ಮಂತ್ರಾಲಯ ಆರ್ಟ್ ಮೂವೀಸ್ ಸಂಸ್ಥೆಯಿಂದ ಎನ್.ಭಕ್ತವತ್ಸಲಂ, ಎನ್.ರಾಮಚಂದ್ರ ಹಾಗೂ ದೊರೆ-ಭಗವಾನ್ ರವರು 1979 ರಲ್ಲಿ ಕನ್ನಡದ ಖ್ಯಾತ ಸಾಹಿತಿಗಳಾದ ಶ್ರೀ ತ.ರಾ.ಸು. ರವರ “ಚಂದನದಗೊಂಬೆ” ಎಂಬ ಕಾದಂಬರಿ ಆಧಾರಿತ ಸಿನಿಮಾವನ್ನು ಚಿತ್ರಕಥೆ ಬರೆದು, ದೊರೆ-ಭಗವಾನ್ ರವರು ನಿರ್ದೇಶಿಸಿದ್ದಾರೆ. ಆರ್.ಚಿಟ್ಟಿಬಾಬು ರವರ ಛಾಯಾಗ್ರಹಣ, ರಾಜನ್-ನಾಗೇಂದ್ರ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ಅನಂತನಾಗ್, ಲಕ್ಷ್ಮಿ, ಲೋಕೇಶ್, ಅಶ್ವಥ್, ಸುಂದರ್ ರಾಜ್, ಸಂಪತ್, ಸಾವಿತ್ರಿ, ಮೈಸೂರು ಲೋಕೇಶ್, ಉಮಾ ಶಿವಕುಮಾರ್ ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಚಿ.ಉದಯಶಂಕರ್ ರವರು ಬರೆದ ಹಾಡುಗಳಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಎಸ್.ಜಾನಕಿ ರವರು ದನಿಯಾಗಿದ್ದಾರೆ.
ಮೂರನೇ ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ಪೋಷಕ ನಟಿ (ಉಮಾ ಶಿವಕುಮಾರ್) ಎಂಬ ರಾಜ್ಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಕಥೆ:
ಊರಿನ ಒಂದಷ್ಟು ಗೆಳೆಯರು ಕುಳಿತು ಇಸ್ಪೀಟು ಆಟ ಆಡುತ್ತಿರುವ ದೃಶ್ಯದೊಂದಿಗೆ ಸಿನಿಮಾ ಆರಂಭವಾಗುತ್ತದೆ. ಸ್ಪುರಧ್ರೂಪಿಯಾದ ಯುವಕ ಸೀತಾರಾಮು (ಅನಂತನಾಗ್) ಊರಿನ ಶಾನುಭೋಗನಾಗಿ ಕೆಲಸ ಮಾಡುತ್ತಿರುತ್ತಾನೆ ಕಂದಾಯ ಕಟ್ಟಲು ಅಶಕ್ತರಾದ ಅದೆಷ್ಟೋ ಬಡಮಂದಿಯ ಕಂದಾಯವನ್ನು ತಾನೇ ಸಾಲ ತಂದಾದರೂ ಕಟ್ಟುವಷ್ಟು ಒಳ್ಳೆಯ ಮನಸಿರುವವನು. “ತುಂಬಾ ಒಳ್ಳೆಯತನ ಹಾಗೂ ಧಾರಾಳಿತನ ಒಳ್ಳೆಯದಲ್ಲ” ಎಂದು ತನ್ನ ಸ್ನೇಹಿತ ರಾಘಣ್ಣನ (ಸುಂದರ್ ರಾಜ್) ಹಾಗೂ ಅವನ ತಂದೆ-ತಾಯಿಯರು ಹೇಳಿದರೂ ಬದಲಾಗದ ಮನಸು ಅವನದು. ಮತ್ತೊಂದು ಊರಿನ ಮೇಷ್ಟ್ರು ಲಕ್ಷ್ಮಣರಾಯರು (ಅಶ್ವಥ್) ರವರು ಮಗಳಿಗಾಗಿ ಗಂಡು ಹುಡುಕಿಕೊಂಡು ಬಂದಾಗ, ಅಕಸ್ಮಾತ್ ಇದ್ದ ಒಂದು ಬಸ್ ಮಿಸ್ ಆಗುತ್ತದೆ. ಆಗ ನಡೆದುಕೊಂಡೇ ಊರಿಗೆ ಹೊರಟ ಲಕ್ಷ್ಮಣರಾಯರಿಗೆ, ರಾಘಣ್ಣನ ತಂದೆಯ ಪರಿಚಯವಾಗಿ ಅಲ್ಲೇ ಊಟ ಮುಗಿಸಿ, ಮಗಳಿಗೆ ಗಂಡು ಹುಡುಕಲು ಸಹಾಯ ಮಾಡಲು ವಿನಂತಿಸುತ್ತಾನೆ. ಸೀತಾರಾಮುವಿಗೆ ಲಕ್ಷ್ಮಣರಾಯರ ಮಗಳು ರತ್ನಳನ್ನು (ಲಕ್ಷ್ಮಿ) ಕೊಡುವಂತೆ ಕೇಳಲು ದಂಪತಿಗಳಿಬ್ಬರೂ ಲಕ್ಷ್ಮಣರಾಯರ ಮನೆಗೆ ಹೋಗುತ್ತಾರೆ. ಬಂದವರಿಗೆ ನೆಲದ ಮೇಲೆ ಚಾಪೆ ಹಾಸಿ, ಅವರನ್ನು ಕುಳ್ಳಿರಿಸಿ, ಮೇಷ್ಟ್ರನ್ನು ಕರೆದುಕೊಂಡು ಬರಲು ರತ್ನಳ ತಾಯಿ (ಸಾವಿತ್ರಿ) ಹೋಗುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬಂದ ರತ್ನಳನ್ನು ನೋಡಿ, ಒಪ್ಪಿಕೊಳ್ಳುತ್ತಾರೆ. ಮನೆಗೆ ವಾಪಸ್ಸು ಬಂದ ರಾಘಣ್ಣನ ತಾಯಿ ಹಾಗೂ ರಾಘಣ್ಣ ಸೀತಾರಾಮುವಿಗೆ ತಮಾಷೆಗಾಗಿ ಹುಡುಗಿ ನೋಡಲು ಚೆನ್ನಾಗಿಲ್ಲ ಎಂದೇ ರೇಗಿಸುತ್ತಾರೆ. ಆಗ ಹುಡುಗಿಯನ್ನು ಬೇಡವೆಂದು ಹೇಳಲು ಆಕೆಯ ಮನೆಗೆ ಹೋಗುತ್ತಾನೆ. ಆ ಹುಡುಗಿಯನ್ನು ಪ್ರತ್ಯಕ್ಷವಾಗಿ ನೋಡಿದಾಗ ಮನಸು ಬದಲಿಸಿ, ಮದುವೆಗೆ ಒಪ್ಪಿ “ಆಕಾಶದಿಂದ ಧರೆಗಿಳಿದ ರಂಭೆ, ಇವಳೆ ಇವಳೇ ಚಂದನದಗೊಂಬೆ” ಎಂದು ಹಾಡುತ್ತಾ ಬರುತ್ತಾನೆ. ಈ ಹಾಡು ಇವತ್ತಿಗೂ ಬಹುತೇಕ ಕನ್ನಡ ಚಿತ್ರರಸಿಕರ ಬಾಯಲ್ಲಿ ಗುನುಗುತ್ತಿರುತ್ತದೆ. ಬಡವರಾದ ಮೇಷ್ಟ್ರು ಲಕ್ಷ್ಮಣರಾಯರಿಗೆ ಊರಿನ ಪ್ರಮುಖರೆಲ್ಲರೂ ನೆರವಾಗುತ್ತಾರೆ. ಮದುವೆ ಆಗಿ, ಬಲಗಾಲಿಟ್ಟು ಆಕೆ ಮನೆಯನ್ನೂ ಸೇರುತ್ತಾಳೆ. ಹೊಸದಾಗಿ ಮದುವೆಯಾದ ಆ ಜೋಡಿ, ಬಾಳು ಮಧುರ ರಸಾನುಭವ ನೀಡುತ್ತದೆ. ಅನ್ಯೋನ್ಯತೆ ಜೊತೆಯಾಗಿರುತ್ತದೆ. ಗಂಡ-ಹೆಂಡಿರ ಅನ್ಯೋನ್ಯ ಪ್ರೇಮಫಲವಾಗಿ ಗಂಡು ಮಗು ನಾರಾಯಣನಿಗೆ ಜನ್ಮ ನೀಡುತ್ತಾಳೆ ರತ್ನ. ತನ್ನ ಗುಣದಲ್ಲಿ ಸೀತಾರಾಮು ಮಾತ್ರ ಬದಲಾಗಿರುವುದಿಲ್ಲ, ಅದೇ ಧಾರಾಳಿತನ. ಕಣ್ಣೀರಿಗೆ ಕರಗುವ ಹೃದಯವುಳ್ಳಾತ. ಊರಲ್ಲಿ ನಾಟಕ ಆಡಲು ಬಂದ ಕಲಾವಿದರಿಗೆ, ಮನೆಗೆ ಕರೆತಂದು ಹೊಟ್ಟೆ ತುಂಬಾ ಊಟ ಹಾಕುವ ಪುಣ್ಯಾತ್ಮ ಸೀತಾರಾಮು. ತನ್ನ ತೋಟದಲ್ಲಿ ಬಾವಿ ತೋಡಿಸುವಾಗ, ಉಕ್ಕಿಬಂದ ಗಂಗೆಯ ಪೂಜೆ ಮಾಡಲು ಬಾವಿಯ ಆಳಕ್ಕೆ ಇಳಿದಿದ್ದಾಗ, ಆಕಸ್ಮಿಕವಾಗಿ ಆತನ ಮೇಲೆ ಬಿದ್ದ ಕಲ್ಲು- ಮಣ್ಣಿಂದ ಆತ ಸಾವನಪ್ಪುತ್ತಾನೆ. ಒಳ್ಳೆಯವರಿಗೆ ಹೆಚ್ಚು ಕೇಡುಗಾಲ ಎಂಬಂತೆ ಅಲ್ಲಿಂದ ರತ್ನಮ್ಮಳ ಜೀವನದಲ್ಲಿ ತಂಗಾಳಿಗಿಂತ ಬಿರುಗಾಳಿಯೇ ಹೆಚ್ಚಾಗಿ ಬೀಸುತ್ತದೆ.
ಕಳೆದುಕೊಂಡ ಗಂಡನ ನೆನಪಿನಲ್ಲಿ ಉಳಿದ ಜೀವನ ಸವೆಸುವ ಸಲುವಾಗಿ, ಗಂಡನ ಮನೆಯಲ್ಲಿಯೇ ಏಕಾಂಗಿಯಾಗಿ ಜೀವನ ನಡೆಸಲು ಆಕೆ ಮನಸು ಮಾಡುತ್ತಾಳೆ. ಪರೋಪಕರಕ್ಕಾಗಿ ಸೀತಾರಾಮು ಮಾಡಿದ ಸಾಲವೇ ಆಕೆಯ ನೆಮ್ಮದಿಯ ಬದುಕಿಗೆ ಉರುಳಾಗಿ ನಿಲ್ಲುತ್ತದೆ. ಹೆಣ್ಣುಬಾಕ ಚಿನ್ನೋಬಣ್ಣ (ಲೋಕೇಶ್) ಆಕೆಯ ಸಹಾಯಕ್ಕೆ ನಿಲ್ಲುತ್ತಾನೆ. ರತ್ನ ತಪ್ಪು ಹೆಜ್ಜೆಯನ್ನಿಡುತ್ತಿದ್ದಾಳೆಂದು ಭಾವಿಸಿ, ರಾಘಣ್ಣ ಕೋಪದ ಕೈಗೆ ತನ್ನ ಬುದ್ದಿ ನೀಡುತ್ತಾನೆ. ಅದೇ ಕೋಪದಿಂದ ರತ್ನಳಿಗೆ ದೂರವಾಗುತ್ತಾನೆ. ಈರಮ್ಮ (ಉಮಾ ಶಿವಕುಮಾರ್) ಹಾಗೂ ವಿಠ್ಠೋಬ (ಮೈಸೂರು ಲೋಕೇಶ್) ಹಬ್ಬಿಸಿದ ಸುಳ್ ಸುದ್ದಿಯೊಂದು ಒಣಗಿದ ಹುಲ್ಲಿಗೆ ತಾಕಿದ ಸಣ್ಣ ಬೆಂಕಿಕಿಡಿಗೆ ಬೆಂದು ಹೊಗೆಯಾಗಿ, ಆಗಸದ ತುಂಬಾ ಹೊಗೆ ಮುತ್ತುವಂತೆ, ಕಿವಿಯಿಂದ ಕಿವಿಗೆ ಚಿನ್ನೊಬಣ್ಣ-ರತ್ನ ಅಕ್ರಮ ಸಂಬಂಧ ಹೊಂದಿದ್ದಾರೆಂದು ಸುದ್ದಿ ಹಬ್ಬುತ್ತದೆ. ಅದರಿಂದ ಮನನೊಂದ ರತ್ನ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. “ಈಕೆ ನನ್ನ ತಂಗಿ, ಈಕೆ ನನ್ನ ಮನಸು ತಿದ್ದಿದ್ದ ಮಹಾತಾಯಿ” ಎಂದು ಚಿನ್ನೋಬಣ್ಣ ಕಣ್ಣೀರಿಡುತ್ತಾ ಹೇಳುತ್ತಾನೆ. ರಾಘಣ್ಣ ಹಾಗೂ ಹಲವರ ಕೋಪದಿಂದ ಆದ ಅನಾಹುತ ಕೈಮೀರಿರುತ್ತೆ. ಒಟ್ಟಾಗಿ ಕಥೆ ದುರಂತ ಅಂತ್ಯ ಕಾಣುತ್ತದೆ.
ಈ ಸಿನಿಮಾದ ಹಾಡುಗಳ ಕುರಿತಂತೆ ಇಲ್ಲಿ ಹೇಳಲೇಬೇಕು. ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಎಸ್.ಜಾನಕಿ ರವರ ದನಿಯಲ್ಲಿ ಈ ಸಿನಿಮಾದ ಗೀತೆಗಳು ಇಂದಿಗೂ ಹಿಟ್. “ಆಕಾಶದಿಂದ ಧರೆಗಿಳಿದ ರಂಭೆ, ಇವಳೆ ಇವಳೆ ಚಂದನದಗೊಂಬೆ”, “ಈ ಬಿಂಕ ಬಿಡು ಬಿಡು, ನಾನಿನ್ನ ಬಲ್ಲೆನು”, ” ಮನೆಯನು ಬೆಳಗಿದೆ ಇಂದು” ಹಾಗೂ “ಕಂಗಳು ತುಂಬಿರಲು, ಕಂಬನಿ ಹಾಡಿರಲು” ಗೀತೆಗಳು ಈವತ್ತಿಗೂ ಕನ್ನಡ ಚಿತ್ರರಸಿಕರ ನೆನಪಿನಲ್ಲಿವೆ. ಈ ಹಾಡುಗಳನ್ನು ಕೇಳುವಾಗ ಮನಸು ಮುದಗೊಳ್ಳುವುದಂತೂ ಗ್ಯಾರಂಟಿ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವಾಗಿನ ಮನೋ ತೃಪ್ತಿ ಹಾಗೂ ಅದರ ಪ್ರತಿಫಲ ಕುರಿತಂತೆ ವಿವೇಚಿಸಲು.
2. ಒಬ್ಬರಿಗೆ ಕೆಡುಕು ಮಾಡುವ ಮುನ್ನ, ತಮಗಾಗುವ ಅಡ್ಡ ಪರಿಣಾಮಗಳನ್ನು ಕುರಿತು ವಿವೇಚಿಸಲು.
3. “ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು” ಎಂಬುದರ ಅಂತರಾರ್ಥ ತಿಳಿಯಲು.
4. ಕೋಪದ ಕೈಗೆ ಬುದ್ದಿ ಕೊಟ್ಟು, ದಾಸನಾದರೆ ಆಗುವ ನಷ್ಟ ಹಾಗೂ ತೊಂದರೆಗಳ ಕುರಿತಂತೆ ಅರಿಯಲು.
5. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.