ಅವಳು ನಡೆಯುತ್ತಿದ್ದ ದಾರಿಯಲ್ಲಿ ಪ್ರತಿದಿನವೂ ಆಕೆಯತ್ತ ಕಲ್ಲು ಕೆಸರು ತೂರಿಬರುತ್ತಿದ್ದವು. ಅದರ ಜತೆಗೇ ಕೆಟ್ಟ ಕೊಳಕು ಬೈಯ್ಗುಳಗಳ ಸುರಿಮಳೆ ಬೇರೆ. ಆದರೂ ಆಕೆ ಧೈರ್ಯಗೆಡದೇ ವಾಪಸ್ ಮನೆಗೆ ಹೋಗಿ ಸೀರೆ ಬದಲಾಯಿಸಿ ಎಂದಿನಂತೆ ತನ್ನ ಕರ್ತವ್ಯಕ್ಕೆ ಅಣಿಯಾಗುತ್ತಿದ್ದಳು. ಅಷ್ಟಕ್ಕೂ ಅವಳು ಮಾಡಿದ ತಪ್ಪು ಇಷ್ಟೇ, ಆಕೆ ಶಾಲೆ ನಡೆಸುತ್ತಿದ್ದಳು ! ಅದೂ ಉಚಿತವಾಗಿ ಹಿಂದುಳಿದ ಬಡ ಹೆಣ್ಣುಮಕ್ಕಳಿಗೆ. ಅಂದು ಆಕೆ ಬಿತ್ತಿದ್ದ ಶಿಕ್ಷಣದ ಬೀಜ ,ಇಂದು ಹೆಮ್ಮರವಾಗಿದೆ. ಹೆಣ್ಣೂ ಗಂಡಿನಷ್ಟೇ ಶಿಕ್ಷಣ ಪಡೆಯಲು ಅರ್ಹಳು ಎಂಬ ಜಾಗೃತಿ ಮೂಡಿದೆ. ಅಂಥ ಶೈಕ್ಷಣಿಕ ಕ್ರಾಂತಿ ಮಾಡಿದ್ದ ಆ ತಾಯಿಯೇ ಸಾವಿತ್ರಿಬಾಯಿ ಫುಲೆ.
ಹಾಗೆ ನೋಡಿದರೆ, ಸ್ವಾತಂತ್ರ್ಯಪೂರ್ವದಲ್ಲಿ ಸಾವಿತ್ರಿ ಬಾಯಿ ಎದುರಿಸಿದ ಸಂಕಷ್ಟಗಳು ಕಡಿಮೆಯೇನಲ್ಲ. ಮಹಾರಾಷ್ಟ್ರದ ಸಾತಾರ ಜಿಲ್ಲೆಯ ನಾಯಗಾಂವ್ ಎಂಬ ಗ್ರಾಮದಲ್ಲಿ 1831 ರ ಜನವರಿ 3 ರಂದು ಜನಿಸಿದ ಸಾವಿತ್ರಿಬಾಯಿ 9 ವರ್ಷದವರಿದ್ದಾಗಲೇ ಜ್ಯೋತಿ ಬಾಫುಲೆ ಅವರೊಂದಿಗೆ ಬಾಲ್ಯವಿವಾಹವಾಗಿತ್ತು. ಶಿಕ್ಷಣವೂ ಇಲ್ಲದೇ, ಇತ್ತ ಬಾಲ್ಯ ವಿವಾಹದ ಬಂಧನದಲ್ಲಿದ್ದ ಸಾವಿತ್ರಿ ಅವರಲ್ಲಿ ಶೈಕ್ಷಣಿಕ ಕ್ರಾಂತಿ ಬಿತ್ತಿದ್ದು ಪತಿ ಜ್ಯೋತಿಬಾಫುಲೆ ಅವರೇ.
ಅಂದಿನ ಸಮಾಜದಲ್ಲಿ ಹೆಣ್ಣೊಬ್ಬಳು ಶಾಲೆಗೆ ಹೋಗುವುದಿರಲಿ, ಮನೆಯ ಹೊಸಿಲು ದಾಟಿ ಹೊರಹೋಗುವುದೇ ದುಸ್ತರವಾಗಿತ್ತು. ಆದರೆ, ಗಂಡನ ಪ್ರೋತ್ಸಾಹದಿಂದ ಸಮಾಜದ ಕಟ್ಟಳೆಗಳನ್ನು ಒಂದೊಂದಾಗಿ ಕಿತ್ತೆಸೆಯುತ್ತಾ ಬಂದ ಸಾವಿತ್ರಿ ತನ್ನ 17 ವಯಸ್ಸಿಗೆ ಶಿಕ್ಷಕಿಯಾಗಿ ರೂಪುಗೊಂಡರು. “ಮಾಳಿ” ಜಾತಿಯಲ್ಲಿ ಜನಿಸಿದ್ದ ಸಾವಿತ್ರಿ ಅವರಿಗೆ, ಬಾಲ್ಯದಲ್ಲಿ ಬಡತನ ಮತ್ತು ಜಾತಿಯ ಕಾರಣದಿಂದ ತನ್ನಂತೆ ಇತರ ಹೆಣ್ಣುಮಕ್ಕಳೂ ಶಿಕ್ಷಣ ಪಡೆಯಲಾರದ ಬಗ್ಗೆ ಅಪಾರ ಆಕ್ರೋಶವಿತ್ತು. ಕೇವಲ ತಥಾಕಥಿತ ಮೇಲ್ವರ್ಗದ ಪುರುಷರ ಸ್ವತ್ತಾಗಿದ್ದ ಶಿಕ್ಷಣ, ತಳವರ್ಗ ಹಾಗೂ ಹೆಣ್ಣುಮಕ್ಕಳಿಗೂ ದಕ್ಕಬೇಕೆಂಬ ಹಂಬಲವಿತ್ತು. ಸಾವಿತ್ರಿ ಅವರ ಈ ಆಸೆಗೆ ಮತ್ತಷ್ಟು ಬಲತುಂಬಿದ್ದು ಅವರ ದೂರದ ಸಂಬಂಧಿ ಸಗುಣಾಬಾಯಿ.
ಜ್ಯೋತಿಬಾಫುಲೆ ಹಾಕಿಕೊಟ್ಟ ಮಾರ್ಗದಲ್ಲಿ ನಡೆದ ಈ ಇಬ್ಬರು ಹೆಣ್ಣುಮಕ್ಕಳು ಶಿಕ್ಷಣದ ಕುರಿತು ಅಸ್ಪೃಶ್ಯ ಭಾವ ಹೊಂದಿದ್ದ ಅಂದಿನ ಸಮಾಜಕ್ಕೆ ಸೆಡ್ಡುಹೊಡೆದು, ಸ್ವಂತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು. ಈ ಕಾರ್ಯಕ್ಕೆ ಸಮಾಜದಿಂದ ಮೆಚ್ಚುಗೆ ಪಡೆಯುವುದಿರಲಿ, ತವರುಮನೆ ಮತ್ತು ಗಂಡನ ಮನೆಯಿಂದಲೇ ಸಾವಿತ್ರಿಬಾಯಿ ದಂಪತಿ ಬಹಿಷ್ಕಾರಕ್ಕೊಳಗಾಗಬೇಕಾಯಿತು. ಇಂಥ ಬಹಿಷ್ಕಾರಗಳಿಗೆ ಸೊಪ್ಪು ಹಾಕದ ಈ ದಂಪತಿ, 1848ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಮೊಟ್ಟಮೊದಲ ಹೆಣ್ಣುಮಕ್ಕಳ ಶಾಲೆ ಆರಂಭಿಸಿದರು. ಇವರಿಗೆ ಮೊಟ್ಟು ಮೊದಲನೆಯ ಸ್ಥಳಾವಕಾಶ ಮಾಡಿ ಕೊಟ್ಟಿದ್ದು ಒಂದು ಬ್ರಾಹ್ಮಣ್ ಭಿಡೆ ಕುಟುಂಬ ತಮ್ಮ ಮನೆಯನ್ನು ಸಾವಿತ್ರಿ ಫುಲೆ ಅವರ ಶಿಕ್ಷಣ ಸಂಸ್ಥೆಗೆ ದಾನ ಮಾಡಿದ್ರು, ಅಲ್ಲಿ ಸಾವಿತ್ರಿಬಾಯಿ ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ಮಾಡತೊಡಗಿದರು.
ಶಾಲೆ ಆರಂಭಿಸಿದ ಮೊದಲ ದಿನವೇ ಮೇಲ್ಜಾತಿಯ ಹೆಣ್ಣುಮಕ್ಕಳೂ ಸೇರಿದಂತೆ ತಳಸಮುದಾಯದ 9 ಹೆಣ್ಣುಮಕ್ಕಳು ಶಾಲೆಗೆ ಸೇರಿದರು. ಕೇವಲ 9 ವಿದ್ಯಾರ್ಥಿಗಳಿಂದ ಆರಂಭವಾದ ಈ ಶಾಲೆ ಮುಂದೆ ಮಹಾರಾಷ್ಟ್ರದಲ್ಲಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿತು. ಈ ಕ್ರಾಂತಿಯ ಹಾದಿಯೇನೂ ಫುಲೆ ದಂಪತಿಗೆ ಹೂವಿನ ಹಾದಿಯಾಗಿರಲಿಲ್ಲ. ಕೆಲವರ ಬಹಿಷ್ಕಾರದ ಬೆದರಿಕೆಗೆ ಹೆದರಿ ಕೆಳವರ್ಗದ ಕೆಲ ಹೆಣ್ಣುಮಕ್ಕಳು ಶಾಲೆಯನ್ನೇ ತೊರೆದಿದ್ದರು. ಆದರೆ, ಸಾವಿತ್ರಿಬಾಯಿ ಮನೆ ಮನೆಗಳಿಗೆ ಹೋಗಿ ಹೆಣ್ಣುಮಕ್ಕಳ ಶಿಕ್ಷಣದ ಮಹತ್ವ ಮನವರಿಕೆ ಮಾಡಿ, ಮಕ್ಕಳನ್ನು ಶಾಲೆಗೆ ಕರೆತಂದರು. ಹೀಗೆ ಶುರುವಾದ ಫುಲೆ ದಂಪತಿಯ ಶೈಕ್ಷಣಿಕ ಕ್ರಾಂತಿಯ ಫಲವಾಗಿ 1848 ರಿಂದ 1852 ರವರೆಗೆ ಮಹಾರಾಷ್ಟ್ರದಾದ್ಯಂತ 18 ಕ್ಕೂ ಹೆಚ್ಚು ಉಚಿತ ಶಾಲೆಗಳು ಮೈದಳೆದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.