ಗಾಂಧೀಜಿ ವಿಚಾರಧಾರೆಯ ಒಳಹೊಕ್ಕು – 6
ರಷ್ಯದ ಶಿಕ್ಷಣತಜ್ಞ, ಚಿಂತಕ ಇವಾನ್ ಇಲಿಚ್ ಅಲ್ಲಿಯ ಕಮ್ಯುನಿಸ್ಟ್ ಸರಕಾರದ ಕೆಂಗಣ್ಣಿಗೆ ಗುರಿಯಾಗಿ ದೂರದ ಮೆಕ್ಸಿಕೋಗೆ ವಲಸೆ ಹೋಗಿ ಬದುಕು ಸಾಗಿಸಿದಾತ. ಯಾರನ್ನೂ ಮೆಚ್ಚಿಸುವ ಇರಾದೆಯನ್ನು ಹೊಂದದೆ ಎಷ್ಟೇ ಸವಾಲುಗಳೆದುರಾದರೂ ಸತ್ಯವನ್ನು ಬಿಟ್ಟುಕೊಡದ ಓರ್ವ ಅಪರೂಪದ ಸ್ವತಂತ್ರ ಚಿಂತಕ. ಆತ ಒಮ್ಮೆ, 1979 ರಲ್ಲಿ, ಗಾಂಧೀಜಿಯ ಸೇವಾಗ್ರಾಮದ ಕುಟೀರದಲ್ಲಿ ಒಂದು ದಿನ ಕಳೆದ. ಆಧುನಿಕ ನಾಗರಿಕತೆಯ ಬರ್ಬರತೆ, ಅರ್ಥವಿಲ್ಲದ ಬದುಕು, ವಿಷಯಾಸಕ್ತಿ, ಅನಾವಶಕ ವಸ್ತುಸಂಗ್ರಹ ಇತ್ಯಾದಿಗಳನ್ನು ಕಟುವಾಗಿ ವಿರೋಧಿಸುವ ಈ ಚಿಂತಕನಿಗೆ ಗಾಂಧಿ ಹತ್ತಿರವಾದರು. ’ಗಾಂಧೀ ಗುಡಿಸಿಲಿನ ಸಂದೇಶ’ ಎನ್ನುವುದು ಆತ ಮಾಡಿದ ಪ್ರಸಿದ್ಧ ಭಾಷಣದ ಶೀರ್ಷಿಕೆ. ಆ ಭಾಷಣದಲ್ಲಿ ಆತ ಹೀಗೆಂದಿದ್ದಾನೆ:
ಈ ಮುಂಜಾವಿನಲ್ಲಿ ಗಾಂಧೀ ಕುಟೀರದಲ್ಲಿ ಕುಳಿತಾಗ ಅವರು ವಾಸಿಸಿದ ಈ ಸ್ಥಳದ ಮಹಿಮೆಯನ್ನೂ ಅದರ ಸಂದೇಶವನ್ನೂ ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಎರಡು ವಿಶಿಷ್ಟ ಸಂಗತಿಗಳು ನನ್ನನ್ನು ಆಳವಾಗಿ ಆಕರ್ಷಿಸಿದುವು. ಈ ಗುಡಿಸಿಲಿನ ಆಧ್ಯಾತ್ಮಿಕ ಸ್ಫೂರ್ತಿ ಮತ್ತು ಇಲ್ಲಿನ ಸರಳ ಸೌಲಭ್ಯಗಳು. ಇದನ್ನು ನಿರ್ಮಿಸಿದಾಗ ಗಾಂಧೀಜಿಯ ಭಾವನೆಗಳೇನಿದ್ದಿರಬಹುದು ಎಂದು ನನ್ನ ಮನಸ್ಸು ಹುಡುಕಹತ್ತಿತು. ಎಲ್ಲರೊಡನೆ ಪ್ರೇಮ ಮತ್ತು ಸಮತಾಭಾವ ಎಂಬ ತತ್ತ್ವವನ್ನು ಈ ಗುಡಿಸಿಲು ಸಾರುತ್ತಿದೆ. ಕುಟೀರದ ಚೆಲುವು, ಸರಳತೆ ಮತ್ತು ಅಚ್ಚುಕಟ್ಟು ಇವು ಒಂದು ಜೀವನಶೈಲಿಯನ್ನು ಸಂಕೇತಿಸುತ್ತವೆ. ಯಂತ್ರನಾಗರಿಕತೆ ಎಂದಿಗೂ ಮಾನವವಿಕಾಸಕ್ಕೆ ಪೋಷಕವಲ್ಲವೆಂಬ ನಿರ್ಣಯಕ್ಕೆ ಬಂದಿದ್ದೇನೆ. ನಮ್ಮ ಆರ್ಥಿಕಾಭಿವೃದ್ಧಿಗೂ ಬೃಹದುದ್ದಿಮೆಯಾಗಲೀ ಅಸಂಖ್ಯ ಆಧುನಿಕ ತಂತ್ರಜ್ಞರಾಗಲೀ ವೈದ್ಯರಾಗಲೀ ಅಗತ್ಯವಿಲ್ಲವೆಂಬುದು ಕೂಡಾ ಸ್ಪಷ್ಟವಾಗಿ ಗೋಚರಕ್ಕೆ ಬಂದಿದೆ. ಈ ಗುಡಿಸಿಲಿಗಿಂತ ದೊಡ್ಡ ಸೌಧದಲ್ಲಿ ವಾಸಿಸುವವರ ಬೌದ್ಧಿಕ ಶಾರೀರಿಕ ಶಕ್ತಿಗಳೂ ಜೀವನಶೈಲಿಯೂ ಕೆಳಮಟ್ಟದ್ದೆಂದೇ ನನ್ನ ಭಾವನೆ. ಅಂಥವರ ಕುರಿತು ಅನುಕಂಪವನ್ನಷ್ಟೇ ತೋರಬಹುದು. ತಮ್ಮ ಜೀವಂತ ವ್ಯಕ್ತಿತ್ವವನ್ನೇ ಅವರು ಜಡವಸ್ತುವ್ಯೂಹಗಳಿಗೆ ಬಲಿಕೊಡುತ್ತಾರೆ. ನಿಸರ್ಗದೊಡನೆ ನಿಕಟ ಬಾಂಧವ್ಯವಾಗಲೀ ಸಹಜೀವಿಗಳೊಂದಿಗೆ ಮಧುರ ಸ್ನೇಹವಾಗಲೀ ಅವರಿಗೆ ಲಭ್ಯವಾಗದು. ಸಾಂಸ್ಕೃತಿಕ ಪ್ರಜ್ಞೆಯಂತೂ ನಷ್ಟಗೊಳ್ಳುವುದೇ ಸರಿ.
ಈ ಸರಳಸತ್ಯ ನಿಮಗೇಕೆ ಹಿಡಿಸದು ಎಂದು ಯೋಜನಾತಜ್ಞರನ್ನು ಕೇಳಿದ್ದೇನೆ. ಅವರ ಉತ್ತರವಿಷ್ಟೆ: ಗಾಂಧೀಮಾರ್ಗ ತುಂಬಾ ಕಠಿಣ, ಜನರಿಗೆ ಅನುಸರಿಸಲಸಾಧ್ಯ. ಅದರೆ ಸತ್ಯಾಂಶ ಬೇರೆಯೇ ಇದೆ. ಬದುಕಿಗೂ ಮನುಷ್ಯನಿಗೂ ನಡುವೆ ಕೃತಕ ದಲ್ಲಾಳಿಗಳನ್ನಾಗಲೀ ಒಂದು ಕೇಂದ್ರಿತ ಜಡವ್ಯವಸ್ಥೆಯನ್ನಾಗಲೀ ಗಾಂಧೀಜಿ ಸಹಿಸುತ್ತಿರಲಿಲ್ಲ. ಈ ವಿಚಾರಮಾರ್ಗ ನಮ್ಮ ತಜ್ಞರಿಗಾಗಲೀ ಉದ್ಯೋಗಪತಿಗಳಿಗಾಗಲೀ ಅಧಿಕಾರಶಾಹೀ ರಾಜಕೀಯ ನಾಯಕರಿಗಾಗಲೀ ಹಿಡಿಸದು. ಸರಳಜೀವನ, ಉನ್ನತವಿಚಾರಗಳನ್ನು ಜನ ಬಯಸುವುದಿಲ್ಲ ಎನ್ನುವುದು ಬರೀ ಕಪಟ. ಸಾಮಾನ್ಯ ರೈತನಿಗೂ ಒಳ್ಳೆಯ ಸಾಧನೆಯಿಂದಲೇ ಒಳ್ಳೆಯ ಸಿದ್ಧಿ ಎಂಬ ವ್ಯಾವಹಾರಿಕಜ್ಞಾನ ಇದೆ. ಪಟ್ಟಭದ್ರರು ಮಾತ್ರ ಇದನ್ನು ನಿರಾಕರಿಸುತ್ತಾರೆ. ಪರಿಸರದ ಸಂಕೋಲೆಗಳಿಂದ ಅವರು ಬಿಡಿಸಿಕೊಳ್ಳಲಾರರು. ಅದೃಷ್ಟವಶಾತ್ ಜಗದ ಅಧಿಕಜನರಿಗೆ ಹೀಗೆ ಸತ್ಯವನ್ನೇ ಮರೆಮಾಚುವ ಧನಿಕಸ್ಥಿತಿಯಾಗಲೀ ವಕ್ರವಾಗಿಯೇ ಯೋಚಿಸುವ ತರ್ಕಬುದ್ಧಿಯಾಗಲೀ ಇಲ್ಲ. ಈ ರಾಷ್ಟ್ರದ ಆತ್ಮಸೌರಭದಿಂದ ಆಧುನಿಕಮೇಲ್ವರ್ಗ ದೂರ ಸರಿದಿದೆ. ಬಡ ಗ್ರಾಮಜೀವಿಗಳು ಬಹುಮಟ್ಟಿಗೆ ಅದಕ್ಕೆ ಸ್ಪಂದಿಸುತ್ತಾರೆ…
… ಸ್ವಯಂಪೂರ್ಣತೆಯ ಸಮಾಜದಲ್ಲಿ ಮಾತ್ರ ವ್ಯಕ್ತಿಗೌರವ ಸಾಧ್ಯ ಎಂಬ ಗಾಂಧೀತತ್ತ್ವ ನಮಗೆ ಅರ್ಥವಾಗಬೇಕು. ಪ್ರಗತಿ ಎನ್ನುವ ನಾಗರಿಕತೆಯಲ್ಲಿ ಅದು ನಷ್ಟವಾದೀತು. ಸಾಮಾನ್ಯಜನತೆಯೊಡನೆ ಸಮರಸದಿಂದ ಬಾಳುವ ಆನಂದದ ಸಂಕೇತವೇ ಈ ಗಾಂಧೀಗುಡಿಸಿಲು. ಅವರನ್ನುತ್ತಿದ್ದರು: ಆವಶ್ಯಕತೆಗಳಿಗಷ್ಟೇ ಉತ್ಪಾದನೆಯಾಗಬೇಕು. ಮಾನವಶಕ್ತಿ ಸಂಪೂರ್ಣ ಬಳಕೆಯಾಗಬೇಕು. ಆಧುನಿಕ ಪ್ರಪಂಚದ ಹೀನ ಮೌಲ್ಯದೃಷ್ಟಿಯನ್ನು ಬದಲಿಸುವ ಸುಸಂಸ್ಕೃತ ಸರಳಜೀವನಕ್ರಮವನ್ನೇ ನಾವು ಸಂಶೋಧಿಸಬೇಕು. ಇಲ್ಲವಾದರೆ ಜಗತ್ತು ಅಸಹನೀಯವಾಗುತ್ತದೆ…
(1981ರಲ್ಲಿ ವಾರ್ಧಾದ ’ಸೈನ್ಸ್ ಫಾರ್ ವಿಲೇಜಸ್’ ಜರ್ನಲಿನಲ್ಲಿ ಪ್ರಕಟವಾದ ಬರಹ. ಸೌ: ’ನನ್ನ ಆದರ್ಶ ಗ್ರಾಮ’)
ಇದು ಇವಾನ್ ಇಲಿಚ್ ಗಾಂಧಿಯನ್ನು ನೋಡಿ ಮಾಡಿದ ವಿಚಾರ. ಇದು ಆತನ ವಿಚಾರವೂ ಹೌದು. ಗಾಂಧೀಜಿಯ ವಿಚಾರವೂ ಹೌದು. ಇದೇ ನಮ್ಮ ವಿಚಾರವೂ ಆಗಬೇಕಲ್ಲವೆ!
ಆಗಬಹುದೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.