ನವದೆಹಲಿ: ಜಾಗತಿಕ ಮಟ್ಟದಲ್ಲಿ ರೇಷ್ಮೆಯನ್ನು ಪ್ರಚಾರಪಡಿಸುವ ಸಲುವಾಗಿ ಟೆಕ್ಸ್ಟೈಲ್ ಸಚಿವಾಲಯಕ್ಕೆ ಬೇಕಾದ ಎಲ್ಲಾ ನೆರವುಗಳನ್ನು ಒದಗಿಸುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಟೆಕ್ಸ್ಟೈಲ್ ಸಚಿವಾಲಯ ನವದೆಹಲಿಯಲ್ಲಿ ಆಯೋಜನೆಗೊಳಿಸಿದ್ದ ‘ಸರ್ಜಿಂಗ್ ಸಿಲ್ಕ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೇಷ್ಮೆ ಒಂದು ಬಲಿಷ್ಠ ಸರಕಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದಕ್ಕೆ ಭಾರೀ ಬೇಡಿಕೆ ಇದೆ ಎಂದಿರುವ ಸ್ವರಾಜ್, ರೇಷ್ಮೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಟೆಕ್ಸ್ಟೈಲ್ ಸಚಿವಾಲಯಕ್ಕೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.
ಅಲ್ಲದೇ ‘ಉತ್ಪಾದನೆಯನ್ನು ಹೆಚ್ಚಿಸಿ, ಮಾರುಕಟ್ಟೆ ಇದೆ’ ಎಂದು ರೇಷ್ಮೆ ಬೆಳೆಗಾರರಿಗೆ ಅವರು ಕರೆ ನೀಡಿದ್ದಾರೆ.
ಭಾರತೀಯ ರೇಷ್ಮೆ ಸೀರೆಗಳ ಜನಪ್ರಿಯತೆಯ ಬಗ್ಗೆ ಮಾತನಾಡಿದ ಅವರು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಗಳ ಸಂದರ್ಭದಲ್ಲಿ ವಿದೇಶಿ ಗಣ್ಯರುಗಳು ರೇಷ್ಮೆ ಸೀರೆ, ಅದರ ಬಣ್ಣ, ವಿನ್ಯಾಸ, ವಿಧಾನಗಳ ಬಗ್ಗೆ ಮಾಹಿತಿ ಕೇಳುತ್ತಿರುತ್ತಾರೆ ಎಂದರು.
ರೇಷ್ಮೆ ತಯಾರಿಸುವ ಹಳೆಯ ವಿಧಾನದ ಬದಲು ಹೊಸ ಮೆಶಿನ್ಗಳನ್ನು ನೇಕಾರರಿಗೆ ಟೆಕ್ಸ್ಟೈಲ್ ಸಚಿವಾಲಯ ಹಂಚಿಕೆ ಮಾಡುತ್ತಿದೆ. 2020ರ ವೇಳೆ ದೇಶದಲ್ಲಿ ಥೈ ರೀಲಿಂಗ್ ಸಂಪೂರ್ಣ ನಿಂತು ಮೆಶಿನ್ ಮೂಲಕವೇ ರೇಷ್ಮೆ ತಯಾರಾಗಲಿದೆ.