ದೇಶದ ಹಲವು ಭಾಗಗಳು ಈಗಲೂ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಬೃಹತ್ ಪ್ರಮಾಣದಲ್ಲಿ ಎದುರಿಸುತ್ತಿದೆ. ಬೃಹದಾಕಾರದಲ್ಲಿ ರಾಶಿ ಬಿದ್ದಿರುವ ಕಸವನ್ನು ಎಲ್ಲಿಗೆ ಕೊಂಡೊಯ್ಯುದು, ಹೇಗೆ ನಾಶ ಮಾಡುವುದು ಎಂಬುದೇ ಹಲವು ನಗರಗಳ ಮುಂದಿರುವ ಅತೀ ದೊಡ್ಡ ಸವಾಲು. ಪರಿಸ್ಥಿತಿ ಹೀಗಿರುವಾಗ ಮಧ್ಯಪ್ರದೇಶದ ಇಂಧೋರ್ನಲ್ಲಿ 6 ತಿಂಗಳಲ್ಲಿ ಬರೋಬ್ಬರಿ 13 ಲಕ್ಷ ಟನ್ ಕಸವನ್ನು ವಿಲೇವಾರಿ ಮಾಡಲಾಗಿದೆ. ಈ ಕಾರ್ಯದ ಶ್ರೇಯಸ್ಸು ಇಂಧೋರ್ ಮಹಾನಗರ ಪಾಲಿಕೆಯ ಆಯುಕ್ತ ಆಶೀಶ್ ಸಿಂಗ್ ಅವರಿಗೆ ಸಲ್ಲುತ್ತದೆ. ಬಯೋ ಮೈನಿಂಗ್ ಬಳಸಿ ಅವರು ಇಷ್ಟೊಂದು ಪ್ರಮಾಣದ ಕಸವನ್ನು ವಿಲೇವಾರಿ ಮಾಡಿದ್ದಾರೆ.
2010ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಆಶೀಶ್ ಸಿಂಗ್ ಅವರನ್ನು, 2018ರ ಮೇನಲ್ಲಿ ಇಂಧೋರ್ ಮಹಾನಗರ ಪಾಲಿಕೆಯ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಆ ಹೊತ್ತಿಗೆ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಅಭಿಯಾನ ಆರಂಭಿಸಿ ನಾಲ್ಕು ವರ್ಷ ಕಳೆದಿದ್ದರೂ, ಇಂಧೋರ್ನಲ್ಲಿ 100 ಎಕರೆ ಪ್ರದೇಶದಲ್ಲಿ ಸುರಿಯಲಾಗಿದ್ದ ಕಸದ ರಾಶಿಯನ್ನು ವಿಲೇವಾರಿ ಮಾಡುವ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿತ್ತು.
ಎರಡು ವರ್ಷದಲ್ಲಿ ಕೇವಲ 2 ಲಕ್ಷ ಟನ್ ಕಸವನ್ನು ಇಲ್ಲಿಂದ ತೆಗೆಯಲಾಗಿತ್ತು. ಈ ಸಮಸ್ಯೆಯನ್ನು ಅರ್ಥಮಾಡಿಕೊಂಡ ಸಿಂಗ್ ಇದಕ್ಕೊಂದು ಪರಿಹಾರ ಕಂಡುಹಿಡಿಯಲು ಸಿದ್ಧರಾದರು.
ಹಿಂದಿನ ಮಾದರಿಯಲ್ಲಿ, ಸರ್ಕಾರ ಖಾಸಗಿಯವರಿಗೆ ಕಸ ವಿಲೇವಾರಿ ಮಾಡುವ ಕಾರ್ಯವನ್ನು ನೀಡುತ್ತಿತ್ತು, ಇವುಗಳು ಪ್ರತಿ ಕುಬಿಕ್ ಮೀಟರ್ಗೆ ರೂ.475 ದರ ನಿಗದಿಪಡಿಸುತ್ತಿದ್ದವು. ಇದರನ್ವಯ ಇಂಧೋರ್ನ ಇಡೀ ಕಸ ವಿಲೇವಾರಿಗೆ 60-65 ಕೋಟಿ ರೂಪಾಯಿ ವ್ಯಯವಾಗುತ್ತಿತ್ತು. ಅಷ್ಟೇ ಅಲ್ಲದೇ, ಪೂರ್ಣಗೊಳ್ಳಲು ಹಲವು ವರ್ಷಗಳನ್ನೇ ತೆಗೆದುಕೊಳ್ಳುತ್ತಿತ್ತು.
ಆದರೆ, ಸಿಂಗ್ ಅವರು ಇಡೀ ಕಸದ ರಾಶಿಯನ್ನು ವಿಲೇವಾರಿ ಮಾಡಲು ವ್ಯಯಿಸಿದ ಒಟ್ಟು ಹಣ ರೂ.10 ಕೋಟಿ ರೂಪಾಯಿ.
ಕಸ ವಿಲೇವಾರಿಗೆ ಅನುದಾನದ ಕೊರತೆಯಿದೆ ಎಂದು ಅರ್ಥ ಮಾಡಿಕೊಂಡ ಸಿಂಗ್, ಇಡೀ ಪ್ರಕ್ರಿಯೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಬದಲು ಬಯೋ ಮೈನಿಂಗ್ಗೆ ಮೆಶಿನ್ಗಳನ್ನು ಬಾಡಿಗೆಗೆ ಪಡೆದುಕೊಂಡರು. ತಿಂಗಳಿಗೆ ಈ ಮೆಶಿನ್ಗಳಿಗೆ 7 ಲಕ್ಷ ರೂಪಾಯಿ ಬಾಡಿಗೆ ನೀಡಿದರು.
ಪಾಲಿಕೆಯ ಸಂಪನ್ಮೂಲವನ್ನೇ ಬಳಸಿ ದಿನಕ್ಕೆ 14-15 ಗಂಟೆಯವರೆಗೆ ಮೆಶಿನ್ ಆಪರೇಟ್ ಮಾಡಿದರು, 6 ತಿಂಗಳೊಳಗೆ 13 ಲಕ್ಷ ಟನ್ ಕೊಳಚೆ ನಿರ್ಮೂಲನೆಗೊಂಡಿತು. ಬಯೋ ಮೈನಿಂಗ್ ಅಂದರೆ ತ್ಯಾಜ್ಯಗಳನ್ನು ಬಯೋ ಡಿಗ್ರೆಡೇಬಲ್ ಮತ್ತು ನಾನ್ ಬಯೋಡಿಗ್ರೆಡೆಬಲ್ ಆಧಾರದಲ್ಲಿ ವಿಂಗಡಿಸುವುದು. ಅತ್ಯಂತ ಭರವಸೆಯ ತಂತ್ರಜ್ಞಾನ ಇದಾಗಿದ್ದು, ಇಂಧೋರ್ನಾದ್ಯಂತ ಯಶಸ್ಸು ಕಂಡಿದೆ.
ಅನುದಾನದ ಕೊರತೆ ಒಮ್ಮೆ ನೀಗಿದರೆ, ಮತ್ತೆ ಕಸ ವಿಲೇವಾರಿಯ ಕೊರತೆಯನ್ನು ಬಗೆಹರಿಸುವುದು ಸುಲಭ ಎನ್ನುತ್ತಾರೆ ಸಿಂಗ್. ಅವರ ಪ್ರಯತ್ನದಿಂದ ಸರ್ಕಾರಕ್ಕೆ ರೂ.450 ಕೋಟಿ ಮೌಲ್ಯದ ಭೂಮಿ ಮರಳಿ ಸಿಕ್ಕಿದ್ದು, ಹಿಂದೆ ಕೊಳಚೆಯಾಗಿದ್ದ ಈ ಭೂಮಿಯನ್ನು ಗಾಲ್ಫ್ ಕೋರ್ಸ್ ಆಗಿ ಬದಲಾಯಿಸಲಾಗುತ್ತಿದೆ.
ಇಂಧೋರ್ ಪಾಲಿಕೆ, ಹಸಿ ತ್ಯಾಜ್ಯವನ್ನು ಮಿಥೇನ್ ಗ್ಯಾಸ್ ಆಗಿ ಪರಿವರ್ತನೆ ಮಾಡುತ್ತಿದೆ, ಈ ಗ್ಯಾಸ್ನ್ನು ನಗರದ ಸಾರ್ವಜನಿಕ ಬಸ್ಗಳಲ್ಲಿ ಬಳಸಲಾಗುತ್ತಿದೆ. ತ್ಯಾಜ್ಯದಿಂದ ತಯಾರಿಸಿದ ಕಾಂಪೋಸ್ಟ್ನ್ನು ರೈತರಿಗೆ ಕೃಷಿಗಾಗಿ ನೀಡಲಾಗುತ್ತಿದೆ. ಘನ ತ್ಯಾಜ್ಯವನ್ನು ರಿಸೈಕ್ಲಿಂಗ್ ಮಾಡಲಾಗುತ್ತಿದೆ.
ಒಂದು ವೇಳೆ ಇಂಧೋರ್ ಮಾದರಿಯನ್ನು ದೇಶದಾದ್ಯಂತ ಜಾರಿಗೆ ತಂದರೆ ಭಾರತ ನಿಜಕ್ಕೂ ಸ್ವಚ್ಛವಾಗಲಿದೆ ಎನ್ನುತ್ತಾರೆ ಸಿಂಗ್. ಇವರಿಂದ ಪ್ರೇರಿತಗೊಂಡಿರುವ ಚಂಡೀಗಢ ಕೂಡ ಸಿಂಗ್ ಅವರ ಮಾದರಿಯನ್ನೇ ಅನುಸರಿಸಲು ಮುಂದಾಗಿದೆ, ಪ್ರಸ್ತುತ ಅದು ಕಸ ವಿಲೇವಾರಿಗೆ ಖಾಸಗಿಯವರಿಗೆ ಪ್ರತಿ ಕುಬಿಕ್ ಮೀಟರ್ಗೆ ರೂ.750 ನೀಡುತ್ತಿದೆ. ಅಷ್ಟೇ ಅಲ್ಲದೇ, ನಗರಾಭಿವೃದ್ದಿ ಮತ್ತು ವಸತಿ ಸಚಿವಾಲಯ ಕೂಡ ಈ ಮಾದರಿಯಿಂದ ಪ್ರೇರಿತಗೊಂಡು ಆಸಕ್ತಿ ತೋರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.