ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ದೇಶದ ಆರ್ಥಿಕತೆ ನಿಂತಿರುವುದೇ ಇಲ್ಲಿನ ದೇವಾಲಯಗಳು ಹಾಗೂ ಐತಿಹಾಸಿಕ ಕಟ್ಟಡಗಳ ಕೇಂದ್ರಿತ ಪ್ರವಾಸೋದ್ಯಮದ ಮೇಲೆ ಎಂದರೆ ಬಹುಶಃ ತಪ್ಪಾಗಲಾರದು. ದೇವಾಲಯಗಳು ಹಾಗೂ ಐತಿಹಾಸಿಕ ಕಟ್ಟಡಗಳಿಲ್ಲದ ನಮ್ಮ ದೇಶದ ಪ್ರವಾಸೋದ್ಯಮವನ್ನು ಕಲ್ಪಿಸಿಕೊಳ್ಳಲು ಕೂಡಾ ಸಾಧ್ಯವಿಲ್ಲ. ಹಾಗೆ ದೇವಾಲಯ ಪ್ರವಾಸೋದ್ಯಮಕ್ಕೆ ಹೆಸರಾದ ಭಾರತದ ಪ್ರವಾಸೋದ್ಯಮದ ದಿಕ್ಕನ್ನೇ ಬದಲಿಸಬಲ್ಲ ಸಕಾರಾತ್ಮಕ ಬೆಳವಣಿಗೆಯೊಂದು ಇತ್ತೀಚಿನ ವರ್ಷಗಳಲ್ಲಿ ಸಾಧ್ಯವಾಗತೊಡಗಿದೆ. ಅದುವೇ ಪುತ್ಥಳಿ ಪ್ರವಾಸೋದ್ಯಮ. ದೇಶದ ಇತಿಹಾಸದಲ್ಲಿ ಹೆಸರು ಮಾಡಿದ ಪ್ರಸಿದ್ಧ ವ್ಯಕ್ತಿಗಳ ಪುತ್ಥಳಿಗಳನ್ನು, ಹಾಗೆಯೇ ಈ ದೇಶದ ಜನ ಜೀವನಕ್ಕೆ ತನ್ನದೇ ಆದ ಕೊಡುಗೆ ನೀಡಿದ ಐತಿಹಾಸಿಕ, ಪೌರಾಣಿಕ, ಪ್ರಾಕೃತಿಕ ಪಾತ್ರಗಳ ಪುತ್ಥಳಿಗಳನ್ನು ಸ್ಥಾಪಿಸಿ ಈ ದೇಶದ ಭವ್ಯತೆಯನ್ನು ದೇಶ ವಿದೇಶದ ಯಾತ್ರಿಕರಿಗೆ ಪರಿಚಯಿಸುವುದಷ್ಟೇ ಅಲ್ಲದೆ ಆ ಮೂಲಕ ಹೊಸ ಹೊಸ ಪ್ರವಾಸೀ ತಾಣಗಳನ್ನು ಸೃಷ್ಟಿಸುವ ಮೂಲಕ ಪುತ್ಥಳಿ ಪ್ರವಾಸೋಧ್ಯಮ ಎನ್ನುವ ಹೊಸ ಸಾಧ್ಯತೆಯೊಂದು ಭಾರತೀಯರ ಮುಂದೆ ತೆರೆದುಕೊಂಡಿದೆ.
ದೇಶದ ಇತಿಹಾಸ ಪ್ರಸಿದ್ಧ ವ್ಯಕ್ತಿಗಳ ಪುತ್ಥಳಿಯನ್ನು ನಿರ್ಮಿಸಿ,ಅವರ ಸಾಧನೆ ಹಾಗೂ ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಪ್ರತಿ ಊರಿನಲ್ಲೂ ಸಾಕಷ್ಟು ಪುತ್ಥಳಿಗಳು ಅನಾವರಣಗೊಂಡಿರುವುದು ಹೊಸತೇನಲ್ಲ. ಆದರೆ ಪುತ್ಥಳಿಗಳನ್ನು ಅತ್ಯಂತ ದೊಡ್ಡ ಗಾತ್ರದಲ್ಲಿ/ಅತ್ಯಂತ ಎತ್ತರವಾಗಿ/ಅತ್ಯಂತ ವಿಶಿಷ್ಟವಾಗಿ ನಿರ್ಮಿಸಿ ಅವರ ಸಾಧನೆ ಹಾಗೂ ಆದರ್ಶಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ಮತ್ತು ಆ ಪುತ್ಥಳಿಯ ಆಸುಪಾಸಿನ ಜಾಗವನ್ನು ಅತ್ಯಂತ ಆಕರ್ಷಕವಾಗಿ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಸೆಳೆಯುವ ಮೂಲಕ ಭಾರತೀಯ ಪ್ರವಾಸೋದ್ಯಮವನ್ನು ವಿಸ್ತರಿಸಬಹುದೆನ್ನುವ ಆಲೋಚನೆಯನ್ನು ಅತ್ಯಂತ ಸಮರ್ಥವಾಗಿ ಕಾರ್ಯರೂಪಕ್ಕೆ ತಂದಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಾಧನೆಗಳಲ್ಲೊಂದು ಎಂದೇ ಹೇಳಬಹುದು. ಅವರ ಚಿಂತನೆಗಳಲ್ಲೊಂದಾದ ಜಗತ್ತಿನಲ್ಲೇ ಅತ್ಯಂತ ಎತ್ತರದ ಪ್ರತಿಮೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ‘ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಏಕತಾ ಪ್ರತಿಮೆ’ ಇದೀಗ ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಮಾಧ್ಯಮಗಳ ವರದಿಗಳ ಪ್ರಕಾರ ಲೋಕಾರ್ಪಣೆಗೊಂಡ ಕೇವಲ ಹತ್ತು ದಿನಗಳಲ್ಲಿ ಏಕತಾ ಪ್ರತಿಮೆ 1.28 ಲಕ್ಷ ಪ್ರವಾಸಿಗರನ್ನು ತನ್ನತ್ತ ಸೆಳೆದಿದೆ. ಅಷ್ಟೇ ಅಲ್ಲದೆ ಹಲವು ಕೋಟಿ ಆದಾಯವನ್ನು ಈಗಾಗಲೇ ಗಳಿಸಿಕೊಟ್ಟಿದೆ. ಅವರ ಆ ಯೋಜನೆ ಪಕ್ಷಾತೀತವಾಗಿ ಇತರ ಎಲ್ಲಾ ರಾಜ್ಯ ಸರ್ಕಾರಗಳ ಮೆಚ್ಚುಗೆ ಹಾಗೂ ಅನುಕರಣೆಗೂ ಪಾತ್ರವಾಗಿದೆ.
ಕೇರಳ ರಾಜ್ಯ ಕೂಡಾ ಇತ್ತೀಚೆಗಷ್ಟೇ ಸುಮಾರು ನೂರು ಕೋಟಿ ವೆಚ್ಚದಲ್ಲಿ ಜಟಾಯು ನೇಚರ್ ಪಾರ್ಕ್ ಎನ್ನುವ ಹೆಸರಿನಲ್ಲಿ ವಿಶ್ವದಲ್ಲೇ ಅತ್ಯಂತ ದೊಡ್ಡ ಪಕ್ಷಿಯ ಶಿಲ್ಪವನ್ನು ಅನಾವರಣಗೊಳಿಸುವ ಮೂಲಕ ಪ್ರವಾಸೋದ್ಯಮವನ್ನು ಮತ್ತಷ್ಟು ವಿಸ್ತರಿಸಿಕೊಂಡಿದೆ. ಅಷ್ಟೇ ಅಲ್ಲದೆ ಈ ದೇಶದ ಜನ ಜೀವನದಲ್ಲಿ ಹಾಸುಹೊಕ್ಕಾಗಿರುವ ರಾಮಾಯಣದ ಕಥೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಕೆಲಸವನ್ನೂ ಅದು ಮಾಡುತ್ತಿದೆ.
ಅದೇ ಮಾದರಿಯಲ್ಲಿ ಇದೀಗ ಕರ್ನಾಟಕ ಸರ್ಕಾರ ಕೂಡಾ ಖಾಸಗಿ- ಸರ್ಕಾರಿ ಸಹಭಾಗಿತ್ವದಲ್ಲಿ ಕೆ ಆರ್ ಎಸ್ ಜಲಾಶಯದ ಬೃಂದಾವನ್ ಗಾರ್ಡನ್ ನಲ್ಲಿ ಅತಿ ಎತ್ತರವಾದ ಕಾವೇರಿ ಮಾತೆ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿದೆ. ಅಲ್ಲಿ ಅತೀ ಎತ್ತರದ ಕಾವೇರಿ ಪ್ರತಿಮೆಯ ಜೊತೆಗೆ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಕೇವಲ ಸಿದ್ಧತೆಯಷ್ಟೇ ಅಲ್ಲದೆ ಈಗಾಗಲೇ ಅಭಿವೃದ್ಧಿಗೆ ಬೇಕಾದ ಜಮೀನು ಗುರುತಿಸುವ ಕೆಲಸವನ್ನು ಕೂಡಾ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದ ಮೇಲೆ ಸರ್ಕಾರ ಆ ಯೋಜನೆಯ ಬಗ್ಗೆ ಸ್ಪಷ್ಟ ಯೋಜನೆಯೊಂದನ್ನು ಈಗಾಗಲೇ ತಯಾರಿಸಿಯಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಕರ್ನಾಟಕದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕಳೆದ ಬುಧವಾರ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಯೋಜನೆಯ ರೂಪುರೇಷೆಗಳ ಬಗ್ಗೆ ಸಮಗ್ರ ಚರ್ಚೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಯೋಜನಾ ವರದಿ ಹಾಗೂ ಒಪ್ಪಂದದ ಕುರಿತು ಇದೇ ತಿಂಗಳ 20 ರಂದು ಅಂತಿಮಗೊಳ್ಳಲಿದೆ ಎನ್ನುವ ಹೇಳಿಕೆಯನ್ನೂ ಸಚಿವರು ನೀಡಿದ್ದಾರೆ.
ಆದರೆ ಇದೀಗ ಈ ಯೋಜನೆಯ ವಿಚಾರವಾಗಿ ರಾಜ್ಯದ ಜನತೆಯ ಮುಂದೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಮಾಧ್ಯಮಗಳ ವರದಿಯ ಪ್ರಕಾರ ಮಾನ್ಯ ಜಲ ಸಂಪನ್ಮೂಲ ಸಚಿವರು ಹೇಳಿದಂತೆ ಅಲ್ಲಿ ನಿರ್ಮಿಸಲಾಗುವ ಕಾವೇರಿ ಪ್ರತಿಮೆಯ ಎತ್ತರ 125 ಅಡಿ. ಆದರೆ ಅದೇ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಲ ಸಂಪನ್ಮೂಲ ಸಚಿವರ ಜೊತೆಯಲ್ಲೇ ಪಾಲ್ಗೊಂಡಿದ್ದ ರಾಜ್ಯ ಪ್ರವಾಸೋದ್ಯಮ ಸಚಿವರು “ಅಲ್ಲಿ ಕನ್ನಡಿಗರ ಭಾವನಾತ್ಮಕತೆಯ ಪ್ರತೀಕವಾದ 250 ಅಡಿ ಎತ್ತರದ ಕಾವೇರಿ ಮಾತೆಯ ಪ್ರತಿಮೆ ನಿರ್ಮಾಣವಾಗಲಿದೆ” ಎಂದು ಹೇಳಿಕೆ ನೀಡಿದ ಬಗ್ಗೆ ಮಾಧ್ಯಮವೊಂದರಲ್ಲಿ ಪ್ರಕಟವಾಗಿದೆ. ಹಾಗಾದರೆ ನಿಜಕ್ಕೂ ಜಲ ಸಂಪನ್ಮೂಲ ಸಚಿವರು ಹಾಗೂ ಪ್ರವಾಸೋದ್ಯಮ ಸಚಿವರು ಜಂಟಿಯಾಗಿ ನಡೆಸಿದ ಆ ಉನ್ನತಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕಾವೇರಿ ಮಾತೆಯ ಎಷ್ಟು ಅಡಿಯ ಪ್ರತಿಮೆ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾವನೆಯನ್ನು ಸಿದ್ಧಗೊಳಿಸಲಾಗಿದೆ?
ಒಂದೇ ಸಭೆಯಲ್ಲಿ ಪಾಲ್ಗೊಂಡು, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನಿಸಲ್ಪಟ್ಟ ಯೋಜನೆಯೊಂದರ ಬಗ್ಗೆ ಆ ಇಬ್ಬರು ಸಚಿವರೇ ಪರಸ್ಪರ ಇಷ್ಟೊಂದು ಭಿನ್ನ ಮಾಹಿತಿಯನ್ನು ನೀಡುತ್ತಿದ್ದಾರೆ ಎಂದರೆ ಈಗ ಸಿದ್ಧಪಡಿಸಲಾದ ಆ ಯೋಜನೆ ನಿಜಕ್ಕೂ ಪಾರದರ್ಶಕವಾಗಿ ನಡೆಯುತ್ತದೆ ಎಂದು ರಾಜ್ಯದ ಜನತೆ ನಂಬಬಹುದೇ? ಅದಕ್ಕಿಂತಲೂ ದೊಡ್ಡ ಅನುಮಾನವೆಂದರೆ ಮಾನ್ಯ ಜಲ ಸಂಪನ್ಮೂಲ ಸಚಿವರ ಹೇಳಿಕೆಯ ಪ್ರಕಾರ ಆ ಯೋಜನೆಗೆ 1200 ಕೋಟಿ ಅಂದಾಜು ಮಾಡಲಾಗಿದೆ. ಆದರೆ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯನ್ನು ನೋಡುವುದಾದರೆ, ಜಲ ಸಂಪನ್ಮೂಲ ಸಚಿವರ ಜೊತೆಯಲ್ಲೇ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಮಾನ್ಯ ಪ್ರವಾಸೋದ್ಯಮ ಸಚಿವರ ಹೇಳಿಕೆಯ ಪ್ರಕಾರ ಆ ಯೋಜನೆಗೆ 1500 ರಿಂದ 2000 ಕೋಟಿ ವೆಚ್ಚ ಮಾಡಲಾಗುವುದಂತೆ!
ಸರ್ಕಾರದ ಒಬ್ಬ ಸಚಿವರ ಪ್ರಕಾರ ಆ ಯೋಜನೆಗೆ ಖರ್ಚಾಗುವ ಮೊತ್ತ 1200 ಕೋಟಿ. ಅದೇ ಸರ್ಕಾರದ ಇನ್ನೊಬ್ಬ ಸಚಿವರ ಹೇಳಿಕೆಯ ಪ್ರಕಾರ ಆ ಯೋಜನೆಗೆ ಖರ್ಚಾಗುವ ಮೊತ್ತ 2000 ಕೋಟಿ. ಹಾಗಾದರೆ ಈಗಾಗಲೇ ಒಪ್ಪಂದದ ಹಂತದಲ್ಲಿರುವ ಹಾಗೂ ಕಳೆದ ಬಜೆಟ್ ಬಜೆಟ್ ನಲ್ಲೆ ಐದು ಕೋಟಿ ರೂ. ತೆಗೆದಿರಿಸಲ್ಪಟ್ಟ ಯೋಜನೆಯೊಂದರ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳ ಸಭೆಯ ಬಳಿಕವೂ ಇಬ್ಬರು ಸಚಿವರು ನೀಡುತ್ತಿರುವ ಮಾಹಿತಿಗಳಲ್ಲೇ ಸುಮಾರು 800 ಕೋಟಿಗಳಷ್ಟು ವ್ಯತ್ಯಾಸ ಕಾಣಿಸುತ್ತಿದೆ ಎಂದರೆ ನಿಜಕ್ಕೂ ಆ ಯೋಜನೆ ಎಷ್ಟು ಸಾವಿರ ಕೋಟಿಗಳಲ್ಲಿ ಪೂರ್ಣಗೊಳಿಸಬೇಕೆನ್ನುವ ಸ್ಪಷ್ಟ ಕಲ್ಪನೆ ಸರ್ಕಾರಕ್ಕಿದೆಯೇ ಅಥವಾ ಅಂತಹಾ ಯೋಜನೆಯೊಂದರ ನೆಪದಲ್ಲಿ ಅನಗತ್ಯ ದುಂದು ವೆಚ್ಚ ನಡೆಸಿ ಹಗರಣ ನಡೆಸುವ ಸಾಧ್ಯತೆಯೂ ಇರಬಹುದೇ ಎನ್ನುವ ಅನುಮಾನ ಸಾರ್ವಜನಿಕರಲ್ಲಿ ದಟ್ಟವಾಗುತ್ತಿದೆ. ಏಕೆಂದರೆ ಯೋಜನೆಯ ಒಪ್ಪಂದದ ಹಂತದಲ್ಲೇ 800 ಕೋಟಿ ರೂ.ಗಳಷ್ಟು ವ್ಯತ್ಯಾಸ ಕಾಣಿಸುತ್ತಿರುವಾಗ ಯೋಜನೆ ಪೂರ್ಣಗೊಳ್ಳುವ ವೇಳೆ ಹಲವು ಸಾವಿರ ಕೋಟಿಗಳಷ್ಟು ವ್ಯತ್ಯಾಸವಾಗುವುದಿಲ್ಲ ಎಂದು ನಂಬುವುದು ಕಷ್ಟಸಾಧ್ಯವೇ ಸರಿ. ಹಾಗೊಂದು ವೇಳೆ ಮುಂದೊಮ್ಮೆ ಆ ಯೋಜನೆಯಲ್ಲಿ ಸಾವಿರಾರು ಕೋಟಿ ವ್ಯತ್ಯಾಸವಾದರೆ ಆಗ ಅದಕ್ಕೆ ಯಾರನ್ನು ಹೊಣೆ ಮಾಡಬಹುದು?
ಅದಕ್ಕಿಂತಲೂ ಹೆಚ್ಚಾಗಿ ಒಂದೇ ಸಭೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಸಚಿವರ ಹೇಳಿಕೆಗಳಲ್ಲಿ 300 ರಿಂದ 800 ಕೋಟಿ ರೂ.ಗಳಷ್ಟು ದೊಡ್ಡ ಮೊತ್ತದ ವ್ಯತ್ಯಾಸ ಕಾಣಿಸಿದ್ದಾದರೂ ಹೇಗೆ ಎನ್ನುವುದು ಈ ರಾಜ್ಯದ ಜನಸಾಮಾನ್ಯರನ್ನು ದೊಡ್ಡ ಗೊಂದಲಕ್ಕೆ ದೂಡಿದ ಪ್ರಶ್ನೆ. ಅದೇನೇ ಇರಲಿ, ರಾಜ್ಯ ಸರ್ಕಾರ ಅಂದುಕೊಂಡಂತೆಯೇ ಕೆ ಆರ್ ಎಸ್ ಉದ್ಯಾನವನದಲ್ಲಿ ಅತ್ಯಂತ ಎತ್ತರದ ಕಾವೇರಿ ಮಾತೆಯ ಪ್ರತಿಮೆ ನಿರ್ಮಿಸುವ ಹಾಗೂ ಆ ಸ್ಥಳವನ್ನು ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಮೂಲಕ ಅದೊಂದು ಜಾಗತಿಕ ಪ್ರವಾಸೀ ತಾಣವಾಗಿ ಗುರುತಿಸಿಕೊಳ್ಳುವಂತಾಗಲಿ ಎನ್ನುವುದೇ ರಾಜ್ಯದ ಜನತೆಯ ಆಶಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.