ಪೂಂಜಾಲಕಟ್ಟೆ : ರಸ್ತೆ ಹದಗೆಟ್ಟಿದೆ ಎಂದು ಪ್ರತಿಭಟನೆ ಮಾಡುವುದನ್ನು ಕಂಡಿದ್ದೇವೆ. ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿ ಪಡಿಸುವುದನ್ನು ನೋಡಿದ್ದೇವೆ. ಮರಳು ಲಾರಿ ಸಾಗುತ್ತದೆ ಎಂದು ಲಾರಿ ತಡೆದು ಗ್ರಾಮಸ್ಥರು ಪ್ರತಿಭಟನೆ ಮಾಡುವುದನ್ನು ಕೇಳಿದ್ದೇವೆ. ಆದರೆ ಲಾರಿ ಸಾಗುತ್ತದೆ ಎಂದು ರಸ್ತೆಯನ್ನು ಅಗೆಯುವ ಘಟನೆ ಅಪರೂಪ.
ಇಂತಹ ಅಪರೂಪದ ಘಟನೆ ನಡೆದಿರುವುದು ಬಂಟ್ವಾಳ ತಾಲೂಕಿನ ಸರಪಾಡಿಯಲ್ಲಿ. ಸರಪಾಡಿ-ಕೊಟ್ಟುಂಜ-ಗಂಡಿಯಲ್ಲಿ ಮರಳು ಲಾರಿಗಳು ಸಾಗುತ್ತವೆ ಎಂಬ ಕಾರಣಕ್ಕಾಗಿ ಕಿಡಿಗೇಡಿಗಳು ರಸ್ತೆಯ ಒಂದು ಬದಿಯನ್ನು ಅಗೆದು ಹಾಕಿದ್ದಾರೆ. ಹೀಗಾಗಿ ಘನವಾಹನಗಳು ಸರಾಗವಾಗಿ ತೆರಳುವುದು ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸರಪಾಡಿ ಹಾಗೂ ಅಜಿಲಮೊಗರು ಸಂಪರ್ಕಿಸುವ ಗಂಡಿ-ಕೊಟ್ಟುಂಜ ರಸ್ತೆ ಕಳೆದ ಕೆಲವು ತಿಂಗಳ ಹಿಂದೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣವಾಗಿತ್ತು. ದ.ಕ.ಜಿಲ್ಲಾ ಉಸ್ತುವಾರಿ ಸಚಿವರು, ಬಂಟ್ವಾಳ ಶಾಸಕ ಬಿ.ರಮಾನಾಥ ರೈಯವರ ಶಿಫಾರಸ್ಸಿನ ಮೇರೆಗೆ ಈ ರಸ್ತೆಯ ಕಾಮಗಾರಿ ನಡೆದಿತ್ತು. ಜತೆಗೆ ರಸ್ತೆ ಮುಂದುವರಿದ ಭಾಗವಾಗಿ ಸರಪಾಡಿಯನ್ನು ಸಂಪರ್ಕಿಸಲು ತೇಪೆ ಕಾರ್ಯವೂ ನಡೆದಿತ್ತು. ಇದೀಗ ತೇಪೆ ಕಾರ್ಯ ನಡೆದ ಭಾಗದಲ್ಲಿ ರಸ್ತೆಯ ಒಂದು ಭಾಗವನ್ನು ಅಗೆದು ಹಾಕಲಾಗಿದೆ.
ಆದರೆ ಲಾರಿ ಹೋಗುತ್ತದೆ ಎಂಬ ಕಾರಣಕ್ಕೆ ಲಾರಿ ಸಾಗದಂತೆ ಕ್ರಮ ವಹಿಸುವುದನ್ನು ಬಿಟ್ಟು ರಸ್ತೆಯನ್ನೇ ಅಗೆದರೆ ಅದಕ್ಕಿಂತ ಮೂರ್ಖತನದ ವಿಚಾರ ಬೇರೊಂದಿರಲಿಕ್ಕಿಲ್ಲ. ಇದು ಮಳೆಗಾಲದ ಆರಂಭದ ಸಮಯವಾದುದರಿಂದ ಮುಂದಕ್ಕೆ ಅಗೆದ ಭಾಗದಲ್ಲಿ ಮಣ್ಣಿನ ಸವೆತ ಆರಂಭವಾದರೆ ಈ ಭಾಗದಲ್ಲಿ ವಾಹನ ಸಂಚಾರವೇ ಮೊಟಕುಗೊಳ್ಳುವ ಸಾಧ್ಯತೆ. ಜತೆಗೆ ಈ ರಸ್ತೆಯಲ್ಲಿ ಸಾಗುವ ಬಸ್ಸಿನ ಸಂಚಾರವೂ ನಿಂತು ಹೋಗುತ್ತದೆ.
ರಸ್ತೆ ಚೆನ್ನಾಗಿದೆ ಎಂದು ವಾಹನ ವಾಲಕರು ಅಥವಾ ಸವಾರರು ವೇಗವಾಗಿ ಬಂದು ಈ ಹೊಂಡವನ್ನು ಕಂಡಾಗ ತತ್ಕ್ಷಣ ಬ್ರೇಕ್ ಹಾಕಿದರೆ ಅಪಾಯ ಸಂಭವಿಸುವ ಸಾಧ್ಯತೆಯೂ ಇದೆ. ದ್ವಿಚಕ್ರ ಸವಾರರಿಗಂತೂ ಅಪಾಯದ ಸ್ಥಿತಿ ಕೊಂಚ ಅತಂಕವೇ. ಜತೆಗೆ ಅಲ್ಲೇ ಪಕ್ಕದಲ್ಲಿ ಪ್ರಪಾತವೂ ಇರುವುದರಿಂದ ವಾಹನ ಚಾಲಕರು ಕೊಂಚ ಜಾಗೃತರಾಗಿರಬೇಕಾಗುತ್ತದೆ.ಹೀಗಾಗಿ ಈ ಕುರಿತು ಸಂಬಂಧಪಟ್ಟವರು ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕಿದೆ. ಜತೆಗೆ ಅಗೆತದಿಂದ ಹಾನಿಯಾದ ಭಾಗವನ್ನು ದುರಸ್ತಿ ಪಡಿಸುವುದು ಕುಡ ಅಗತ್ಯವಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.