ಕಾಂಗ್ರೆಸ್ ಮತ್ತು ಬಿಎಸ್ಪಿ ಪಕ್ಷದ ನೆರವಿನೊಂದಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಶ್ರೀ ಹೆಚ್. ಡಿ. ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸುವ ವೇಳೆ ಅದೇ ವೇದಿಕೆಯ ಮೇಲೆ ದೇಶದ ಎಲ್ಲಾ ಮೋದಿ ವಿರೋಧೀ ನಾಯಕ ನಾಯಕಿಯರೂ ಒಟ್ಟಾಗಿ ನಿಂತು ಕೈ ಕೈ ಹಿಡಿದು ಮೇಲಕ್ಕೆತ್ತಿ ತೋರಿಸುವ ಮೂಲಕ ತೃತೀಯ ರಂಗದ ಒಗ್ಗಟ್ಟನ್ನು ದೇಶದ ಜನರ ಮುಂದೆ ಸಾರಿದ್ದರು. ಅಂದು ದೇಶದ ಬಹುತೇಕ ಎಲ್ಲಾ ಮಾಧ್ಯಮಗಳೂ ಮುಂದೆ ನರೇಂದ್ರ ಮೋದಿಯವರ ಪಕ್ಷ ಅಧಿಕಾರಕ್ಕೆ ಬರುವುದು ಕಷ್ಟ ಸಾಧ್ಯ ಎಂದೇ ಚರ್ಚೆ ನಡೆಸಿದ್ದವು.
ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಹೇಗೆ ಬೇಷರತ್ತಾಗಿ ತಾನೇ ಮುಂದೆ ಹೋಗಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸಿತ್ತೋ ಅದೇ ರೀತಿಯಲ್ಲೇ ನಮಗೂ ಬೆಂಬಲ ನೀಡುತ್ತದೆಯೆಂದೂ, ಹಾಗೆ ಕಾಂಗ್ರೆಸ್ ಪಕ್ಷದಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೇಷರತ್ ಬೆಂಬಲ ಪಡೆದು ನಮ್ಮ ನಮ್ಮ ರಾಜ್ಯಗಳಲ್ಲಿ ಮತ್ತಷ್ಟು ಗಟ್ಟಿಯಾಗಿ ನೆಲೆ ನಿಲ್ಲಬಹುದು ಎಂದು ಕಾಂಗ್ರೆಸ್ಸೇತರ ಮೋದಿ ವಿರೋಧೀ ಪ್ರಾದೇಶಿಕ ಪಕ್ಷಗಳು ಕನಸು ಕಂಡಿದ್ದವು. ಆದರೆ ಕೇವಲ ಮೂರ್ನಾಲ್ಕು ತಿಂಗಳಲ್ಲೇ ಆ ಪ್ರಾದೇಶಿಕ ಪಕ್ಷಗಳಿಗೆ ದೊಡ್ಡ ಭ್ರಮನಿರಸನವುಂಟಾದಂತಿದೆ. ರಾಹುಲ್ ಗಾಂಧಿ ನೇತೃತ್ವದ ಐತಿಹಾಸಿಕ ಕಾಂಗ್ರೆಸ್ ಪಕ್ಷ ತಾವು ಹೇಳಿದಂತೆ ಕೇಳುತ್ತಿಲ್ಲ, ಬದಲಾಗಿ ನಮ್ಮನ್ನು ಬಳಸಿಕೊಂಡು ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಮುಂದಾಗಿದೆ ಎನ್ನುವ ಸತ್ಯ ಅವುಗಳಿಗೆ ಅರಿವಾದಂತಿದೆ. ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಸೀಟು ಹಂಚಿಕೆ ಮಾಡಿಕೊಂಡಿದ್ದೇ ಆದರೆ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ಪೂರ್ತಿಯಾಗಿ ನಾಮಾವಶೇಷವಾಗಿ ಬಿಡಬಹುದು ಎನ್ನುವ ಭಯ ಆ ಕಾಂಗ್ರೆಸ್ಸೇತರ ಪಕ್ಷಗಳಿಗೆ ಕಾಡುತ್ತಿರುವಂತಿದೆ.
ಈ ಅನುಮಾನಗಳಿಗೆ ಪೂರಕವೆಂಬಂತೆ ಅಂದು ಕರ್ನಾಟಕದ ವೇದಿಕೆಯ ಮೇಲೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಜೊತೆ ನಿಂತು ನಗುನಗುತ್ತಾ ಕೈ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ್ದ ಬಿಎಸ್ಪಿ ಪಕ್ಷದ ದಲಿತ ನಾಯಕಿ ವರ್ಷಾಂತ್ಯದಲ್ಲಿ ನಡೆಯುವ ಮಧ್ಯ ಪ್ರದೇಶ ಮತ್ತು ರಾಜಸ್ಥಾನ ಚುನಾವಣೆ ಮತ್ತು 2019 ರ ಲೋಕ ಸಭಾ ಚುನಾವಣೆಗಳಲ್ಲಿ ಯಾವುದೇ ಪಕ್ಷಗಳ ಜೊತೆಗೂ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಮಾಯಾವತಿಯವರು ಅಂದು ತಾವೇ ಕೈ ಹಿಡಿದಿದ್ದ ಕೈ ನಾಯಕರಿಗೆ ಕೈ ಕೊಟ್ಟು ಮಾಯವಾಗಿದ್ದಾರೆ.
ಕೇವಲ ಅಷ್ಟೇ ಆಗಿದ್ದರೆ ಪರವಾಗಿಲ್ಲ. ಮಾಯದಂತಾ ಮಾಯಾವತಿಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಛತ್ತೀಸ್ ಘಡದಲ್ಲಿ ಕಾಂಗ್ರೆಸ್ನಿಂದ ಹೊರ ಹಾಕಲ್ಪಟ್ಟು ಕಾಂಗ್ರೆಸ್ ಪಕ್ಷಕ್ಕೆ ಸಡ್ಡು ಹೊಡೆದಿರುವ ಅಜಿತ್ ಜೋಗಿಯವರ ಜನತಾ ಕಾಂಗ್ರೆಸ್ನೊಂದಿಗೆ ಕೈ ಜೋಡಿಸಿ ಕೈ ಪಕ್ಷಕ್ಕೆ ಮತ್ತೊಂದು ಆಘಾತ ನೀಡಿದ್ದಾರೆ! ಮೈತ್ರಿಗಾಗಿ ನಿರಂತರ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಸೀಟು ಹಂಚಿಕೆ ವಿಚಾರಕ್ಕೆ ಬಂದ ಕೂಡಲೇ ತಾನು ಹೇಳಿದಂತೆಯೇ ಕೇಳಬೇಕೆಂದು ಒತ್ತಡ ಹಾಕುತ್ತಿರುವುದೇ ಮಿತ್ರ ಪಕ್ಷಗಳು ಒಂದೊಂದಾಗಿ ಘಟಬಂಧನದಿಂದ ಕಳಚಿಕೊಳ್ಳುತ್ತಿರುವುದಕ್ಕೆ ಕಾರಣ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಆದರೆ ಮಾಯಾವತಿಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ಜಾತಿವಾದಿ ಮನಃಸ್ಥಿತಿಯ ಪಕ್ಷವಾದ ಕಾಂಗ್ರೆಸ್ ಪಕ್ಷದ ಕೆಲ ನಾಯಕರುಗಳು ಕೇಂದ್ರದ ಇಡಿ ಮತ್ತು ಸಿಬಿಐ ಭಯದಿಂದಾಗಿ ಮೈತ್ರಿಗೆ ಒಪ್ಪುತ್ತಿಲ್ಲ” ಎನ್ನುವುದರ ಜೊತೆ ಜೊತೆಗೇ “ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ಮತ್ತು ಪ್ರಮಾದಗಳನ್ನು ಜನ ಯಾವತ್ತೂ ಕ್ಷಮಿಸುವುದಿಲ್ಲ” ಎನ್ನುವ ಮೂಲಕ ಭ್ರಷ್ಟ ಕಾಂಗ್ರೆಸ್ ಪಕ್ಷದ ಗುಟ್ಟು ರಟ್ಟು ಮಾಡಿಯೇ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನದಿಂದ ಶಾಶ್ವತವಾಗಿ ದೂರ ಸರಿದಿದ್ದಾರೆ.
ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರಂತೂ ಮೊದಲೇ ತಮ್ಮ ಪಕ್ಷ ಮಹಾಘಟಬಂಧನದಿಂದ ದೂರ ಇರುವುದಾಗಿ ಘೋಷಿಸಿದ್ದರು. ಸಮಾಜವಾದಿ ಪಾರ್ಟಿ ಕೂಡಾ ವರ್ಷಾಂತ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಳಿಗೆ ತಮ್ಮ ಪಕ್ಷದಿಂದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸ್ವತಂತ್ರವಾಗಿ ಬಿಡುಗಡೆ ಮಾಡುವ ಮೂಲಕ ಮಹಾಘಟಬಂಧನದಿಂದ ಹೊರ ನಡೆಯುವ ಸೂಚನೆ ನೀಡಿದೆ. ಮೇಲ್ನೋಟಕ್ಕೆ ಕಾಣಿಸುವ ಈ ಎಲ್ಲಾ ಕಾರಣಗಳನ್ನು ಹೊರತುಪಡಿಸಿ ನೋಡಿದರೆ ನಿಜವಾದ ಕಾರಣ ಬೇರೆಯೇ ಇದೆ. ಮಹಾಘಟಬಂಧನದಲ್ಲಿ ಕೈ ಜೋಡಿಸಿರುವ ಬಹುತೇಕ ಎಲ್ಲಾ ಪಕ್ಷಗಳ ನಾಯಕರೂ ಪ್ರಧಾನಿ ಆಕಾಂಕ್ಷಿಗಳೇ ಆಗಿದ್ದಾರೆ. ಆದರೆ ಆ ಪಕ್ಷಗಳನ್ನು ಬಳಸಿಕೊಂಡು ಹೇಗಾದರೂ ಒಮ್ಮೆ ತಾನು ಪ್ರಧಾನಿಯಾಗಲೇಬೇಕು ಎನ್ನುವುದು ರಾಹುಲ್ ಗಾಂಧಿಯ ಕನಸು.
ಒಂದು ವೇಳೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಹಾಘಟಬಂಧನ ಅಧಿಕಾರಕ್ಕೆ ಬಂದರೂ ತಾವು ಪ್ರಧಾನಿಯಾಗುವುದು ಸಾಧ್ಯವಿಲ್ಲ ಎನ್ನುವ ಸತ್ಯ ಅರಿವಾಗುತ್ತಿದ್ದಂತೆಯೇ ಒಂದೊಂದೇ ಪಕ್ಷಗಳು ಘಟಬಂಧನದಿಂದ ಬಿಡಿಸಿಕೊಂಡು ಸ್ವತಂತ್ರವಾಗಿ ಸ್ಪರ್ಧಿಸುವ ಮಾತನ್ನಾಡುತ್ತಿವೆ ಎನ್ನುವುದು ಸಾಮಾನ್ಯ ಮತದಾರರ ಅನಿಸಿಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.