NOTA ಮತದಾರ: ಅಯ್ಯೋ.. ಯಾವ ಅಭ್ಯರ್ಥಿಗಳೂ ಸರಿಯಿಲ್ಲ. ಬರುವ ಚುನಾವಣೆಯಲ್ಲಿ ನನ್ನ ಮತ NOTA ಕ್ಕೆ.
ಸಾಮಾನ್ಯ ಮತದಾರ: ನಿಮ್ಮೂರಿನ ಯಾವ ಹೋಟೆಲ್ ನಲ್ಲಿ ಅತ್ಯಂತ ಆರೋಗ್ಯಕರ ಮಸಾಲೆ ದೋಸೆ ಸಿಗುತ್ತೆ ಸರ್?
NOTA ಮತದಾರ: ಅಯ್ಯೋ.. ಆ ವಿಷಯದಲ್ಲಿ ನನಗೆ ತಿಳಿದಿರುವ ಯಾವ ಹೋಟೆಲ್ ಕೂಡಾ ಸರಿಯಿಲ್ಲ ರೀ.
ಸಾಮಾನ್ಯ ಮತದಾರ: ಹಾಗಾದರೆ ಯಾವ ಹೋಟೆಲ್ ಗೂ ಕೂಡಾ ನೀವು ಹೋಗಿ ಮಸಾಲೆ ದೋಸೆ ತಿನ್ನಬಾರದಲ್ಲವೇ? ಹೋಟೆಲ್ ವರೆಗೂ ಹೋಗಿ ನನಗೆ ಮಸಾಲೆ ದೋಸೆ ಬೇಡ ಎಂದು ನೀವು ಹೇಳಿಬರಬೇಕಲ್ಲವೇ?
NOTA ಮತದಾರ: ಹಾಗೇಕೆ ಮಾಡಲಿ? ಇದ್ದಿದ್ದರಲ್ಲಿ ಒಳ್ಳೆಯದೆನ್ನಿಸಿದ ಹೋಟೆಲ್ ಗೆ ಹೋಗಿ ಮಸಾಲೆ ದೋಸೆ ಸವಿದು ಬರುತ್ತೇನೆ..
ಸಾಮಾನ್ಯ ಮತದಾರ: ಮಸಾಲೆ ದೋಸೆ ತಿನ್ನಲು ಹೋಟೆಲ್ ಗೆ ಹೋಗುವಾಗ ಇದ್ದಿದ್ದರಲ್ಲಿ ಒಳ್ಳೆಯದನ್ನು ಹುಡುಕುವ ನೀವು ಚುನಾವಣೆಯಲ್ಲಿ ಮಾತ್ರ ಇರುವವರಲ್ಲಿ ಒಳ್ಳೆಯವರನ್ನು ಏಕೆ ಆರಿಸಬಾರದು? ಮತಗಟ್ಟೆಯ ವರೆಗೂ ಹೋಗಿ ಎಲ್ಲರನ್ನೂ ತಿರಸ್ಕರಿಸುವುದು ಎಷ್ಟು ಸರಿ?
NOTA ಮತದಾರ: ಯಾರೂ ಬೇಡ ಎಂದು ಎಲ್ಲರನ್ನೂ ತಿರಸ್ಕರಿಸಿದರೆ ಮುಂದೊಂದು ದಿನ ಆ ಬಗ್ಗೆ ಜಾಗೃತಿ ಮೂಡಿ ಒಳ್ಳೆಯವರನ್ನು ಮಾತ್ರ ಅಭ್ಯರ್ಥಿಗಳನ್ನಾಗಿ ಮಾಡಲೇಬೇಕಾದ ಅನಿವಾರ್ಯತೆ ರಾಜಕೀಯ ಪಕ್ಷಗಳಿಗೆ ಬರಬಹುದು.
ಸಾಮಾನ್ಯ ಮತದಾರ: ಅದೇ ರೀತಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದ ಯಾವ ಹೋಟೆಲ್ ಗಳ ಮಸಾಲೆ ದೋಸೆಯೂ ನಮಗೆ ಬೇಡ ಎಂದು ಆ ಹೋಟೆಲ್ ಗಳಿಗೆ ಹೋಗಿ ಹೇಳಿ ಬರುವುದರಿಂದ ಮುಂದೊಂದು ದಿನ ಆ ಬಗ್ಗೆ ಜಾಗೃತಿ ಮೂಡಿ ಆರೋಗ್ಯರ ಮಸಾಲೆ ದೋಸೆಗಳನ್ನೇ ತಯಾರಿಸಲೇಬೇಕಾದ ಅನಿವಾರ್ಯತೆ ಎಲ್ಲಾ ಹೋಟೆಲ್ ಗಳಿಗೂ ಬರಬಹುದಲ್ಲವೇ? ನೀವು ಅದನ್ನೇಕೆ ಮಾಡಬಾರದು?
NOTA ಮತದಾರ: ಹೆಹೆಹೆಹೆ… ಅದು ಹೇಗೆ ಸಾಧ್ಯ? ಅಲ್ಲಿಯ ವರೆಗೂ ನಾವು ಮಸಾಲೆ ದೋಸೆ ತಿನ್ನೋದನ್ನೇ ಬಿಡಬೇಕು ಅಂದರೆ ಹೇಗೆ?
ಸಾಮಾನ್ಯ ಮತದಾರ: ಅಂದರೆ ಯಾವುದೂ ಆರೋಗ್ಯಕರವಲ್ಲ ಎಂದು ನಿಮಗೆ ತಿಳಿದಿದ್ದರೂ ಒಂದು ಮಸಾಲೆ ದೋಸೆಯನ್ನು ಕೂಡಾ ನಿಮ್ಮಿಂದ ತಿರಸ್ಕರಿಸಲು ಸಾಧ್ಯವಿಲ್ಲ ಎಂದಾಯಿತು. ಆದರೆ ಅಭ್ಯರ್ಥಿಗಳಲ್ಲಿ ಯಾರೂ ಸರಿಯಿಲ್ಲ ಎಂದು ಎಲ್ಲರನ್ನೂ ತಿರಸ್ಕರಿಸುವ ಮೂಲಕ ಇದ್ದುದರಲ್ಲೇ ಒಳ್ಳೆಯವರೂ ಆಯ್ಕೆಯಾಗದ ರೀತಿಯಲ್ಲಿ ಚುನಾವಣೆಯ ಫಲಿತಾಂಶವನ್ನೇ ಬದಲಾಯಿಸುವ ಮತ್ತು ಆ ಮೂಲಕ ಈ ದೇಶದ ಭವಿಷ್ಯವನ್ನೇ ಆತಂಕಕ್ಕೆ ದೂಡುವ ಕೆಲಸ ಮಾಡಲು ನಿಮ್ಮಿಂದ ಸಾಧ್ಯವಿದೆ!
NOTA ಮತದಾರ: ಅದು ಹಾಗಲ್ಲ. ಮಸಾಲೆ ದೋಸೆ ಆಯ್ಕೆಗೂ ಮತ್ತು ಚುನಾವಣೆಯಲ್ಲಿ ನಮ್ಮ ಪ್ರತಿನಿಧಿಗಳ ಆಯ್ಕೆಗೂ ಹೋಲಿಕೆ ಮಾಡಲಾಗದು.
ಸಾಮಾನ್ಯ ಮತದಾರ: ಹೌದು, ಮಸಾಲೆ ದೋಸೆ ನಿಮಗೆ ಅನಿವಾರ್ಯ. ಆದ್ದರಿಂದ ಯಾವ ದೋಸೆಯೂ ಆರೋಗ್ಯಕರವಲ್ಲ ಎಂದು ಎಲ್ಲ ಮಸಾಲೆ ದೋಸೆಗಳನ್ನೂ ನಿಮ್ಮಿಂದ ಸಂಪೂರ್ಣವಾಗಿ ತಿರಸ್ಕರಿಸಲಾಗದು. ಆದರೆ ಈ ದೇಶದ ಭವಿಷ್ಯ ನಿಮಗೆ ಅಷ್ಟೇನೂ ಅನಿವಾರ್ಯವಲ್ಲ. ಆದ್ದರಿಂದ ನೀವು ಯಾವ ಅಭ್ಯರ್ಥಿಯೂ ಸರಿಯಿಲ್ಲ ಎಂದು ಎಲ್ಲರನ್ನೂ ತಿರಸ್ಕರಿಸಿಬಿಡಬಹುದು.
NOTA ಮತದಾರ: ಅದು..ಹಾ..ಗ..ಲ್ಲ..
ಸಾಮಾನ್ಯ ಮತದಾರ: ತಿಳಿಯಿತು ಬಿಡಿ. ತುಂಬಾ ಧನ್ಯವಾದಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.