ನವದೆಹಲಿ: ಇಂದು ಹರಿಯಾಣದ ಕುರುಕ್ಷೇತ್ರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿ ಹಲವಾರು ಯೋಜನೆಗಳಿಗೆ ಚಾಲನೆಯನ್ನು ನೀಡಿದರು. ಮಹಿಳೆಯರಿಗಾಗಿ ಸಮರ್ಪಿತಗೊಂಡ ಸ್ವಚ್ಛ ಶಕ್ತಿ-2019ನ್ನು ಅನಾವರಣಗೊಳಿಸಿದರು. ಜಜ್ಜರ್ ಜಿಲ್ಲೆಯ ಬಾಡ್ಸಾದಲ್ಲಿನ ದೇಶದ ಅತೀದೊಡ್ಡ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆಗೊಳಿಸಿದರು. ಪಂಚಕುಲಾದಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದಕ್ಕೆ ಶಿಲಾನ್ಯಾಸ ನೆರವೇರಿಸಿದರು. ಫರೀದಾಬಾದ್ನಲ್ಲಿ ಇಎಸ್ಐ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಕಟ್ಟಡವನ್ನು ಉದ್ಘಾಟಿಸಿದರು. ಕುರುಕ್ಷೇತ್ರದಲ್ಲಿ ಶ್ರೀ ಕೃಷ್ಣ ಆಯುಷ್ ವಿವಿ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು. ಕರ್ನಾಲ್ನಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕಟ್ಟಡ, ಪಾಣಿಪತ್ನಲ್ಲಿ ಬ್ಯಾಟಲ್ಸ್ ಆಫ್ ಪಾಣಿಪತ್ ಮ್ಯೂಸಿಯಂ ನಿರ್ಮಾಣಕ್ಕೂ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.
ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಮ್ಮ ಸರ್ಕಾರ ಆಸ್ಪತ್ರೆ ನೆಟ್ವರ್ಕ್ನ್ನು ದೇಶದಲ್ಲಿ ಬಲಪಡಿಸುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ದೇಶದಾದ್ಯಂತ 1.5ಲಕ್ಷ ವೆಲ್ನೆಸ್ ಸೆಂಟರ್ಗಳನ್ನು ತೆರೆಯಲಾಗಿದೆ ಮತ್ತು ಈ ಯೋಜನೆಯಡಿ ಅನೇಕ ಮಂದಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದಿದ್ದಾರೆ.
ಹರಿಯಾಣದ ಮಣ್ಣಿನಲ್ಲಿ ನಿಂತು ನಾವು ದೊಡ್ಡ ಟಾರ್ಗೆಟ್ ರೂಪಿಸಿದ್ದೆವು. ಒನ್ ರ್ಯಾಂಕ್ ಒನ್ ಪೆನ್ಶನ್, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯನ್ನು ಇಲ್ಲಿಂದಲೇ ಆರಂಭಿಸಲಾಯಿತು. ಆಯುಷ್ಮಾನ್ ಭಾರತ್ನ ಮೊದಲ ಫಲಾನುಭವಿ ಕೂಡ ಇಲ್ಲಿಯವರೇ ಎಂದರು.
ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ ನಿರ್ಮಾಣಗೊಂಡ ಮನೆಗಳನ್ನು ಮಹಿಳೆಯರ ಹೆಸರಿನಲ್ಲೇ ನೋಂದಣಿ ಮಾಡುತ್ತೇವೆ ಎಂದರು. ಇಂದು ಗ್ರಾಮೀಣ ನೈರ್ಮಲ್ಯ ಸಾಕಷ್ಟು ಪ್ರಗತಿಯನ್ನು ಕಂಡಿದೆ. ಕೆಂಪುಕೋಟೆಯಲ್ಲಿ ನಿಂತು ಶೌಚಾಲಯದ ಬಗ್ಗೆ ಮಾತನಾಡಿದ್ದಕ್ಕೆ ಹಲವಾರು ಮಂದಿ ವ್ಯಂಗ್ಯವಾಡಿದ್ದರು, ಆದರೆ ಈಗ ದೇಶದ ಹಲವಾರು ಜಿಲ್ಲೆಗಳು ಬಯಲುಶೌಚಮುಕ್ತಗೊಂಡಿದೆ ಎಂದರು.
ಕೆಲವರಿಗೆ 1947ರ ಬಳಿಕವಷ್ಟೇ ಇತಿಹಾಸ ಆರಂಭವಾಯಿತು. ಆದರೆ ಅದು ಪರಿವಾರದ ಇತಿಹಾಸ. ಆ ಪರಿವಾರ ದೇಶವನ್ನು ಅದರ ಇತಿಹಾಸದಿಂದ ದೂರವಾಗಿಸಲು ಪ್ರಯತ್ನಿಸಿತು ಎನ್ನುವ ಮೂಲಕ ಕಾಂಗ್ರೆಸ್ ಪಕ್ಷದ ಮೊದಲ ಕುಟುಂಬ ಗಾಂಧಿ ಪರಿವಾರದ ವಿರುದ್ಧ ಹರಿಹಾಯ್ದರು.
ಯಾರು ಭ್ರಷ್ಟರಾಗಿರುತ್ತಾರೋ ಅವರಿಗೆ ಮೋದಿಯಿಂದ ಕಷ್ಟವಾಗುತ್ತಿದೆ ಎನ್ನುವ ಮೂಲ ಮಹಾಘಟ್ಬಂಧನ್ ನಾಯಕರಿಗೆ ಟಾಂಗ್ ನೀಡಿದರು.
ಸ್ವಚ್ಛ ಶಕ್ತಿ 2019 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನ ನರೇಂದ್ರ ಮೋದಿಯವರು ಹಲವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಸ್ವಚ್ಚ ಸುಂದರ್ ಶೌಚಾಲಯ್ ಪ್ರದರ್ಶನ ವೀಕ್ಷಿಸಿದರು.