ನವದೆಹಲಿ: ತನ್ನ ಪ್ರತಿಮೆಗಳನ್ನು ನಿರ್ಮಿಸಲು ಸಾರ್ವಜನಿಕರ ಹಣವನ್ನು ಪೋಲು ಮಾಡಿದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಯವರ ವಿರುದ್ಧ ಸುಪ್ರೀಂಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ, ಪ್ರತಿಮೆ ನಿರ್ಮಿಸಲು ವ್ಯಯಿಸಿದ ಹಣವನ್ನು ಸಾರ್ವಜನಿಕ ಖಜಾನೆಗೆ ಅವರು ಹಿಂದಿರುಗಿಸಬೇಕು ಎಂದಿದೆ.
ಶುಕ್ರವಾರ, ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ನ್ಯಾಯಪೀಠ ಮಯಾವತಿಯವರ ಕ್ರಮದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಪ್ರತಿಮೆಗಳ ನಿರ್ಮಾಣಕ್ಕೆ ವ್ಯಯಿಸಿದ ಸಾರ್ವಜನಿಕ ಹಣವನ್ನು ಅವರು ಸಾರ್ವಜನಿಕರ ಖಜಾನೆಗೆ ಹಿಂದಿರುಗಿಸಬೇಕು ಎಂದಿದೆ.
ಉತ್ತರಪ್ರದೇಶದ ವಿವಿಧೆಡೆ ಅಳವಡಿಸಲು ಮಾಯಾವತಿಯವರು ತಮ್ಮ ಹಾಗೂ ತಮ್ಮ ಪಕ್ಷದ ಚಿಹ್ನೆಯಾದ ಆನೆಯ ಕಲ್ಲಿನ ಪ್ರತಿಮೆಗಳನ್ನು ನಿರ್ಮಿಸಿದ್ದರು. ಇದಕ್ಕಾಗಿ ಸರ್ಕಾರದ ರೂ.1,200 ಕೋಟಿ ಹಣವನ್ನು ವ್ಯಯಿಸಿದ್ದರು.
ಮಾಯಾವತಿ ಕ್ರಮವನ್ನು ವಿರೋಧಿಸಿ ವಕೀಲ ರವಿ ಕಾಂತ್ ಎಂಬುವವರು 2009ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಯುಪಿಎ 50 ಮಿಲಿಯನ್ ಜನ ಬಡತನ ರೇಖೆಗಿಂತ ಕೆಳಗಿರುವಾಗ, ಮಯಾವತಿ 1,500 ಕೋಟಿ ರೂಪಾಯಿಗಳನ್ನು ಪ್ರತಿಮೆ ನಿರ್ಮಿಸಲು ವ್ಯಯಿಸಿದ್ದಾಗಿ ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ.