ಶೈಲಶ್ರೀ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಕೃಷ್ಣಮೂರ್ತಿ ಪುರಾಣಿಕರವರು ಬರೆದ ‘ಕುಲವಧು’ ಕಾದಂಬರಿ ಆಧಾರಿತ ಕಥೆಯನ್ನು 1963 ರಲ್ಲಿ ಟಿ.ವಿ. ಸಿಂಗ್ ಠಾಕೂರ್ ರವರು ನಿರ್ದೇಶನ ಮಾಡುತ್ತಾರೆ. ಬಿ.ದೊರೈರಾಜ್ ರವರ ಛಾಯಾಗ್ರಹಣ, ಜಿ.ಕೆ.ವೆಂಕಟೇಶ್ ರವರ ಸಂಗೀತವಿರುತ್ತದೆ. ಜಿ.ವಿ.ಅಯ್ಯರ್ ರವರ ಸಾಹಿತ್ಯವಿದ್ದು, ವಿಶೇಷವೆಂದರೆ ಖ್ಯಾತ ಕನ್ನಡ ಕವಿಗಳಾದ ದ.ರಾ.ಬೇಂದ್ರೆ ರವರ “ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ” ಎಂಬ ಗೀತೆ ಹಾಗೂ ಎಂ.ಗೋವಿಂದ ಪೈ ರವರು ಈ ಚಿತ್ರದಲ್ಲಿ “ತಾಯೆ ಬಾರ ಮೊಗವ ತೋರ, ಕನ್ನಡಿಗರ ಮಾತೆಯೇ” ಎಂಬ ಗೀತೆಗಳಿಗೆ ಸಾಹಿತ್ಯ ಬರೆದಿದ್ದಾರೆ. ಹಲವು ದಶಕಗಳೇ ಕಳೆದರೂ ಕಣಗಾಲ್ ಪ್ರಭಾಕರ ಶಾಸ್ತ್ರಿಯರವರು ಬರೆದ “ಒಲವಿನ ಪ್ರಿಯಲತೆ, ಅವಳದೆ ಚಿಂತೆ” ಎಂಬ ಗೀತೆಯು ಇವತ್ತಿನವರೆಗೂ ಅನೇಕ ಪ್ರಣಯವಿರಹಿ ಹೃದಯಗಳಿಗೆ ಅತಿಪ್ರಿಯವಾದ ಗೀತೆಯಾಗಿದೆ. ಪಿ.ಬಿ.ಶ್ರೀನಿವಾಸ್, ಜಾನಕಿ, ರಾಜೇಶ್ವರಿರವರು ಈ ಗೀತೆಗಳಿಗೆ ದನಿಯಾಗಿದ್ದಾರೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ರಾಜ್ ಕುಮಾರ್, ಲೀಲಾವತಿ, ಆದವಾನಿ ಲಕ್ಷ್ಮಿದೇವಿ, ಕೆ.ಎಸ್.ಅಶ್ವತ್ಥ್, ಶಾಂತಮ್ಮ, ಬಾಲಕೃಷ್ಣ ಹಾಗೂ ನರಸಿಂಹರಾಜು ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
ಕಥೆ:
ಒಂದೂರಲ್ಲಿ ಧನದಾಹಿ ವ್ಯಾಪಾರಿಯ (ಬಾಲಕೃಷ್ಣ) ಕುಟುಂಬ. ಮತ್ತೊಂದೂರಲ್ಲಿ ಬಡ ಗುಮಾಸ್ತನ (ಕೆ.ಎಸ್.ಅಶ್ವತ್ಥ್) ಕುಟುಂಬ. ಬಡ ಗುಮಾಸ್ತನು ಬೆಳೆದು ನಿಂತ ತನ್ನ ಮಗಳಿಗೊಂದು ಮದುವೆ ಮಾಡುವ ಹವಣಿಕೆಯಲ್ಲಿ ಸಾಕಷ್ಟು ಕಡೆ ಅವನ ಅಂತಸ್ತಿಗೆ ತಕ್ಕ ಹಾಗೇ ವರ ಹುಡುಕುತ್ತಿರುತ್ತಾನೆ. ವ್ಯಾವಹಾರಿಕ ಲೆಕ್ಕದಲ್ಲಿಯೇ ಒಪ್ಪಿಕೊಂಡ ಧನದಾಹಿ ವ್ಯಾಪಾರಿಯ ಮಗನಿಗೆ (ರಾಜ್ ಕುಮಾರ್) ತನ್ನ ಮಗಳನ್ನು (ಲೀಲಾವತಿ) ಕೊಟ್ಟು ಮದುವೆ ಕೂಡ ಮಾಡುತ್ತಾನೆ. ವರೋಪಚಾರಕ್ಕಾಗಿ ಕೊಡಬೇಕಾಗಿದ್ದ ಮೂರು ಸಾವಿರ ರೂಪಾಯಿಗಳಿಗೋಸ್ಕರ ಧನದಾಹಿ ಮಾವಯ್ಯ ತನ್ನ ಸೊಸೆಯನ್ನು ಮನೆಯಿಂದ ಆಚೆ ನೂಕುತ್ತಾನೆ. (60ರ ದಶಕದಿಂದ 90 ದಶಕದವರೆಗೂ ಈ ವರದಕ್ಷಿಣೆ ಕಿರುಕುಳ ಸಾಮಾನ್ಯ ವಿಷಯವಾಗಿತ್ತು). ಮನೆಯಿಂದ ಆಚೆ ನೂಕಲ್ಪಟ್ಟ ಆ ಹೆಣ್ಣು, ತಾನು ಮೂರು ಸಾವಿರ ರೂಪಾಯಿಗಳನ್ನು ಸಂಪಾದಿಸಿಕೊಂಡೇ ಮನೆಗೆ ವಾಪಾಸ್ಸು ಬರುವುದಾಗಿ ಹೇಳಿ ಸೊಸೆ ಮನೆಯಿಂದ ಹೊರಹೋಗುತ್ತಾಳೆ. ಆ ಕಾಲದಲ್ಲಿ ಮನೆಯ ಯಜಮಾನರು ಹೇಳಿದ್ದೆ ಮಾತು ನಡೆಯುತ್ತಾ ಇತ್ತು. ಈಗಿನಂತೆ ವಿರೋಧಿಸುವ ಕಾಲವಲ್ಲ, ಅಲ್ಲದೇ ಮನೆ ತಾಪತ್ರಯಗಳಿಗೆ ಊರವರು ಹೆಚ್ಚಿನದಾಗಿ ತಲೆ ಹಾಕುತ್ತಿರಲಿಲ್ಲ, ಆದರೆ ಈಗ ಕಾಲ ಬದಲಾಗಿ ಮನೆಯ ಸಣ್ಣಪುಟ್ಟ ಸಮಸ್ಯೆಗಳಿಗೂ ಟಿ.ವಿ. ನ್ಯೂಸ್ ಚಾನಲ್ ಗಳು ತಲೆ ಹಾಕುತ್ತಿವೆ. ಹೀಗಾಗಿ ತನ್ನ ಹೆಂಡತಿಯನ್ನು ಮತ್ತೆ ಕರೆತರುವ ಪ್ರಯತ್ನ ಮಾಡಿದ ಗಂಡನಿಗೆ, ತನ್ನ ಹೆಂಡತಿಯು ಸಿಗದೇ, ನೊಂದುಕೊಂಡು ಹಪಹಪಿಸುತ್ತಾನೆ. ಅಲ್ಲದೇ ಊರಜನರ ಕಿಚ್ಚುಮಾತುಗಳು ಅವನ ಮನಸಿನ ನೋವನ್ನು ಇಮ್ಮಡಿಗೊಳಿಸುತ್ತದೆ. ಈ ಹತಾಶೆಯಲ್ಲಿ ಬೇಯುತ್ತಿರುವಾಗ ಆಕಸ್ಮಿಕವಾಗಿ ಕಾರು ಅಪಘಾತವಾಗಿ, ಬುದ್ದಿಭ್ರಮಣೆಯಾಗುತ್ತದೆ. ತನ್ನ ಮಗನ ಬುದ್ದಿಭ್ರಮಣೆ ಕಂಡು, ತನ್ನ ಸೊಸೆಯ ನೋವು ಕಂಡು ತಾಯಿಗೂ ತುಂಬಾ ನೋವಾಗಿ, ಸೊಸೆಯನ್ನು ಕರೆತರುವಂತೆ ಧನದಾಹಿ ಯಜಮಾನರಿಗೆ ಒತ್ತಾಯಿಸುತ್ತಾಳೆ. ಆತನೇ ನೇರವಾಗಿ ಹೋದರೂ, ಆಕೆ ಹಣ ತರದೇ, ನಾನೂ ಮನೆಗೆ ವಾಪಾಸ್ಸು ಬರುವುದಿಲ್ಲವೆಂದು ಹೇಳಿ, ವಾಪಾಸ್ಸು ಕಳುಹಿಸುತ್ತಾಳೆ. ಆ ನೋವು ತಾಳಲಾರದೇ ಆ ತಾಯಿ (ಆದವಾನಿ ಲಕ್ಷ್ಮಿದೇವಿ) ಎದೆಯೊಡೆದು ಪ್ರಾಣ ಬಿಡುತ್ತಾಳೆ. ಆ ಮನೆಯ ಸೊಸೆಯು ಆಗ ತನ್ನ ತಂದೆಯನ್ನು ಕರೆದು, ಆತನ ಸಲಹೆ ಪಡೆದು ತನ್ನ ಮಾವನ ಮನೆಗೆ ಹಿಂದಿರುತ್ತಾಳೆ. ಬುದ್ದಿಭ್ರಮಣೆಯಾಗಿದ್ದ ಗಂಡ, ತನ್ನ ಹೆಂಡತಿ ಮನೆಗೆ ಬಂದ ನಂತರದ ಕೆಲವು ದಿನಗಳನ್ನು ಸರಿಹೋಗುತ್ತಾನೆ. ಇಲ್ಲೊಂದು ಮುಖ್ಯ ವಿಷಯ ಗಮನಿಸಬೇಕಾದುದು ಏನಂದರೆ “ಮನಸಿಗೆ ಬೇಕಾದುದು ಸಿಗದೇ ಹೋದಾಗ ಅಥವಾ ಅತಿ ಪ್ರಿಯರು, ಅತ್ಯಂತ್ಯ ಆತ್ಮೀಯರು ದೂರಾದಾಗ ಮಾನಸಿಕ ತಳಮಳಗಳು ಸಹಜ. ಆದರೆ ಆ ಮಾನಸಿಕ ತಳಮಳಗಳನ್ನೇ ದೊಡ್ಡ ಖಾಯಿಲೆಗಳನ್ನಾಗಿಸಿಕೊಂಡು ಬಳಲುವ ಆ ಜೀವಗಳಿಗೆ ಮನೆಯವರಿಂದಲೋ, ಸಮಾಜದಿಂದಲೋ ಹುಚ್ಚರೆಂಬ ಪಟ್ಟ ಸಿಕ್ಕು, ಅವರೂ ಇನ್ನಷ್ಟೂ ನರಳುವಂತೆ ಮಾಡುತ್ತದೆ. ಅದೇ ಮನೋವ್ಯಾಧಿಗಳಿಗೆ ಮಾನಸಿಕ ಸ್ಥೈರ್ಯ ನೀಡಿ, ಆಸರೆಯಾಗಿ ನಿಂತರೆ ಆ ಹುಚ್ಚು ದೂರವಾಗಿ ಮತ್ತೆ ಮಾಮೂಲಾಗಿ ಬಿಡುತ್ತಾರೆಂಬುದು ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯ. ಈ ಹಿಂದೆ ಬಂದ “ಶರಪಂಜರ” ಸಿನಿಮಾ ಕೂಡ ಮನೋವ್ಯಾಧಿಗಳ ಕುರಿತಂತೆ ಸಾಕಷ್ಟು ವಿಷಯಗಳನ್ನು ನೋಡುಗರಿಗೆ ಮನನ ಮಾಡಿಕೊಟ್ಟಿತ್ತು. ಮನೆಯವರ ಪ್ರೀತಿಯ ಮಮತೆಯ ಆಸರೆಯಿಂದ ಆತ ಮತ್ತೇ ಮಾಮೂಲಿನಂತಾದ. ಇದರ ನಡುವೆ ಆ ಧನದಾಹಿಯೂ ತನ್ನ ತಪ್ಪಿನ ಅರಿವಾಗಿ, ಹಣಕ್ಕೆ ಕೊಡುತ್ತಿದ್ದ ಮಹತ್ವವನ್ನು ಧಿಕ್ಕರಿಸಿ, ತನ್ನ ಸೊಸೆಗೆ ಮನೆಯ ಎಲ್ಲಾ ಜವಬ್ದಾರಿಗಳನ್ನು ಹೊರಿಸಿ, ಎಲ್ಲಾ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ನೀಡುತ್ತಾನೆ. ಅದೇ ಧನದಾಹಿ ತಂದೆ, ಹಣದ ಆಸೆಯಿಂದ, ಈ ಹಿಂದೆ ನಿಶ್ಚಯಿಸಿದಂತೆ ತನ್ನ ಮಗಳನ್ನು ತನಗಿಂತಲೂ ಹೆಚ್ಚು ವಯಸ್ಸಾದ ಮುದುಕನೊಬ್ಬನಿಗೆ ಮದುವೆ ಮಾಡಿಕೊಡಲು ಮುಂದಾಗುತ್ತಾನೆ. ಮನೆಯವರೆಲ್ಲಾ ಸೇರಿ ಆ ಮುದುಕನ ಮದುವೆಯನ್ನು ತಪ್ಪಿಸಿ, ತನ್ನ ಮನೆಯ ಸದಸ್ಯನೊಬ್ಬನ (ನರಸಿಂಹರಾಜು) ಜೊತೆ ಮದುವೆ ಮಾಡಿಸುತ್ತಾರೆ. ಕಥೆ ಅಲ್ಲಿಗೆ ಸುಖಾಂತ್ಯ.
ಈ ಸಿನಿಮಾ ಕಥೆಯಲ್ಲಿ ಒಂದು ರೀತಿ ನಾಟಕೀಯವಾಗಿ ಕಾಣುತ್ತಾದಾದರೂ, ಒಂದಷ್ಟು ಅಂಶಗಳಿಗೆ ಈ ಸಿನಿಮಾ ನೋಡಲೇಬೇಕಾಗುತ್ತದೆ. ಒಂದು ಮನೆಯ ಸೊಸೆಯಾಗಿ ಬಂದಾಕೆ, ವರದಕ್ಷಿಣೆ ಸಲುವಾಗಿ ಮಾವನಿಂದಲೇ ಮನೆಯಿಂದ ಹೊರಹಾಕಿಸಿಕೊಂಡು ಬಂದರೂ, ತನ್ನ ಹೆತ್ತವರಿಗೆ ಹೊರೆಯಾಗದೇ ತನ್ನ ಹಾಗೂ ತನ್ನವರ ಮರ್ಯಾದೆಗೂ ಧಕ್ಕೆ ಬರದಂತೆ ತನ್ನ ಕಾಲ ಮೇಲೆ ನಿಂತು, ದರ್ಜಿಯಾಗಿ, ಶಾಲಾ ಶಿಕ್ಷಕಿಯಾಗಿ, ಸಂಗೀತ ಶಿಕ್ಷಕಿಯಾಗಿ ದುಡಿದು ಸಂಪಾದಿಸಿ, ಮತ್ತೆ ತನ್ನ ಗಂಡನ ಬಳಿ ಸೇರುವ ತವಕ ವ್ಯಕ್ತಪಡಿಸುತ್ತಾಳೆ. ಎಲ್ಲಾ ಹೆಣ್ಣುಮಕ್ಕಳಲ್ಲೂ ಈ ತರಹ ಸ್ವಾಭಿಮಾನ ಇರಬೇಕಾದುದು ಉತ್ತಮವೆನಿಸುತ್ತದೆ. ಆದರೆ ಈಗಿನ ಕಾಲಮಾನಕ್ಕಂತೂ ಈ ತರಹ ನಡೆಯುವುದು ತುಂಬಾ ತುಂಬಾ ಅಪರೂಪ. ಕಾರಣ ಜನರೂ ಕೂಡ ಕಾನೂನಾತ್ಮಕವಾಗಿಯೂ, ಸಾಮಾಜಿಕವಾಗಿಯೂ ತಿಳುವಳಿಕೆಯುಳ್ಳವರಾಗಿದ್ದು, ಇಂತಹ ಅನಾಚಾರಗಳನ್ನು ವಿರೋಧಿಸುವ ಗುಣ ಹೊಂದಿದ್ದಾರೆ. ಹಾಗೆಯೇ ಈ ಕಾನೂನುಗಳ ದುರ್ಬಳಕೆ ಕೂಡ ನಡೆಯುತ್ತಲೇ ಇದೆ. ಅದೆಷ್ಟೋ ಕುಟುಂಬಗಳಲ್ಲಿ ಮನೆಯ ಸೊಸೆಯಂದಿರೇ, ತನ್ನ ಗಂಡನ ಮನೆಯವರ ಮೇಲೆ ವರದಕ್ಷಿಣೆ ಕೇಸ್ ಹಾಗೂ ಇತರೆ ಕೇಸ್ ಸೇರಿದಂತೆ ಅನೇಕ ಸುಳ್ಳು ಕೇಸ್ ಗಳನ್ನೇ ಹಾಕಿ, ಗಂಡಂದಿರ ಮನೆಯ ಮರ್ಯಾದೆಗಳನ್ನು ಕಳೆದ ಸೊಸೆಯಂದಿರೂ ಇದ್ದಾರೆ. ಕಾಲ ಬದಲಾದಂತೆ ಎಲ್ಲವೂ ಬದಲಾಗಿವೆಯೋ ಏನೋ?
ಯಾವುದೇ ಹೆಣ್ಣಾದರೂ ತನ್ನ ಹುಟ್ಟಿನ ಮನೆಗೂ ಹಾಗೂ ಗಂಡನ ಮನೆಗೂ ಕೆಟ್ಟ ಹೆಸರು ತರದೇ, ಎಲ್ಲರೊಂದಿಗೂ ಹೊಂದಿಕೊಂಡು, ಎಲ್ಲರ ತಪ್ಪುಗಳನ್ನು ತಿದ್ದಿ, ತಾಯಿಯ ಸ್ಥಾನದಲ್ಲಿಕೊಂಡು, ತನ್ನ ಸ್ವಾಭಿಮಾನಕ್ಕೂ ಧಕ್ಕೆ ತಂದುಕೊಳ್ಳದೇ ಪ್ರತಿಯೊಬ್ಬರೂ ಗೌರವಿಸುವಂತ ಬಾಳನ್ನು ಬಾಳುವ ಹೆಣ್ಣನ್ನೇ “ಕುಲವಧು” ಎಂದು ಕರೆಯಬೇಕಾಗುತ್ತದೆ. ಪ್ರತಿಯೊಬ್ಬ ಹೆಣ್ಣುಮಗಳೂ ಕುಲವಧುವಾಗಿರಲಿ ಎಂಬುದೇ ನಮ್ಮ ಆಶಯ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಒಂದು ಕುಟುಂಬದ ಸದಸ್ಯರ ನಡುವೆ ಇರಬೇಕಾದ ಹೊಂದಾಣಿಕೆಯ ಕುರಿತು ತಿಳಿಯಲು.
2. ಹಣದ ಮೋಹದಿಂದ ಆಗುವ ಅನಾಹುತಗಳ ಕುರಿತು ತಿಳಿಯಲು.
3. ಜೀವನದಲ್ಲಿ ಪ್ರೀತಿ ಹೇಗೆ ಪಾತ್ರ ನಿರ್ವಹಿಸುತ್ತೆ ಎನ್ನುವುದನ್ನು ತಿಳಿಯಲು ಈ ಸಿನಿಮಾ ನೋಡಲೇಬೇಕು.
4. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.