ಮೂಡಬಿದಿರೆ: ಪ್ರತಿಯೊಬ್ಬ ಮಹಿಳೆಯೂ ಸಬಲೀಕರಣದ ಪಥದಲ್ಲಿ ಆರ್ಥಿಕವಾಗಿ ಸದೃಢರಾಗಬೇಕು. ಕುಟುಂಬಕ್ಕೆ ಎರಡನೇ ಆದಾಯ ಅನಿರ್ವಾಯವಾದಾಗ ಮಾತ್ರ ಮಹಿಳೆಯರು ಉದ್ಯೋಗ ಮಾಡಬೇಕು ಎನ್ನುವ ಮನಸ್ಥಿತಿ ಬದಲಾಗಿ, ವ್ಯಕ್ತಿತ್ವ ವಿಕಸನದ ಉದ್ದೇಶವನ್ನೂ ಹೊಂದಿರಬೇಕು ಎಂದು ಐ.ಜಿ.ಪಿ ರೂಪಾ ಹೇಳಿದರು.
ಆಳ್ವಾಸ್ ಕಾಲೇಜಿನಲ್ಲಿ ಮಂಗಳವಾರ ಕುವೆಂಪು ಸಭಾಭವನದಲ್ಲಿ ವುಮೆನ್ ಡೆವಲಪ್ಮೆಂಟ್ ಸೆಲ್ ಐಕ್ಯೂಎಸಿ ಅಧೀನದಲ್ಲಿ “ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ’ ಎಂಬ ವಿಷಯದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
’ಈಗಿನ ಪೈಪೋಟಿ ಯುಗದಲ್ಲಿ ನಾವು ಸಮಸ್ಯೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಆದರೆ ಹಿರಿಯರಿಂದ ಅಥವಾ ಮಾನವ ಸಂಬಂಧಗಳಿಂದ ಪರಿಹಾರಗಳನ್ನು ಪಡೆಯುವುದನ್ನು ಮರೆತಿದ್ದೇವೆ. ನಮ್ಮಲ್ಲಿರುವ ಕೌಶಲ್ಯವನ್ನು ನಾವೇ ಗುರುತಿಸಿಕೊಂಡು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆದರೆ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದು ಮುಖ್ಯ. ಸ್ತ್ರೀಯು ಸಬಲಳಾಗಬೇಕಾದರೆ ತನ್ನ ಸಹಾಯವನ್ನು ತಾನೇ ಮಾಡಿಕೊಳ್ಳಬೇಕೇ ಹೊರತು ಇತರರಿಂದ ಸಹಕಾರವನ್ನು ಅಪೇಕ್ಷಿಸಕೂಡದು. ತನ್ನ ಸಾಧನೆಯತ್ತ ಸಾಗಲು ಆಕೆ ಸನ್ಮಾರ್ಗದೊಂದಿಗೆ, ಆತ್ಮವಿಶ್ವಾಸ, ಕನಸು ನನಸಾಗಿಸುವ ಛಲ ಹಾಗೂ ಸವಾಲುಗಳನ್ನೆದುರಿಸುವ ಧೈರ್ಯವನ್ನು ಹೊಂದಿರಬೇಕು.” ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು “ಎಲ್ಲಾ ಅಧಿಕಾರಗಳಿಗೂ ತಮ್ಮ ತಮ್ಮ ಕರ್ತವ್ಯ ತಿಳಿದಿರುತ್ತದೆ. ಕಾನೂನಿನ ಚೌಕಟ್ಟಿನಲ್ಲಿದ್ದುಕೊಂಡು ಕೆಲವೊಂದು ಬಾರಿ ನಾವು ಕಾರ್ಯ ನಿರ್ವಹಿಸಬೇಕಾಗುತ್ತದೆ. ಸೋಲುಗಳನ್ನು ಪಾಠದಂತೆ ಸ್ವೀಕರಿಸಿ ಮುನ್ನಡೆಯಬೇಕು.” ಎಂದು ಹೇಳಿದರು. ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಬಗ್ಗೆ ಮಾಹಿತಿಗಳನ್ನು ಹಾಗೂ ಸಲಹೆಯನ್ನು ನೀಡಿದರು.
ಆಳ್ವಾಸ್ ಕಾಲೇಜಿನ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, “ಯುವಜನತೆ ಡಿ.ರೂಪಾ ಅವರನ್ನು ಆದರ್ಶವಾಗಿಸಿಕೊಂಡು ತಮ್ಮ ಮುಂದಿನ ಗುರಿಯ ಕುರಿತು ಈಗಿನಿಂದಲೆ ಕಾರ್ಯಪ್ರವೃತ್ತರಾಗಬೇಕು ಹಾಗೂ ಅದನ್ನು ಸಾಧಿಸುವಲ್ಲಿ ಏಕಾಗ್ರತೆಯನ್ನು ಹೊಂದಿರಬೇಕು” ಎಂದರು.
ಡಿ.ರೂಪಾ ಪ್ರಸ್ತುತ ಬೆಂಗಳೂರಿನ ಹೋಮ್ ಗಾರ್ಡ್ ಹಾಗೂ ಸಿವಿಲ್ ಡಿಫೆನ್ಸ್ ಇಲಾಖೆಯಲ್ಲಿ ಐ.ಜಿ.ಪಿ ಹುದ್ದೆಯಲ್ಲಿದ್ದು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ವಿದ್ಯಾರ್ಥಿಗಳೊಂದಿಗೆ ತಮ್ಮ ಜೀವನಾನುಭವಗಳನ್ನು ಹಂಚಿಕೊಂಡ ಅವರು ತಂದೆಯ ಮಾರ್ಗದರ್ಶನ ಹಾಗೂ ಕಿರಣ್ ಬೇಡಿಯ ಆದರ್ಶಗಳು ಅವರಿಗೆ ಸ್ಫೂರ್ತಿ ನೀಡಿದವು ಎಂದು ಹೇಳಿದರು. ಕಾರ್ಯಕ್ರಮವನ್ನು ಆಯಾನ ನಿರೂಪಿಸಿದರು.
ವೇದಿಕೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮುಖ್ಯಸ್ಥೆ ಶಾಜಿಯಾ ಸಯ್ಯೆದ್ ಹಾಗೂ ಪ್ರಾಂಶುಪಾಲ ಡಾ.ಕುರಿಯನ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.