ಚೆನ್ನೈ: ಜೀವನೋತ್ಸಾಹವಿದ್ದರೆ ಜೀವನದಲ್ಲಿ ಬಹಳಷ್ಟು ನೋವುಂಡರೂ ಸಾಧಿಸಬಹುದೆಂದು ತೋರಿಸಿಕೊಟ್ಟಿದ್ದಾರೆ ಪೆಟ್ರಿಶಿಯ ನಾರಾಯಣ್. 50 ಪೈಸೆಯಿಂದ ವ್ಯಾಪಾರ ಆರಂಭಿಸಿ, ಇದೀಗ ದಿನವೊಂದಕ್ಕೆ 2 ಲಕ್ಷ ರೂಪಾಯಿ ವಹಿವಾಟು ನಡೆಸುವ ಮಟ್ಟಕ್ಕೆ ಹಂತಕ್ಕೆ ತಲುಪಿದ ಇವರ ಯಶೋಗಾಥೆ ಇತರ ಮಹಿಳೆಯರಿಗೆ ಸ್ಪೂರ್ತಿದಾಯಕ.
35 ವರ್ಷಗಳ ಹಿಂದೆ ನಾರಾಯಣ್ ಎಂಬ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾದ ಪೆಟ್ರಶಿಯರ ವೈವಾಹಿಕ ಜೀವನ ನರಕಸದೃಶ್ಯವಾಗಿತ್ತು, ಕುಡಿತ, ಮಾದಕದ್ರವ್ಯದ ಚಟವಿದ್ದ ಪತಿಯಿಂದ ನಿತ್ಯ ಕಿರುಕುಳವನ್ನು ಅನುಭವಿಸುತ್ತಿದ್ದರೂ ಜೀವನೋತ್ಸಾಹ ಕಳೆದುಕೊಳ್ಳದ ಇವರು ಕುಟುಂಬ ನಿರ್ವಹಣೆಗಾಗಿ ತಮ್ಮ ತಾಯಿಯಿಂದ 200 ರೂಪಾಯಿ ಸಾಲ ಪಡೆದು ಉಪ್ಪಿನ ಕಾಯಿ, ಜಾಮ್, ಸ್ಕ್ವಾಶ್ ತಯಾರಿಸಿ ಮಾರಾಟ ಆರಂಭಿಸಿದರು.
ಬಳಿಕ ಅದೇಗೋ ಕಷ್ಟಪಟ್ಟು ಮರೀನಾ ಬೀಚ್ನಲ್ಲಿ ಕಟ್ಲೆಟ್, ಸಮೋಸ, ಬಜ್ಜಿ, ಕಾಫಿ, ಟೀಗಳನ್ನು ಮಾರಲು ಸರ್ಕಾರದಿಂದ ಅನುಮತಿಯನ್ನು ಪಡೆದುಕೊಂಡರು. ಆದರೆ ದಿನವೊಂದಕ್ಕೆ ಅವರಿಗೆ ಬರುತ್ತಿದ್ದ ಆದಾಯ ಕೇವಲ 50 ಪೈಸೆ ಮಾತ್ರ. ಆದರೂ ಧೃತಿಗೆಡದ ಅವರು ವ್ಯಾಪಾರವನ್ನು ಕಷ್ಟಪಟ್ಟು ಮುಂದುವರೆಸಿದರು. ಬರುಬರುತ್ತ ಅವರು ದಿನಕ್ಕೆ 600-700 ರೂ ಗಳಿಸಲು ಶಕ್ತರಾದರು. ದಿನ, ರಾತ್ರಿಯೆನ್ನದೆ ವ್ಯಾಪಾರ ಮಾಡಿದ ಪೆಟ್ರಿಶಿಯಾ 2003ರ ವೇಳೆಗೆ ದಿನಕ್ಕೆ 25 ಸಾವಿರದವರೆಗೆ ಗಳಿಸಲು ಶಕ್ತರಾದರು.
ಬಳಿಕ ಅವರಿಗೆ 3 ಸಾವಿರ ಮಂದಿಗೆ ಆಹಾರ ತಯಾರಿಸುವ ಆಫರನ್ನು ಸ್ಲಂ ಕ್ಲಿಯರೆನ್ಸ್ ಬೋರ್ಡ್ ನೀಡಿತು. ಇದು ಅವರನ್ನು ಸಣ್ಣ ವ್ಯಾಪಾರದಿಂದ ದೊಡ್ಡ ಉದ್ಯಮಿಯಾಗುವತ್ತ ಬದಲಾಯಿಸಿತು. ಬ್ಯಾಂಕ್ ಆಫ್ ಮಧುರಾ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪೋರ್ಟ್ ಮ್ಯಾನೇಜ್ಮೆಂಟ್ , ಹೀಗೆ ಒಂದರ ಹಿಂದೊಂದರಂತೆ ಆಫರ್ಗಳನ್ನು ಪಡೆದ ಅವರು ಇದೀಗ ದಿನವೊಂದಕ್ಕೆ 2 ಲಕ್ಷದವರೆಗೆ ವ್ಯಾಪಾರ ಮಾಡುತ್ತಾರೆ.
ಈ ನಡುವೆಯೇ ಜೀವನದ ಅತಿ ದೊಡ್ಡ ನೋವಿನ ಸನ್ನಿವೇಶ ಅವರಿಗೆ ಎದುರಾಯಿತು. ಅಪಘಾತವೊಂದರಲ್ಲಿ ಅವರ ಮಗಳು, ಅಳಿಯ ಮತ್ತು ಇತರ ಇಬ್ಬರು ಕುಟುಂಬ ಸದಸ್ಯರು ಮೃತರಾದರು, ಆದರೆ ಅವರ ಶವವನ್ನು ಅಂಬ್ಯುಲೆನ್ಸ್ನೊಳಗೆ ಹಾಕಲು ಚಾಲಕ ನಿರಾಕರಿಸಿದ. ಅಂಬ್ಯಲೆನ್ಸ್ನಲ್ಲಿ ಮೃತದೇಹವನ್ನು ನಾವು ಹಾಕುವುದಿಲ್ಲ ಎಂಬುದಾಗಿ ಆತ ಕಠೋರವಾಗಿ ಹೇಳಿದ್ದ. ಇದರಿಂದಾಗಿ ಅವರ ಶವ ಎರಡು ಗಂಟೆಗಳ ಕಾಲ ಬಿದಿಯಲ್ಲಿ ಇರಬೇಕಾಯಿತು. ಇದು ಪೆಟ್ರಿಶಿಯಾ ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿತ್ತು. ಹೀಗಾಗಿ ಅವರು ಶವ ತೆಗೆಯಲೆಂದೇ ಅಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿದರು. ಇದು ಸಾಮಾಜಿಕ ಸೇವೆಯ ಬಗ್ಗೆ ಅವರಿಗಿರುವ ಕಳಕಳಿಯನ್ನು ತೋರಿಸುತ್ತದೆ.
ಮೊದಲು ಸೈಕಲ್ ಮೂಲಕ, ಆಟೋ ರಿಕ್ಷಾ ಮೂಲಕ ಸೇವೆ ಆರಂಭಿಸಿದ ಅವರ ಬಳಿ ಇದೀಗ ಸ್ವಂತ ಕಾರಿದೆ. ದಿನಕ್ಕೆ 2 ಲಕ್ಷ ವಹಿವಾಟು ನಡೆಸುವ ಸಾಮರ್ಥ್ಯವಿದೆ, ಅದೆಷ್ಟೋ ಮಂದಿಗೆ ಅವರು ಉದ್ಯೋಗ ನೀಡಿದ್ದಾರೆ. ಮಹಿಳೆಯರನ್ನು ಸಬಲರನ್ನಾಗಿಸಿದ್ದಾರೆ. ಸಂದೀಪಾ ರೆಸ್ಟೋರೆಂಟ್ ಎಂದು ಮಗಳ ಹೆಸರಿನಲ್ಲಿ ಸ್ಥಾಪಿಸಿದ ಈ ಹೋಟೆಲ್ ಮನೆಯಂತಿರುವ ಉತ್ತಮ ಆಹಾರ ಹಾಗೂ ಗುಣಮಟ್ಟದಿಂದಾಗಿ ಜನಪ್ರಿಯಗೊಂಡಿದೆ. ಅನೇಕ ಸಾಮಾಜಿಕ ಸೇವೆ ಮಾಡುತ್ತಿದ್ದಾರೆ. ಇವರು ಸಾಧನೆಗಾಗಿ ಇವರಿಗೆ FICCI Woman Entrepreneur of the year ಪ್ರಶಸ್ತಿ ಕೂಡ ಲಭಿಸಿದೆ. ಇದು ಅವರ ಪರಿಶ್ರಮಕ್ಕೆ ಸಂದ ಅತಿದೊಡ್ಡ ಗೌರವ.
ರಾತ್ರಿ ಬೆಳಗಾಗುವುದರೊಳಗೆ ಇವರು ಉದ್ಯಮಿಯಾಗಲಿಲ್ಲ. ಸರಿ ಸುಮಾರು 30 ವರ್ಷಗಳ ಛಲದ ಹೋರಾಟದ ಪ್ರತಿಫಲದಿಂದ ಇಂದು ಯಶಸ್ವಿ ಮಹಿಳಾ ಉದ್ಯಮಿಯಾಗಿದ್ದಾರೆ. ಸಾಧಿಸುವ ಛಲವಿದ್ದರೆ, ಜೀವನೋತ್ಸಾಹವಿದ್ದರೆ ಅದೆಷು ಕಷ್ಟ ಬಂದರು ಅದನ್ನು ಎದುರಿಸಿ ಮುನ್ನಡೆಯಬಹುದು ಎಂಬುದಕ್ಕೆ ಪೆಟ್ರಿಶಿಯಾ ಜೀವಂತ ಉದಾಹರಣೆಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.