ಕೇವಲ ಮೂರು ಉಚ್ಛಾರಣೆಗಳಿಂದ ವಿವಾಹದ ಪವಿತ್ರ ಬಂಧನವನ್ನೇ ಇಬ್ಭಾಗಗೊಳಿಸುವ, ಮಹಿಳೆಯರನ್ನು ಬೀದಿಗೆ ತಳ್ಳುವ ಅನಿಷ್ಠ ಪದ್ಧತಿ ತ್ರಿವಳಿ ತಲಾಖ್. ಗಂಡನಾದವನು ಮೂರು ಬಾರಿ ತಲಾಖ್ ತಲಾಖ್ ತಲಾಖ್ ಎಂದರೆ ಎಲ್ಲವೂ ಮುಗಿದು ಹೋಯಿತು. ಮರು ಮಾತನಾಡದೆ ಪತ್ನಿಯಾದವಳು ಹೊರ ನಡೆಯಬೇಕು. ಬದಲಾದ ಕಾಲದಲ್ಲಿ ವಾಟ್ಸಾಪ್, ಫೋನ್, ವೀಡಿಯೋ ಕಾಲ್ಗಳ ಮೂಲಕವೂ ತ್ರಿವಳಿ ತಲಾಖ್ ನೀಡಿದವರಿದ್ದಾರೆ. ಪುರುಷರ ಈ ದುರಹಂಕಾರದ ನಡೆಯಿಂದ ಎಷ್ಟೋ ಮುಸ್ಲಿಂ ಮಹಿಳೆಯರ ಬದುಕು ನರಕವಾಗಿದೆ. ತ್ರಿವಳಿ ತಲಾಖ್ನಿಂದ ಸಂತ್ರಸ್ಥರಾದ ಕೆಲ ಮಹಿಳೆಯರು ಸುಪ್ರೀಂಕೋರ್ಟ್ನ ಮೆಟ್ಟಿಲೇರಿ ಹೋರಾಟ ನಡೆಸಿದ್ದರು, ಇಂದು ಅವರ ಹೋರಾಟಕ್ಕೆ ಜಯ ಸಿಕ್ಕಿದೆ. ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಕಾಯ್ದೆಯನ್ನು ಅಂಗೀಕರಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮುಸ್ಲಿಂ ಮಹಿಳೆಯರ ಕಣ್ಣೀರೊರೆಸಿದೆ.
ತ್ರಿವಳಿ ತಲಾಖ್ ಕಾಯ್ದೆ ಅಂಗೀಕರಿಸುವುದು ಮೋದಿ ಸರ್ಕಾರಕ್ಕೆ ಸುಲಭದ ಮಾತಾಗಿರಲಿಲ್ಲ. ಯಾಕೆಂದರೆ ಈ ಕಾಯ್ದೆ, ಹಲವಾರು ವಿವಾದ, ಚರ್ಚೆ, ಹೋರಾಟಗಳನ್ನು ಹುಟ್ಟು ಹಾಕಿತ್ತು. ಪ್ರತಿಪಕ್ಷಗಳು ನಾನಾ ಕಾರಣವೊಡ್ಡಿ ಕಾಯ್ದೆಯನ್ನು ವಿರೋಧಿಸಿದ್ದವು. ಆದರೂ ಮಹಿಳೆಯರಿಗೆ ನ್ಯಾಯ ಒದಗಿಸುವಲ್ಲಿ ಬದ್ಧತೆ ಪ್ರದರ್ಶಿಸಿದ ಸರ್ಕಾರ ಕಾಯ್ದೆಯನ್ನು ಅಂಗೀಕಾರಗೊಳಿಸಿದೆ. ಈ ಮೂಲಕ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವ ಕಾರ್ಯದಲ್ಲಿ ಮೊದಲ ಹಂತದ ಜಯವನ್ನು ಪಡೆದುಕೊಂಡಿದೆ. ಲೋಕಸಭೆಯಲ್ಲಿ ಕಾಯ್ದೆಯನ್ನು ಮಂಡನೆಗೊಳಿಸಿದ ಸಚಿವ ರವಿಶಂಕರ್ ಪ್ರಸಾದ್ ಅವರು, ಮಹಿಳೆಯ ಘನತೆ, ಮಹಿಳೆಯ ಗೌರವ ಮತ್ತು ಮಹಿಳಾ ನ್ಯಾಯಕ್ಕಾಗಿ ಸರ್ಕಾರ ಈ ಕಾಯ್ದೆಯನ್ನು ತರಲಾಗಿದೆ, ವೋಟ್ ಬ್ಯಾಂಕ್ ಅಥವಾ ಒಂದು ಸಮುದಾಯವನ್ನು ಗುರಿಯಾಗಿಸುವ ಉದ್ದೇಶ ನಮ್ಮದಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ ಕಾಂಗ್ರೆಸ್, ಎಐಎಡಿಎಂಕೆ ಸೇರಿದಂತೆ ಕೆಲ ಪ್ರತಿಪಕ್ಷಗಳು ಕಾಯ್ದೆಯನ್ನು ವಿರೋಧಿಸಿ ಸಭಾತ್ಯಾಗ ಮಾಡಿರುವುದು ವಿಪರ್ಯಾಸವೇ ಸರಿ. ಬಹುಶಃ ಮುಸ್ಲಿಂ ವೋಟ್ ಬ್ಯಾಂಕ್ ನೆಚ್ಚಿಕೊಂಡವರಿಗೆ ಮುಸ್ಲಿಂ ಪುರುಷರನ್ನು ಮೆಚ್ಚಿಸಲು ಈ ರೀತಿ ಮಾಡಬೇಕಾದುದು ಅನಿವಾರ್ಯವೇ ಆಗಿತ್ತೋ ಏನೋ!
ಅಷ್ಟಕ್ಕೂ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಸಂವಿಧಾನದ ಅನ್ವಯ ನಡೆಯುತ್ತದೆ. ಸಂವಿಧಾನ ಎಲ್ಲರಿಗೂ ಸಮಾನತೆಯನ್ನು ನೀಡುತ್ತದೆ. ಹೀಗಿರುವಾಗ ಒಂದು ವರ್ಗದ ಮಹಿಳೆಯರಿಗೆ ದುಃಸ್ವಪ್ನವಾಗಿ ಕಾಡುತ್ತಿದ್ದ ಪದ್ಧತಿಯೊಂದನ್ನು ತೊಡೆದು ಹಾಕಲು ಎಷ್ಟೊಂದು ವಿರೋಧ ಯಾಕೆ? ಜಾತ್ಯಾತೀತರು ಎಂದು ಕರೆಸಿಕೊಳ್ಳುವವರೇ ಯಾಕೆ ತ್ರಿವಳಿ ತಲಾಖ್ನ್ನು ವಿರೋಧಿಸಿದ್ದು? ಉತ್ತರ ಸ್ಪಷ್ಟ, ಮೂಲಭೂತವಾದಿಗಳನ್ನು ಮೆಚ್ಚಿಸಲು, ವೋಟ್ ಬ್ಯಾಂಕ್ನ್ನು ಹಾಗೆಯೇ ಉಳಿಸಿಕೊಳ್ಳಲು ತ್ರಿವಳಿ ತಲಾಖ್ನ್ನು ಮುಂದುವರೆಸುವುದು ಅವರ ಉದ್ದೇಶವಾಗಿತ್ತು. ಇನ್ನೊಂದೆಡೆ ಇಂತಹ ಮಹಿಳಾ ಪರ ಕಾಯ್ದೆಯನ್ನು ತರುವ ಮೂಲಕ ಮೋದಿ ಸರ್ಕಾರ ಎಲ್ಲಿ ಮಹಿಳೆಯರ ಬೆಂಬಲ ಪಡೆದುಕೊಳ್ಳುವುದೋ ಎಂಬ ಆತಂಕ.
ಇಷ್ಟಕ್ಕೂ ತ್ರಿವಳಿ ತಲಾಖ್ನ್ನು ನಿಷೇಧಿಸಿದ ರಾಷ್ಟ್ರಗಳಲ್ಲಿ ಭಾರತ ಮೊದಲನೇಯದಲ್ಲ. ಈಗಾಗಲೇ 25 ರಾಷ್ಟ್ರಗಳಲ್ಲಿ ಇದಕ್ಕೆ ನಿಷೇಧವಿದೆ. ವಿಶೇಷವೆಂದರೆ ಇವುಗಳಲ್ಲಿ ಬಹುತೇಕವು ಮುಸ್ಲಿಂ ರಾಷ್ಟ್ರಗಳು. ನೆರೆಯ ಕೋಮುವಾದಿ ಇಸ್ಲಾಮಿಕ್ ರಾಷ್ಟ್ರ ಪಾಕಿಸ್ಥಾನ ಮತ್ತು ಬಾಂಗ್ಲಾದಲ್ಲೂ ಇದಕ್ಕೆ ನಿಷೇಧವಿದೆ! ಭಾರತೀಯ ಜಾತ್ಯಾತೀತರು ತ್ರಿವಳಿ ತಲಾಖ್ ಕಾಯ್ದೆ ವಿರೋಧಿಸುವ ಮುನ್ನ ಈ ರಾಷ್ಟ್ರಗಳತ್ತ ಒಂದು ಬಾರಿ ನೋಡಬೇಕಿತ್ತು.
ಮೊದಲ ಬಾರಿಗೆ ತ್ರಿವಳಿ ತಲಾಖ್ ನಿಷೇಧಿಸಿದ ರಾಷ್ಟ್ರವೆಂದರೆ ಅದು ಈಜಿಪ್ತ್. ಇಲ್ಲಿ 1929ರಲ್ಲೇ ಇದು ನಿಷೇಧಗೊಂಡಿತ್ತು. ತಲಾಖ್ ನೀಡುವಾಗ ಸಾಂಪ್ರದಾಯಿಕ ಮತ್ತು ಕಾನೂನು ಪಾಲನೆ ಕಡ್ಡಾಯ, ಒಮ್ಮೆಲೆ ತಲಾಖ್ ನೀಡುವಂತಿಲ್ಲ ಎಂದು ಈ ರಾಷ್ಟ್ರ ನಿಯಮ ರೂಪಿಸಿದೆ. 1935ರಲ್ಲಿ ಸುಡಾನ್, 1953ರಲ್ಲಿ ಸಿರಿಯಾ, 1956 ರಲ್ಲಿ ಟ್ಯುನೇಶಿಯಾ, 1957ರಲ್ಲಿ ಜೋರ್ಡಾನ್, 1958ರಲ್ಲಿ ಅಫ್ಘಾನಿಸ್ಥಾನ, 1959ರಲ್ಲಿ ಲಿಬಿಯಾ, 1961ರಲ್ಲಿ ಪಾಕಿಸ್ಥಾನ ,1961ರಲ್ಲಿ ಬಾಂಗ್ಲಾದೇಶ, 1974ರಲ್ಲಿ ಇಂಡೋನೇಷ್ಯಾ, 1976ರಲ್ಲಿ ಕುವೈಟ್, 1977ರಲ್ಲಿ ಯಮೆನ್ ಈ ಅನಿಷ್ಟ ಪದ್ಧತಿಯನ್ನು ನಿಷೇಧಿಸಿದೆ. ಇದರ ಬಳಿಕವೂ ಟರ್ಕಿ, ಸಿಪ್ರಸ್, ಮೊರಕ್ಕೊ, ಅಲ್ಜೀರಿಯಾ, ಇರಾನ್, ಇರಾಕ್, ಕತಾರ್, ಯುಎಇ, ಶ್ರೀಲಂಕಾ, ಮಲೇಷ್ಯಾ, ಬ್ರೂನೆ, ಈಗ ಭಾರತ ತ್ರಿವಳಿ ತಲಾಖ್ ನಿಷೇಧಿಸಿದ ದೇಶಗಳಾಗಿವೆ.
ಇದನ್ನು ಹೊರತುಪಡಿಸಿ, ಹಲವು ರಾಷ್ಟ್ರಗಳಲ್ಲಿ ನ್ಯಾಯಾಲಯದ ಸಮ್ಮುಖದಲ್ಲಿ ತ್ರಿವಳಿ ತಲಾಖ್ ನೀಡಿದರೆ ಮಾತ್ರ ಮಾನ್ಯ ಮಾಡಲಾಗುತ್ತದೆ. ಇನ್ನೂ ಕೆಲವು ರಾಷ್ಟ್ರಗಳಲ್ಲಿ ಚುನಾಯಿತ ಪ್ರತಿನಿಧಿಗಳ ಸಮ್ಮುಖದಲ್ಲಿ ತಲಾಖ್ ನೀಡಿದರೆ ಮಾತ್ರ ಅವುಗಳಿಗೆ ಕಾನೂನಿನ ಮಾನ್ಯತೆ ದೊರಕುತ್ತದೆ. ಕೆಲವೊಂದು ರಾಷ್ಟ್ರಗಳಲ್ಲಿ, ತ್ರಿವಳಿ ತಲಾಖ್ ನೀಡುವ ಮುನ್ನ ಪತಿಯಾದವನು ಸಕಾರಣವನ್ನು ತಿಳಿಸಬೇಕು, ಇದನ್ನು ನ್ಯಾಯಾಲಯ ಮಾನ್ಯ ಮಾಡಬೇಕು. ಆಗ ಮಾತ್ರ ತಲಾಖ್ ದೊರೆಯುತ್ತದೆ.
ಸ್ಪಷ್ಟವಾಗಿ ಹೇಳಬೇಕೆಂದರೆ ಬಹುತೇಕ ಎಲ್ಲಾ ರಾಷ್ಟ್ರಗಳೂ ತ್ರಿವಳಿ ತಲಾಖ್ ಒಂದು ಅನಿಷ್ಟ ಪದ್ಧತಿ ಎಂಬುದನ್ನು ಅರ್ಥಮಾಡಿಕೊಂಡಿವೆ. ಇದರ ನಿಷೇಧವನ್ನು ಮುಸ್ಲಿಂ ರಾಷ್ಟ್ರಗಳೂ ಮಾಡಿರುವುದು ಇಲ್ಲಿ ಗಮನಾರ್ಹ ಎನಿಸುತ್ತದೆ. ಆದರೆ ಭಾರದಂತಹ ಒಂದು ಪ್ರಜ್ಞಾವಂತ ದೇಶ ತ್ರಿವಳಿ ತಲಾಖ್ ನಿಷೇಧಕ್ಕೆ ಇಷ್ಟು ವರ್ಷಗಳನ್ನು ತೆಗೆದುಕೊಂಡಿರುವುದು ನಿಜಕ್ಕೂ ದುರಾದೃಷ್ಟ. ಹಿಂದಿನ ಸರ್ಕಾರಗಳ ಓಲೈಕೆ ರಾಜಕಾರಣದಿಂದಾಗಿ ಮುಸ್ಲಿಂ ಮಹಿಳೆಯರು ನ್ಯಾಯದಿಂದ ವಂಚಿತರಾಗಿದ್ದರು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಈಗಿನ ಸರ್ಕಾರವಾದರೂ ಮುಸ್ಲಿಂ ಮಹಿಳಾ ಧ್ವನಿಗೆ ಕಿವಿಗೊಟ್ಟು ಅವರಿಗೆ ನ್ಯಾಯ ಒದಗಿಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನಾರ್ಹ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.