ಕಾಂಗ್ರೆಸ್ ಪಕ್ಷವೆಂದರೆ ಅದು ನೆಹರೂ-ಗಾಂಧಿ ಕುಟುಂಬದ ಪಕ್ಷ ಎನ್ನುವುದನ್ನು ಈ ದೇಶದ ಜನರಿಗೆ ಪ್ರತ್ಯೇಕವಾಗಿ ಬಿಡಿಸಿ ಹೇಳಬೇಕಾದ ಅಗತ್ಯವೇನೂ ಇಲ್ಲ. ಗಾಂಧಿ ಕುಟುಂಬದ ಹೆಸರಿಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಒಂದು ವರ್ಷ ಕೂಡಾ ಈ ದೇಶದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಾರದು. ನೆಹರೂರವರಿಂದ ಹಿಡಿದು ರಾಹುಲ್ ಗಾಂಧಿಯವರ ವರೆಗೆ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಂಡಿರುವುದೇ ಆ ಕುಟುಂಬದ ನಾಮಬಲದಿಂದ. ಅದೆಷ್ಟೇ ಮುತ್ಸದ್ದಿಗಳಾಗಿದ್ದರೂ ಅಲ್ಲಿ ಆ ಕುಟುಂಬದ ವ್ಯಕ್ತಿಗಳನ್ನು ಹೊರತುಪಡಿಸಿ ಬೇರೆಯ ನಾಯಕರನ್ನು ಗೌರವಿಸುವ ಪ್ರವೃತ್ತಿ ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ಕಷ್ಟಸಾಧ್ಯವಾದರೂ ಅದೊಂದು ವಾಸ್ತವ.
ಇದಕ್ಕೆ ಇತ್ತೀಚಿನ ಪುರಾವೆಯೆಂದರೆ, ಕಳೆದ ಭಾನುವಾರ ಕಾಂಗ್ರೆಸ್ ಪಕ್ಷ ಟ್ವೀಟ್ ಒಂದನ್ನು ಮಾಡಿ, ಈ ದೇಶದ ಆರ್ಥಿಕ ಬೆಳವಣಿಗೆಗೆ ಮಹತ್ವದ ಯೋಜನೆಗಳನ್ನು ನೀಡಿದ್ದ, ಗಾಂಧೀ ಕುಟುಂಬದಲ್ಲಿ ಯಾರೂ ನಾಯಕರಿಲ್ಲ ಎನ್ನುವ ಕ್ಲಿಷ್ಟಕರ ಸಂದರ್ಭದಲ್ಲಿ ಪ್ರಧಾನಿಯಾಗಿ ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಟ್ಟ ಮಾಜಿ ಪ್ರಧಾನಿ ದಿವಂಗತ ಪಿ.ವಿ.ನರಸಿಂಹ ರಾವ್ ಅವರಿಗೆ ಜನ್ಮದಿನದ ಶುಭಾಶಯ ಕೋರಿತ್ತು. ಆದರೆ ಅವರ ಜನ್ಮದಿನ 1921ರ ಜೂನ್ ಇಪ್ಪತ್ತೆಂಟು! ಕಾಂಗ್ರೆಸ್ ಪಕ್ಷ ಹುಟ್ಟು ಹಬ್ಬದ ಶುಭಾಶಯ ಕೋರಿದ ಡಿಸೆಂಬರ್ 23 ಅವರ ಅವರು ದೈವಾಧೀನರಾಗಿದ್ದ ದಿನವಾಗಿತ್ತು. ಅಂದರೆ ನೆಹರೂ-ಗಾಂಧಿ ಕುಟುಂಬ ಹೊರತುಪಡಿಸಿದಂತೆ ತಮ್ಮ ಪಕ್ಷದ ಅತ್ಯಂತ ಶ್ರೇಷ್ಠ ನಾಯಕರಾಗಿದ್ದ ಪಿ.ವಿ.ನರಸಿಂಹ ರಾವ್ ಅವರಿಗೆ ಅವರ ಪುಣ್ಯ ತಿಥಿಯಂದು ಕಾಂಗ್ರೆಸ್ ಪಕ್ಷ ಹುಟ್ಟುಹಬ್ಬದ ಶುಭಾಶಯ ಕೋರಿತ್ತು!
ಭಾರತದ ಆರ್ಥಿಕತೆಯನ್ನು ಉದಾರೀಕರಣಗೊಳಿಸಿ ವಿಶ್ವ ಮಟ್ಟದಲ್ಲಿ ಭಾರತವನ್ನು ಗುರುತಿಸಿಕೊಳ್ಳಲು ಶ್ರಮಿಸಿದ ದಿವಂಗತ ಪಿ.ವಿ.ನರಸಿಂಹ ರಾವ್ ಅವರು “ಭಾರತದ ಆರ್ಥಿಕ ಸುಧಾರಣೆಗಳ ಪಿತಾಮಹ” ಎಂದೇ ಹೆಸರು ಮಾಡಿದ್ದರು. ನೆಹರು-ಗಾಂಧೀ ಕುಟುಂಬದವರನ್ನು ಹೊರತುಪಡಿಸಿ ಐದು ವರ್ಷ ಪೂರ್ಣಗೊಳಿಸಿದ ಮೊದಲ ಪ್ರಧಾನಿ ಎನ್ನುವ ಹೆಗ್ಗಳಿಕೆಯ ಜೊತೆಗೆ ಹಿಂದಿಯೇತರ ಪ್ರದೇಶವಾದ ದಕ್ಷಿಣ ಭಾರತೀಯ ಮೂಲದಿಂದ ಪ್ರಧಾನಿ ಹುದ್ದೆಗೇರಿ ಯಶಸ್ವಿಯಾಗಿ ಆಡಳಿತ ನಡೆಸಿದ ಕೀರ್ತಿ ಕೂಡಾ ಪಿ.ವಿ.ನರಸಿಂಹ ರಾವ್ ಅವರದ್ದಾಗಿದೆ. ಅವರೊಬ್ಬ ಸ್ವಾತಂತ್ರ್ಯ ಹೋರಾಟಗಾರ ಕೂಡಾ ಹೌದು. ಪ್ರಧಾನಿ ಹುದ್ದೆಗೇರುವುದಕ್ಕೂ ಮುನ್ನ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿಯವರ ಸಂಪುಟಗಳೆರಡರಲ್ಲಿಯೂ ಸಚಿವರಾಗಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ ದಾಖಲೆಗಳು ಕೂಡಾ ಅವರ ಬೆನ್ನ ಹಿಂದಿದ್ದವು.
ರಾಜೀವ್ ಗಾಂಧಿಯವರ ಹತ್ಯೆಯಾದ ಬಳಿಕ ಅಲ್ಪ ಮತದ ಸರ್ಕಾರವನ್ನು ಎಲ್ಲರೂ ಒಪ್ಪುವಂತೆ ಸರಿ
ದೂಗಿಸಿಕೊಂಡು ಹೋಗುವ ಮೂಲಕ ಪೂರ್ಣ ಪ್ರಮಾಣದ ಆಡಳಿತ ನಡೆಸಿ, ಆ ಮೂಲಕ ಗಾಂಧೀ ಮನೆತನದ ಗೈರು ಹಾಜರಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಟ್ಟ ಪಿ.ವಿ.ನರಸಿಂಹ ರಾವ್ ಅವರು ಕಾಂಗ್ರೆಸ್ ಪಕ್ಷದ ಇಂದಿನ ನಾಯಕರ ಪ್ರಾತಃ ಸ್ಮರಣೀಯರಲ್ಲೊಬ್ಬರಾಗಿರಬೇಕಿತ್ತು. ಆದರೆ ದುರದೃಷ್ಟವಶಾತ್ ಕಾಂಗ್ರೆಸ್ ಪಕ್ಷ ಅವರ ಸೇವೆಯನ್ನು ನಿರಂತರವಾಗಿ ಕಡೆಗಣಿಸುತ್ತಾ ಬಂದಿದೆ. ಅದಕ್ಕೆ ನಿದರ್ಶನವೆನ್ನುವಂತೆ ಅವರ ಪುಣ್ಯತಿಥಿಯಂದು ಕಾಂಗ್ರೆಸ್ ಪಕ್ಷ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ.
ಹೀಗೆ ಈ ದೇಶ ಕಂಡ ಶ್ರೇಷ್ಠ ನಾಯಕರಲ್ಲೊಬ್ಬರಾದ ಪಿ.ವಿ.ನರಸಿಂಹ ರಾವ್ ಅವರ ಸೇವೆಯನ್ನು ಅವರದೇ ಪಕ್ಷ ಕಡೆಗಣಿಸಲು, ಅವರು ನೆಹರೂ-ಗಾಂಧೀ ವಂಶಸ್ಥರಲ್ಲ ಎನ್ನುವ ಕಾರಣವೊಂದನ್ನು ಹೊರತುಪಡಿಸಿ ಬೇರಾವ ಕಾರಣಗಳೂ ಈ ದೇಶದ ಜನರಿಗೆ ಕಾಣಸಿಗುತ್ತಿಲ್ಲ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.