ಇಂಧೋರ್: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ದಾವೂದಿ ಬೊಹ್ರಾ ಸಮುದಾಯ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಆ ಸಮುದಾಯ ದೇಶಕ್ಕೆ ನೀಡಿದ ಕೊಡುಗೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಮಧ್ಯಪ್ರದೇಶದ ಇಂಧೋರ್ನ ಸೈಫೀ ಮಸೀದಿಯಲ್ಲಿ ಸಮಾರಂಭ ಜರುಗಿದ್ದು, ದಾವೂದಿ ಬೊಹ್ರಾ ಸಮುದಾಯದ ಸಮಾವೇಶದಲ್ಲಿ ಭಾಗವಹಿಸಿದ ಮೊತ್ತ ಮೊದಲ ಪ್ರಧಾನಿ ಮೋದಿಯಾಗಿದ್ದಾರೆ. ಧರ್ಮಗುರು ಸೈದ್ನಾ ಮುಫಾದ್ದಲ್ ಸೈಫುದ್ದೀನ್ ಈ ವೇಳೆ ಉಪಸ್ಥಿತರಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಭಾರತ ಇಡೀ ವಿಶ್ವವೇ ಒಂದು ಎಂಬ ‘ವಸುದೈವ ಕುಟುಂಬಕಂ’ ತತ್ವದಲ್ಲಿ ನಂಬಿಕೆಯನ್ನು ಇಟ್ಟಿದ್ದು, ಇದು ಭಾರತಕ್ಕೆ ಇತರ ರಾಷ್ಟ್ರಗಳಿಗಿಂತ ವಿಭಿನ್ನವಾದ ಗುರುತಿಸುವಿಕೆಯನ್ನು ನೀಡುತ್ತದೆ. ಬೊಹ್ರಾ ಸಮುದಾಯ ಇದಕ್ಕೊಂದು ಉತ್ತಮ ಉದಾಹರಣೆ’ ಎಂದರು.
ಬೊಹ್ರಾ ಸಮುದಾಯ ಸದಾ ಶಾಂತಿಗಾಗಿ ಶ್ರಮಿಸಿದೆ ಮತ್ತು ಮಹಾತ್ಮ ಗಾಂಧೀಜಿಯವರೊಂದಿಗೆ ಈ ಸಮುದಾಯ ಸೇವೆ ಸಲ್ಲಿಸಿದೆ ಎಂದು ಮೋದಿ ಪ್ರತಿಪಾದಿಸಿದ್ದಾರೆ.
ದಾವೂದಿ ಬೊಹ್ರಾ ಎಂಬುದು ಶಿಯಾ ಮುಸ್ಲಿಂರ ಪೈಕಿಯ ಒಂದು ಪಂಗಡವಾಗಿದೆ. ಇಂದು ಈ ಸಮುದಾಯ ಅಶರ ಮುಬಾರಕವನ್ನು ಆಚರಣೆ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಸಮಾವೇಶವನ್ನು ಏರ್ಪಡಿಸಿತ್ತು.