ಕನ್ನಡದ ಕೆಲ ಚಿತ್ರ ನಟರು ಹಾಗೂ ಕೆಲ ನಿರ್ಮಾಪಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಲೆಕ್ಕ ಪತ್ರಗಳನ್ನು ತಾಳೆ ಹಾಕುತ್ತಿದೆ. ಆದಾಯ ತೆರಿಗೆ ಇಲಾಖೆಯ ನಿರಂತರ ಕರ್ತವ್ಯಗಳಂತೆ ಈ ದಾಳಿ ಕೂಡಾ ಒಂದು. ಹಾಗೆ ನೋಡಿದರೆ ಅದಕ್ಕೆ ‘ದಾಳಿ’ ಎನ್ನುವ ಪದ ಬಳಸುವುದಕ್ಕಿಂತಲೂ ಹೆಚ್ಚಾಗಿ ‘ಪರಿಶೀಲನೆ’ ಎಂದೇ ಬಳಸಬಹುದು. ಬಹುಶಃ ಅವರು ಪೂರ್ವ ಮಾಹಿತಿಯನ್ನು ನೀಡದೆ ಆಗಮಿಸುವುದರಿಂದ ಅದನ್ನು ಮಾಧ್ಯಮಗಳು ದಾಳಿ ಎಂದು ಕರೆಯುತ್ತಿರಬಹುದು.
ಆದರೆ ಇದೀಗ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿಯನ್ನು ಕರ್ನಾಟಕದ ಕೆಲ ಪ್ರಾದೇಶಿಕ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪೂರ್ವಗ್ರಹದಿಂದ ನೋಡತೊಡಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಪರ ಪ್ರಚಾರಕ್ಕೆ ಒಪ್ಪದ ಚಿತ್ರ ನಟರನ್ನು ಗುರಿ ಮಾಡಲಾಗಿದೆ ಎನ್ನುವ ಊಹಾಪೋಹಗಳನ್ನೂ ಹರಿಬಿಡುತ್ತಿದ್ದಾರೆ. ಸ್ವತಃ ಐಟಿ ಪರಿಶೀಲನೆಗೊಳಗಾದ ನಟರೇ ಆ ಬಗ್ಗೆ ಸ್ಪಷ್ಟೀಕರಣ ನೀಡಿದ್ದರೂ ಅಂತಹಾ ಊಹಾಪೋಹಗಳ ಹರಡುವಿಕೆ ನಿಂತಿಲ್ಲ. ಅಂತಹಾ ಪೂರ್ವಗ್ರಹಪೀಡಿತ ಊಹಾಪೋಹಗಳನ್ನೇ ಮುಂದಿಟ್ಟುಕೊಂಡು ಮಾಧ್ಯಮಗಳೂ ಪರ ವಿರೋಧಗಳ ಚರ್ಚೆಗಿಳಿದಿವೆ. ನಟರ ಅಭಿಮಾನಿಗಳನ್ನು ಇಂದಿನ ಪ್ರಧಾನಿಗಳ ವಿರುದ್ಧ ಎತ್ತಿಕಟ್ಟುವ ಪ್ರಯತ್ನಗಳೂ ಸಾಗಿವೆ. ಜನಮತ ಗಣನೆ ನಡೆಸಲಾಗುತ್ತಿದೆ. ಆದರೆ ಐಟಿ ಇಲಾಖೆ ತನ್ನ ಇದೇ ಕೆಲಸಗಳನ್ನು ಹಿಂದೆಯೂ ಮಾಡುತ್ತಿತ್ತು, ಈಗಲೂ ಮಾಡುತ್ತಿದೆ, ಮುಂದೆಯೂ ಮಾಡುತ್ತದೆ. ತನಗೆ ಸಿಕ್ಕ ಮಾಹಿತಿಗಳಿಗನುಗುಣವಾಗಿ ಪರಿಶೀಲನೆ ನಡೆಸುವುದಷ್ಟೇ ಅದರ ಕೆಲಸ.
ಉದಾಹರಣೆಗೆ 2007ರಲ್ಲಿ ಚಿತ್ರ ನಟಿ ರಾಧಿಕಾ ಕುಮಾರಸ್ವಾಮಿ ಅವರ ಡಾಲರ್ಸ್ ಕಾಲೋನಿಯ ಮನೆಯ ಮೇಲೆಯೂ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಕರ್ನಾಟಕದ ಇಂದಿನ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿಯವರ ಪತ್ನಿಯರಲ್ಲೊಬ್ಬರಾದ ಶ್ರೀಮತಿ ರಾಧಿಕಾ ಕುಮಾರಸ್ವಾಮಿಯವರು ತಮ್ಮ ಆದಾಯಕ್ಕೂ ಮೀರಿ ಅಧಿಕ ಹಣ ಹೊಂದಿರುವ ಬಗ್ಗೆ ಸಿಕ್ಕ ಮಾಹಿತಿಯನ್ನಾಧರಿಸಿ ಆದಾಯ ತೆರಿಗೆ ಅಧಿಕಾರಿಗಳು ಆ ದಾಳಿ ನಡೆಸಿದ್ದರು. ಆ ಸಮಯದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿದ್ದ ಕೋಟ್ಯಂತರ ರೂ. ಹಣವನ್ನು ಕೂಡಾ ಪತ್ತೆ ಮಾಡಿದ್ದರೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ದಾಳಿಯಲ್ಲಿ ಹಲವು ಕೋಟಿ ನಗದು, ಚಿನ್ನಾಭರಣಗಳು ಮತ್ತು ಮನೆ ಖರೀದಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಆ ಪಟ್ಟಿಯಲ್ಲಿ ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿನ ರಾಧಿಕಾ ಕುಮಾರಸ್ವಾಮಿಯವರ 12 ಕೋಟಿ ರೂ. ಮೌಲ್ಯದಲ್ಲಿ ಮನೆಯೂ ಸೇರಿತ್ತು ಎನ್ನಲಾಗಿತ್ತು. ಅಂತಿಮವಾಗಿ ಅಲ್ಲಿ ದೊರೆತ ಎಲ್ಲ ಹಣ, ಆಸ್ತಿಪಾಸ್ತಿಗಳ ವಿವರವನ್ನು ರಾಧಿಕಾ ಕುಮಾರಸ್ವಾಮಿಯವರ 2007-08ನೇ ಸಾಲಿನ ಆದಾಯದೊಂದಿಗೆ ತಾಳೆ ಹಾಕಿದ ಆದಾಯ ತೆರಿಗೆ ಇಲಾಖೆ, ಅವರಿಂದ ತೆರಿಗೆ ವಂಚನೆಯಾಗಿದ್ದ ರೂ. 3.24 ಕೋಟಿ ಮೊತ್ತದ ಹಣವನ್ನು ಕಟ್ಟಿಸಿಕೊಂಡ ಬಗ್ಗೆ ವರದಿಯಾಗಿತ್ತು.
ಆದರೆ ಮಾಜಿ ಪ್ರಧಾನಿಗಳಾದ ಶ್ರೀ. ಹೆಚ್.ಡಿ.ದೇವೇಗೌಡ ಅವರ ಸೊಸೆಯ ಮನೆಯ ಮೇಲೆ ಆಗ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಯ ಬಗ್ಗೆ ರಾಜ್ಯದಲ್ಲಿ ಯಾರೊಬ್ಬರೂ ಅದು ಅಂದಿನ ಪ್ರಧಾನಿಗಳಾಗಿದ್ದ ಮನಮೋಹನ್ ಸಿಂಗ್ ಅವರು ಮಾಡಿಸಿದ್ದೆಂದಾಗಲೀ, ಕನ್ನಡದ ನಟಿಯೊಬ್ಬಳನ್ನು ಬೆದರಿಸಲು ಕಾಂಗ್ರೆಸ್ ಪಕ್ಷ ಆ ದಾಳಿ ಮಾಡಿಸಿತೆಂದಾಗಲೀ, ರಾಷ್ಟ್ರ ಮಟ್ಟದಲ್ಲಿ ದೇವೇಗೌಡರ ಪ್ರಭಾವವನ್ನು ಕುಗ್ಗಿಸಲು ಮಾಡಿದ ಷಡ್ಯಂತ್ರವೆಂದಾಗಲೀ ಆರೋಪಿಸಿರಲಿಲ್ಲ. ಅದೇ ರೀತಿ ಕನ್ನಡಿಗರ ಮೇಲೆ ಉತ್ತರ ಭಾರತೀಯರ ದಬ್ಬಾಳಿಕೆ ಎಂದೂ ಅಪಪ್ರಚಾರ ಮಾಡಿರಲಿಲ್ಲ.
ಆದರೆ ಬದಲಾದ ರಾಜಕೀಯ ವಿದ್ಯಮಾನಗಳಿಂದಾಗಿ ಅದೇ ಪ್ರಾದೇಶಿಕ ಪಕ್ಷದ ಕೆಲ ಕಾರ್ಯಕರ್ತರ ಹೆಸರಿನಲ್ಲಿ ಇದೀಗ ಆದಾಯ ತೆರಿಗೆ ಇಲಾಖೆಯ ಪರಿಶೀಲನೆಯನ್ನು ಪ್ರಧಾನಿಯೊಬ್ಬರ ಮೇಲೆ ಆರೋಪ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಅದೇ ರೀತಿ ತಮ್ಮ ರಾಜಕೀಯ ಹಿತಾಸಕ್ತಿಗಳಿಗೋಸ್ಕರ ಉತ್ತರ ಭಾರತ-ದಕ್ಷಿಣ ಭಾರತದ ಪ್ರತಿಷ್ಠೆಯ ವಿಚಾರವನ್ನಾಗಿ ತಿರುಚುವ ಕೆಲಸಗಳಾಗುತ್ತಿವೆ. ತಮ್ಮ ಈ ಕ್ಷಣದ ರಾಜಕಾರಣದ ಹಿತಾಸಕ್ತಿಗಳಿಗೋಸ್ಕರ ಇಂತಹಾ ಪ್ರಮಾದವೆಸಗಿದರೆ ಮುಂದೊಂದು ದಿನ ದೇಶದ ಸಾರ್ವಭೌಮತೆಗೆ ಕೊಡಲಿಪೆಟ್ಟು ಬೀಳುತ್ತದೆನ್ನುವ ಸತ್ಯವನ್ನು ಮನಗಂಡು ಅಂತಹಾ ಕುತಂತ್ರಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗರೂ ಶ್ರಮಿಸಬೇಕಾಗಿರುವುದು ಇಂದಿನ ತುರ್ತುಗಳಲ್ಲೊಂದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.