ಸುಬ್ರಹ್ಮಣ್ಯ: ಪತಂಜಲಿ ಮುನಿಯಿಂದ ಭಾರತದಲ್ಲಿ ಆರಂಭವಾದ ಯೋಗ ಇಂದು ವಿಶ್ವವ್ಯಾಪಿಯಾಗಿದೆ. ವಿಶ್ವ ಅನುಸರಿಸುತ್ತಿದೆ. ಆದರೆ ಭಾರತದಲ್ಲಿ ಈಗ ಯೋಗದ ಮಹತ್ವ ಅರಿವಾಗುತ್ತಿದೆ. ಬದುಕುವ ಸಂಪೂರ್ಣ ಕಲೆ ಯೋಗದಲ್ಲಿ ಅಡಗಿದೆ ಎಂದು ಗುತ್ತಿಗಾರು ಸರ್ಕಾರಿ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ, ಯೋಗಗುರು ನಾಗರಾಜ್ ಹೇಳಿದರು.
ಅವರು ವಿಶ್ವಯೋಗ ದಿನಾಚರಣೆ ಅಂಗವಾಗಿ ಗುತ್ತಿಗಾರು ಯುವಕ ಮಂಡಲ ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶಾಲಾಭಿವೃದ್ಧಿ ಸಮಿತಿ ಆಶ್ರಯದಲ್ಲಿ ನಡೆದ ಯೋಗ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಯೋಗವೆಂದರೆ ಕೇವಲ ವ್ಯಾಯಾಮ, ಪ್ರಾಣಾಯಾಮ ಮಾತ್ರವಲ್ಲ. ಅದೊಂದು ಸಾಗರ. ಅದರೊಳಗೆ ಹೊಕ್ಕಿ ಬಂದಾಗ ಅಗಾಧತೆಯ ಅರಿವಾಗುತ್ತದೆ. ಇದಕ್ಕಾಗಿ ಮಕ್ಕಳಾಗಿದ್ದಾಗಲೇ ಈ ಬಗ್ಗೆ ಅರಿವು ಆರಂಭವಾಗಬೇಕು ಎಂದರು.
ಮನಸ್ಸು ಹಾಗೂ ದೇಹದ ನಿಯಂತ್ರಣದ ಮೂಲಕ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲೂ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಕಮಲಾಕ್ಷಿ ಮಾತನಾಡಿ, ವಿದ್ಯಾರ್ಥಿಗಳಿಂದಲೇ ಯೋಗದ ಅನುಷ್ಟಾನ ಹಾಗೂ ಪ್ರತಿನಿತ್ಯವೂ ಯೋಗವನ್ನು ಬಳಸಿಕೊಂಡರೆ ಯಶಸ್ಸು ಸಾಧ್ಯ ಎಂದರು.
ಯೋಗದ ಮಹತ್ವದ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂಧ ಸ್ಫರ್ಧೆಯ ಬಹುಮಾನ ಇದೇ ವೇಳೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಶಿವಪ್ರಕಾಶ್ ಅಡ್ಡನಪಾರೆ, ಶಾಲಾ ಶಿಕ್ಷಕಿಯರಾದ ವಸಂತಿ, ವಾಣಿ, ವೀಣಾ ಹಾಗೂ ಶೇಷಮ್ಮ ಉಪಸ್ಥಿತರಿದ್ದರು.
ಯುವಕ ಮಂಡಲ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಸ್ವಾಗತಿಸಿ ಪ್ರಸ್ತಾವನೆಗೈದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ಮುತ್ಲಾಜೆ ವಂದಿಸಿದರು. ಯುವಕ ಮಂಡಲ ಕೋಶಾಧಿಕಾರಿ ಲೋಕೇಶ್ ಡಿ.ಆರ್. ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.