ಪ್ರಯಾಗ್ರಾಜ್: ಭಕ್ತರು ಶ್ರೀರಾಮನ ಹೆಸರನ್ನು ಬರೆದ ಪುಸ್ತಕಗಳನ್ನು ಒಂದೆಡೆ ಠೇವಣಿಯಿಡುವ ‘ರಾಮ್ ನಾಮ್ ಬ್ಯಾಂಕ್’ ಈ ಬಾರಿಯ ಕುಂಭಮೇಳದ ಸಂದರ್ಭದಲ್ಲಿ ಡಿಜಟಲೀಕರಣಗೊಂಡಿದೆ. ಯಾವುದೇ ನಗದು ವ್ಯವಹಾರ, ಎಟಿಎಂ, ಚೆಕ್ಗಳಿಲ್ಲದ ಬ್ಯಾಂಕ್ ಇದಾಗಿದ್ದು, ’ಶ್ರೀರಾಮ’ನೇ ಈ ಬ್ಯಾಂಕ್ನ ಕರೆನ್ಸಿ.
ಅಶುತೋಷ್ ವರ್ಷನೆ ಎಂಬುವವರು ಈ ಬ್ಯಾಂಕ್ನ್ನು ನಿರ್ವಹಣೆ ಮಾಡುತ್ತಿದ್ದಾರೆ. 20ನೇ ಶತಮಾನದಲ್ಲಿ ‘ರಾಮ್ ನಾಮ್ ಬ್ಯಾಂಕ್’ನ್ನು ಅವರ ಅಜ್ಜ ಸ್ಥಾಪನೆ ಮಾಡಿದ್ದರು. ಆ ಪರಂಪರೆಯನ್ನು ಇವರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಪ್ರಸ್ತುತ ಈ ಬ್ಯಾಂಕ್ಗೆ 1 ಲಕ್ಷ ಠೇವಣಿದಾರರಿದ್ದಾರೆ. ರಾಮ್ ನಾಮ್ ಸೇವಾ ಸಂಸ್ಥಾನ್ ಇದರ ನೇತೃತ್ವ ವಹಿಸಿದೆ.
ಅಶುತೋಷ್ ಕುಂಭಮೇಳದ ಸೆಕ್ಟರ್ 6ರಲ್ಲಿ ಇವರು ತಮ್ಮ ಬ್ಯಾಂಕ್ನ ಶಿಬಿರವನ್ನು ಇಟ್ಟಿದ್ದಾರೆ. ರಾಮ್ ನಾಮ್ ಬ್ಯಾಂಕ್ ಕನಿಷ್ಠ 9 ಕುಂಭಮೇಳಗಳಿಗೆ ಸಾಕ್ಷಿಯಾಗಿದೆ.
ಇಲ್ಲಿ ಗ್ರಾಹಕರು ಪ್ರತಿನಿತ್ಯ ‘ರಾಮ್ ನಾಮ್’ ಎಂದು 108 ಬಾರಿ ಬರೆದ 30 ಪುಟಗಳ 108 ಕಾಲಂಗಳನ್ನು ಒಳಗೊಂಡ ಶ್ರೀರಾಮ ಚಂದ್ರನ ಹೆಸರು ಬರೆದ ಪುಸ್ತಕವನ್ನು ಠೇವಣಿ ಇಡುತ್ತಾರೆ. ಕೆಂಪು ಬಣ್ಣದಲ್ಲೇ ರಾಮನ ಹೆಸರು ಬರೆಯಬೇಕು ಎಂಬ ನಿಯಮವೂ ಇದೆ. ಇಟ್ಟ ಠೇವಣಿಗೆ ಪಾಸ್ಬುಕ್ ಕೂಡ ನೀಡಲಾಗುತ್ತದೆ.
ಈಗ ಈ ರಾಮ್ ನಾಮ್ ಬ್ಯಾಂಕ್ ಡಿಜಟಲೀಕರಣಗೊಂಡಿದ್ದು, ಗ್ರಾಹಕರು ಗೂಗಲ್ ಪ್ಲೇ ಸ್ಟೋರ್ನಿಂದ ರಾಮ್ ನಾಮ್ ಆ್ಯಪ್ನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ರಾಮನಾಮ್ ಸೇವಾ ಸಂಸ್ಥಾನ್ನೊಂದಿಗೆ ಹೆಸರು, ವಯಸ್ಸು, ವಿಳಾಸದಂತಹ ವಿವರಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಬೇಕು.
ಬಳಿಕ ಬಳಕೆದಾರರಿಗೆ ಲಾಗಿನ್ ಐಡಿ ನೀಡಲಾಗುತ್ತದೆ ಮತ್ತು 30 ಪುಟಗಳ ಮೊದಲ ಪುಸ್ತಕ ಕಾಣುತ್ತದೆ. ಇಲ್ಲಿ ಪ್ರತಿ ಪುಟದಲ್ಲೂ 108 ಬಾರಿ ರಾಮನ ಹೆಸರನ್ನು ಬರೆಯಬೇಕು. ಮೊದಲ ಇ-ಬುಕ್ಲೆಟ್ ಸಂಪೂರ್ಣ ಮಾಡಿದ ಬಳಿಕವಷ್ಟೇ ಅಕೌಂಟ್ ನಂಬರ್ ನೀಡಲಾಗುತ್ತದೆ.
ಡಿಜಿಟಲ್ ರಾಮ್ ನಾಮ್ ಬ್ಯಾಂಕ್ ಕ್ಲೌಡ್ ಕಾಂಪ್ಯುಟಿಂಗ್ ಟೆಕ್ನಾಲಜಿಯನ್ನೂ ಹೊಂದಿದೆ. ಕಾಪಿ ಪೇಸ್ಟ್ ಮಾಡದೆ, ಪ್ರತಿ ಸಲ ವೈಯಕ್ತಿವಾಗಿ ರಾಮನ ಹೆಸರನ್ನು ಟೈಪ್ ಮಾಡಬೇಕು ಎಂಬ ನಿಯಮವೂ ಇದೆ.