ಇತ್ತೀಚೆಗಷ್ಟೇ ಪಟಾಕಿಯ ಕುರಿತಾಗಿ ನ್ಯಾಯಾಲಯದ ತೀರ್ಪೊಂದನ್ನು ಆಧಾರವಾಗಿಟ್ಟುಕೊಂಡು ಆಡಳಿತವು ದೀಪಾವಳಿಯ ದಿನದಂದು ಪಟಾಕಿ ಹೊಡೆಯಲು ನಾನಾ ನಿರ್ಬಂಧಗಳನ್ನು ಹೇರಿದ್ದು ಯಾರ ನೆನಪಿನಿಂದಲೂ ಮಾಸಿಲ್ಲ. ಸಾರ್ವಜನಿಕರ ನಿದ್ದೆಗೆ ತೊಂದರೆಯಾಗಬಾರದೆನ್ನುವ ಕಾರಣಕ್ಕೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿದ್ದರೆ, ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗಬಾರದೆಂದು ಅದು ಹೊರಡಿಸುವ ಶಬ್ದಕ್ಕೂ ಮಿತಿ ಹಾಕಲಾಗಿತ್ತು. ಆ ಬಗ್ಗೆ ನಮ್ಮ ಸರ್ಕಾರ, ಪೊಲೀಸ್ ಇಲಾಖೆ, ಪರಿಸರ ಇಲಾಖೆ, ಮುಖ್ಯಮಂತ್ರಿಗಳು, ಸಚಿವರು ಎಲ್ಲರೂ ಜಾಹೀರಾತುಗಳ ಮೂಲಕ ನಿರಂತರವಾಗಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದರು. ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು. ಪರಿಸರದ ಬಗ್ಗೆ ಕಾಳಜಿ ತೋರಿಸಿದ್ದರು. ಪಟಾಕಿಯಿಂದಾಗುವ ಮಾಲಿನ್ಯಗಳ ಬಗ್ಗೆ ಅರಿವು ಮೂಡಿಸಿದ್ದರು.
ನಿರ್ಬಂಧಗಳನ್ನು ಮೀರುವ ಸಾರ್ವಜನಿಕರನ್ನು ಕಾನೂನು ಪ್ರಕಾರ ಬಂಧಿಸುವ ಅವಕಾಶವನ್ನು ಕೂಡಾ ಮುಕ್ತವಾಗಿರಿಸಿಕೊಂಡಿದ್ದ ಸರ್ಕಾರ ಆ ಬಗ್ಗೆ ಬೆದರಿಕಾಪೂರ್ವಕ ಸಂದೇಶವನ್ನು ಕೂಡಾ ಜನತೆಗೆ ರವಾನಿಸಿತ್ತು. ಆದರೆ ಕಾವೇರಿ ನದಿಯಲ್ಲಿ ನಮ್ಮ ಹಬ್ಬವಾದ ದೀಪಾವಳಿ ಕಳೆದ ನಂತರ ಸಾಕಷ್ಟು ನೀರು ಹರಿದು ಸಮುದ್ರ ಸೇರಿದೆ. ಅದೇ ರೀತಿ ದಿನ, ವಾರಗಳು ಕೂಡಾ ಕಳೆದಿವೆ. ಪಟಾಕಿಗಳ ಉತ್ಪಾದನೆಗೆ ನಿಯಂತ್ರಣ ಹೇರದೇ ಆ ಪಟಾಕಿಗಳನ್ನು ದೀಪಾವಳಿ ಹಬ್ಬದ ಸಮಯದಲ್ಲಿ ಹೊಡೆಯಲು ಮಾತ್ರ ನಿರ್ಬಂಧ ವಿಧಿಸಿದರೆ ಉತ್ಪಾದನೆಯಾದ ಆ ಪಟಾಕಿಗಳೆಲ್ಲಾ ಏನಾಗುತ್ತವೆ ಎನ್ನುವ ಜನಸಾಮಾನ್ಯರ ಪ್ರಶ್ನೆಗೆ ಇದೀಗ ಉತ್ತರ ದೊರೆತಿದೆ.
ಆ ಪಟಾಕಿಗಳನ್ನು ಹೊಸ ವರ್ಷದ ಸಂಭ್ರಮಾಚರಣೆಯ ಹೆಸರಿನಲ್ಲಿ ಸರ್ಕಾರವೇ ಹೊಡೆದು ಖಾಲಿ ಮಾಡುವ ಮೂಲಕ ಮುಂದಿನ ವರ್ಷದ ಅದರ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತದೆ!
ನೀವು ದೀಪಾವಳಿ ಹಬ್ಬದಂದು ಪಟಾಕಿ ಹೊಡೆಯಬೇಡಿ ಎಂದು ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಸಿತ್ತೇ ಹೊರತೂ ಉಳಿದ ಸಂದರ್ಭಗಳಲ್ಲಿ ನಾವು ಹೊಡೆಯುವುದಿಲ್ಲ ಎಂದು ಅದೆಲ್ಲೂ ಹೇಳಿರಲಿಲ್ಲ. ಸಾರ್ವಜನಿಕರು ಪಟಾಕಿ ಹೊಡೆದರೆ ಪರಿಸರ ಮಾಲಿನ್ಯ ಉಂಟಾಗುತ್ತದೆ ಎಂದು ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಸಿತ್ತೇ ಹೊರತೂ ಪಟಾಕಿ ಹೊಡೆದು ಪರಿಸರ ಮಾಲಿನ್ಯ ಉಂಟುಮಾಡುವುದಿಲ್ಲ ಎಂದು ಅದೇ ಸರ್ಕಾರವೇನೂ ಸಾರ್ವಜನಿಕರಿಗೆ ವಾಗ್ದಾನ ಮಾಡಿರಲಿಲ್ಲ. ದೀಪಾವಳಿಯಂದು ನೀವು ಪಟಾಕಿ ಹೊಡೆಯಬೇಡಿ ಎಂದಿತ್ತೇ ಹೊರತೂ ಉಳಿದ ಸಂದರ್ಭಗಳಲ್ಲಿ ನಾವು ಹೊಡೆಯುವುದಿಲ್ಲ ಎಂದು ಅದೆಲ್ಲೂ ಹೇಳಿರಲಿಲ್ಲ. ದೀಪಾವಳಿಯಂದು ಪಟಾಕಿ ಹೊಡೆಯುವುದರಿಂದ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗುತ್ತದೆ ಎಂದು ಸರ್ಕಾರ ಜಾಹೀರಾತು ನೀಡಿತ್ತೇ ಹೊರತೂ ಹೊಸ ವರ್ಷಾರಂಭದಲ್ಲಿ ತಾನೇ ಪಟಾಕಿ ಹೊಡೆದರೆ ಆಗ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗುತ್ತದೆ ಎನ್ನುವ ಅರಿವು ಸರ್ಕಾರಕ್ಕಿರಲಿಲ್ಲ. ದೀಪಾವಳಿಯಂದು ಮಧ್ಯ ರಾತ್ರಿಯಲ್ಲಿ ಪಟಾಕಿ ಹೊಡೆದರೆ ಇತರರ ನಿದ್ರಾಭಂಗವಾಗುತ್ತದೆ ಎನ್ನುವುದು ಸರ್ಕಾರಕ್ಕೆ ತಿಳಿದಿತ್ತಾದರೂ ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಸರ್ಕಾರವೇ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಪಟಾಕಿ ಹೊಡೆಯುವುದರಿಂದ ಇತರರ ನಿದ್ರೆಗೆ ತೊಂದರೆಯಾಗುತ್ತದೆ ಎನ್ನುವ ಅರಿವು ಸರ್ಕಾರಕ್ಕಿರಲಿಲ್ಲ!
ಹೌದು. ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮಾಚರಣೆಯ ಸಂದರ್ಭದಲ್ಲಿ ವ್ಯಾಪಕವಾಗಿ ಪಟಾಕಿಗಳನ್ನು ಸಿಡಿಸಲಾಗಿದೆ. ಹೊಗೆಯುಗುಳುವ ಸಿಡಿಮದ್ದುಗಳ ಪ್ರದರ್ಶನಗಳನ್ನು ನಡೆಸಲಾಗಿದೆ. ಸ್ವತಃ ಸರ್ಕಾರವೇ ಸಮಯದ ನಿರ್ಬಂಧ, ಶಬ್ದದ ನಿರ್ಬಂಧ ಮುಂತಾದ ನಿರ್ಬಂಧಗಳೆಲ್ಲವನ್ನೂ ಮೀರಿ ಸಾರ್ವಜನಿಕರದ್ದೇ ದುಡ್ಡಿನಲ್ಲಿ ಸಿಡಿಮದ್ದುಗಳನ್ನು ಹೊಡೆದು ಖುಷಿ ಅನುಭವಿಸಿದೆ. ಸಾಕಷ್ಟು ಕಡೆ ಪಟಾಕಿ ಸಿಡಿಸಲಾಗಿದೆಯಾದರೂ ಒಂದು ಉದಾಹರಣೆ ತೆಗೆದುಕೊಳ್ಳುವುದಾದರೆ ಮೈಸೂರು ಜಿಲ್ಲಾಡಳಿತ ಹೊಸ ವರ್ಷದ ಸ್ವಾಗತದ ನೆಪದಲ್ಲಿ ಹೊಡೆದ ಸಿಡಿಮದ್ದುಗಳು ಮತ್ತದರ ಪರಿಣಾಮಗಳ ಬಗ್ಗೆ ನೋಡಿ ಬರೋಣ.
ಮೈಸೂರು ಜಿಲ್ಲಾಡಳಿತವು ಮಧ್ಯ ರಾತ್ರಿಯಲ್ಲಿ ಬೃಹತ್ ಪ್ರಮಾಣದ ಪಟಾಕಿಗಳನ್ನು ಹೊಡೆಯುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸುವ ಸಂಪ್ರದಾಯವೊಂದನ್ನು ಪಾಲಿಸಿಕೊಂಡು ಬರುತ್ತಿದೆ. ಈ ವರ್ಷವೂ ಆ ಸಂಪ್ರದಾಯ ಮುಂದುವರಿದಿದ್ದು, ಅರಮನೆಯ ಪಕ್ಕದ ಮೈದಾನದಲ್ಲಿ ಬೃಹತ್ ಮೊತ್ತದ ಪಟಾಕಿ-ಸಿಡಿ ಮದ್ದುಗಳನ್ನು, ಬಾಣ ಬಿರುಸುಗಳನ್ನು ಹೊಡೆಯುವ ಮೂಲಕ 2019ನ್ನು ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡಿದೆ.
ವಿಚಿತ್ರವೆಂದರೆ ಸರ್ಕಾರವೇ ಸಾರ್ವಜನಿಕರ ದುಡ್ಡಿನಲ್ಲಿ ಹೊಡೆದ ಪಟಾಕಿಗಳಿಗೆ ಯಾವ ಕಾನೂನು ತೊಡಕುಗಳೂ ಎದುರಾಗಿಲ್ಲ. ದೀಪಾವಳಿಯ ದಿನದಂದು ಸಮಯ ಮೀರಿ ಪಟಾಕಿ ಹೊಡೆಯುವವರನ್ನು ಪತ್ತೆ ಮಾಡಲು ಹದ್ದಿನ ಕಣ್ಣಿನೊಂದಿಗೆ ತಿರುಗಾಡುತ್ತಿದ್ದ ಅದೇ ಪೊಲೀಸರು ಅರಮನೆಯ ಪಕ್ಕದಲ್ಲಿ ಸರ್ಕಾರ ಹೊಡೆಯುವ ಪಟಾಕಿಗಳ ಕಾವಲಿಗೆ ಮಧ್ಯರಾತ್ರಿಯ ಚಳಿಯನ್ನೂ ಲೆಕ್ಕಿಸದೇ ನಿಂತಿದ್ದರು.
ಸಾಮಾನ್ಯವಾಗಿ ಈ ರಾಜ್ಯದ/ಈ ದೇಶದ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆಯೇ ಪ್ರಾಣ ಬಿಡುವ ದೇಶ ವಿದೇಶಗಳ ಅತಿ ಸೂಕ್ಷ್ಮ ಪ್ರಾಣಿ ಪಕ್ಷಿಗಳನ್ನು ಹೊಂದಿರುವ ಪ್ರಸಿದ್ಧ ಮೈಸೂರು ಮೃಗಾಲಯದ ಕೂಗಳತೆಯ ದೂರದಲ್ಲೇ ಬೃಹತ್ ಪ್ರಮಾಣದಲ್ಲಿ ಜಿಲ್ಲಾಡಳಿತವು ಹೊಡೆದ ಪಟಾಕಿಗಳಿಂದ ಯಾವ ಪ್ರಾಣಿ ಪಕ್ಷಿಗಳಿಗೂ ಏನೂ ಆಗಿಲ್ಲ ಎಂದರೆ ಪಟಾಕಿ ಹೊಡೆದರೆ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗುತ್ತದೆ ಎನ್ನುವ ಅಭಿಪ್ರಾಯ ತಪ್ಪು ಎನ್ನುವುದನ್ನು ಸರ್ಕಾರವೇ ಸಾಬೀತುಪಡಿಸಿದಂತಾಗಿದೆ. ಮೈಸೂರು ಅರಮನೆಯಷ್ಟೇ ಅಲ್ಲಿ ನೆಲೆಸಿರುವ ಸಾವಿರಾರು ಪಾರಿವಾಳಗಳೂ ಪ್ರವಾಸಿಗರಿಗೆ ಮುದ ನೀಡುತ್ತವೆ. ಮಧ್ಯ ರಾತ್ರಿಯಲ್ಲಿ ಸರ್ಕಾರದ ವತಿಯಿಂದ ಪಟಾಕಿಗಳನ್ನು ಹೊಡೆದಾಗ, ಸಿಡಿ ಮದ್ದುಗಳ ಪ್ರದರ್ಶನ ನಡೆಸಿದಾಗ ಆ ಸಾವಿರಾರು ಪಾರಿವಾಳಗಳು ದಿಕ್ಕೆಟ್ಟು ಹಾರಿದ್ದಂತೂ ಸತ್ಯ. ಆದರೆ ಆ ಪಾರಿವಾಳಗಳಿಗೆ ಹೃದಯಾಘಾತ ಸಂಭವಿಸಿ ಅವುಗಳ ಸಾವು ಸಂಭವಿಸಿದ ಬಗ್ಗೆ ಇದುವರೆಗೂ ವರದಿಯಾಗಿಲ್ಲ. ಆದ್ದರಿಂದ ಪಟಾಕಿ ಹೊಡೆಯುವುದರಿಂದ ಪಕ್ಷಿಗಳಿಗೆ ತೊಂದರೆಯಾಗುತ್ತದೆ ಎನ್ನುವುದು ಸುಳ್ಳು ಎನ್ನುವುದನ್ನು ಜಿಲ್ಲಾಡಳಿತ ಸಾಬೀತುಪಡಿಸಿದೆ. ಅಷ್ಟೇ ಅಲ್ಲದೆ ದೀಪಾವಳಿಯ ಸಂದರ್ಭದಲ್ಲಿ ಪಟಾಕಿಯ ಸದ್ದಿಗೆ ನಿದ್ದೆಯಿಲ್ಲದೆ ಹೊರಳಾಡಿದ ಯಾರೊಬ್ಬರೂ ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಹೊಡೆದ ಪಟಾಕಿಗಳ ಸದ್ದಿಗೆ ಎಚ್ಚರಗೊಂಡು ಕೂಗಾಡಿದ ಬಗ್ಗೆ ವರದಿಯಾಗಿಲ್ಲ.
ಒಟ್ಟಿನಲ್ಲಿ ಮುಂದಿನ ವರ್ಷ ದೀಪಾವಳಿಯ ಸಂದರ್ಭದಲ್ಲಿ ಸರ್ಕಾರದ ಘೋಷಣೆಗಳು ಹೀಗಿರಬಹುದು;
ಸಾರ್ವಜನಿಕರೇ… ಪಟಾಕಿ ಹೊಡೆದು ಪರಿಸರ ಮಾಲಿನ್ಯವೆಸಗಿದರೆ ಹುಷಾರ್! ಆ ಕೆಲಸ ನಾವೇ ಮಾಡುತ್ತೇವೆ.
-ಕರ್ನಾಟಕ ಸರ್ಕಾರ-
ಸಾರ್ವಜನಿಕರೇ… ಪಟಾಕಿ ಹೊಡೆದು ಪ್ರಾಣಿ ಪಕ್ಷಿಗಳಿಗೆ ತೊಂದರೆ ಕೊಟ್ಟರೆ ಹುಷಾರ್! ಆ ಕೆಲಸ ನಾವೇ ಮಾಡುತ್ತೇವೆ.
-ಕರ್ನಾಟಕ ಸರ್ಕಾರ-
ಸಾರ್ವಜನಿಕರೇ… ಪಟಾಕಿ ಹೊಡೆದು ಇತರರ ನಿದ್ದೆಗೆ ಭಂಗ ತಂದರೆ ಹುಷಾರ್! ಆ ಕೆಲಸ ನಾವೇ ಮಾಡುತ್ತೇವೆ.
-ಕರ್ನಾಟಕ ಸರ್ಕಾರ-
ಸಾರ್ವಜನಿಕರೇ… ಪಟಾಕಿ ಹೊಡೆದು ಹಣ ವ್ಯರ್ಥ ಮಾಡಿದರೆ ಹುಷಾರ್! ಆ ಕೆಲಸ ನಾವೇ ಮಾಡುತ್ತೇವೆ.
-ಕರ್ನಾಟಕ ಸರ್ಕಾರ-
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.