‘ರಫೇಲ್ ಯುದ್ಧ ವಿಮಾನ ಖರೀದಿ’ ವ್ಯವಹಾರವನ್ನು ನ್ಯಾಯಾಲಯದ ಉಸ್ತುವಾರಿಯಲ್ಲಿ ಎಸ್ಐಟಿ ತನಿಖೆಗೆ ಒಳಪಡಿಸಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ವಿಮಾನ ಖರೀದಿ ಒಪ್ಪಂದ ಹಾಗೂ ಖರೀದಿ ಪ್ರಕ್ರಿಯೆ ಕುರಿತಾಗಿ ಯಾವುದೇ ಅನುಮಾನಗಳಿಲ್ಲ’ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಈ ಮೂಲಕ ರಫೇಲ್ ಡೀಲ್ ಪ್ರಕರಣವನ್ನಿಟ್ಟುಕೊಂಡು ಪ್ರಧಾನಿ ಮೋದಿಯವರ ಮೇಲೆ ಮಾಡಲಾದ ಎಲ್ಲಾ ಆರೋಪಗಳೂ ಸರ್ವೋಚ್ಚ ನ್ಯಾಯಾಲಯದಲ್ಲೇ ಸುಳ್ಳೆಂದು ಸಾಬೀತುಪಡಿಸಿದಂತಾಗಿದೆ. ಆ ಮೂಲಕ ತಾವು ಅಧಿಕಾರ ವಹಿಸಿಕೊಂಡಾಗಿನಿಂದಲೂ ಒಂದೂ ಹಗರಣದ ಕಳಂಕವನ್ನು ತನ್ನ ಮೈಗಂಟಿಸಿಕೊಳ್ಳದೆ “ನ ಖಾವುಂಗಾ – ನ ಖಾನೆದುಂಗಾ” ಎನ್ನುತ್ತಲೇ ಹಗಲಿರುಳೆನ್ನದೆ ಭಾರತಕ್ಕಾಗಿ ದುಡಿಯುತ್ತಿದ್ದ ನರೇಂದ್ರ ಮೋದಿಯವರು ಶುದ್ಧ ಹಸ್ತರೆನ್ನುವುದು ನೂರಿಪ್ಪತ್ತೈದು ಕೋಟಿ ಭಾರತೀಯರಿಗೂ ಅರಿವಾಗಿದೆ.
ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕೂ ಮೊದಲಿನ ಹತ್ತು ವರ್ಷಗಳ ಕರಾಳತೆ ನಮಗೀಗಲೂ ನೆನಪಿದೆ. ಪತ್ರಿಕೆಗಳಲ್ಲಿ ಹಗರಣದ ಸುದ್ದಿಗಳಿಲ್ಲದ ದಿನವೇ ಇರುತ್ತಿರಲಿಲ್ಲ. ಭಯೋತ್ಪಾದನಾ ಕೃತ್ಯಗಳು,ಬಾಂಬ್ ಸ್ಫೋಟಗಳು ಮಿತಿ ಮೀರಿ ಹೋಗಿತ್ತು. ನಮ್ಮ ಬಳಿಯೂ ಪರಮಾಣು ಬಾಂಬ್ ಗಳಿವೆ ಎಂದು ಪಕ್ಕದ ಪಾಕೀಸ್ತಾನ ಆಗಾಗ ಬೆದರಿಸುತ್ತಿತ್ತು. ಸಾಲ ಪಡೆಯಲೆಂದೇ ಪ್ರಧಾನಿಗಳು ವಿದೇಶಕ್ಕೆ ಹೋಗುತ್ತಾರೆ ಎನ್ನುವ ಭಾವನೆ ದೇಶದ ಜನರಲ್ಲಿ ಮನೆ ಮಾಡಿತ್ತು. ದಿನೇ ದಿನೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಕಡಿಮೆಯಾಗುತ್ತಾ ಸಾಗುತ್ತಿತ್ತು. ಬೆಲೆ ಏರಿಕೆ ದೇಶದ ಜನರನ್ನು ಹೈರಾಣಾಗಿಸಿತ್ತು. ಆದರೆ ಭರತ ಭೂಮಿಯ ಅದೃಷ್ಟವೋ ಎನ್ನುವಂತೆ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾದರು. ದೇಶ ಮತ್ತೆ ತಲೆಯೆತ್ತಿ ನಿಲ್ಲತೊಡಗಿತು. ಬಹುತೇಕ ವಿಶ್ವದ ಎಲ್ಲಾ ರಾಷ್ಟ್ರಗಳೂ ಭಾರತವನ್ನು ಹಿಂದೆಂದಿಗಿಂತಲೂ ಹೆಚ್ಚು ಗೌರವಿಸತೊಡಗಿದವು(ಇದಕ್ಕೆ ಸಾಕಷ್ಟು ಉದಾಹರಣೆಯನ್ನೂ ನೀಡಬಲ್ಲೆ). ವಿಶ್ವ ಸಂಸ್ಥೆ ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ಭಾರತವು ಒಂದು ಶಕ್ತಿಶಾಲಿ ರಾಷ್ಟ್ರವಾಗಿ ಗುರುತಿಸಿಕೊಳ್ಳತೊಡಗಿತು. ಅಕ್ಕ ಪಕ್ಕದ ಶತ್ರು ರಾಷ್ಟ್ರಗಳಿಗೆ ಭಾರತ ಬೆದರುವುದನ್ನು ನಿಲ್ಲಿಸಿತು. ಭಯೋತ್ಪಾದಕರನ್ನು ನುಸುಳಿಸುತ್ತಿದ್ದ ದೇಶದ ಗಡಿರೇಖೆಯೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಭಾರತವು ತಾನೇನೆನ್ನುವುದನ್ನು ತೋರಿಸಿತು. ಸೈನಿಕರಿಗೆ ಹಿಂದೆಂದಿಗಿಂತಲೂ ಹೆಚ್ಚು ಸ್ವಾತಂತ್ರ್ಯ ಕೊಟ್ಟು ಕಾಶ್ಮೀರದಲ್ಲಿನ ಭಯೋತ್ಪಾದಕರನ್ನು ಮಟ್ಟ ಹಾಕತೊಡಗಿತು. ಸರ್ಕಾರ ತಾತ್ಕಾಲಿಕ ಭಾಗ್ಯ ಯೋಜನೆಗಳಿಗಿಂತಲೂ ದೂರಗಾಮಿ ಪರಿಣಾಮ ಬೀರುವ ಯೋಜನೆಗಳಿಗೆ ಆದ್ಯತೆ ನೀಡಿ ಸ್ವಚ್ಛ ಭಾರತ ಅಭಿಯಾನದಂತಹಾ ಕನಸುಗಳನ್ನು ನೀರೆರೆದು ಪೋಷಿಸಿ ನಿರೀಕ್ಷೆಗೂ ಮೀರಿದ ಬದಲಾವಣೆ ತಂದಿತು. ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ ಹಾಕಿಕೊಂಡು ನಿಗದಿತ ಸಮಯಕ್ಕೂ ಮೊದಲೇ ಆ ಗುರಿಯನ್ನು ಸಾಧಿಸಿತು. ಎಲ್ಲ ಬಗೆಯ ಸಬ್ಸಿಡಿ ಹಣವನ್ನೂ ಫಲಾನುಭವಿಗಳ ಖಾತೆಗೇ ವರ್ಗಾಯಿಸುವ ವ್ಯವಸ್ಥೆಯ ಕೆಳಹಂತದ ಮೂಲಕ ಭ್ರಷ್ಟಾಚಾರವನ್ನು ಗಣನೀಯವಾಗಿ ಕಡಿತಗೊಳಿಸಿತು.
ಆದರೆ ನಮ್ಮ ದೇಶದಲ್ಲಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯುವ ಹೊತ್ತಿನಲ್ಲೇ ಈ ರಫೇಲ್ ಹಗರಣದ ಆರೋಪವನ್ನು ಮುನ್ನೆಲೆಗೆ ತರಲಾಯಿತು. ಅಷ್ಟೇ ಅಲ್ಲದೆ ದೇಶದ ಮೂಲೆ ಮೂಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ‘ಚೌಕೀದಾರ್ ಚೋರ್ ಹೈ’ ಎನ್ನುವ ಘೋಷಣೆ ಮೊಳಗಿಸಲಾಯಿತು. ಮೋದಿ ಕೂಡಾ ಹಿಂದಿನ ಬಹುತೇಕ ಪ್ರಧಾನಿಗಳಂತೆಯೇ ಭ್ರಷ್ಟ ಪ್ರಧಾನಿಯೇ ಹೊರತೂ ಶುದ್ಧ ಹಸ್ತರಲ್ಲ ಎಂದು ಜನರ ಮನಸ್ಸಿನಲ್ಲಿ ತುಂಬಿ ಮತ್ತೆ ಅಧಿಕಾರ ಪಡೆಯುವುದೇ ಬಹುಶಃ ಅವರ ಮುಖ್ಯ ಉದ್ದೇಶವಾಗಿತ್ತು.
ಆದರೆ ಇದಕ್ಕಾಗಿ ಭಾರತ ತೆತ್ತ ಬೆಲೆ?
ಹೌದು. ಈ ಒಂದು ಆಧಾರ ರಹಿತ ಆರೋಪ ಮಾಡುವ ಮೂಲಕ ಐದು ರಾಜ್ಯಗಳ ಚುನಾವಣೆಗಳಲ್ಲಿ ಮೂರರಲ್ಲಿ ಆ ಪಕ್ಷ ಮುನ್ನಡೆ ಸಾಧಿಸಿ ಅಧಿಕಾರ ಹಿಡಿಯಿತು. ಆದರೆ ಚುನಾವಣೆಯಲ್ಲಿ ಗೆದ್ದವರು ಪದಗ್ರಹಣ ಮಾಡುವ ಮುನ್ನವೇ ಅವರು ಮಾಡಿದ ಈ ಆರೋಪದಲ್ಲಿ ಹುರುಳಿಲ್ಲ ಎನ್ನುವ ತೀರ್ಪು ಬಂದಿದೆ. ಇದೇ ತೀರ್ಪು ಕೇವಲ ಹತ್ತು ಹದಿನೈದು ದಿನ ಮೊದಲೇ ಬಂದಿದ್ದರೂ ಐದು ರಾಜ್ಯಗಳ ಭವಿಷ್ಯವೇ ಬೇರೆ ಇರುತ್ತಿತ್ತು. ಆದರೀಗ ಆ ರಾಜ್ಯಗಳು ಮತ್ತೆ ಹಿಂದಿನ ಕರಾಳ ದಿನಗಳಿಗೆ ಜಾರಬಹುದಾದ ಸಾಧ್ಯತೆಯಿದೆ. ಇಂತಹದ್ದೊಂದು ಸುಳ್ಳು ಆರೋಪವನ್ನು ಮಾಡುವುದರ ಹಿಂದಿನ ಉದ್ದೇಶವೇ ಅಧಿಕಾರ ಪಡೆಯುವುದಾಗಿತ್ತು ಎನ್ನುವುದನ್ನು ಇಲ್ಲಿ ಮತ್ತೊಮ್ಮೆ ಪ್ರಸ್ತಾಪಿಸುವ ಅಗತ್ಯವಿಲ್ಲ.
ನೆರೆ ಹೊರೆ ರಾಷ್ಟ್ರಗಳು ಅತ್ಯಾಧುನಿಕ ಗುಣಮಟ್ಟದ ಯುದ್ಧ ವಿಮಾನ ಹೊಂದಿದ್ದಾಗ, ನಮ್ಮ ದೇಶಕ್ಕೂ ಅಂತಹಾ ಯುದ್ಧ ವಿಮಾನದ ಅಗತ್ಯವಿರುತ್ತದೆ. ಅದಕ್ಕೆ ತಕ್ಕಂತೆ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಬರಲಾಗಿರುತ್ತದೆ. ಆದರೆ 2006 ರಲ್ಲಿ ಆರಂಭವಾದ ರಫೇಲ್ ಡೀಲ್ ಬಗ್ಗೆ 2014ರವರೆಗೂ ಹಿಂದಿನ ಸರಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ದೇಶದ ರಕ್ಷಣಾ ವಿಷಯದಲ್ಲೂ ಅದು ಇಷ್ಟೊಂದು ನಿರ್ಲಕ್ಷ್ಯ ತೋರಿಸುತ್ತಿತ್ತೆನ್ನುವುದಕ್ಕೆ ಇದಕ್ಕಿಂತಲೂ ದೊಡ್ಡ ಸಾಕ್ಷಿಯೇನೂ ಬೇಕಾಗಿಲ್ಲ.
ರಾಜಕೀಯದ ಉದ್ದೇಶದಿಂದ ಮಾಡಲಾದ ಸುಳ್ಳುಗಳಲ್ಲಿ ಸ್ವಾತಂತ್ರ್ಯಾನಂತರದ ಅತಿ ದೊಡ್ಡ ಸುಳ್ಳು ಆರೋಪ ಬಹುಶಃ ಇದೇ ಆಗಿರಬಹುದು. ಹಾಗೆಂದು ಎಲ್ಲಾ ಸುಸೂತ್ರವಾಗಿ ಮುಗಿದು ಹೋಯಿತೆಂದು ನಿರಾಳವಾಗಿ ಕುಳಿತುಕೊಳ್ಳುವಂತೇನೂ ಇಲ್ಲ. ಏಕೆಂದರೆ ಇನ್ನೇನು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದೆ. ಆ ಸಮಯದಲ್ಲಿ ಮತ್ತಷ್ಟು ಇಂತಹಾ ಸುಳ್ಳು ಆರೋಪಗಳೊಂದಿಗೆ ವಿರೋಧಿಗಳು ಮತದಾರರ ಬಳಿ ಹೋಗಬಹುದು.
ಆದರೂ ಇದೀಗ ಆದದ್ದೆಲ್ಲಾ ಒಳ್ಳೆಯದೇ ಆಗಿದೆ, ಮುಂದೆ ಆಗುವುದೂ ಒಳ್ಳೆಯದೇ ಆಗುತ್ತದೆ.
ಏಕೆಂದರೆ ಲೋಕಸಭಾ ಚುನಾವಣೆಯ ಸಮೀಪದಲ್ಲೇ ಇಂಥದ್ದೊಂದು ತೀರ್ಪು ಮೋದಿಯವರ ನಿಷ್ಕಳಂಕ ಆಡಳಿತವನ್ನು ಎತ್ತಿ ಹಿಡಿದಂತಾಗಿದೆ. ಇನ್ನಷ್ಟು ಸುಳ್ಳು ಆರೋಪಗಳನ್ನು ಹೊರಿಸಿ ದೇಶವನ್ನು ಮತ್ತೆ ತಮ್ಮ ಕಪಿ ಮುಷ್ಟಿಗೆ ತೆಗೆದುಕೊಳ್ಳಬೇಕೆಂದು ಹೊಂಚು ಹಾಕಿದ್ದ ವಿರೋಧಿಗಳನ್ನು ವಿಚಲಿತಗೊಳಿಸಿದೆ. ಅವರ ಆರೋಪಗಳನ್ನು ಪರಾಮರ್ಶಿಸದೆ ಜನಸಾಮಾನ್ಯರು ನಂಬುವ ಸ್ಥಿತಿ ಹೊರಟುಹೋಗಿದೆ. ಇದರಿಂದಾಗಿ ಅತ್ಯಂತ ಕ್ರಿಯಾಶೀಲ,ಕಳಂಕರಹಿತ,ದೇಶಭಕ್ತ ನಾಯಕನೊಬ್ಬ ಮತ್ತೊಮ್ಮೆ ಈ ದೇಶದ ನಾಯಕನಾಗಿ ಆಯ್ಕೆಯಾಗುವುದಕ್ಕೆ ಅನುಕೂಲವಾಗಲಿದೆ. ಆ ಮೂಲಕ ಮತ್ತೆ ಈ ದೇಶ ಉಜ್ವಲ ಭವಿಷ್ಯದತ್ತ ಮುಂದಡಿಯಿಡುವಂತಾಗಿದೆ.
ಜೈ ಹಿಂದ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.