ನವದೆಹಲಿ: ಭೂಮಿ ಹೊಂದಿದ ಎಲ್ಲಾ ಬೆಳೆಗಾರರನ್ನು ಒಂದೇ ಸಾಂಸ್ಥಿಕ ಕ್ರೆಡಿಟ್ ವ್ಯವಸ್ಥೆಯೊಳಗೆ ಒಳಪಡಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಅಭಿಯಾನವನ್ನು ಆರಂಭಿಸಲಿದೆ. ಈ ಮೂಲಕ ಎಲ್ಲಾ ರೈತರನ್ನು ಸಂಪರ್ಕಿಸಿ, ಕಿಸಾನ್ ಕ್ರೆಡಿಟ್ ಕಾರ್ಡ್ಗಳ ಸಂಖ್ಯೆಯನ್ನು ಪ್ರಸ್ತುತ ಇರುವ 6.95 ಕೋಟಿಯಿಂದ 14 ಕೋಟಿಗೆ ಏರಿಸಲಿದೆ.
ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹ ರೈತರಿಗೆ ಎರಡು ವಾರಗಳೊಳಗೆ ಕಿಸಾನ್ ಕಾರ್ಡ್ ವಿತರಿಸುವ ಗುರಿಯನ್ನು ಹೊಂದಲಾಗಿದೆ.
ಎಲ್ಲಾ ಬ್ಯಾಂಕುಗಳಿಗೆ ಕಳೆದ ವಾರ ನಿರ್ದೇಶನಗಳನ್ನು ಜಾರಿಗೊಳಿಸಿರುವ ಇಂಡಿಯನ್ ಬ್ಯಾಂಕ್ ಅಸೋಸಿಯೇಶನ್, ಕಿಸಾನ್ ಕ್ರೆಡಿಟ್ ಕಾರ್ಡ್ನ ಪ್ರಕ್ರಿಯೆ, ದಾಖಲಾತಿ, ಪರಿಶೀಲನೆ, ಲೆಡ್ಜರ್ ಫೋಲಿಯೊ ಚಾರ್ಜ್, ಇತರ ಸೇವಾ ದರಗಳ ಪ್ರಕ್ರಿಯೆಯನ್ನು ತ್ವರಿತವಾಗಿ ಮಾಡುವಂತೆ ತಿಳಿಸಿದೆ. ಇದರಿಂದ ರೂ.3 ಸಾವಿರದಿಂದ 5 ಸಾವಿರದವರೆಗೆ ರೈತರ ಹಣ ಉಳಿತಾಯವಾಗಲಿದೆ. ಸಮಯವೂ ಉಳಿತಾಯವಾಗಲಿದೆ.
ಎಲ್ಲಾ ಅರ್ಹ ರೈತರಿಗೂ ಕಿಸಾನ್ ಕಾರ್ಡ್ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಕೃಷಿ ಸಚಿವಾಲಯ ಮನವಿಯನ್ನು ಮಾಡಿಕೊಂಡಿದೆ.