ಮಾಧ್ಯಮಗಳಲ್ಲಿ ಪ್ರಕಟವಾಗುವ ಎಲ್ಲಾ ಸುದ್ದಿಗಳೂ ವಿಶ್ವಾಸಾರ್ಹವೇನಲ್ಲ. ಕೆಲವೊಂದು ಸುದ್ದಿಗಳನಂತೂ ಎರಡು ಮೂರು ಕೋನಗಳಿಂದ ವಿಶ್ಲೇಷಿಸಿದಾಗ ಸಂಪೂರ್ಣ ಬೇರೆಯದ್ದೇ ಅರ್ಥ ಕೊಡುತ್ತವೆ.
“ಎಲ್ಪಿಜಿ: ನೇರ ಸಬ್ಸಿಡಿ ಪದ್ಧತಿ ಮತ್ತೆ ಜಾರಿ?”
ಮೊನ್ನೆ ಕನ್ನಡದ ಪ್ರಸಿದ್ಧ ದಿನಪತ್ರಿಕೆಯೊಂದರಲ್ಲಿ ಹೀಗೊಂದು ಸುದ್ದಿ ಪ್ರಕಟವಾಗಿತ್ತು. ಹಿಂದೆ ಗೃಹ ಬಳಕೆ ಅಡುಗೆ ಅನಿಲಕ್ಕೆ ನೇರವಾಗಿ ಸಬ್ಸಿಡಿ ನೀಡಲಾಗುತ್ತಿತ್ತು. ಅಂದರೆ ಅಡುಗೆ ಸಿಲಿಂಡರ್ ಗ್ರಾಹಕನ ಮನೆಬಾಗಿಲಿಗೆ ತಲುಪುವ ಮೊದಲೇ ಅವನಿಗೆ ಸರ್ಕಾರದಿಂದ ಸಿಗುವ ಸಬ್ಸಿಡಿಯನ್ನು ಮುರಿದುಕೊಂಡೇ ಉಳಿದ ಬಾಕಿಯನ್ನು ಪಡೆಯಲಾಗುತ್ತಿತ್ತು. ಇದರಿಂದ ಸಬ್ಸಿಡಿ ಹಣ ಯಾರ ಖಾತೆಯನ್ನು ಬೇಕಾದರೂ ಸೇರುವ ಸಾಧ್ಯತೆಯಿತ್ತು. ಯಾರ ಹೆಸರಿನಲ್ಲಿ ಇನ್ಯಾರೋ ಸಬ್ಸಿಡಿ ಪಡೆಯುತ್ತಿದ್ದ ಸಾಕಷ್ಟು ಉದಾಹರಣೆಗಳಿದ್ದವು. ಸಬ್ಸಿಡಿ ಹಣದಲ್ಲಿ ಅಡುಗೆ ಅನಿಲ ಪಡೆದು ಅದನ್ನು ಇನ್ನೊಬ್ಬರಿಗೆ ಮಾರುವಂತಹಾ ಚಟುವಟಿಕೆಗಳೂ ನಿರಂತರವಾಗಿ ನಡೆಯುತ್ತಿದ್ದವು. ಆದರೆ ಬ್ಯಾಂಕ್ ಖಾತೆಯೊಂದಿಗೆ ಅಡುಗೆ ಅನಿಲ ಸಂಪರ್ಕವನ್ನು ಜೋಡಿಸಿದ ನಂತರ ಪೂರ್ತಿ ಹಣವನ್ನು ಗ್ರಾಹಕನಿಂದ ಪಡೆದು ಸಬ್ಸಿಡಿ ಹಣವನ್ನು ಅವರ ನೋಂದಾಯಿತ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ. ಇದರಿಂದ ಯಾರ ಹೆಸರಲ್ಲೋ ಇನ್ಯಾರೋ ಸಬ್ಸಿಡಿ ಹಣ ಕೊಳ್ಳೆ ಹೊಡೆಯುವುದು ತಪ್ಪಿತು. ಲಕ್ಷಾಂತರ ಅಕ್ರಮ ಸಂಪರ್ಕಗಳು ಪತ್ತೆಯಾದವು. ಇದರಿಂದ ಸರ್ಕಾರಕ್ಕೂ ಸಾಕಷ್ಟು ಉಳಿತಾಯವಾಗತೊಡಗಿತು. ಉಳಿತಾಯದಿಂದ ಇದುವರೆಗೂ ಎಲ್.ಪಿ.ಜಿ. ಸಂಪರ್ಕವಿಲ್ಲದ ಬಡ ಕುಟುಂಬಗಳಿಗೆ ಉಚಿತವಾಗಿ ಎಲ್.ಪಿ.ಜಿ. ಸಂಪರ್ಕವನ್ನು ಒದಗಿಸಲಾಯಿತು.
ಆದರೆ ಮೇಲಿನ ಪತ್ರಿಕಾ ವರದಿಯನ್ನು ಓದಿದವರಿಗೆ ಆ ಕ್ಷಣಕ್ಕೆ ಈ ಹೊಸ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದೆನ್ನಿಸದಿರದು. ಅದಕ್ಕಾಗಿಯೇ ಅಂತಹಾ ಒಂದು ವ್ಯವಸ್ಥೆಯನ್ನು ಹಿಂಪಡೆದು ಮತ್ತೆ ಹಳೆಯ ಪದ್ಧತಿಯನ್ನೇ ಜಾರಿಗೆ ತರುವ ಯೋಚನೆ ಮಾಡಲಾಗಿರಬಹುದು ಎಂದೂ ಎನ್ನಿಸದಿರದು. ಅದರಲ್ಲೂ ಇಂತಹಾ ಸುದ್ದಿಯೊಂದು ಪ್ರಕಟವಾಗಿದ್ದು ಇದುವರೆಗೂ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯೆಂದೇ ಬಿಂಬಿಸಿಕೊಂಡು ಬಂದಿರುವ ಪತ್ರಿಕೆಯಲ್ಲಿ! ಆದ್ದರಿಂದ ಅಂತಹಾ ಮಹತ್ವದ ಯೋಜನೆಯೊಂದು ವಿಫಲವಾಗಿದೆ ಎಂದು ಓದುಗರು ಭಾವಿಸಲು ಎಲ್ಲಾ ಅವಕಾಶಗಳೂ ಇವೆ.
ಆದರೆ ಆ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿದರೆ ಇದೊಂದು ಬೇಕೆಂದೇ ಸಿದ್ಧಪಡಿಸಲಾದ ಸುದ್ದಿ ಎನ್ನುವುದು ತಿಳಿದುಬರುತ್ತದೆ. ಸುದ್ದಿಯ ತಲೆಬರಹದ ತುದಿಯಲ್ಲಿ ಪ್ರಶ್ನಾರ್ಥಕ ಚಿನ್ಹೆಯನ್ನು ಬಳಸಿರುವುದನ್ನು ಕಂಡಾಗ, ಸರ್ಕಾರ ಅಂಥದ್ದೊಂದು ನಿರ್ಧಾರ ಮಾಡಿದ ಬಗ್ಗೆ ಪತ್ರಿಕೆಗೆ ಕೂಡಾ ಸ್ಪಷ್ಟತೆಯಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಮುಂದೊಂದು ದಿನ ಆ ಸುದ್ದಿಯಿಂದ ತೊಂದರೆಗೆ ಸಿಲುಕಿಕೊಳ್ಳಬಾರದೆನ್ನುವ ಉದ್ದೇಶದಿಂದಲೇ ಅದು ಕೊನೆಯಲ್ಲಿ ಪ್ರಶ್ನಾರ್ಥಕ ಚಿನ್ಹೆಯನ್ನು ಬಳಸಿದೆ. ಅಷ್ಟೇ ಅಲ್ಲದೆ ಸುದ್ದಿಯೊಳಗೆ ಹಲವಾರು ಬಾರಿ “ಮೂಲಗಳು ಹೇಳಿವೆ” ಎನ್ನುವ ವಾಕ್ಯವನ್ನು ಬಳಸಲಾಗಿದೆ. ಆ ಮೂಲಗಳ ಅಧಿಕೃತತೆಯ ಬಗ್ಗೆ ಪ್ರಶ್ನಿಸಿ ಉತ್ತರ ಪಡೆಯುವುದು ಅಷ್ಟೊಂದು ಸುಲಭದ ಮಾತಲ್ಲ. ಆದ್ದರಿಂದಲೇ ಅದೇ ಪತ್ರಿಕಾ ಸ್ವಾತಂತ್ರ್ಯವನ್ನು ಬಳಸಿಕೊಂಡು ಇಂತಹದ್ದೊಂದು ಊಹಾಪೋಹವನ್ನು ಸೃಷ್ಟಿಸಲಾಗಿದೆಯೇ ಹೊರತೂ ನಿಜವಾಗಿಯೂ ಅಂತಹದ್ದೊಂದು ನಿರ್ಧಾರ ಸರ್ಕಾರ ಕೈಗೊಳ್ಳುವ ಸಾಧ್ಯತೆ ಖಂಡಿತವಾಗಿಯೂ ಇಲ್ಲ.
ಹಾಗಾದರೆ ಇಂಥದ್ದೊಂದು ಊಹಾಪೋಹದ ಸುದ್ದಿಯನ್ನು ಏಕೆ ಬರೆದಿರಬಹುದು ಎನ್ನುವುದನ್ನು ಪರಿಶೀಲಿಸಿದರೆ ಆ ಸುದ್ದಿಯ ಹಿಂದಿನ ನಿಜವಾದ ಮುಖ ನಮ್ಮ ಅರಿವಿಗೆ ಬರುತ್ತದೆ. ಅಂತಹಾ ಸುದ್ದಿಯನ್ನು ಬರೆದ ಪತ್ರಿಕೆಯ ಸಿದ್ಧಾಂತವೂ ಕೂಡಾ ಅಂತಹಾ ಊಹಾಪೋಹದ ಸುದ್ದಿಯ ಪ್ರಕಟಿಸುವುದರ ಹಿಂದಿರಬಹುದಾದ ಸಾಧ್ಯತೆಯ ಬಗ್ಗೆ ಬೆಳಕು ಚೆಲ್ಲುತ್ತದೆ. ಆ ಪತ್ರಿಕೆಯ ಎರಡು ಮೂರು ದಿನಗಳ ಎಲ್ಲಾ ಸುದ್ದಿಗಳನ್ನೂ ಗಮನಿಸಿದರೆ, ಹಿಂದೂ ಭಾವನೆಗಳ ವಿರುದ್ಧ ಹಾಗೂ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಹೆಚ್ಚು ಒತ್ತು ಕೊಟ್ಟು ಬರೆಯಲ್ಪಡುವ ಸುದ್ದಿಗಳು,ಅಂಕಣಗಳು ಹಾಗೂ ಲೇಖನಗಳನ್ನು ಯಾರು ಬೇಕಾದರೂ ಮೇಲ್ನೋಟಕ್ಕೇ ಗಮನಿಸಬಹುದು. ಬಹುಶಃ ನರೇಂದ್ರ ಮೋದಿಯವರನ್ನು ಒಬ್ಬ ಪ್ರಬಲ ಹಿಂದೂ ನಾಯಕ ಮತ್ತು ನರೇಂದ್ರ ಮೋದಿಯವರನ್ನು ವಿರೋಧಿಸುವುದೆಂದರೆ ಅದು ಹಿಂದೂಗಳನ್ನು ವಿರೋಧಿಸಿದಂತೆಯೇ ಎಂದು ಆ ಪತ್ರಿಕೆ ಭಾವಿಸಿರುವುದರಿಂದಲೇ ಅದು ಅವರ ಎಲ್ಲಾ ಯೋಜನೆಗಳ ಬಗ್ಗೆಯೂ ಋಣಾತ್ಮಕವಾಗಿ ಬಿಂಬಿಸಲ್ಪಡುವಂತೆ ಸುದ್ದಿ ಮಾಡುತ್ತಿರಬಹುದು. ಹಾಗೆಯೇ ಈ ಊಹಾ ಪೋಹದ ಸುದ್ದಿಯನ್ನು ತೇಲಿಬಿಡಲು ಅದೇ ಕಾರಣವಿರಬಹುದು.
ಹಾಗೆಯೇ ಇನ್ನೊಂದು ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಮೊದಲೇ ತಿಳಿಸಿದಂತೆ ಆ ಪತ್ರಿಕೆಯ ಕೇವಲ ಮೂರು ದಿನಗಳ ಎಲ್ಲಾ ಸುದ್ದಿಗಳನ್ನೂ ಗಮನಿಸಿದರೆ, ಮೇಲ್ನೋಟಕ್ಕೇ ಅದು ಹಿಂದೂ ಭಾವನೆಗಳ ವಿರುದ್ಧ ಹಾಗೂ ಒಂದು ಕೋಮಿನ ಪರವಾಗಿ ಹೆಚ್ಚು ಒತ್ತು ಕೊಟ್ಟು ಬರೆಯುತ್ತಿರುವುದು ಎಂಥವರಿಗೂ ಗಮನಕ್ಕೆ ಬರುತ್ತದೆ. ಎಲ್.ಪಿ.ಜಿ ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಸಂದಾಯವಾಗುವಂತೆ ಮಾಡಿದ ಕ್ರಮದಿಂದ ದೇಶದಲ್ಲಿ ಅಕ್ರಮ ಗ್ಯಾಸ್ ಫಿಲ್ಲಿಂಗ್ ದಂಧೆಯಲ್ಲಿ ತೊಡಗಿದ್ದ ಜನರು ಅತೀ ಹೆಚ್ಚು ನಷ್ಟವನ್ನನುಭವಿಸುವಂತಾಯಿತು. ಹಾಗೆ ನಷ್ಟ ಅನುಭವಿಸಿದ ಅಕ್ರಮ ಗ್ಯಾಸ್ ಫಿಲ್ಲಿಂಗ್ ದಂಧೆಯಲ್ಲಿ ತೊಡಗಿದ್ದವರಲ್ಲಿ ಹಿಂದೂಗಳಿಗಿಂತಲೂ ಅನ್ಯ ಕೋಮಿನವರೇ ಹೆಚ್ಚಿರುವುದು ಕೂಡಾ ಗೊತ್ತಿಲ್ಲದ ಸುದ್ದಿಯೇನಲ್ಲ. ತಾವು ಬೆಂಬಲಿಸುತ್ತಿರುವ ಒಂದು ಕೋಮಿನ ಜನರಿಗೇ ಹೆಚ್ಚು ನಷ್ಟವಾಗಿದ್ದನ್ನು ಸಹಿಸದ ಆ ಪತ್ರಿಕೆ, ಅಂತಹಾ ನಷ್ಟಕ್ಕೆ ಕಾರಣವಾದ ಆ ಯೋಜನೆಯೇ ವಿಫಲವಾಯಿತು ಎಂದು ಬಿಂಬಿಸಬೇಕಾದ ಅನಿವಾರ್ಯತೆಗೆ ಸಿಲುಕಿರಬಹುದು. ಇಂಥದ್ದೊಂದು ಊಹಾ ಪೋಹದ ಸುದ್ದಿಯನ್ನು ಹರಿಯಬಿಡಲು ಅದೂ ಒಂದು ಕಾರಣವಿರಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.