ಪುಣೆ ಮೂಲದ 34 ವರ್ಷದ ಎಂಜಿನಿಯರ್ ಪ್ರಿಯದರ್ಶನ್ ಸಹಸ್ರಬುದ್ಧೆ, ತ್ಯಾಜ್ಯಗಳನ್ನು ತಂದು ತನ್ನ ಮನೆ ಮುಂದೆ ಹಾಕುವಂತೆ ತಮ್ಮ ನೆರೆಹೊರೆಯ ಮನೆಯವರಿಗೆ ಮನವಿಕೊಂಡಿದ್ದಾರೆ.
ಅರೆ, ಈ ಎಂಜಿನಿಯರ್ಗ್ಯಾಕೆ ತ್ಯಾಜ್ಯ ಎಂದುಕೊಂಡಿರಾ? ಆ ತ್ಯಾಜ್ಯದಿಂದಲೇ ಅವರ ಅಡುಗೆ ಮನೆ ನಡೆಯುತ್ತದೆ.
ಎಲ್ಪಿಜಿಯಂತಹ ನವೀಕರಿಸಲಾಗದ ಅನಿಲಗಳ ಮೇಲೆ ಅವಲಂಬಿತಗೊಳ್ಳುವ ಬದಲು, ಅವರು ತಮ್ಮ ಅಡುಗೆ ಮನೆಯಲ್ಲಿ ‘ವಾಯು’ ಎಂಬ ಜೈವಿಕ ಇಂಧನ ಘಟಕವನ್ನು ನಿರ್ಮಿಸಿದ್ದಾರೆ. ಈ ‘ವಾಯು’ ಸಾವಯವ ತ್ಯಾಜ್ಯಗಳ ಕಾರ್ಬೋಹೈಡ್ರೇಟ್ನ್ನು ಮಿಥೇನ್ ಗ್ಯಾಸ್ ಆಗಿ ಪರಿವರ್ತಿಸುತ್ತದೆ.
ಬಲೂನ್ ಮಾದರಿಯ ರಚನೆಯನ್ನು ಅಳವಡಿಸಲಾಗಿದೆ. ಇಲ್ಲಿ ಕಂಟೈನರ್ಗಳಲ್ಲಿನ ಜೈವಿಕ ಅನಿಲ ಸಂಗ್ರಹಗೊಳ್ಳುತ್ತದೆ. ಬಲೂನನ್ನು ಸ್ಟೋವ್ನ ಪೈಪ್ಲೈನ್ಗೆ ಕನೆಕ್ಟ್ ಮಾಡಲಾಗಿದೆ ಎಂದು ಪ್ರಿಯದರ್ಶನ್ ಹೇಳುತ್ತಾರೆ.
ತನ್ನ ಮನೆ ಮತ್ತು ನೆರೆಹೊರೆಯವರ ಅಡುಗೆ ಮನೆಯಲ್ಲಿ ಉತ್ಪಾದನೆಗೊಳ್ಳುವ ತ್ಯಾಜ್ಯವನ್ನು ವಾಯುಗೆ ತುಂಬಿಸಿ ಅನಿಲ ಉತ್ಪಾದನೆ ಮಾಡಲಾಗುತ್ತದೆ. ಇದು 700 ಲೀಟರ್ ಅನಿಲ ಉತ್ಪಾದನೆ ಮಾಡುತ್ತದೆ. ಪ್ರಿಯದರ್ಶನ್ ಮನೆಗೆ ಅಗತ್ಯವಿರುವುದಕ್ಕಿಂತಲೂ ಶೇ.70ರಷ್ಟು ಹೆಚ್ಚು ಅನಿಲ ಉತ್ಪಾದನೆಯಾಗುತ್ತದೆ.
ಇಂತಹ ಕಾರ್ಯಗಳು ತಳಮಟ್ಟದಂದಲೇ ನಡೆಯಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸುವ ಪ್ರಿಯದರ್ಶನ್, ನಮ್ಮಲ್ಲಿ ಅನೇಕರು ಹಸಿರು ಜೀವನದ ಬಗ್ಗೆ ಪ್ರತಿಪಾದಿಸುತ್ತಾರೆ. ಆದರೆ ಪ್ಲಾಸ್ಟಿಕ್ ಬಳಕೆ ಕಡಿಮೆಮಾಡುವುದು, ತ್ಯಾಜ್ಯ ವಿಂಗಡನೆಗಳಿಗೇ ಇದು ಮೀಸಲಾಗುತ್ತದೆ. ಆದರೆ ಸಾವಯವ ತ್ಯಾಜ್ಯಗಳ ಸಮರ್ಪಕ ಬಳಕೆ, ಮರುಬಳಕೆಯ ಪ್ರಯತ್ನಗಳನ್ನು ಯಶಸ್ವಿಗೊಳಿಸುವತ್ತ ಹೆಚ್ಚಿನ ಗಮನವನ್ನು ನೀಡಬೇಕು ಎಂಬುದನ್ನು ಅವರು ಪ್ರತಿಪಾದಿಸುತ್ತಾರೆ.
ತಾವು ಜೈವಿಕ ಅನಿಲ ಘಟಕವನ್ನು ಸ್ಥಾಪನೆ ಮಾಡಿರುವುದ ಉದ್ದೇಶದ ಬಗ್ಗೆ ವಿವರಿಸುವ ಅವರು, ಪ್ರತಿನಿತ್ಯ ಆಹಾರ ತ್ಯಾಜ್ಯವನ್ನು ನಾವು ಹಾಕಿದಾಗ ಘನ ಗೊಬ್ಬರ ಸೃಷ್ಟಿಯಾಗುತ್ತದೆ. ಈ ಗೊಬ್ಬರ ಘಟಕಕ್ಕೆ ಅತ್ಯುತ್ತಮವಾಗಿದ್ದು, ಸಮರ್ಪಕ ಪ್ರಮಾಣದಲ್ಲಿ ಇದನ್ನು ಬಳಕೆ ಮಾಡಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಸಿಸ್ಟಮ್ನ್ನು ಶುಚಿಗೊಳಿಸಬೇಕು ಮತ್ತು ಅದರೊಳಗೆ ಸಿಲುಕುವ ಕರಗದ ಘನ ಕಸಗಳನ್ನು ತೆಗೆಯಬೇಕು. ಆ ಕಸಗಳನ್ನು ಗಿಡಗಳಿಗೂ ಹಾಕಬಹುದು. ಅಲ್ಲದೇ, ಘಟಕಕ್ಕೆ ಹಾಕುವ ಮುನ್ನ ಆಹಾರ ತ್ಯಾಜ್ಯವನ್ನು ಪುಡಿ ಮಾಡುವ ಅಗತ್ಯವಿಲ್ಲ, ಹಾಗೆಯೇ ಹಾಕಬಹುದು. ಎಲ್ಲದಕ್ಕೂ ಹೆಚ್ಚಾಗಿ, ವಾಯುಗೆ ಕಾರ್ಯಾಚರಿಸಲು ವಿದ್ಯುತ್ ಅವಶ್ಯಕತೆ ಇಲ್ಲ, ಅದು ತನ್ನಷ್ಟಕ್ಕೆ ಕಾರ್ಯಾಚರಿಸುತ್ತದೆ.
ನೆರೆಹೊರೆಯವರಿಂದ ನಿತ್ಯ 11 ಕೆಜಿಯಷ್ಟು ತ್ಯಾಜ್ಯವನ್ನು ಇವರು ಸಂಗ್ರಹಿಸುತ್ತಾರೆ. ಇದರಲ್ಲಿ ಹಸಿ ತರಕಾರಿ, ಉಳಿದ ಆಹಾರಗಳು ಇರುತ್ತವೆ. ಇವರ ವಾಯು ಘಟಕದಲ್ಲಿ ನಾಲ್ಕು ಕಂಟೇನರ್ಗಳಿವೆ. ಒಂದೊಂದು ಕಂಟೇನರ್ನ ಸಾಮರ್ಥ್ಯ 2 ಕೆಜಿ. ನೆರೆಯವರು ಇವರ ಮನೆ ಮುಂದೆ ತಂದು ಹಾಕುವ ತ್ಯಾಜ್ಯವನ್ನು ಇವರ ಸಹಾಯಕರು ನೇರವಾಗಿ ಕಂಟೇನರ್ಗೆ ಹಾಕುತ್ತಾರೆ.
ಇಷ್ಟೇ ಅಲ್ಲದೇ, ಪ್ರಿಯದರ್ಶನ್ ಅವರು ‘ವಾಯುಮಿತ್ರ’ ಎಂಬ ಸಮಾನ ಮನಸ್ಕರ ತಂಡವನ್ನು ಕಟ್ಟಿದ್ದು, ಅಲ್ಲಿ ಪ್ರತಿಯೊಬ್ಬರೂ ಇನ್ನೋವೇಟಿವ್ ಐಡಿಯಾಗಳ ಬಗ್ಗೆ ಚರ್ಚೆ ನಡೆಸುತ್ತಾರೆ. ಸ್ಥಳಿಯ ನಿವಾಸಿಗಳಿಗೆ ಜೈವಿಕ ಅನಿಲ ಪರಿಹಾರವನ್ನೂ ಈ ತಂಡ ನೀಡುತ್ತದೆ.
ಸಾವಯವ ತ್ಯಾಜ್ಯ ಎಂದಿಗೂ ಸಮಸ್ಯೆಯಲ್ಲ, ಬದಲಾಗಿ ನಮ್ಮ ಇಂಧನದ ಸಮಸ್ಯೆಗಳಿಗೆ ಪರಿಹಾರವಾಗಿದೆ. ಇಂತಹ ವಿಷಯದಲ್ಲಿ ಸಾಮಾಜಿಕ ಸಂಯೋಜಕತೆ ಅತ್ಯಗತ್ಯ ಎಂದು ಪ್ರಿಯದರ್ಶನ್ ಹೇಳುತ್ತಾರೆ.
ತ್ಯಾಜ್ಯ ಸಂಗ್ರಹಿಸುವ ಸ್ವಚ್ಛ ತಂಡದೊಂದಿಗೂ ಇವರು ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಜೈವಿಕ ಅನಿಲ ಘಟಕಗಳ ನಿರ್ವಹಣೆ ಬಗ್ಗೆ ತರಬೇತಿಯನ್ನೂ ನೀಡುತ್ತಾರೆ. ಇದರಿಂದ ಅವರು ತ್ಯಾಜ್ಯ ಸಂಗ್ರಹಕರ ಬದಲು ಜೈವಿಕ ಅನಿಲ ಪೂರೈಕೆದಾರರಾಗಿ ಬದಲಾಗುತ್ತಿದ್ದಾರೆ. ಸಂಭಾವನೆ ವಿಷಯದಲ್ಲೂ ಇದು ಅವರ ಜೀವನ ಮಟ್ಟವನ್ನು ಸುಧಾರಿಸಲಿದೆ ಎಂಬುದು ಅವರ ಅನಿಸಿಕೆ.
ಪ್ರತಿಯೊಬ್ಬರೂ ಪ್ರಿಯದರ್ಶನ್ ಅವರಂತೆ ಜೈವಿಕ ಅನಿಲದ ಬಗ್ಗೆ ಗಂಭೀರ ಚಿಂತನೆಯನ್ನು ಆರಂಭಿಸಿದರೆ, ದೇಶದ ತ್ಯಾಜ್ಯ ನಿರ್ವಹಣೆ ಸಮಸ್ಯೆ ದೂರವಾಗಲಿದೆ. ಮಾತ್ರವಲ್ಲ, ನವೀಕರಿಸಬಹುದಾದ ಇಂಧನದ ಸದ್ಭಳಕೆಯಾಗಲಿದೆ. ನವೀಕರಿಸಲಾಗದ ಎಲ್ಪಿಜಿ ಅಡುಗೆ ಅನಿಲದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಜನಸಾಮಾನ್ಯನ ನಿತ್ಯದ ಖರ್ಚು ಕೂಡ ಕಡಿಮೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.