ನವನಿಕೇತನ್ ಸಂಸ್ಥೆಯಿಂದ ದೇವ್ ಆನಂದ್ ರವರು 1965 ರಲ್ಲಿ ಆರ್.ಕೆ.ನಾರಾಯಣ್ ರವರ “ಗೈಡ್” ಕಾದಂಬರಿಯನ್ನು ಆಯ್ಕೆ ಮಾಡಿಕೊಂಡು ತಮ್ಮ ಸಹೋದರನಾದ ವಿಜಯ್ ಆನಂದ್ ರವರಿಂದ ಚಿತ್ರಕಥೆಯನ್ನು ಬರೆಸಿ, ನಿರ್ದೇಶನದ ಜವಬ್ದಾರಿ ಹೊರಿಸಿ, ನಿರ್ಮಾಣದ ಹೊಣೆ ಹೊತ್ತುತ್ತಾರೆ. ಫಲಿ ಮಿಸ್ತ್ರಿ ರವರ ಛಾಯಾಗ್ರಹಣ, ಎಸ್.ಡಿ.ಬರ್ಮನ್ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ದೇವ್ ಆನಂದ್, ವಾಹೀದಾ ರಹಮಾನ್, ಲೀಲಾ ಚಿಟ್ನಿಸ್, ಕಿಶೋರ್ ಸಾಹು, ಗಜಾನನ್ ಜಾಗಿರ್ ದಾರ್, ಅನ್ವರ್ ಹುಸೇನ್, ರಶೀದ್ ಖಾನ್, ರಾಮ್ ಅವ್ತಾರ್, ನಾಜೀರ್ ಕಾಶ್ಮೀರಿ ಹಾಗೂ ಪರ್ವೀನ್ ಪೌಲ್ ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
38ನೇ ಅಕಾಡೆಮಿ ಆವಾರ್ಡ್ “Best Foreign Language Film” ಈ ಚಿತ್ರ ಸಲ್ಲಿಕೆಯಾಗಿತ್ತು. ಮೂರನೇ ಅತ್ತ್ಯುತ್ತಮ ಚಿತ್ರ ಎಂದು 13ನೇ ರಾಷ್ಟ್ರೀಯ ಪ್ರಶಸ್ತಿ, 14ನೇ ಫಿಲಂಫೇರ್ ಆವಾರ್ಡ್ ಸಂಧರ್ಭದಲ್ಲಿ Best Film (ಗೈಡ್), Best Director (ವಿಜಯ್ ಆನಂದ್), Best Actor (ದೇವ್ ಆನಂದ್), Best Actress (ವಾಹೀದಾ ರಹಮಾನ್), Best Dialogue ( ವಿಜಯ್ ಆನಂದ್) ಮತ್ತು Best Cinematographer ( ಫಲಿ ಮಿಸ್ತ್ರಿ) ಎಂಬ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಸಿನಿಮಾದಲ್ಲಿನ ಸಂಗೀತ ಸಂಯೋಜನೆಗಾಗಿ Best Music Director ಪ್ರಶಸ್ತಿಗಾಗಿ ಎಸ್.ಡಿ. ಬರ್ಮನ್ ಹಾಗೂ “ಆಜ್ ಫಿರ್ ಜೀನೇ ಕಿ ತಮನ್ನಾ ಎಂಬ ಹಾಡಿಗಾಗಿ” Best Female Playback Singer ಪ್ರಶಸ್ತಿಗಾಗಿ ಲತಾ ಮಂಗೇಶ್ಕರ್ ರವರು ನಾಮಿನೇಟ್ ಆಗಿರುತ್ತಾರೆ. ಆ ಕಾಲಮಾನದಲ್ಲಿ ತುಂಬಾ ದೊಡ್ಡ ಹೆಸರು ಸಿನಿಮಾ ಇದು. ಆದರೂ ಆರ್.ಕೆ.ನಾರಾಯಣ್ ರವರು “This is Misguided Guide” ಎಂಬ ತಮ್ಮ One line Comment ಮೂಲಕ ಬೇಸರ ವ್ಯಕ್ತಪಡಿಸುತ್ತಾರೆ. ಇದೇ ರೀತಿ ಕನ್ನಡ ಚಿತ್ರರಂಗದಲ್ಲೂ ತ.ರಾ.ಸು. ರವರು 70ರ ದಶಕದಲ್ಲಿ ಬಿಡುಗಡೆಗೊಂಡ “ನಾಗರಹಾವು” ಚಿತ್ರಕ್ಕೆ “ಇದು ನಾಗರಹಾವಲ್ಲ, ಕೇರೆಹಾವು” ಎಂಬ ತಮ್ಮ One line Comment ಮೂಲಕ ಬೇಸರ ವ್ಯಕ್ತಪಡಿಸುತ್ತಾರೆ. ನಾಗರಹಾವು ಸಿನಿಮಾ ಕೂಡ ಬಹುದೊಡ್ಡ ಹೆಸರು ಮಾಡಿತ್ತು ಅಲ್ಲದೇ, 2018 ರಲ್ಲಿ ಮತ್ತೊಮ್ಮೆ Updated Version ನಲ್ಲಿ ಮರುಬಿಡುಗಡೆಗೊಂಡು ಹೆಸರು ಮಾಡಿತ್ತು.
ಈ ಸಿನಿಮಾಗಾಗಿ ಸಚಿನ್ ದೇವ್ ಬರ್ಮನ್ ರವರು ಸಂಗೀತ ಸಂಯೋಜಿಸಿದ್ದು, ಶೈಲೇಂದ್ರ ರವರು ಗೀತ ಸಾಹಿತ್ಯ ಬರೆಯುತ್ತಾರೆ. ಅವರ ಸಾಹಿತ್ಯದ ಹಾಡುಗಳಿಗೆ ಮಹಮ್ಮದ್ ರಫಿ, ಲತಾ ಮಂಗೇಶ್ಕರ್, ಕಿಶೋರ್ ಕುಮಾರ್, ಮನ್ನಾಡೇ ಹಾಗೂ ಎಸ್.ಡಿ.ಬರ್ಮನ್ ರವರು ದನಿ ನೀಡಿ ಜೀವ ತುಂಬುತ್ತಾರೆ. ಇಂದಿಗೂ ಈ ಹಾಡುಗಳು ಜೀವಂತ. ಐದು ದಶಕಗಳು ಕಳೆದರೂ ಈ ಹಾಡುಗಳು ಅಷ್ಟರ ಮಟ್ಟಿಗೆ ತನ್ನ ಸಂಗೀತ, ಸಾಹಿತ್ಯ, ಗಾಯನ ಶೈಲಿಯೊಂದಿಗೆ ಇಂದಿಗೂ ಕಾಡುತ್ತವೆ. “ಆಜ್ ಫಿರ್ ಜೀನೆ ಕಿ ತಮನ್ನಾ” ಗೀತೆಯನ್ನು ಲತಾ ಮಂಗೇಶ್ಕರ್ ರವರು, “ದಿನ್ ಧಲ್ ಜಾಯೇ” ಗೀತೆಯನ್ನು “ಮಹಮ್ಮದ್ ರಫಿ” ರವರು “ಗಾತೇ ರಹೋ ಮೇರಾ ದಿಲ್” ಗೀತೆಯನ್ನು ಕಿಶೋರ್ ಕುಮಾರ್ ಮತ್ತು ಲತಾ ಮಂಗೇಶ್ಕರ್ ರವರು, “ಕ್ಯಾ ಸೇ ಕ್ಯಾ ಹೋ ಗಯಾ” ಗೀತೆಯನ್ನು “ಮಹಮ್ಮದ್ ರಫಿ” ರವರು, “ಪಿಯಾ ತೋಸೇ ನೈನಾ ಲಾಗೇ ರೇ” ಗೀತೆಯನ್ನು “ಲತಾ ಮಂಗೇಶ್ಕರ್” ರವರು, “ಸೈಯಾನ್ ಭೀಮಾನ್” ಎಂಬ ಗೀತೆಯನ್ನು “ಲತಾ ಮಂಗೇಶ್ಕರ್” ರವರು, “ತೇರೆ ಮೇರೆ ಸಪ್ನೇ” ಎಂಬ ಗೀತೆಯನ್ನು “ಮಹಮ್ಮದ್ ರಫಿ” ರವರು, “ವಹಾಂ ಕೌನ್ ಹೈ ತೇರಾ” ಎಂಬ ಗೀತೆಯನ್ನು “ಸಚಿನ್ ದೇವ್ ಬರ್ಮನ್” ರವರು, “ಹೇ ರಾಮ್ ಹಮಾರೇ ರಾಮಚಂದ್ರ” ಗೀತೆಯನ್ನು “ಮನ್ನಾಡೇ ಹಾಗೂ ಸಂಗಡಿಗರು ಹಾಡಿದ್ದಾರೆ ಹಾಗೂ “ಅಲ್ಲಾ ಮೇಘ್ ದೇ ಪಾನಿ ದೇ” ಗೀತೆಯನ್ನು “ಸಚಿನ್ ದೇವ್ ಬರ್ಮನ್” ರವರು ಹಾಡಿದ್ದಾರೆ.
ಕಥೆ:
ಅದ್ಯಾವುದೋ ಕಾರಣಕ್ಕಾಗಿ ಜೈಲುವಾಸಿಯಾದ ರಾಜು (ದೇವ್ ಆನಂದ್) ಅಂದು ಬಿಡುಗಡೆಗೊಳ್ಳುವ ದೃಶ್ಯದೊಂದಿಗೆ ಸಿನಿಮಾ ಅನಾವರಣಗೊಳ್ಳುತ್ತದೆ. ನಿಂತ ನೀರಲ್ಲಿ ಒಂಟಿ ಮರದ ಪ್ರತಿಬಿಂಬ ಕಾಣುತ್ತದೆ. ಆ ಮರದಲ್ಲಿ ಕುಳಿತ ಹಕ್ಕಿಗಳೆಲ್ಲಾ ಒಮ್ಮೆಲೆ ಹಾರಿ ಗಗನದಿ ಮರೆಯಾಗುವ ದೃಶ್ಯ ರಾಜು ಇಷ್ಟು ದಿನದ ಸಂಕೋಲೆಗಳಿಂದ ಬಿಡುಗಡೆಯಾದ ಎಂಬುದನ್ನು ಹೇಳುತ್ತದೆ. ಅಲ್ಲಿಂದ ಮುಂದೆ ಬಂದ ಅವನಿಗೆ ಊರಿನ ದಿಕ್ಕು ತೋರಿಸುವ ನಾಮಫಲಕ ಕಣ್ಣಿಗೆ ಬೀಳುತ್ತದೆ. ಒಂದೂವರೆ ಕಿಲೋಮೀಟರ್ ದೂರದ ಊರಿಗೆ ಹೋಗುವ ಮನಸಿಲ್ಲದೇ, ಅದರ ಬದಲಾಗಿ ತುಂಬಾ ದೂರದ ಊರಿಗೆ ಹೊರಡುತ್ತಾನೆ. ಕೆಲವು ದೂರ ನಡೆದೇ ಹೋಗುತ್ತಾನೆ, ಕೆಲವು ಕಡೆ ಎತ್ತಿನ ಗಾಡಿ, ಮತ್ತ್ಯಾರದೋ ಬಂಡಿ, ಹೀಗೆ ಬಹುದೂರ ಕ್ರಮಿಸಿ ಊಟ ನೀರು ಇಲ್ಲದೆ ಬಳಲಿ ಬಳಲಿ ಒಂದು ಹಳೆಯ ದೇವಸ್ಥಾನದ ಬಳಿ ಮಲಗಿಬಿಡುತ್ತಾನೆ. ಚಳಿಯಿಂದ ನಡುಗುತ್ತಿದ್ದ ಆತನಿಗೆ ಯಾರೋ ಸಾಧುವೊಬ್ಬ ತನ್ನ ಕೇಸರಿ ಶಾಲು ಹೊದಿಸಿ ಹೋಗುತ್ತಾನೆ. ಮರುದಿನ ಬೆಳಿಗ್ಗೆ ಆ ಊರಿನವನೊಬ್ಬ ಕೇಸರಿ ಶಾಲು ಹೊದ್ದ ಈತನನ್ನು ಕಂಡು ಯಾರೋ ಮಹಾಸ್ವಾಮಿಗಳು, ಪುಣ್ಯಪುರುಷರು ಊರಿಗೆ ಬಂದಿದ್ದಾರೆ ಎಂದು ತಿಳಿದು ಅವನನ್ನು ಸತ್ಕರಿಸುತ್ತಾನೆ. ಅವನು ತಾನೊಬ್ಬ ಸಾಮಾನ್ಯ ಗೈಡ್ ಆಗಿದ್ದವ ಎಂದು ಹೇಳಿದರೂ ನಂಬುವ ಪರಿಸ್ಥಿತಿಯಲ್ಲಿ ಹಳ್ಳಿಯವ ಇರುವುದಿಲ್ಲ. ಸಾಮಾನ್ಯವಾಗಿ ಜನ ಆಂತರ್ಯದಲ್ಲಿನ ಜ್ಞಾನಕ್ಕಾಗಲೀ, ಸತ್ಯಕ್ಕಾಗಲೀ ಬೆಲೆ ಕೊಡದೆ, ಹೊರಗೆ ಕಣ್ಣಿಗೆ ಕಾಣುವ ವೇಷಭೂಷಣಕ್ಕೆ ಬೆಲೆ ಕೊಡುತ್ತಾರೆ ಎಂಬುದು ಸಾಬೀತಾಗುತ್ತದೆ.
ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಈತನಿಗೆ ಸ್ವಾಭಾವಿಕವಾಗಿ ಕುಟುಂಬ ನಿರ್ವಹಣೆಯ ಜವಬ್ದಾರಿ ಇರುತ್ತದೆ. ರೈಲು ನಿಲ್ದಾಣದಲ್ಲಿಯೇ ಒಂದು ಚಿಕ್ಕ ಅಂಗಡಿ ತೆರೆದಿರುತ್ತಾನೆ. ಅಲ್ಲಿಗೆ ಬರುವ ಊರಿನ ಹೊಸಬರಿಗೆ ತನ್ಬೂರಿನ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳ ಕುರಿತು ಮಾಹಿತಿ ನೀಡುವ ಟೂರಿಸ್ಟ್ ಗೈಡ್ ಆಗಿಯೂ ಕೆಲಸ ನಿರ್ವಹಿಸುತ್ತಾನೆ. ಪರಸ್ಥಳದಿಂದ ಜನರು ಅವನನ್ನೇ ಹುಡುಕಿಕೊಂಡು ಬರುವಷ್ಟು ಹೆಸರು ಮಾಡಿರುತ್ತಾನೆ. ಹೀಗಿರುವಾಗ ದಂಪತಿಯೊಬ್ಬರು ಆ ಊರಿಗೆ ಬರುತ್ತಾರೆ. ಮಾರ್ಕೋ (ಕಿಶೋರ್ ಸಾಹು) ಎಂಬ ಹೆಸರಿನ ಆತ ಆ ಊರಿನ ಪ್ರಾಚೀನ ಗುಹೆಯೊಂದರ ಬಗ್ಗೆ ಒಂದಷ್ಟು ಮಾಹಿತಿ ಕಲೆಹಾಕುವ ಸಲುವಾಗಿ ತನ್ನ ಹೆಂಡತಿ ರೋಸಿಯೊಂದಿಗೆ (ವಾಹೀದಾ ರಹಮಾನ್) ಬರುತ್ತಾನೆ. ಮದುವೆಯಾದ ದಿನದಿಂದಲೂ ಒಂದಷ್ಟು ಚಿಕ್ಕಪುಟ್ಟ ಕಾರಣಗಳಿಗೂ ಇವರಿಬ್ಬರ ನಡುವೆ ಜಟಾಪಟಿ ನಡೆಯುತ್ತಲೇ ಇರುತ್ತೆ. ಆಕೆಯಂತೂ ಜೀವನದ ಮೇಲೆ ಆಸಕ್ತಿಯನ್ನು ಕಳೆದುಕೊಂಡವಳಂತೆ ಇರುತ್ತಾಳೆ. ಇವರ ಜಗಳವನ್ನು ದಿನವೂ ನೋಡುವ ರಾಜು ಆಕೆಯ ಕುರಿತು ಕನಿಕರ ಪಡುತ್ತಾನೆ. ಒಮ್ಮೆ ಅವಳು ತೀವ್ರ ಜ್ವರದಿಂದ ಬಳಲಿದಾಗ ಗಂಡನಾದ ಮಾರ್ಕೋ ಅವಳ ಆರೈಕೆ ಮಾಡುವುದರ ಬದಲಾಗಿ ಗುಹೆಯಲ್ಲಿ ಸೇರಿರುತ್ತಾನೆ. ಆಗ ರಾಜು ಡಾಕ್ಟರನ್ನು ಕರೆತಂದು ಆಕೆಗೆ ಉಪಚರಿಸುತ್ತಾನೆ. ಇದರಿಂದಾಗಿ ಆಕೆ ಚೇತರಿಸಿಕೊಂಡ ನಂತರ ಗಂಡನ ನಿರ್ಲಕ್ಷ್ಯತೆ ಬಗ್ಗೆ ತಿಳಿದು, ಆತನನ್ನು ನಿಂದಿಸಲೆಂದು ಗುಹೆಯ ಬಳಿ ಹೋದಾಗ, ಮಾರ್ಕೋ ಮತ್ತೊಂದು ಹೆಣ್ಣಿನ ಜೊತೆ ಸರಸವಾಡುವುದನ್ನು ಗಮನಿಸಿದ ಆಕೆ ಬಹಳವಾಗಿ ಮಾನಸಿಕವಾಗಿ ನೊಂದುಕೊಳ್ಳುತ್ತಾಳೆ. ಯಾವ ಹೆಂಡತಿಯೂ ಸಹಿಸಿಕೊಳ್ಳುವ ವಿಷಯವಲ್ಲ ಬಿಡಿ. ಇನ್ನೊಂದು ವಿಷಯವೇನೆಂದರೆ ಆಕೆ ಅಪ್ರತಿಮ ನೃತ್ಯಗಾರ್ತಿ. ಆದರೆ ಮಾರ್ಕೋ ಅವಳ ಈ ಕಲೆಯನ್ನು ಪುರಸ್ಕರಿಸುವುದಿಲ್ಲ. ಒಮ್ಮೆ ರಾಜು ಜೊತೆಯ ಒಡನಾಟದಲ್ಲಿ ಖುಷಿಯಾಗಿ ಇರುವ ಅದೊಂದು ದಿನ “ಏನೋ ಕಳೆದುಕೊಂಡಂತೆ, ೪೦-೫೦ ವರ್ಷದ ಹೆಂಗಸಿನಂತೆ ಇದ್ದ ನೀವು, ಪ್ರಾಯದ ಚಿಗರೆಯಂತೆ ಖುಷಿಯಾಗಿದ್ದಿರಲ್ಲಾ ಕಾರಣವೇನು?” ಎಂದು ರಾಜು ಕೇಳಿದಾಗ ಲತಾ ಮಂಗೇಶ್ಕರ್ ರವರ ಕಂಠದಲ್ಲಿ “ಆಜ್ ಫಿರ್ ಜೀನೇ ಕಿ ತಮನ್ನಾ” ಎಂಬ ಗೀತೆಯ ಮೂಲಕ ಉತ್ತರ ಕೊಡುತ್ತಾಳೆ. ಎಲ್ಲಾ ಹಾಡುಗಳು ಅಷ್ಟೇ ಸಮಯೋಚಿತವಾಗಿ, ಭಾವಪೂರಕವಾಗಿ ಹಾಗೂ ಅರ್ಥಪೂರ್ಣವಾಗಿ ಇರುವುದು ಚಿತ್ರದ ಪ್ಲಸ್ ಪಾಯಿಂಟ್. ಮಾರ್ಕೋ ಬೇರೊಂದು ಹೆಣ್ಣಿನ ಜೊತೆ ಇರುವುದನ್ನು ಸಹಿಸದ ಆಕೆ ಆತನನ್ನು ಬಿಟ್ಟು ರಾಜುವಿನ ಮನೆಗೆ ಬರುತ್ತಾಳೆ.
ಆಕೆ ರಾಜುವಿನ ಮನೆಗೆ ಬಂದದ್ದು ರಾಜುವಿನ ತಾಯಿ (ಲೀಲಾ ಚಿಟ್ನಿಸ್) ಹಾಗೂ ಸೋದರಮಾವನಿಗೂ ಇಷ್ಟವಾಗುವುದಿಲ್ಲ. ಬೇರೊಂದು ಮನೆಯ ಹೆಣ್ಣು ಹೀಗೆ ಬಂದಿರುವುದು ಸಮಾಜದ ದೃಷ್ಟಿಯಲ್ಲಿ ಸರಿಯೆನಿಸುವುದಿಲ್ಲ. ಆ ಕಾರಣಕ್ಕಾಗಿ ತಾಯಿ-ಮಗ ಬೇರೆಯಾಗುತ್ತಾರೆ. ನಂತರ ರಾಜು ರೋಸಿಯನ್ನು ನಳಿನಿ ಎಂದು ಬದಲಾಯಿಸಿ, ಆಕೆಯ ನೃತ್ಯ ಪ್ರದರ್ಶನವನ್ನು ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಏರ್ಪಡಿಸುತ್ತಾನೆ. ಆಕೆಯ ನೃತ್ಯ ಪ್ರದರ್ಶನದಿಂದ ಕೀರ್ತಿ ಹಾಗೂ ಹಣ ಸಂಪಾದನೆ ಮಾಡುತ್ತಾರೆ. ಸಿರಿವಂತರಾಗುತ್ತಾರೆ. ಆ ಸಮಯಕ್ಕೆ ದೂರಾಗಿದ್ದ ಮಾರ್ಕೋ ಮತ್ತೆ ನಳಿನಿಯನ್ನು ನೋಡಲು ಬಂದರೂ ರಾಜು ಅವಕಾಶ ಕಲ್ಪಿಸಿಕೊಡುವುದಿಲ್ಲ. ಹೀಗೆ ಆಕೆಯ ಕಾರಣಕ್ಕಾಗಿ ರಾಜು ಜೈಲು ಸೇರುತ್ತಾನೆ. ಒಂದಷ್ಟು ದಿನಗಳ ನಂತರ ರಾಜುವಿನ ತಾಯಿಗೂ ಹಾಗೂ ನಳಿನಿಗೂ ರಾಜುವನ್ನು ನೋಡುವ ಬಯಕೆ. ಇಬ್ಬರೂ ರಾಜುವಿನ ಹುಡುಕಾಟ ಶುರು ಮಾಡುತ್ತಾರೆ.
ಇತ್ತ ಗೊತ್ತು ಪರಿಚಯವಿರದ ಊರಿನಲ್ಲಿ ಊರಜನರೇ ತಮ್ಮ ಮುಗ್ಧತೆಯಿಂದ ಸ್ವಾಮೀಜಿ ಎಂದು ಕರೆದ ಊರಿನಲ್ಲಿ ಭಯಂಕರ ಬರಗಾಲ ಶುರುವಾಗುತ್ತದೆ. ನೆಲ ಅಗೆದು ಅಗೆದು ನೀರಿನ ಸೆಲೆ ಹುಡುಕಿ, ಬಸಿದು ಒಣಗಿದ ಗಂಟಲಿಗೊಂದಿಷ್ಟು ತೇವ ಮಾಡುವ ದೃಶ್ಯ ಆಗಾಗ ಮನಹಿಂಡುತ್ತದೆ. ತುತ್ತು ಅನ್ನಕ್ಕಾಗಿ ಬಡಿದಾಡಿಕೊಳ್ಳುವ ಮನಸ್ಥಿತಿಯಲ್ಲಿ ಜನರು ಇರುವಾಗ, ಊರಿನಲ್ಲಿ ಮಳೆ ಬರಿಸುವ ಸಲುವಾಗಿ ಸ್ವಾಮೀಜಿ ೧೨ ದಿನಗಳ ಉಪವಾಸ ವ್ರತ ಕೈಗೊಳ್ಳುತ್ತಾರೆಂಬ ಸುದ್ದಿ ಹರಡುತ್ತದೆ. ಅದನ್ನು ಕೇಳಿ ಸ್ವತಃ ರಾಜು ದಂಗಾಗುತ್ತಾನೆ.ಆದರೆ ಊರಿನ ಜನರು ತನ್ನ ಮೇಲಿಟ್ಟ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಗೆ ಸೋತು ಅವರ ನಂಬಿಕೆಯೇ ಗೆಲ್ಲಲೀ ಎಂದು ಉಪವಾಸ ಇರುತ್ತಾನೆ. ಆ ಸುದ್ದಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಸುದ್ದಿ ಮಾಡುತ್ತದೆ. ಅಲ್ಲಿಗೆ ರಾಜುವಿನ ತಾಯಿ, ಸ್ನೇಹಿತ ಹಾಗೂ ನಳಿನಿ ಬರುತ್ತಾರೆ. ರಾಜುವಿನ ಸ್ಥಿತಿ ಕಂಡು ಮರುಗುತ್ತಾರೆ. ಉಪವಾಸ ಮಾಡಿದರೂ ಮೋಡ ನಿಲ್ಲುವುದಿಲ್ಲ, ಜಗಮಗಿಸುವ ಸೂರ್ಯನ ಪ್ರತಾಪಿ ಕಿರಣಗಳ ಶಾಖ ಕಡಿಮೆಯೂ ಆಗುವುದಿಲ್ಲ. ಬರೀ ಉಪವಾಸಕ್ಕೆ ವಾಸ್ತವ ಸ್ಥಿತಿ ಬದಲಾಗುತ್ತದೆಯೇ? ಅಂತೂ ಹನ್ನೆರಡನೆಯ ದಿನ ಬಂದಾಗ ರಾಜು ಆಶಯದಂತೆ ಹಾಗೂ ಅಷ್ಟೂ ಜನರ ನಂಬಿಕೆಯಂತೆ ಗುಡುಗು ಮಿಂಚು ಸಮೇತ ಜೋರಾದ ಮಳೆ ಬರುತ್ತದೆ. ಜನರು ಖುಷಿಯಿಂದ ಕುಣಿಯುತ್ತಾರೆ. ಆದರೆ ಉಪವಾಸದಿಂದ ಬಳಲಿದ್ದ ರಾಜು ಸ್ವರ್ಗವಾಸಿಯಾಗುತ್ತಾನೆ. ಇಲ್ಲಿಗೆ ಸಿನಿಮಾ ಅಂತ್ಯವಾಗುತ್ತದೆ.
ಇಲ್ಲಿ ಗೆದ್ದದ್ದು ವಾಸ್ತವವೋ ಅಥವಾ ಕಾಣದ ದೈವಿಕ ಶಕ್ತಿಯೋ ಎಂಬ ಪ್ರಶ್ನೆ ಮೂಡುತ್ತದೆ. ಅದೇನೇ ಇರಲಿ, ಹುಟ್ಟು ಅದ್ಯಾವ ಕಾರಣಕ್ಕಾಗಿ ಆಗಿದೆಯೋ ಎಂಬುದಕ್ಕಿಂತ ಸಾವನ್ನು ತಮ್ಮನ್ನು ನಂಬಿದ ಜನರಿಗಾಗಿ ಮೀಸಲಿಟ್ಟ ಬದುಕೇ ನಿಜಕ್ಕೂ ಮಹತ್ವದ ಬದುಕು ಎನಿಸುತ್ತದೆ ಎಂಬ ಸಂದೇಶ ಹೊತ್ತ ಸಿನಿಮಾ ಇದು. ತನ್ನಿಷ್ಟದಂತೆ ತಾನು ಬದುಕಿದ ರಾಜು, ಆಕಸ್ಮಿಕವಾಗಿ ಬರುವ ಅನೇಕ ಕಷ್ಟಗಳನ್ನು ನಿಭಾಯಿಸಿ, ಧೃತಿಗೆಡದೇ ಮತ್ತೊಬ್ಬರ ಒಳಿತಿಗಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಲಕ್ಷಾನುಗಟ್ಟಲೆ ಜನರ ಸಂತಸಕ್ಕೆ ಕಾರಣನಾಗುತ್ತಾನೆ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಜೀವನದ ವಾಸ್ಯವಿಕ ಸತ್ಯದ ಕುರಿತು ತಿಳಿಯಲು.
2. ಅನೀರಿಕ್ಷಿತ ಕಷ್ಟಗಳ ನಿಭಾಯಿಸುವ ಕುರಿತು ತಿಳಿಯಲು.
3. ಧರ್ಮ ಎಂದಿಗೂ ಕಾಪಾಡುತ್ತದೆ. ಅದು ಹೇಗೆ ಎಂದು ತಿಳಿಯಲು
4. ಸಂಗೀತ ಹಾಗೂ ಛಾಯಾಗ್ರಹಣದಲ್ಲಿ ಆಸಕ್ತಿ ಇದ್ದವರು ಈ ಸಿನಿಮಾ ನೋಡಲೇಬೇಕು.
5. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.