ಹಿಂದು ಸಂಸ್ಕೃತಿಯ ಕೊಡುಗೆಯಾಗಿರುವ ಭಾರತೀಯ ಮೂಲದ ಯೋಗಕ್ಕೆ ಈಗ ಶುಕ್ರದೆಸೆ. ಜೂ. 21ರಂದು `ಅಂತಾರಾಷ್ಟ್ರೀಯ ಯೋಗ ದಿನ’ ಎಂದು ವಿಶ್ವಸಂಸ್ಥೆ ಘೋಷಿಸಿರುವುದೇ ಇದಕ್ಕೆ ಹಿನ್ನೆಲೆ. ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಡಲು ಶ್ರಮಿಸಿದವರು ಸಾಕಷ್ಟು ಮಂದಿ. ಈ ಹಿಂದೆ ಕೂಡ ಯೋಗದಿನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಘೋಷಿತವಾಗಬೇಕೆಂದು ಹಲವರು ಪ್ರಯತ್ನಪಟ್ಟಿದ್ದುಂಟು. ಆದರೆ ಅದು ನೆರವೇರಿರಲಿಲ್ಲ. ಈಗ ಮಾತ್ರ ಕಾಲ ಕೂಡಿಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಯೋಗದಿನ ಘೋಷಣೆ ಕುರಿತು ಪ್ರಸ್ತಾಪಿಸಿದಾಗ ವಿಶ್ವಸಂಸ್ಥೆ ಅದನ್ನು ಗಂಭೀರವಾಗಿ ಸ್ವೀಕರಿಸಿತ್ತು. ಒಟ್ಟು 193 ಸದಸ್ಯರಿರುವ ವಿಶ್ವಸಂಸ್ಥೆ ಒಕ್ಕೊರಲಿನಿಂದ ಜೂ. 21 ನ್ನು ಅಂತಾರಾಷ್ಟ್ರೀಯ ಯೋಗದಿನ ಎಂದು ಘೋಷಿಸುವ ನಿರ್ಣಯ ಕೈಗೊಂಡಿತು. 177 ದೇಶಗಳು ಈ ನಿರ್ಣಯವನ್ನು ಪ್ರಾಯೋಜಿಸಿದ್ದವು ಎಂಬುದು ಗಮನಾರ್ಹ. ಈ ಸಂದರ್ಭದಲ್ಲಿ ಯೋಗದ ಬಗ್ಗೆ ಬೇರೆಬೇರೆ ದೇಶದ ಪ್ರತಿನಿಧಿಗಳು ಅತೀವ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. `ಯೋಗದಿಂದ ಆರೋಗ್ಯವರ್ಧನೆ ಮಾತ್ರವಲ್ಲ , ಭವಿಷ್ಯದ ಕನಸುಗಳನ್ನು ಕಾಣಲು ಮತ್ತು ಅವುಗಳನ್ನು ನನಸಾಗಿಸಲು ಯೋಗ ಸಹಕಾರಿ’ ಎಂಬರ್ಥದ ಮಾತುಗಳನ್ನು ಹೇಳಿದ್ದರು. ನಮ್ಮಲ್ಲಿನ ವೈರುಧ್ಯಗಳು ತಂದೊಡ್ಡುವ ಗೊಂದಲಗಳ ನಿವಾರಣೆಗೆ ಯೋಗ ಸಹಾಯಕ ಎಂದೂ ಕೆಲವು ದೇಶಗಳ ಪ್ರತಿನಿಧಿಗಳು ಪ್ರತಿಪಾದಿಸಿದ್ದರು. ವಿಶ್ವಸಂಸ್ಥೆಯ ಮುಖ್ಯಸ್ಥ ಬಾನ್ ಕಿ ಮೂನ್ ಅಂತಾರಾಷ್ಟ್ರೀಯ ಯೋಗದಿನ ಘೋಷಣೆಯ ಸಂದರ್ಭದಲ್ಲಿ `ಯೋಗ ಅಭಿವೃದ್ಧಿ, ಶಾಂತಿಗೆ ನೆರವಾಗುತ್ತದೆ ‘ ಎಂದಿದ್ದರು.
ಪ್ರಧಾನಿ ಮೋದಿ ವಿಶ್ವಸಂಸ್ಥೆಯಲ್ಲಿ ಯೋಗದ ಕುರಿತು ಪ್ರಸ್ತಾಪಿಸಿದ್ದರ ಜೊತೆಗೆ, ಅದಕ್ಕೂ ಮೊದಲು ದಶಕಗಳ ಕಾಲ ಕೆಲವು ಸಂಘಟನೆಗಳು ಮಾಡಿದ ಅವಿರತ ಪ್ರಯತ್ನದ ಫಲವೇ ಜೂ. 21 – ಅಂತಾರಾಷ್ಟ್ರೀಯ ಯೋಗದಿನ ಆಗಲು ಕಾರಣ. ಆ ದಿನ ಹಗಲು ಹೆಚ್ಚಾಗಿರುತ್ತದೆ ಎಂಬ ಕಾರಣಕ್ಕೆ ಅದೇ ದಿನವನ್ನು ಯೋಗದಿನವಾಗಿ ಘೋಷಿಸಿರುವುದು ಅರ್ಥಪೂರ್ಣ. ಇಲ್ಲಿ ಭಾರತದಲ್ಲಿ ಕೇಂದ್ರಸರ್ಕಾರ ‘ಯೋಗದಿನ’ ಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ದೇಶದೆಲ್ಲೆಡೆ ಎದ್ದು ಕಾಣುವಂತೆ ಆಚರಿಸಲು ಮುಂದಾಗಿರುವುದು ಒಂದು ಒಳ್ಳೆಯ ಬೆಳವಣಿಗೆ. ಅದನ್ನು ತಪ್ಪೆಂದು ಹೇಳುವುದು ಬಾಲಿಶತನ, ಅಷ್ಟೇ.
ದುರದೃಷ್ಟವೆಂದರೆ, ವ್ಯಕ್ತಿಯ ಸರ್ವಾಂಗೀಣ ಆರೋಗ್ಯದ ಗುರಿ ಹೊಂದಿರುವ ಯೋಗದ ಸುತ್ತ ಈಗ ವಿವಾದದ ಹುತ್ತ ಬೆಳೆಯತೊಡಗಿರುವುದು ಒಂದು ಅನಪೇಕ್ಷಿತ ಬೆಳವಣಿಗೆ. ಯಾವುದೇ ಹೊಸ ಸಂಗತಿಯೊಂದು ಜನಪ್ರಿಯತೆ ಪಡೆದರೆ ಅದನ್ನು ವಿರೋಧಿಸಲೇಬೇಕು ಎಂಬ ಸನ್ನಿವೇಶ ನಮ್ಮ ದೇಶದಲ್ಲಿ ಮಾತ್ರ ಕಂಡುಬರುತ್ತದೆ. ಯೋಗವೆನ್ನುವುದು ವಿಶ್ವಕ್ಕೆ ಭಾರತದ್ದೇ ಕೊಡುಗೆಯಾಗಿರುವಾಗ ದೇಶವಾಸಿಗಳೆಲ್ಲಾ ಈ ಸಂದರ್ಭದಲ್ಲಿ ಜಾತಿ, ಮತ, ಧರ್ಮ ಬದಿಗಿಟ್ಟು ಯೋಗದಿನವನ್ನು ಸ್ವಾಗತಿಸಬೇಕಾಗಿತ್ತು. ಆದರೆ ಹಾಗಾಗಿಲ್ಲ ಎನ್ನುವುದು ವಿಷಾದನೀಯ. ಯೋಗ ಭಾರತದ್ದೇ ಕೊಡುಗೆ ಎಂದು ಅರಿವಿರುವ ಉಳಿದ ದೇಶಗಳಲ್ಲಿ ಮಾತ್ರ ಯೋಗದಿನದ ಬಗ್ಗೆ ಯಾವುದೇ ತಂಟೆ, ತಕರಾರು ಎದ್ದಿಲ್ಲ ಎನ್ನುವುದನ್ನು ಭಾರತೀಯರಾದ ನಾವೆಲ್ಲಾ ಗಂಭೀರವಾಗಿ ಗಮನಿಸಬೇಕಾಗಿದೆ. ನಿಜವಾಗಿ ಆ ದೇಶಗಳಲ್ಲಿ ಯೋಗದ ಕುರಿತು ಭಿನ್ನಮತ, ತಕರಾರು ಎದ್ದಿದ್ದರೆ ಅದೊಂದು ಸಹಜ ಪ್ರಕ್ರಿಯೆ ಎನ್ನಬಹುದಿತ್ತು.
ಯೋಗದ ಕುರಿತು ಇದೀಗ ಎದ್ದಿರುವ ಅನಪೇಕ್ಷಿತ ವಿವಾದಗಳು ಅತ್ಯಂತ ಬಾಲಿಶತನದ್ದು. ನಮ್ಮ ಚಿಂತನಾಕ್ರಮಗಳು ಒಂದು ಸರಳ ಸತ್ಯವನ್ನೂ ಅರ್ಥಮಾಡಿಕೊಳ್ಳದಷ್ಟು ಜಡವಾಗಿವೆ ಎಂಬುದಕ್ಕೆ ಇದು ನಿದರ್ಶನ. ಯೋಗಕ್ಕೂ ಧರ್ಮಕ್ಕೂ ತಳಕು ಹಾಕಲಾಗುತ್ತಿರುವುದು ಸಂಕುಚಿತ ಮನಸ್ಸುಗಳ ವಿಕೃತ ಚಿಂತನೆ ಎನ್ನದೆ ವಿಧಿಯಿಲ್ಲ. ಸುಮಾರು 6 ಸಾವಿರ ವರ್ಷಗಳಷ್ಟು ದೀರ್ಘ ಪರಂಪರೆ ಹೊಂದಿದ ಯೋಗದಲ್ಲಿ ಧರ್ಮ ಅಥವಾ ಮತದ ಪ್ರಸ್ತಾಪ ಎಲ್ಲೂ ಇಲ್ಲ . ಯೋಗಕ್ಕೆ ಒಂದು ಶಾಸ್ತ್ರೀಯ ಮತ್ತು ವೈಜ್ಞಾನಿಕ ಚೌಕಟ್ಟನ್ನು ಹಾಕಿಕೊಟ್ಟ ಮಹರ್ಷಿ ಪತಂಜಲಿಯ ‘ಯೋಗಸೂತ್ರ’ ದಲ್ಲಿ ಕೂಡ ಇಂತಹ ಯಾವುದೇ ಪ್ರಸ್ತಾಪದ ಅಂಟು ಇಲ್ಲ. ಯೋಗಿಯು ಪಾಲಿಸಬೇಕಾದ ಯಮ-ನಿಯಮಗಳನ್ನು ಹೇಳುತ್ತಾ ಅವರು ಅಹಿಂಸೆ, ಸತ್ಯ, ಅಸ್ತೇಯ (ಅನ್ಯರ ವಸ್ತುಗಳನ್ನು ಬಯಸದಿರುವುದು), ಅಪರಿಗ್ರಹ (ಬೇಡದ ವಸ್ತುಗಳನ್ನು ಸಂಗ್ರಹಿಸದಿರುವುದು), ಪಂಚೇಂದ್ರಿಯಗಳ ಹತೋಟಿ – ಇವುಗಳ ಮಹತ್ವವನ್ನು ಹೇಳಿದ್ದಾರೆ. ಯೋಗವೆನ್ನುವುದು ಮೂಲಭೂತವಾಗಿ ದೇಹ, ಮನಸ್ಸು ಮತ್ತು ಬುದ್ಧಿಗಳ ಸಮತೋಲನ ಹಾಗೂ ಸಮಗ್ರ ವಿಕಾಸಕ್ಕಾಗಿ ನಮ್ಮ ಪೂರ್ವಜರು ಕಂಡುಕೊಂಡಿರುವ ತಮ್ಮದೇ ಆದ ಒಂದು ಆರೋಗ್ಯ ಪದ್ಧತಿ. ಇದರ ಜೊತೆಗೆ ನಮ್ಮ ಆಲೋಚನೆ ಮತ್ತು ಕ್ರಿಯೆಗಳು ಒಟ್ಟಾಗಿ ಸಾಗುವುದನ್ನು, ಮನುಷ್ಯ ಮತ್ತು ನಿಸರ್ಗ ಪರಸ್ಪರ ಪೂರಕವಾಗಿ ಹೆಜ್ಜೆ ಹಾಕುವುದನ್ನು, ಆಸೆ ಮತ್ತು ಅದನ್ನು ನಿಯಂತ್ರಿಸುವ ಬಗೆಯನ್ನು ಯೋಗ ವಿವರಿಸುತ್ತದೆ.
ಯೋಗ ಈಗ ಜನಪ್ರಿಯವಾಗಿರಬಹುದು. ಆದರೆ ಇದು ಆರಂಭವಾಗಿದ್ದು 6 ಸಾವಿರ ವರ್ಷಗಳಷ್ಟು ಬಹಳ ಹಿಂದೆಯೇ. 11ನೇ ಶತಮಾನದಲ್ಲಿ ಹಠಯೋಗಕ್ಕೆ ಸಂಬಂಧಿಸಿದ ಗ್ರಂಥಗಳು ಹೊರಬಂದವು. ಸ್ವಾಮಿ ವಿವೇಕಾನಂದರು 20 ನೇ ಶತಮಾನದ ಪೂರ್ವಾರ್ಧದಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ಹಿಂದು ಧರ್ಮದ ದುಂದುಭಿಯನ್ನು ಯಶಸ್ವಿಯಾಗಿ ಮೊಳಗಿಸಿದ ಬಳಿಕ, ನಮ್ಮ ಅನೇಕ ಯೋಗ ಗುರುಗಳಿಗೆ ಅಲ್ಲೆಲ್ಲ ಯೋಗದ ಪ್ರಸಾರ ಮಾಡಲು ಪೂರಕ ಸನ್ನಿವೇಶ ನಿರ್ಮಾಣವಾಯಿತು ಎಂಬುದು ಅಷ್ಟೇ ಸತ್ಯ. 1980 ರ ಬಳಿಕ ಪಾಶ್ಚಿಮಾತ್ಯ ದೇಶಗಳಲ್ಲಿ ಯೋಗ ಒಂದು ದೈಹಿಕ ವ್ಯಾಯಾಮದ ಭಾಗವಾಗಿ ಅಲ್ಲಿನವರು ಅದನ್ನು ಅಪ್ಪಿಕೊಂಡರು. ಇಂದಿನ ಧಾವಂತದ ಬದುಕಿನಲ್ಲಿ ದೈಹಿಕ ಮತ್ತು ಮಾನಸಿಕ ಒತ್ತಡಗಳೆರಡೂ ಮನುಷ್ಯರನ್ನು ಹೈರಾಣಗೊಳಿಸುತ್ತಿರುವಾಗ, ಅವುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಸಾಮರ್ಥ್ಯ ಯೋಗಕ್ಕಿದೆ ಎಂಬುದು ಅಲ್ಲಿನವರಿಗೆ ಮನದಟ್ಟಾಯಿತು. ಯೋಗ ಜನಪ್ರಿಯವಾಗಲು ಇದೊಂದು ಬಹುಮುಖ್ಯ ಕಾರಣ. ಹಾಗೆಂದೇ ಅನೇಕರು ಅದನ್ನು ನಿತ್ಯ ಜೀವನದಲ್ಲಿ ಅಲ್ಲೂ ಇಲ್ಲೂ ಅಳವಡಿಸಿಕೊಂಡಿದ್ದಾರೆ. ಜಗತ್ತಿನಾದ್ಯಂತ ಸಾಕಷ್ಟು ಪ್ರಮಾಣದಲ್ಲಿ ಯೋಗಕೇಂದ್ರಗಳು ತಲೆಯೆತ್ತಿವೆ. ಹಿಂದು ಧಾರ್ಮಿಕ ಪಠ್ಯಗಳಿಂದ, ಅದರಲ್ಲೂ ಬಹುಮುಖ್ಯವಾಗಿ ಪತಂಜಲಿ ಯೋಗಸೂತ್ರಗಳಿಂದ ಯೋಗ ಪ್ರೇರಿತವಾಗಿದೆ ಎಂಬುದು ನಿಜವಾಗಿದ್ದರೂ ಅದು ಧಾರ್ಮಿಕ ಗಡಿದಾಟಿ ಜಗತ್ತಿನ ಅನೇಕ ದೇಶಗಳಲ್ಲಿ ಮಾನ್ಯತೆ ಗಳಿಸಿಕೊಳ್ಳುತ್ತಿದೆ. ಯೋಗ ಎಂಬುದು ಇಂದು ನೂರಾರು ಕೋಟಿ ರೂಪಾಯಿಗಳ ಉದ್ಯಮವೂ ಆಗಿದೆ. ಅನೇಕ ಯೋಗ ಗುರುಗಳು ತಮ್ಮದೇ ಬ್ರಾಂಡ್ ಸೃಷ್ಟಿಸಿ ಯೋಗವನ್ನು ಮತ್ತಷ್ಟು ಜನಪ್ರಿಯಗೊಳಿಸಲು ಕಾರಣರಾಗಿದ್ದಾರೆ. ದೊಡ್ಡ ನಗರಗಳಲ್ಲಿ ಯೋಗಕೇಂದ್ರಗಳ ಹೆಚ್ಚಳ ಇದಕ್ಕೆ ಸಾಕ್ಷಿ. ಭಾರತೀಯ ಆರೋಗ್ಯ ಪದ್ಧತಿಯಲ್ಲಿ ದೈಹಿಕ ಸ್ವಾಸ್ಥ್ಯದ ಜೊತೆಗೆ ಮಾನಸಿಕ, ಅಧ್ಯಾತ್ಮಿಕ ಸ್ವಾಸ್ಥ್ಯಕ್ಕೂ ಮಹತ್ವ ನೀಡಲಾಗಿದೆ. ಯೋಗ ಎನ್ನುವುದು ದೇಹ, ಬುದ್ಧಿ ಮನಸ್ಸುಗಳ ಸಮನ್ವಯ ಸಾಧಿಸುವಂತಹದು. ಇದನ್ನು ಬಹುತೇಕ ಮಂದಿ ಒಪ್ಪಿಕೊಂಡಿದ್ದಾರೆ.
ಇಂತಿಪ್ಪ ದೈಹಿಕ, ಮಾನಸಿಕ ಆರೋಗ್ಯ ರಕ್ಷಣೆಗೆ ಸಹಕಾರಿಯಾಗಬಲ್ಲ ಯೋಗ ವಿವಾದಕ್ಕೆ ಕಾರಣವಾಗಿರುವುದು ದುರದೃಷ್ಟಕರವಲ್ಲದೇ ಮತ್ತೇನು? ಯೋಗ ದಿನದಂದು ಯೋಗವನ್ನು ಕಡ್ಡಾಯಗೊಳಿಸಿದರೆ ನಾವು ವಿರೋಧಿಸುತ್ತೇವೆ, ಸೂರ್ಯನಮಸ್ಕಾರ ಇಸ್ಲಾಮ್ನ ಬೋಧನೆಗೆ ವಿರುದ್ಧವಾದುದು, ಅಲ್ಲಾಹು ವನ್ನು ಹೊರತುಪಡಿಸಿ ನಾವು ಮುಸ್ಲಿಮರು ಬೇರಾರಿಗೂ ತಲೆಬಾಗುವುದಿಲ್ಲ, ಯೋಗ ಧಾರ್ಮಿಕ ಆಚರಣೆಯನ್ನು ಎಲ್ಲರ ಮೇಲೆ ಹೇರುವ ತಂತ್ರ…. ಇತ್ಯಾದಿ ಅಪಸ್ವರಗಳಿಗೆ ಏನರ್ಥ? ಅಖಿಲ ಭಾರತೀಯ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ)ಯಂತೂ ಯೋಗ ಮತ್ತು ಸೂರ್ಯ ನಮಸ್ಕಾರವನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಿದರೆ ಅದರ ವಿರುದ್ಧ ದೇಶಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದೆ. ಆದರೆ ಕರ್ನಾಟಕದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ‘ಯೋಗವನ್ನು ಧರ್ಮದ ಪರಿಧಿಯಲ್ಲಿಟ್ಟು ನೋಡಬಾರದು. ಆರೋಗ್ಯದ ದೃಷ್ಟಿಯಿಂದ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು’ ಎಂದು ಹೇಳಿರುವ ಮಾತು ಯೋಗ ವಿರೋಧಿಗಳ ಕಣ್ಣನ್ನು ತೆರೆಸಬೇಕಾಗಿದೆ. ಅದೊಂದು ಸ್ವಾಗತಾರ್ಹ ಹೇಳಿಕೆ. ಇದೇ ವೇಳೆ ‘ಯೋಗ ವಿರೋಧಿಸುವವರು ಸಮುದ್ರಕ್ಕೆ ಹೋಗಿ ಬೀಳಲಿ’ ಎಂಬ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ ಅವರ ಆವೇಶದ ಹೇಳಿಕೆ ಮಾತ್ರ ಅಷ್ಟೇ ಖಂಡನೀಯ. ಯೋಗವನ್ನು ಕೆಲವರು ವಿರೋಧಿಸಿದ ಮಾತ್ರಕ್ಕೆ ಅವರೆಲ್ಲ ಸಮುದ್ರಕ್ಕೆ ಬೀಳಲಿ ಎಂದು ಹೇಳುವುದು ಖಂಡಿತ ಹಿಂದು ಚಿಂತನೆಯಾಗದು, ವಿವೇಕದ ಮಾತಾಗದು. ಈ ನಡುವೆ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ತಾವು ಯೋಗ ಮಾಡುತ್ತಿರುವ ಚಿತ್ರಗಳನ್ನು ಟ್ಟೀಟರ್ನಲ್ಲಿ ಹಾಕಿ ಮುಜುಗರಕ್ಕೆ ಸಿಲುಕಿದ್ದಾರೆ. ಹುಲ್ಲುಹಾಸಿನ ಮೇಲೆ ಹಾಸಿಗೆ ಹಾಕಿಕೊಂಡು ಯೋಗ ಮಾಡುತ್ತಿರುವ ಸಚಿವರ ಫೋಟೋಗಳಿಗೆ ಟ್ವೀಟರ್ನಲ್ಲಿ ಕೂರಂಬಿನ ವ್ಯಂಗ್ಯ ಪ್ರತಿಕ್ರಿಯೆಗಳು ಸಿಡಿದಿವೆ. ನಿಮಗೆ ನಿಜವಾಗಿ ಯೋಗ ಬರುತ್ತಾ? ಹುಲ್ಲುಹಾಸಿನ ಮೇಲೆ ಯಾರಾದರೂ ಹಾಸಿಗೆ ಹಾಕಿಕೊಂಡು ಯೋಗ ಮಾಡ್ತಾರಾ ಎಂದು ಟೀಕಿಸಿದ್ದಾರೆ. ಸಚಿವರಂತೂ ಬೆವತು ದಂಗಾಗಿ ಶವಾಸನಕ್ಕೆ ಮೊರೆ ಹೋಗಿದ್ದಾರೆ!
ಕೇಂದ್ರ ಸರ್ಕಾರ ಇದೀಗ ಅಲ್ಪಸಂಖ್ಯಾತರ ವಿರೋಧಕ್ಕೆ ಅಂಜಿಯೋ ಏನೋ ಯೋಗದ ಆಚರಣೆಯಲ್ಲಿ ಸೂರ್ಯ ನಮಸ್ಕಾರ ಮತ್ತು ಶ್ಲೋಕಗಳ ಪಠಣಕ್ಕೆ ವಿನಾಯಿತಿ ನೀಡಿದೆ. ಓಂಕಾರದ ಬದಲು ಅಲ್ಲಾಹು ಸ್ಮರಣೆ ಮಾಡಬಹುದೆಂದು ತಿದ್ದುಪಡಿ ಘೋಷಿಸಿದೆ. ಹೀಗೆ ತಿದ್ದುಪಡಿ ತರುವ, ಕೆಲವರನ್ನು ಓಲೈಸುವ ಅಗತ್ಯವಾದರೂ ಏನಿತ್ತು? ಯೋಗದಿನದಂದು ಆಸಕ್ತಿಯಿರುವವರು ಭಾಗವಹಿಸುತ್ತಿದ್ದರು. ಇಷ್ಟವಿಲ್ಲದವರು ಬಿಡುತ್ತಿದ್ದರು. ಕೆಲವರನ್ನು ಸಂತುಷ್ಟಿಗೊಳಿಸುವುದಕ್ಕಾಗಿ ಯೋಗದ ಕ್ರಮಬದ್ಧ ಪದ್ಧತಿಗೇ ಕತ್ತರಿ ಹಾಕುವ ಕ್ರಮ ಖಂಡಿತ ಸಮಂಜಸವಲ್ಲ.
ಅಷ್ಟಕ್ಕೂ ಮುಸಲ್ಮಾನರು ಪ್ರತಿನಿತ್ಯ ಐದು ಹೊತ್ತು ಸಲ್ಲಿಸುವ ನಮಾಜು ಕೂಡ ಯೋಗವನ್ನು ಒಳಗೊಂಡಿದೆ ಎಂಬುದು ಅವರಿಗೆ ಗೊತ್ತಿಲ್ಲವೇ? ಯೋಗ ಯಾವುದರಲ್ಲಿಲ್ಲ? ಮನುಷ್ಯ ಪ್ರತಿನಿತ್ಯ ಹೊತ್ತು ಹೊತ್ತಿಗೆ ಸೇವಿಸುವ ಊಟ, ತಿಂಡಿ, ಕೆಲಸ, ನಿದ್ರೆ, ನಡಿಗೆ ಮುಂತಾದ ಎಲ್ಲಾ ದೈಹಿಕ ಕ್ರಿಯೆಗಳಲ್ಲೂ ಯೋಗ ಇz ಇದೆ. ಕ್ರಮಬದ್ಧ ಉಸಿರಾಟ, ಶಿಸ್ತುಬದ್ಧ ಜೀವನ, ಆರೋಗ್ಯಕರ ಚಿಂತನೆ-ಇವೆಲ್ಲವೂ ಯೋಗವೇ. ಯೋಗ ಎನ್ನುವುದು ಕೇವಲ ಶಾರೀರಿಕ ಕಸರತ್ತು ಎಂದು ಭಾವಿಸುವವರು ಯೋಗದ ಕುರಿತು ಅರಿಯದ ಅಜ್ಞಾನಿಗಳು ಎಂದಷ್ಟೇ ಹೇಳಬೇಕಾಗುತ್ತದೆ.
ಮನುಕುಲಕ್ಕೆ ಒಳಿತು ತರುವ ಸಂಗತಿಗಳನ್ನು ನಾವು ವಿಶಾಲ ದೃಷ್ಟಿಯಿಂದ ನೋಡುವ, ಸೂಕ್ಷ್ಮವಾಗಿ ಗ್ರಹಿಸುವ ಮನೋಭಾವ ಬೆಳೆಸಿಕೊಳ್ಳಬೇಕೇ ಹೊರತು ಪ್ರತಿಯೊಂದನ್ನೂ ಬಣ್ಣದ ಕನ್ನಡಕದ ಮೂಲಕ ನೋಡುವ ಸಣ್ಣತನ ತೋರಬಾರದು. ಆರೋಗ್ಯಕರ ಜೀವನಶೈಲಿಗೆ ಪೂರಕವಾಗುವ ಯೋಗದ ವಿಚಾರದಲ್ಲಾದರೂ ರಾಜಕೀಯ ಬೆರೆಸುವುದು ಬೇಡ. ಯೋಗದ ಬಗ್ಗೆ ಹೀಗೆ ಕೆಸರೆರಚಾಟ ನಡೆಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರು ಕೆಡುತ್ತದೆ. ಶಾಂತಿ, ಸಹಬಾಳ್ವೆಗೆ ದಾರಿ ಮಾಡಿಕೊಡುವ ಯೋಗ ಭಾರತದಲ್ಲೇ ಅಶಾಂತಿಗೆ ಕಾರಣವಾಗುತ್ತಿದೆಯಲ್ಲ ಎಂಬ ಸಂದೇಹ ಉಳಿದ ಜಗತ್ತಿನ ಜನರಿಗೆ ಉಂಟಾಗಬಹುದು. ಹಾಗಾಗದಿರಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.