ಜಪಾನನ್ನು ಹಿಂದಿಕ್ಕಿ ಭಾರತ ವಿಶ್ವದ ಎರಡನೇ ಅತೀ ದೊಡ್ಡ ಸ್ಟೀಲ್ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಉತ್ಪಾದನಾ ವಲಯ ಬಲಿಷ್ಠ ಪ್ರಗತಿಯನ್ನು ದಾಖಲಿಸುತ್ತಿದ್ದಂತೆ ದೇಶದಲ್ಲಿ ಕೈಗಾರಿಕಾ ಚಟುವಟಿಕೆಗಳೂ ಗರಿಗೆದರಿವೆ. ಸ್ಟೀಲ್ಗಿರುವ ಬೇಡಿಕೆಯೂ ಉತ್ಪಾದನೆಯ ಪ್ರಗತಿಗೆ ಕಾರಣವಾಗಿದ್ದು, ಕೈಗಾರಿಕೆಗಳು ಉತ್ಪಾದನೆಯನ್ನೂ ಹೆಚ್ಚಿಸುತ್ತಿವೆ. ವರ್ಲ್ಡ್ ಸ್ಟೀಲ್ ಅಸೋಸಿಯೇಶನ್ ಪ್ರಕಾರ, 2018ರ ಜನವರಿಯಿಂದ ನವೆಂಬರ್ವರೆಗೆ ಭಾರತ 96.39 ಮಿಲಿಯನ್ ಟನ್ ಸ್ಟೀಲ್ ಉತ್ಪಾದನೆ ಮಾಡಿದೆ. ಹಿಂದಿನ ವರ್ಷಗಳಿಗಿಂತ ಈ ಅವಧಿಯಲ್ಲಿ ಶೇ.4.9ರಷ್ಟು ಹೆಚ್ಚಿನ ಸ್ಟೀಲ್ನ್ನು ಭಾರತ ಉತ್ಪಾದಿಸಿದೆ. 2017ರಲ್ಲಿ 92.39 ಮಿಲಿಯನ್ ಟನ್ ಸ್ಟೀಲ್ ಉತ್ಪಾದನೆ ಮಾಡಲಾಗಿತ್ತು.
ವರ್ಲ್ಡ್ ಸ್ಟೀಲ್ ಬಿಡುಗಡೆಗೊಳಿಸಿರುವ, ಜನವರಿಯಿಂದ ನವೆಂಬರ್ವರೆಗೆ ಭಾರತ ಉತ್ಪಾದಿಸಿರುವ ಕಚ್ಛಾ ಸ್ಟೀಲ್ ಅಂಕಿಅಂಶಗಳ ಪ್ರಕಾರ, ಭಾರತ ವಿಶ್ವದ ಎರಡನೇ ಅತೀದೊಡ್ಡ ಸ್ಟೀಲ್ ಉತ್ಪಾದಕ ಎಂಬುದು ತಿಳಿದುಬಂದಿದೆ. ಶೇ.4.9ಪ್ರಗತಿ ದರದೊಂದಿಗೆ ಜಪಾನನ್ನು ಹಿಂದಿಕ್ಕಿ ಭಾರತ ಎರಡನೇ ಸ್ಥಾನ ಪಡೆದುಕೊಂಡಿದೆ. ಹೆಚ್ಚುತ್ತಿರುವ ಬೇಡಿಕೆಯಿಂದಾಗಿದೆ ಸ್ಟೀಲ್ ಉತ್ಪಾದನೆಯಲ್ಲಿನ ಈ ಪ್ರಗತಿ ಸಾಧ್ಯವಾಗಿದೆ ಎಂದು ವರ್ಲ್ಡ್ ಸ್ಟೀಲ್ ಅಸೋಸಿಯೇಶನ್ ಮುಖಂಡ ಆಡಂ ಸ್ಜೆಕ್ಜೆಕ್ ಹೇಳಿದ್ದಾರೆ.
ಇನ್ನೊಂದು ಕಡೆ, ಜಪಾನ್ನಲ್ಲಿ ಸ್ಟೀಲ್ ಉತ್ಪಾದನೆ ಶೇ.0.1ರಷ್ಟು ಕುಂಠಿತವಾಗಿದೆ. 2018ರಲ್ಲಿ ಜನವರಿಯಿಂದ ನವೆಂಬರ್ವರೆಗೆ ಈ ರಾಷ್ಟ್ರ 95.86 ಮಿಲಿಯನ್ ಟನ್ ಸ್ಟೀಲ್ ಉತ್ಪಾದನೆ ಮಾಡಿದೆ, 2017ರ ಇದೇ ಅವಧಿಯಲ್ಲಿ 95.94 ಮಿಲಿಯನ್ ಟನ್ ಉತ್ಪಾದನೆ ಮಾಡಿತ್ತು. ಚೀನಾ ಈಗಲೂ ಸ್ಟೀಲ್ ಉತ್ಪಾದನೆಯ ಕಿಂಗ್ ಆಗಿದೆ. 2018ರಲ್ಲಿ ಅದು ಉತ್ಪಾದಿಸಿದ್ದು ಬರೋಬ್ಬರಿ 857.32 ಮಿಲಿಯನ್ ಟನ್ ಸ್ಟೀಲ್. ಎರಡನೇ ಸ್ಥಾನದಲ್ಲಿರುವ ಭಾರತಕ್ಕಿಂತ 9 ಪಟ್ಟು ಹೆಚ್ಚು. ಚೀನಾದ ಸ್ಟೀಲ್ ಉತ್ಪಾದನೆಯ ಪ್ರಗತಿಯೂ ಉನ್ನತ ಮಟ್ಟದಲ್ಲಿದ್ದು, ಅಲ್ಲಿನ ಪ್ರಮುಖ ಆರು ಉತ್ಪಾದಕರು ಶೇ.6.7ರಷ್ಟು ಪ್ರಗತಿಯನ್ನು ಕಂಡಿದ್ದಾರೆ. 2017ರಲ್ಲಿ ಈ ರಾಷ್ಟ್ರ 803.34 ಮಿಲಿಯನ್ ಟನ್ ಸ್ಟೀಲ್ ಉತ್ಪಾದನೆ ಮಾಡಿತ್ತು.
ಭಾರತದಲ್ಲಿ ಉಕ್ಕಿನ ತಲಾ ಬಳಕೆ 66.2ಕೆಜಿ, ಇದು ಜಾಗತಿಕ ಸರಾಸರಿ 212.3 ಕೆಜಿಗಿಂತ ಕಡಿಮೆ. ಹೀಗಾಗಿ, ಭಾರತಕ್ಕೆ ಸ್ಟೀಲ್ ಬೇಡಿಕೆಯನ್ನು ಹೆಚ್ಚಿಸುವ ಸಂಭಾವ್ಯತೆ ಇದೆ. ವರ್ಲ್ಡ್ ಸ್ಟೀಲ್ ಅಸೋಸಿಯೇಶನ್ ಪ್ರಕಾರ, 2019ರಲ್ಲಿ ಭಾರತದಲ್ಲಿ ಸ್ಟೀಲ್ ಬೇಡಿಕೆ ಶೇ.7.3ರಷ್ಟು ಪ್ರಗತಿ ಕಾಣುವ ನಿರೀಕ್ಷೆ ಇದೆ, ಮಾತ್ರವಲ್ಲದೆ ಭಾರತ ವಿಶ್ವದ ಎರಡನೇ ಅತೀದೊಡ್ಡ ಸ್ಟೀಲ್ ಗ್ರಾಹಕನಾಗುವ ಸಾಧ್ಯತೆ ಇದೆ. ಜಾಗತಿಕ ಸ್ಟೀಲ್ ಬೇಡಿಕೆ ಕುಗ್ಗುತ್ತಿದ್ದು ಮತ್ತು ಜಾಗತಿಕ ಆರ್ಥಿಕತೆ ಕುಗ್ಗುತ್ತಿರುವ ಹಿನ್ನಲೆಯಲ್ಲಿ ಭಾರತದ ಸ್ಟೀಲ್ ಮಾರುಕಟ್ಟೆಯ ಉಜ್ವಲ ತಾಣಗಳಲ್ಲಿ ಒಂದಾಗಲಿದೆ. ಚೀನಾ ಮಿಲಿಯನ್ ಟನ್ ಸ್ಟೀಲ್ ಉತ್ಪಾದನೆ ಮಾಡಿದರೂ ಅದರ ದೇಶೀಯ ಸ್ಟೀಲ್ ಬೇಡಿಕೆ ಕಡಿಮೆ ಇದೆ. ಅದರ ಆರ್ಥಿಕತೆಯೂ ಕುಗ್ಗುವ ಪ್ರಕ್ರಿಯೆಯಲ್ಲಿದೆ. ತನ್ನ ಅಗ್ಗದ ಸ್ಟೀಲ್ಗಳನ್ನು ಚೀನಾ ವಿಶ್ವದಾದ್ಯಂತ ಹಾಕುವ ಹಿನ್ನಲೆಯಲ್ಲಿ ಸ್ಟೀಲ್ ದರ ಕಡಿಮೆಯೂ ಆಗುವ ನಿರೀಕ್ಷೆ ಇದೆ.
ಭಾರತದಲ್ಲಿ, ದೇಶೀಯ ಉತ್ಪಾದಕರು ದರಗಳ ವಿಷಯದಲ್ಲಿ ಚೀನಾದ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಸ್ಪರ್ಧೆ ನಡೆಸಬೇಕಾಗುತ್ತದೆ. ಸರ್ಕಾರ ನೀಡುತ್ತಿರುವ ಮೂಲಸೌಕರ್ಯ ಉತ್ತೇಜನದಿಂದಾಗಿ, ಕೈಗೆಟುಕುವ ದರಗಳ ವಸತಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಭಾರತದಲ್ಲಿ ಸ್ಟೀಲ್ ಬೇಡಿಕೆ ಮೇಲಕ್ಕೇರುತ್ತಿದೆ. ಭಾರತದ ಸ್ಟೀಲ್ ಕೈಗಾರಿಕೆ ಏಕೀಕರಣದ ಮುಂದುವರಿದ ಹಂತದಲ್ಲಿದೆ. 2016ರಲ್ಲಿ ಹಣಕಾಸು ದಿವಾಳಿತ ಮತ್ತು ವಂಚನೆ ಪ್ರಕ್ರಿಯೆ(Insolvency and Bankruptcy Process (IBC))ಯನ್ನು ಅನುಷ್ಠಾನಕ್ಕೆ ತಂದ ಬಳಿಕ ಈ ಏಕೀಕರಣ ತ್ವರಿತಗೊಂಡಿತು. ಈ ಕಾಯ್ದೆ ಜಾರಿಗೊಂಡ ಬಳಿಕ, ಸಾಕಷ್ಟು ಬಾಧ್ಯತೆ ಹೊಂದಿದ್ದವರು ಸ್ಟೀಲ್ ಕಂಪನಿಗಳು. ಸುಮಾರು 30 ಮಿಲಿಯನ್ ಟನ್ ಸ್ಟೀಲ್ ಉತ್ಪಾದನೆಗೊಳಿಸುವ ಸಾಮರ್ಥ್ಯ ಹೊಂದಿದ್ದ ಭೂಷಣ್ ಸ್ಟೀಲ್, ಎಸ್ಸಾರ್ ಸ್ಟೀಲ್ ಮುಂತಾದ ಕಂಪನಿಗಳು ಬ್ಯಾಂಕಿಂಗ್ ದಿವಾಳಿತನ ಪ್ರಕ್ರಿಯೆಗೆ ಒಳಪಡಬೇಕಾಯಿತು. ಈ ಪ್ರಕ್ರಿಯೆಯಿಂದ ಸಮಸ್ಯೆ ಬಗೆಹರಿಸಿಕೊಂಡ ದೊಡ್ಡ ಸಂಸ್ಥೆಗಳೂ ಸ್ಟೀಲ್ ಸಂಸ್ಥೆಗಳಾಗಿವೆ. 5.6 ಮಿಲಿಯನ್ ಟನ್ ಸ್ಟೀಲ್ ಉತ್ಪಾದನಾ ಸಾಮರ್ಥ್ಯದ ಭೂಷಣ್ ಸ್ಟೀಲನ್ನು ಟಾಟಾ ಸ್ಟೀಲ್ ಸ್ವಾಧೀನಪಡಿಸಿಕೊಂಡಿತು. ಮೊನ್ನಟ್ ಇಸ್ಪತ್ ಆಂಡ್ ಎನರ್ಜಿಯನ್ನು ಜೆಎಸ್ಡಬ್ಲ್ಯೂ ಸ್ವಾಧೀನಪಡಿಸಿಕೊಂಡಿತು. ಎಲೆಕ್ಟ್ರೋಸ್ಟೀಲ್ನ್ನು ವೇದಾಂತ ಲಿಮಿಟೆಡ್ ಸ್ವಾಧೀನಪಡಿಸಿಕೊಂಡಿತು.
ಸ್ಟೀಲ್ ಕೈಗಾರಿಕೆಯ ಈ ಏಕೀಕರಣ ಭಾರತಕ್ಕೆ ಜಾಗತಿಕ ಮಾರುಕಟ್ಟೆ ಮತ್ತು ಚೀನಾದೊಂದಿಗೆ ಸಮರ್ಥವಾಗಿ ಸ್ಪರ್ಧಿಸಲು ಸಹಾಯ ಮಾಡಲಿದೆ. ಮಾಲಿನ್ಯ ನಿಯಂತ್ರಣಕ್ಕಾಗಿ ಬೀಜಿಂಗ್ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿನ ತನ್ನ 12ಕ್ಕೂ ಅಧಿಕ ಸ್ಟೀಲ್ ಪ್ಲಾಂಟ್ಗಳನ್ನು ಮುಚ್ಚಲು ಅಥವಾ ಅದರ ಕಾರ್ಯಾಚರಣೆ ಕಡಿಮೆ ಮಾಡಲು 2017ರಿಂದ ಚೀನಾ ಸಜ್ಜಾಗುತ್ತಿದೆ. ಈಗಾಗಲೇ ಹಲವಾರು ಕೈಗಾರಿಕೆಗಳ ಉತ್ಪಾದನೆಯನ್ನು ತಗ್ಗಿಸಲಾಗಿದೆ. ಇದರಿಂದಾಗಿ ಭಾರತಕ್ಕೆ ತನ್ನ ಮಾರುಕಟ್ಟೆ ವಿಸ್ತರಿಸಲು ಸಹಾಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.