ಅಟಲ್ ಬಿಹಾರಿ ವಾಜಪೇಯಿಯವರ ಅಧಿಕಾರಾವಧಿಯ ನಂತರ ಬಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತಾನು ಅಧಿಕಾರ ಹಿಡಿದ ಕೂಡಲೇ ಇಡೀ ರಾಷ್ಟ್ರವನ್ನು ಬೆಸೆಯುವ ಅಟಲ್ ಅವರ ಕನಸಿನ ಕೂಸಾದ ಹೆದ್ದಾರಿಗಳ ಮೇಲಿದ್ದ ಅವರ ಹೆಸರನ್ನು ತೆಗೆಸಲು ಹಲವಾರು ಕೋಟಿ ರೂ. ಗಳನ್ನು ಖರ್ಚು ಮಾಡಿದ್ದು ಬಹುಷಃ ನೆನಪಿರಬಹುದು.
ಅದಾದ ನಂತರ ಬಹುತೇಕ ಭಾರತೀಯ ಪ್ರಜೆಗಳಿಗೆ ದೇಶ ಮತ್ತೆ ಹಲವು ದಶಕಗಳಷ್ಟು ಹಿಂದೆ ಸರಿದ ಅನುಭವವಾಗಿದ್ದು ಕೂಡಾ ಸುಳ್ಳಲ್ಲ. ಆದರೆ ಕೇಂದ್ರದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಕ್ಷ ಗೆದ್ದು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ಕಾರ ರಚಿಸಿತೋ, ಆಗ ಮತ್ತೆ ಅಭಿವೃದ್ಧಿಯು ಶರವೇಗವನ್ನು ಪಡೆದುಕೊಂಡಿತು. “ತಾನೂ ತಿನ್ನುವುದಿಲ್ಲ, ತಿನ್ನುವವರಿಗೂ ಬಿಡುವುದಿಲ್ಲ” ಎನ್ನುವ ಘೋಷಣೆಯೊಂದಿಗೆ ಭ್ರಷ್ಟಾಚಾರ ರಹಿತ ಆಡಳಿತ ನಡೆಸುವ ಮೋದಿ ಒಂದು ಕಡೆಯಾದರೆ, “ತಾವೂ ಕೆಲಸ ಮಾಡುವುದಿಲ್ಲ, ಕೆಲಸ ಮಾಡುವವರಿಗೂ ಬಿಡುವುದಿಲ್ಲ” ಎನ್ನುವ ವಿರೋಧ ಪಕ್ಷಗಳು ಇನ್ನೊಂದು ಕಡೆ. ತಮ್ಮ ಘೋಷಣೆಯಂತೆಯೇ ದೇಶದ ಮುಂದಿನ ಭವಿಷ್ಯವನ್ನೇ ಗುರಿಯಾಗಿರಿಸಿಕೊಂಡು ನಿರಂತರ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಂಡಿದ್ದ ಮೋದಿಯವರ ಬಹುತೇಕ ಯೋಜನೆಗಳ ಬಗ್ಗೆ ತಳ ಮಟ್ಟದಲ್ಲಿ ಅಪಪ್ರಚಾರ ಮಾಡುವ ಮೂಲಕವೇ ಅಂತಹಾ ವಿರೋಧ ಪಕ್ಷಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದ್ದವು. ಆದರೆ ಮೋದಿಯವರು ಅಂತಹ ಅಪಪ್ರಚಾರಗಳಿಗೆಲ್ಲಾ ಕಿವಿಗೊಡದೆ ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾ ಬಂದಿದ್ದರು.
ವಿಶ್ವವೇ ನಿಬ್ಬೆರಗಾಗುವಂತೆ ಒಂಬತ್ತು ಕೋಟಿಗೂ ಹೆಚ್ಚು ಶೌಚಾಲಯಗಳು ನಿರ್ಮಾಣವಾಗುವಂತೆ ನೋಡಿಕೊಂಡ ಮೋದಿಯವರ ಸರ್ಕಾರ ಹಳ್ಳಿ ಹಳ್ಳಿಗೂ ಅಡುಗೆ ಅನಿಲ ಹಾಗೂ ವಿದ್ಯುತ್ ತಲುಪಿಸಿತು. ಬಡವರಿಗೆ ಬ್ಯಾಂಕ್ ಖಾತೆ ತೆರೆಸುವ ಮೂಲಕ ಅವರಿಗೆ ತಲುಪುತ್ತಿದ್ದ ಸೌಲಭ್ಯಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ತಡೆಗಟ್ಟುವಲ್ಲಿ ಬಹುತೇಕ ಯಶಸ್ವಿಯಾದ ಮೋದಿ ಸರ್ಕಾರ ಬಡವರಿಗಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಆರೋಗ್ಯ ಸೇವೆಗಳನ್ನು ಕಲ್ಪಿಸುವಲ್ಲಿಯೂ ಶ್ರಮಿಸಿತು. ರೈತರಿಗೆ ಪ್ರತೀ ವರ್ಷವೂ ಕಾಡುತ್ತಿದ್ದ ರಸಗೊಬ್ಬರ ಕೊರತೆ ನೀಗಿಸಿದ್ದು ಕೂಡಾ ಮೋದಿ ಸರ್ಕಾರವೇ.
ಆದರೂ ಮೋದಿ ಕೇವಲ ಉದ್ಯಮಿಗಳ ಪರ ಎಂಬಂತೆ ಮಹಿಳೆಯರಲ್ಲಿ, ಗ್ರಾಮೀಣ ಜನರಲ್ಲಿ, ರೈತರಲ್ಲಿ, ಅನಕ್ಷರಸ್ಥರಲ್ಲಿ ನಿರಂತರವಾಗಿ ಬಿಂಬಿಸುತ್ತಾ ವಿರೋಧ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದವು. ಆದರೆ ತಮ್ಮ ಯೋಜನೆಗಳು ನೇರವಾಗಿ ಫಲಾನುಭವಿಗಳ ಕೈಗೆ ತಲುಪಬೇಕೆನ್ನುವ ಉದ್ದೇಶದಿಂದ ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳ ಮನೆ ಬಾಗಿಲಿಗೇ ನೇರವಾಗಿ ಅಂಚೆಯ ಮೂಲಕ ನೋಂದಣಿ ಕಾರ್ಡ್ ಗಳನ್ನು ತಲುಪಿಸಲು ಕೇಂದ್ರ ಸರ್ಕಾರ ಪ್ರಾರಂಭಿಸಿತೋ ಆಗ ವಿರೋಧ ಪಕ್ಷಗಳಿಗೆ ಬಡವರ ಬಳಿ ಸುಳ್ಳು ಹೇಳಿ ದಾರಿ ತಪ್ಪಿಸುವುದು ಕಷ್ಟವಾಗತೊಡಗಿತು. ಕೇವಲ 100 ದಿನಗಳಲ್ಲಿ 6 ಲಕ್ಷ 85 ಸಾವಿರ ಜನರನ್ನು ತಲುಪಿದ ಆಯುಷ್ಮಾನ್ ಭಾರತ್ ಯೋಜನೆ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರಿಂದ ಹಿಡಿದು ಹಳ್ಳಿ ಹಳ್ಳಿಯ ಬಡವರಿಂದಲೂ ಮೆಚ್ಚುಗೆ ಗಳಿಸುತ್ತಿರುವುದನ್ನು ಕಂಡು ಈ ಯೋಜನೆಯಿಂದ ಮುಂದಿನ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಅಡ್ಡಿಯಾಗುತ್ತಿದೆ ಎಂದು ಭಾವಿಸಿದ ಕೆಲ ವಿರೋಧ ಪಕ್ಷಗಳು ಅದಕ್ಕಾಗಿ ಆಯ್ಕೆ ಮಾಡಿಕೊಂಡ ದಾರಿ ಮಾತ್ರ ಅತ್ಯಂತ ಕ್ರೂರ!
ಮೋದಿ ವಿರೋಧೀ ಘಟಬಂಧನದ ನಾಯಕಿ ಮಮತಾ ಬ್ಯಾನರ್ಜಿಯವರ ಪಶ್ಚಿಮ ಬಂಗಾಳಾದಲ್ಲಿ ಕೂಡಾ ಆಯುಷ್ಮಾನ್ ಯೋಜನೆ ಬಡ ಜನರಿಗೆ ತಲುಪದಂತೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಇತ್ತೀಚೆಗಷ್ಟೇ ಇನ್ನೂರಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಗೌರಿ ಶಂಕರ ದತ್ತಾ ಅವರ ನೇತೃತ್ವದಲ್ಲಿ ಅಂಚೆ ಕಚೇರಿಯ ಮೇಲೆ ದಾಳಿ ಮಾಡಿ ಬಡವರಿಗೆ ಆಯುಷ್ಮಾನ್ ಕಾರ್ಡ್ ಗಳನ್ನು ವಿತರಿಸದಂತೆ ಅಲ್ಲಿನ ಸಿಬ್ಬಂದಿಗಳಿಗೆ ಬೆದರಿಕೆ ಹಾಕಲಾಗಿದೆ. ಅಷ್ಟೇ ಅಲ್ಲದೆ ಬಡವರಿಗೆ ಆಯುಷ್ಮಾನ್ ಕಾರ್ಡ್ ಗಳನ್ನು ಬಟವಾಡೆ ಮಾಡುವುದನ್ನು ನಿಲ್ಲಿಸದಿದ್ದರೆ ಮುಖ್ಯ ಅಂಚೆ ಕಚೇರಿಯನ್ನೇ ಬಂದ್ ಮಾಡಿಸುವುದಾಗಿ ಧಮಕಿ ಹಾಕಲಾಗಿದೆ ಎಂದು ‘ದ ಟೆಲಿಗ್ರಾಫ್’ ವರದಿ ಮಾಡಿದೆ.
ಇಷ್ಟೇ ಅಲ್ಲದೆ ಬಡವರಿಗೆ ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ ಸೌಲಭ್ಯ ದೊರೆಯುವುದನ್ನು ತಪ್ಪಿಸಲು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಆ ಯೋಜನೆಯು ತನ್ನ ರಾಜ್ಯದಲ್ಲಿ ಜಾರಿ ಮಾಡುವುದರಿಂದ ಹಿಂದೆ ಸರಿದಿದೆ. ವಿರೋಧ ಪಕ್ಷಗಳ ಆಡಳಿತವಿರುವ ಛತ್ತೀಸಘಡ ಕೂಡಾ ಈಗಾಗಲೇ ಆಯುಷ್ಮಾನ್ ಯೋಜನೆಯನ್ನು ಹಿಂಪಡೆಯುವುದಾಗಿ ಘೋಷಿಸಿದೆ. ಆ ಮೂಲಕ ಬಡವರಿಗೆ ಅನುಕೂಲವಾಗಬಹುದಾದ ಯೋಜನೆಯೊಂದು ಬಡವರ ಕೈಗೆ ತಲುಪದಂತೆ ಶತಾಯಗತಾಯ ನೋಡಿಕೊಂಡು, ಮೋದಿ ಸರ್ಕಾರ ಬಡವರ ವಿರೋಧಿಯೆನ್ನುವಂತೆ ದೇಶದ ಬಡವರ ಮನಸ್ಸಿನಲ್ಲಿ ತಾವು ಇದುವರೆಗೂ ನಂಬಿಸಿಕೊಂಡು ಬಂದಿದ್ದ ಸುಳ್ಳನ್ನು ಸತ್ಯವೆಂದೇ ಬಿಂಬಿಸುವ ಕಾಯಕದಲ್ಲಿ ವಿರೋಧ ಪಕ್ಷಗಳು ತೊಡಗಿವೆ.
ಆದರೆ ಸತ್ಯ ಬೆಂಕಿಯಿದ್ದಂತೆ. ಅದನ್ನು ಮುಚ್ಚಿಡಲು ಅಡ್ಡ ಹಿಡಿದಿರುವ ಕೈಗಳು ಮುಂಬರುವ ದಿನಗಳಲ್ಲಿ ತಮ್ಮನ್ನು ತಾವೇ ಸುಟ್ಟುಕೊಳ್ಳುವುದು ಖಂಡಿತ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.