ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪುಟ್ಟ ಗ್ರಾಮ ಕೂನಿಯೂರು. ಕಚ್ಛಾ ರಸ್ತೆಗಳು, ಮಣ್ಣಿನ ಇಟ್ಟಿಗೆಯ ಸಣ್ಣ ಸಣ್ಣ ಮನೆಗಳನ್ನು ಹೊಂದಿರುವ ಈ ಗ್ರಾಮದ ಮಹಿಳೆಯರು ತಮ್ಮ ಜಿಲ್ಲೆ ಬಿಟ್ಟು ಆಚೆಗೆ ಕಾಲಿಟ್ಟಿದೆ ಕಡಿಮೆ. ಆದರೆ ಅವರು ತಯಾರಿಸುವ ಅತ್ಯದ್ಭುತ ಮಣ್ಣಿನ ಮಡಕೆಗಳು ಇಂದು ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಅವರ ಕೈಯಲ್ಲಿ ಮೂಡಿ ಬರುವ ಮಡಕೆಗಳು ಅಮೆರಿಕಾಗೆ ರಫ್ತಾಗುತ್ತಿವೆ. ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂದು ಯೋಚಿಸುತ್ತಿದ್ದೀರಾ? 52 ವರ್ಷದ ಮಹಿಳೆ ಶಾಂತಿ ಆರಂಭಿಸಿದ ಸ್ವಸಹಾಯ ಸಂಘದಿಂದ ಇದೆಲ್ಲಾ ಸಾಧ್ಯವಾಗಿದೆ.
ಸಾಂಪ್ರದಾಯಿಕ ಮಣ್ಣಿನ ಮಡಕೆಗಳನ್ನು ಜೀವಂತವಾಗಿಡಬೇಕು ಎಂಬ ಉದ್ದೇಶ ಶಾಂತಿಯದ್ದಾಗಿತ್ತು. ಕುಂಬಾರಿಕೆ ಆಕೆಯ ಕುಟುಂಬದ ಉದ್ಯಮ. ತನ್ನ ಪೂರ್ವಜರು ಹಾಕಿದ ಅಡಿಪಾಯದಲ್ಲೇ ಜೀವನ ಕಟ್ಟಿಕೊಳ್ಳುವುದು ಆಕೆಯ ಆಶಯವಾಗಿತ್ತು. ಬದಲಾಗುತ್ತಿರುವ ಕಾಲಘಟ್ಟ, ಪ್ರಕೃತಿ ವಿಕೋಪಗಳಿಂದ ಮಣ್ಣು ಸಿಗುವುದು ಈಗ ಅಪರೂಪ. ಹೀಗಾಗಿ ಸಾಂಪ್ರದಾಯಿಕ ಕುಂಬಾರಿಕೆ ಎಂಬುದು ದೊಡ್ಡ ಸವಾಲು. ಅದರಲ್ಲೇ ಜೀವನ ಕಟ್ಟಿಕೊಳ್ಳುವುದು ಇನ್ನೂ ದೊಡ್ಡ ಸವಾಲು. ಶಾಂತಿ ಅವರ ಪತಿಯೂ ಕುಂಬಾರರಾಗಿದ್ದರು, ವರ್ಷಕ್ಕೆ 50 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದರು. ಆದರೆ ಇದು ಅವರ ದೊಡ್ಡ ಕುಟುಂಬದ ನಿರ್ವಹಣೆಗೆ ಸಾಲುತ್ತಿರಲಿಲ್ಲ. ಹೀಗಾಗಿ ಕುಂಬಾರಿಕೆಯನ್ನು ವಾಣಿಜ್ಯವಾಗಿ ವಿಸ್ತರಿಸುವ ಮಾರ್ಗೋಪಾಯಗಳನ್ನು ಅವರು ಹುಡುಕಿದರು. ಮಾರುಕಟ್ಟೆಯನ್ನು ಉತ್ತೇಜಿಸಲು ಸಂಪ್ರದಾಯಗಳೊಂದಿಗೆ ಹೊಸ ಹೊಸ ವಿನ್ಯಾಸಗಳ ಮಡಕೆಯನ್ನು ಮಾಡುವುದು ಅನಿವಾರ್ಯ ಎಂಬುದು ಅವರ ಅರಿವಿಗೆ ಬಂದಿತು.
ಸಾಲವನ್ನು ಪಡೆದು ಕಚ್ಛಾ ವಸ್ತು, ಕಾರ್ಮಿಕರಿಗೆ ಭತ್ಯೆ ನೀಡುವುದಕ್ಕಾಗಿ, ತನ್ನ ಗ್ರಾಮದ ಉದ್ಧಾರಕ್ಕಾಗಿ ಟಿ.ವಿ ಸುಂದರಮ್ ಐಯ್ಯಂಗಾರ್ ಸ್ಥಾಪನೆ ಮಾಡಿದ ಶ್ರೀನಿವಾಸನ್ ಸರ್ವಿಸ್ ಟ್ರಸ್ಟ್ನ್ನು 2016ರಲ್ಲಿ ಅವರು ಸಂಪರ್ಕಿಸಿದರು. ಬಳಿಕ ಈ ಟ್ರಸ್ಟ್ ಸಹಾಯದಿಂದ ‘ನರ್ಮದಾ’ ಎಂಬ ಹೆಸರಿನ ಸ್ವಸಹಾಯ ಸಂಘವೊಂದನ್ನು ನಿರ್ಮಾಣ ಮಾಡಿದರು. ಈ ಸಂಘದ ಮೂಲಕ ಮಹಿಳೆಯರಿಗೆ ಟ್ರಸ್ಟ್ ಕುಂಬಾರಿಕೆ ತರಬೇತಿ ನೀಡಿತು. ಗುಡಿ ಕೈಗಾರಿಕೆ ಬೆಂಬಲಿಸಲು ಸರ್ಕಾರ ತಂದಿರುವ ಹತ್ತು ಹಲವು ಯೋಜನೆಗಳ ಬಗ್ಗೆಯೂ ಈ ಮಹಿಳೆಯರಿಗೆ ಮಾಹಿತಿ ನೀಡಲಾಯಿತು.
ಎರಡು ವರ್ಷಗಳೊಳಗೆ, ಶಾಂತಿ ಅವರ ವ್ಯವಹಾರ ಪ್ರಗತಿ ಕಂಡಿದ್ದು ಮಾತ್ರವಲ್ಲ, ಆಕೆ ತನ್ನ ಮಡಕೆಗಳನ್ನು ತನ್ನ ಸೋದರ ಸಂಬಂಧಿಯ ಮೂಲಕ ಅಮೆರಿಕಾಗೂ ಕಳುಹಿಸಲು ಸಾಧ್ಯವಾಯಿತು. ಇದರಿಂದಾಗಿ ಅವರು 20 ಜನ ಮಹಿಳೆಯರಿಗೆ ಉದ್ಯೋಗವನ್ನು ನೀಡಿದರು, ಮಾತ್ರವಲ್ಲ ವಾರ್ಷಿಕ 2.5 ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದಾರೆ.
ಕುಂಬಾರಿಕೆ ತಂಡ:
ಒಬ್ಬರೇ ದುಡಿಯುತ್ತಿದ್ದಾಗ ಶಾಂತಿಯವರಿಗೆ ಕೇವಲ ಸೀಸನಲ್ ಆರ್ಡರ್ಗಳು ಬರುತ್ತಿದ್ದವು, ಅದನ್ನು ಅವರೇ ಮಾರುಕಟ್ಟೆಗೆ ಕೊಂಡು ಹೋಗಿ ಮಾರಾಟ ಮಾಡಬೇಕಿತ್ತು. 2016ರಲ್ಲಿ ಅವರು 12 ಸದಸ್ಯರ ಸ್ವಸಹಾಯ ಸಂಘ ಸ್ಥಾಪನೆ ಮಾಡಿದರು, ಈ ಮಹಿಳೆಯರು ಒಂದಾಗಿ ವಿವಿಧ ವಿನ್ಯಾಸದ ಮಣ್ಣಿನ ವಸ್ತುಗಳನ್ನು ತಯಾರಿಸುತ್ತಾರೆ. ಇದನ್ನು ಮಾರುಕಟ್ಟೆಗೆ ಬಿಡುತ್ತಾರೆ. ಇದರಿಂದ ಆದಾಯ ಹೆಚ್ಚಾಗಿ ಬರುತ್ತಿದೆ. ಅಲ್ಲದೇ, ಇದರ ಮೂಲಕ ಸಾಂಪ್ರದಾಯಿಕ ಕುಂಬಾರಿಕೆಗೆ ಜೀವ ತುಂಬಿದರು. ಅದನ್ನು ಮಾರ್ಕೆಟಿಂಗ್ ಮಾಡಿ ಆದಾಯದ ಮೂಲವನ್ನಾಗಿ ಮಾಡಿಕೊಂಡರು.
ತಮ್ಮ ಆಸಕ್ತಿಯ ಕ್ಷೇತ್ರದಲ್ಲೇ ಮಹಿಳೆಯರನ್ನು ಸಬಲೀಕರಣ ಮಾಡುವುದು ಸ್ವಸಹಾಯ ಸಂಘದ ಆಶಯವಾಗಿತ್ತು. ನೈಸರ್ಗಿಕ ಕಚ್ಛಾ ವಸ್ತುಗಳಿಂದ ಮತ್ತು ನೈಸರ್ಗಿಕ ವರ್ಣಗಳಿಂದಲೇ ಕರಕುಶಲ ವಸ್ತುಗಳನ್ನು ಈ ತಂಡದ ಮಹಿಳೆಯರು ತಯಾರಿಸುತ್ತಾರೆ. ಪ್ರತಿ ವಸ್ತುವೂ ಪರಿಸರ ಸ್ನೇಹಿ ಆಗಿರುವಂತೆ ನೋಡಿಕೊಳ್ಳುತ್ತಾರೆ. ಸರಳತೆಯೇ ನಮ್ಮ ಉದ್ಯಮದ ಯಶಸ್ಸಿನ ಗುಟ್ಟು ಎನ್ನುತ್ತಾರೆ ಶಾಂತಿ. ಪ್ರತಿ ವಿನ್ಯಾಸ, ಪ್ರತಿ ವಸ್ತು ಕೂಡ ಸರಳವಾಗಿರುವಂತೆ ಇವರು ನೋಡಿಕೊಳ್ಳುತ್ತಾರೆ. ಅಲಂಕಾರಕ್ಕಿಂತ ದೈನಂದಿನ ಬದುಕಿನಲ್ಲಿ ಕೆಲಸಕ್ಕೆ ಬರುವ ವಸ್ತುಗಳಿಗೆ ಹೆಚ್ಚಿನ ಆದ್ಯತೆಯನ್ನು ಇವರು ನೀಡುತ್ತಾರೆ.
ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನು ಸಂಪರ್ಕಿಸಿ ಅನುಮತಿ ಪಡೆದು, ಸ್ಥಳಿಯ ಕೆರೆಗಳ ಮಣ್ಣನ್ನೇ ಇವರು ತಮ್ಮ ಮಡಕೆಗಳಿಗೆ ಬಳಸುತ್ತಾರೆ. ಶ್ರೀನಿವಾಸ್ ಸರ್ವಿಸ್ ಟ್ರಸ್ಟ್ ಇವರ ಉದ್ಯಮಕ್ಕೆ ಯೋಜನೆಗಳನ್ನು ರೂಪಿಸಿ ಕೊಟ್ಟಿದೆ. ಅವರ ಉದ್ಯಮ ಕೇರಳ, ಮಹಾರಾಷ್ಟ್ರ ಮಾತ್ರವಲ್ಲದೇ ಸ್ಥಳಿಯ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಗತಿ ಕಾಣುವಂತೆ ಮಾಡಿದೆ.
ಯುಎಸ್ ಮಾರುಕಟ್ಟೆಯತ್ತ ಹೆಜ್ಜೆ
ಸ್ನೇಹಿತರ ಮತ್ತು ನೆರೆಹೊರೆಯವರ ಆಸಕ್ತಿಯನ್ನು ತಿಳಿದುಕೊಳ್ಳುವ ಸಲುವಾಗಿ ಅವರೊಂದಿಗೆ ಕೆಲವು ಸ್ಯಾಂಪಲ್ ಹಂಚಿಕೊಂಡ ಶಾಂತಿ ಅವರಿಗೆ, ಬಾಯಿಯಿಂದ ಬಾಯಿಗೆ ಪ್ರಚಾರವೂ ಸಿಕ್ಕಿತು. ಇದರಿಂದ ಆರ್ಡರ್ಗಳೂ ಹೆಚ್ಚಾದವು. ಮಾರ್ಕೆಟಿಂಗ್ ಸ್ಟ್ರ್ಯಾಟಜಿ ಇಲ್ಲದೆಯೇ ಅವರ ಉದ್ಯಮ ಯಶಸ್ಸು ಕಂಡಿದೆ.
ಅವರ ವಸ್ತುಗಳು ಪರಿಸರ ಸ್ನೇಹಿಯಾದ ಕಾರಣ ಯುಎಸ್ನಲ್ಲಿ ಹೆಚ್ಚು ಯಶಸ್ಸು ಕಂಡಿತು. ಸೋದರ ಸಂಬಂಧಿ ಮುತ್ತುಕುಮಾರ್ ಇವರ ಮಡಕೆಗಳನ್ನು ಯುಎಸ್ಗೆ ತೆಗೆದುಕೊಂಡು ಹೋಗಿ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿದರು. ಆದರೆ 2017ರ ಬಳಿಕ, ಈ ಮಡಕೆಗಳಿಗೆ ಬೇಡಿಕೆ ಬರಲಾರಂಭಿಸಿತು. ಆತನ ಸಂಬಂಧಿಕರು ಶಾಂತಿ ಅವರಿಂದ ಮಡಕೆ ಪಡೆದು ಅಮೆರಿಕಾಗೆ ಕಳುಹಿಸಿಕೊಡುತ್ತಾರೆ. ತಮ್ಮ ಬೇರೆ ಉದ್ಯೋಗದ ಜೊತೆಗೆ ಮುತ್ತುಕುಮಾರ್ ಮಡಕೆ ಉದ್ಯಮವನ್ನೂ ನೋಡಿಕೊಳ್ಳುತ್ತಿದ್ದಾರೆ. ಇದುವರೆಗೆ ಅಮೆರಿಕಾಗೆ ಶಾಂತಿ ಅವರ 15 ಸಾವಿರ ಮಡಕೆಗಳನ್ನು ಅಮೆರಿಕಾಗಿ ಕಳುಹಿಸಿಕೊಡಲಾಗಿದೆ.
ಮುಂದಿನ ಯೋಜನೆ
ಅಮೆರಿಕಾದಲ್ಲಿ ಯಶಸ್ಸು ಕಾಣುತ್ತಿದ್ದರೂ ಶಾಂತಿ ಮತ್ತು ಮುತ್ತುಕುಮಾರ್ ಅವರು ಸ್ಥಳಿಯ ಮಾರುಕಟ್ಟೆಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಲು ಬಯಸುತ್ತಿದ್ದಾರೆ. ತಮಿಳುನಾಡು, ಕೇರಳ, ಕರ್ನಾಟಕದತ್ತ ಹೆಚ್ಚಿನ ಗಮನ ಹರಿಸಿದ್ದಾರೆ, ಈ ಮೂರು ರಾಜ್ಯಗಳಲ್ಲಿ ಮಣ್ಣಿನ ವಸ್ತುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದನ್ನು ಬಳಸಿಕೊಳ್ಳುವ ಇರಾದೆ ಅವರದ್ದು. ವಿದೇಶದಲ್ಲಿ ಮಾರುಕಟ್ಟೆ ವಿಸ್ತರಣೆ ಯೋಜನೆ ಎರಡನೇಯ ಚಿಂತನೆಯಷ್ಟೇ ಎಂದು ಇವರು ಹೇಳುತ್ತಾರೆ.
ಶಾಂತಿ ಅವರ ಕಾರ್ಯದಿಂದಾಗಿ ಇಂದು ಅವರ ಕುಟುಂಬ ನೆಮ್ಮದಿಯ ಜೀವನ ನಡೆಸುತ್ತಿದೆ. ಮಾತ್ರವಲ್ಲ, ನರ್ಮದಾ ಸ್ವಸಹಾಯದ ಮಹಿಳೆಯರೂ ಜೀವನವನ್ನು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಾಂಪ್ರದಾಯಿಕ ಕುಂಬಾರಿಕೆಯ ಕಲೆಯನ್ನು ಜೀವಂತವಾಗಿಟ್ಟು, ಅದರಲ್ಲೇ ಬದುಕು ಕಟ್ಟಿಕೊಳ್ಳುವ ಅವರ ಮಹಾ ಕನಸು ಇಂದು ನನಸಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.