನೀಗಿಸಿಕೊಳ್ಳುವ ಪ್ರಯತ್ನದಲ್ಲಿದೆ, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಅದು ತನ್ನ ದೇಶವನ್ನೇ ಮಾರಿಕೊಳ್ಳಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.