ಈ ಚಿತ್ರವನ್ನು 1969 ರಲ್ಲಿ ಚಿತ್ರ ಜ್ಯೋತಿ ಸಂಸ್ಥೆಯ “ರಾಶಿ ಬ್ರದರ್ಸ್” ರವರು ನಿರ್ಮಾಣ ಮಾಡಿದರು. ಕನ್ನಡದ ಪ್ರಖ್ಯಾತ ಸಾಹಿತಿ ಹಾಗೂ ಕಥೆಗಾರ್ತಿಯಾದ ಶ್ರೀಮತಿ ಎಂ.ಕೆ.ಇಂದಿರಾ ಅವರ ಗೆಜ್ಜೆಪೂಜೆ ಕಥೆಯನ್ನು ಆಯ್ದುಕೊಂಡು, ಪುಟ್ಟಣ್ಣ ಕಣಗಾಲ್ರವರೇ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಾರೆ. ನವರತ್ನ ರಾಮರಾವ್ ಸಂಭಾಷಣೆ ಬರೆಯುತ್ತಾರೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ಲೀಲಾವತಿ, ಕಲ್ಪನಾ, ಗಂಗಾಧರ್, ಆರತಿ, ಕೆ.ಎಸ್.ಅಶ್ವಥ್, ಲೋಕನಾಥ್, ಬಾಲಣ್ಣ, ಪಂಡರೀಬಾಯಿ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ವಿಜಯ್ ಭಾಸ್ಕರ್ ಸಂಗೀತವಿದ್ದು, ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್, ವಿಜಯ ನಾರಸಿಂಹ ಅವರ ಸಾಹಿತ್ಯದ ಗೀತೆಗಳಿವೆ. 1969 ರ ಅತ್ಯುತ್ತಮ ಚಿತ್ರ ಪ್ರಶಸ್ತಿ, ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಗಳನ್ನು ರಾಷ್ಟ್ರ ಮಟ್ಟದಲ್ಲಿ ಹಾಗೂ ಪ್ರಥಮ ಅತ್ಯುತ್ತಮ ಚಿತ್ರ, ಅತ್ಯುತ್ತಮ ಪೋಷಕ ನಟಿ (ಲೀಲಾವತಿ), ಅತ್ಯುತ್ತಮ ಚಿತ್ರಕಥೆ (ಪುಟ್ಟಣ್ಣ ಕಣಗಾಲ್), ಅತ್ಯುತ್ತಮ ಸಂಭಾಷಣೆಕಾರ (ನವರತ್ನ ರಾಮರಾವ್), ಅತ್ಯುತ್ತಮ ಛಾಯಾಗ್ರಾಹಕ (ಎಸ್.ವಿ.ಶ್ರೀಕಾಂತ್) ಪ್ರಶಸ್ತಿಗಳನ್ನು ರಾಜ್ಯಮಟ್ಟದಲ್ಲಿ ತನ್ನದಾಗಿಸಿಕೊಂಡಿದೆ.
ಇದೊಂದು ವಯಸ್ಕರ ಚಿತ್ರವಾದರೂ, ಅಶ್ಲೀಲ ಹಾಗೂ ಅಸಹ್ಯವೆನಿಸುವ ಒಂದೇ ಒಂದು ದೃಶ್ಯ ಅಥವಾ ಸಂಭಾಷಣೆ ಇರುವುದಿಲ್ಲ (ಸೂಳೆ ಹಾಗೂ ವೇಶ್ಯೆ ಪದಗಳನ್ನು ಹೊರತುಪಡಿಸಿ). ಈ ಚಿತ್ರದಲ್ಲಿ ಪ್ರತಿಯೊಬ್ಬರ ನಟನೆ, ಅತಿ ಅದ್ಬುತ. ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಚಿತ್ರಗಳಲ್ಲಿ, 40 ದಿನಗಳ ಒಂದೇ ಕಂತಿನಲ್ಲಿ ಬಿಡುಗಡೆಯಾದ ಏಕೈಕ ಚಿತ್ರವಿದು. ಅಷ್ಟರ ಮಟ್ಟಿಗೆ ತಪಸ್ಸಿಗೆ ಕುಳಿತವರಂತೆ ಅಷ್ಟೇ ಏಕಾಗ್ರತೆ ಹಾಗೂ ಶಿಸ್ತಿನಿಂದ ಸಿನಿಮಾ ಮಾಡಿದ್ದಾರೆ. ಆ ಶಿಸ್ತಿನ ಕಾರಣದಿಂದಾಗಿಯೇ, ಆ ನಟನಟಿಯರು ಇಂದಿಗೂ ತಮ್ಮ ಛಾಪು ಮೂಡಿಸಿದ್ದಾರೆ. “ಪುಟ್ಟಣ್ಣನವರ ಗರಡಿಯ ಸಿನಿಮಾ ಎಂದರೇ ಸಾಕು ಬಿಡಿ. ಅದು ಉತ್ತಮ ಚಿತ್ರವಾಗಿರುತ್ತೆ” ಎನ್ನುವಷ್ಟರ ಮಟ್ಟಿಗೆ ಕನ್ನಡ ಚಿತ್ರರಸಿಕರು ಅವರಿಗೊಂದು ಉನ್ನತ ಸ್ಥಾನ ಕಲ್ಪಿಸಿದ್ದಾರೆ. ಲೀಲಾವತಿ, ಪಂಡರೀಬಾಯಿ, ಕಲ್ಪನಾ, ಆರತಿ ರವರನ್ನು ಇಲ್ಲಿ ನೋಡೋದೆ ಚೆಂದ.
ಕಥೆ:
“ಪಂಚಮವೇದಾ, ಪ್ರೇಮದ ನಾದ” ಗೀತೆಯ ಟ್ಯೂನನ್ನು ತುಂಬಿದ ಬಸುರಿಯೊಬ್ಬಳು, ಮಹಡಿಯಲ್ಲಿನ ಕೋಣೆಯಲ್ಲಿ ಕುಳಿತು ಪೀಟಿಲು ವಾದ್ಯದಲ್ಲಿ ನುಡಿಸುತ್ತಿರುತ್ತಾಳೆ. ಕಳೆಗುಂದಿದ ಅವಳ ಮುಖದಲ್ಲಿ ಬಿಟ್ಟುಹೋದ ಪ್ರಿಯತಮನ ನೆನಪು ತಾಂಡವವಾಡುತ್ತಿರುತ್ತದೆ. ಅಲ್ಲಿಗೆ ಬಂದ ಆಕೆಯ ಸಾಕುತಾಯಿ, ಹೆಣ್ಣು ಮಗು ಹುಟ್ಟಿದರೆ ಸಾಕು ಎಂದು ದೇವರಲ್ಲಿ ಬೇಡುತ್ತಾಳೆ. ಹೆಣ್ಣಿಗೆ ಹೆಣ್ಣೇ ಶತ್ರು. ಆಕೆಗೆ ಕೊನೆಗೂ ಹೆಣ್ಣು ಮಗು ಹುಟ್ಟುತ್ತದೆ. ಹೆಣ್ಣು ಮಗು ಹುಟ್ಟಿತ್ತಲ್ಲ ಎಂದು ತಾಯಿ ಹೃದಯ ನೊಂದುಕೊಳ್ಳುತ್ತದೆ. ಆ ತಾಯಿ ಅಪರ್ಣ (ಲೀಲಾವತಿ) ತನ್ನ ಮಗುವಿನ ಆರೈಕೆಗೋಸ್ಕರ, ತನ್ನ ತಾಯಿಯ ಮಾತಿನಂತೆ ಆ ಊರಿನ ಸಾಹುಕಾರನ (ಲೋಕನಾಥ್) ದಾಸಿಯಾಗುತ್ತಾಳೆ. ಈ ದೃಶ್ಯವನ್ನು ಪುಟ್ಟಣ್ಣ ಕಣಗಾಲ್ ರವರು ಅದೆಷ್ಟು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆಂದರೆ, ಅಪರ್ಣಾಳ ಕೋಣೆಗೆ ಹೋಗಿ ಬರಲು ಇದ್ದ ಮೆಟ್ಟಿಲುಗಳಲ್ಲಿ ಸಾಹುಕಾರ ಓಡಾಡುವ ಅವನ ಕಾಲುಗಳನ್ನಷ್ಟೇ ಚಿತ್ರಿಸಿಕೊಂಡಿದ್ದಾರೆ. ಕೆಲವು ವರುಷಗಳ ಬಳಿಕ ಅಲ್ಲಿಂದ ಪಟ್ಟಣದ ಅಗ್ರಹಾರವೊಂದರ ಮನೆಯಲ್ಲಿ ಸಾಹುಕಾರನ ಕೃಪೆಯಿಂದ ವಾಸವಾಗುತ್ತಾರೆ. ಅದು ವೇಶ್ಯೆ ಗೃಹವಾದರೂ ಮುಜುಗರವೆನಿಸುವ ಯಾವುದೇ ದೃಶ್ಯಗಳಿಲ್ಲ. ಎದುರುಗಡೆ ಮನೆಯ ಮಕ್ಕಳೊಂದಿಗೆ, ಅಪರ್ಣಾಳ ಮಗಳು ಚಂದ್ರಿ (ಕಲ್ಪನಾ) ಬೆರೆಯುತ್ತಾಳೆ, ಅವರ ಮಧ್ಯೆ ಬೆಳೆಯುತ್ತಾಳೆ. ಮಕ್ಕಳ ಮನಸ್ಸು ನಿಷ್ಕಲ್ಮಷ. ಹಾಗೆ ಆ ನಿಷ್ಕಲ್ಮಶ ಭಾವನೆಯ ಕಾಪಾಡಿಕೊಂಡು ಬರುತ್ತಾನೆ ಆ ಮನೆಯ ಯಜಮಾನರಾದ ಅವಧಾನಿಗಳು (ಅಶ್ವಥ್). ವೇಶ್ಯೆಗೂ ಹಾಗೂ ಆಕೆಯ ಮಗಳಿಗೂ ಒಂದು ಗೌರವ ಸ್ಥಾನ ಕಲ್ಪಿಸಿ ಸಮಾಜಕ್ಕೆ ಮಾದರಿಯಾಗುತ್ತಾನೆ. ದೊಡ್ಡವರಾದ ಮೇಲೆ ಅವಧಾನಿಗಳ ಮಗಳು ಲಲಿತಾಗೆ (ಆರತಿ) ಮದುವೆಯಾಗುತ್ತದೆ. ಆ ಮದುವೆಯ ಆರತಕ್ಷತೆಯ ಸಮಯದಲ್ಲೇ ಚಂದ್ರಿ ಹಾಡುವ ಗೀತೆಯೇ “ಪಂಚಮವೇದಾ, ಪ್ರೇಮದ ನಾದ”. ಎಂಥ ಅದ್ಬುತ ಗೀತೆ. ನಾಲ್ಕು ದಶಕಗಳ ನಂತರವೂ ಈ ಹಾಡು ಇವತ್ತಿಗೂ ತನ್ನ ಛಾಪು ಮಾಸದಂತೆ ಕನ್ನಡ ಚಿತ್ರರಸಿಕರ ಮನಸಲಿ ಮನೆ ಮಾಡಿದೆ. ಜಾನಕಮ್ಮನವರ ದನಿಯಲ್ಲಿ ಈ ಹಾಡು ಮತ್ತೆ ಮತ್ತೇ ಕೇಳಬೇಕೆನಿಸುವಂದತೂ ನಿಜ. ಲಲಿತೆಯ ಮದುವೆಯ ನಂತರ ಸೋಮು (ಗಂಗಾಧರ್) ಹಾಗೂ ಚಂದ್ರಿಯ ನಡುವಿನ ಸಲುಗೆ ಸಹ ಹೆಚ್ಚಾಗುತ್ತದೆ. ಆ ಸಲುಗೆ ಪ್ರೀತಿಯಾಗಿ, ಎರಡು ಮನಸುಗಳು ಪರಸ್ಪರ ಒಪ್ಪಿಕೊಳ್ಳುತ್ತವೆ. ಆಗ ಖುಷಿಯಲ್ಲಿ ಚಂದ್ರಿಕಾ ” ಗಗನವು ಎಲ್ಲೋ ಭೂಮಿಯು ಎಲ್ಲೋ, ಒಂದು ಅರಿಯೆನು ನಾ” ಎಂಬ ಗೀತೆಗೆ ಮನವು ತಣಿಯುವಷ್ಟು ಖುಷಿಯಾಗಿ ಕುಣಿಯುತ್ತಾಳೆ. ಇದರ ಮಧ್ಯೆ ಆ ಸಾಹುಕಾರ ಖಾಯಿಲೆಯಿಂದ ಸತ್ತು ಹೋಗುತ್ತಾನೆ. ಹೀಗೊಂದು ದಿನ ಆಕಸ್ಮಿಕವಾಗಿ ತನಗೆ ಜನ್ಮ ಕೊಟ್ಟ ತಂದೆಯ ಭೇಟಿಯಾಗುತ್ತದೆ. ತಂದೆ ಯಾರೆಂದು ಗೊತ್ತಿರದ ಯಾತನೆ ಪಡುತ್ತಿದ್ದ ಖುಷಿಪಡುತ್ತದೆ. ಭೇಟಿಯ ಸವಿನೆನಪಿಗಾಗಿ ತಂದೆಯಿಂದ ವಜ್ರದುಂಗುರವನ್ನು ಪಡೆಯುತ್ತಾಳೆ ಚಂದ್ರಿ. ಬಾಲ್ಯದಿಂದಲೂ ತಾನು ಇಷ್ಟಪಡುತ್ತಿದ್ದ ಅವಧಾನಿಗಳ ಮಗ ಸೋಮುವಿಗೆ ತನ್ನ ತಂಗಿಯನ್ನು (ಜನ್ಮದಾತನ ಮತ್ತೊಬ್ಬ ಮಗಳು) ಕೊಟ್ಟು ಮದುವೆ ಮಾಡಲು ನಿಶ್ಚಯಿಸಿರುವುದನ್ನು ತಿಳಿಸುತ್ತಾನೆ ಆ ತಂದೆ. ಇದರ ಮಧ್ಯೆ ಸೋಮು ಕೂಡ ಚಂದ್ರಿಯನ್ನು ಅಪಾರ್ಥ ಮಾಡಿಕೊಂಡಿರುತ್ತಾನೆ. ಇತ್ತ ಸೋಮು ಮದುವೆಯೂ ಆಗುತ್ತದೆ. ಇವಳ ಅಂದಕೆ ಮಾರುಹೋದ ಮತ್ತೊಬ್ಬ ಸಾಹುಕಾರ (ವಜ್ರಮುನಿ), ಇವಳ ಸಾಂಗತ್ಯಕ್ಕಾಗಿ ಕಾಯುತ್ತಿರುತ್ತಾನೆ. ತಾನೂ ಮದುವೆಯಾಗಬೇಕೆಂದು ಬಹುದೊಡ್ಡ ಕನಸನ್ನು ಕಟ್ಟಿಕೊಂಡಿದ್ದ ಅವಳು, ಅದನ್ನು ಬಿಟ್ಟು ತನಗೆ ಇಷ್ಟವಿರದಿದ್ದರೂ ಗೆಜ್ಜೆಪೂಜೆಗೆ ಅಣಿಯಾಗುತ್ತಾಳೆ. ಗೆಜ್ಜೆಪೂಜೆ ಮುಗಿಸಿ, ಅವಧಾನಿಗಳ ಮನೆಗೆ ಬಂದು ಹಿರಿಯರ ಆಶೀರ್ವಾದ ತೆಗೆದುಕೊಳ್ಳುತ್ತಾಳೆ. ಆ ಸಮಯದಲ್ಲಿ ತನ್ನ ತಂದೆಯ ಆಶೀರ್ವಾದ ಕೂಡ ಪಡೆಯುತ್ತಾಳೆ. ಗೆಜ್ಜೆಪೂಜೆ ನಂತರದ ಜೀವನದ ಮೇಲೆ ಅವಳಿಗೆ ಎಳ್ಳುಕಾಳಿನಷ್ಟು ಇಷ್ಟವಿರುವುದಿಲ್ಲ. ಆದ್ದರಿಂದ ತನ್ನ ತಂದೆಯಿಂದ ಪಡೆದ ವಜ್ರದುಂಗುರದಿಂದ ವಜ್ರವನ್ನು ಪುಡಿ ಮಾಡಿ ನುಂಗಿ, ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಮಗಳ ಸ್ಥಿತಿ ನೋಡಿ ಅಪರ್ಣಾ ಕೂಡ ಎದೆಯೊಡೆದುಕೊಂಡು ಪ್ರಾಣ ಬಿಡುತ್ತಾಳೆ. ಇದು ದುರಂತ ಅಂತ್ಯ.
ಚಿತ್ರದಲ್ಲಿ ಹಾಸ್ಯ ದೃಶ್ಯಗಳಿಗಾಗಿ ಬಾಲಣ್ಣನವರ ಬಳಸಿಕೊಂಡಿದೆಯಾದರೂ, ಆ ಪಾತ್ರದ ಮೂಲಕ ಸಮಾಜದ ವ್ಯಂಗ್ಯ ಮಾಡುತ್ತಾರೆ. “ಮೈತುಂಬ ಸೆರೆಗು ಹೊದ್ದಿಕೊಂಡೇ ಹೊರಬರುವ ಹೆಂಗಸಾದ ಅಪರ್ಣಾಳಿಗೇ ಈ ಸಮಾಜ ವೇಶ್ಯೆ ಪಟ್ಟ ಕಟ್ಟಿದೆ. ಮನೆಯಲ್ಲೇ ಗಂಡ ನಾನಿದ್ದರೂ, ಮನೆಯ ಪ್ರತಿ ಕೆಲಸದಲ್ಲಿ ಸಹಾಯ ಮಾಡಿ, ಹೆಂಡತಿಯನ್ನು ಮಗುವಿನಂತೆ ನೋಡಿಕೊಂಡರೂ, ಆಕೆ ನನ್ನ ಬಿಟ್ಟು ಬೇರೊಬ್ಬನ ಜೊತೆ ಓಡಿಹೋದಳು. ಇವಳಿಗೆ ನಾನ್ಯಾವ ಪಟ್ಟ ಕಟ್ಟಬೇಕು” ಎಂದು ಬಾಲಣ್ಣ ಸಮಾಜಕ್ಕೆ ಕೇಳುತ್ತಾರೆ. ನಿಜಕ್ಕೂ ಈ ಸಿನಿಮಾ ದೃಶ್ಯಕಾವ್ಯ. ಇಂಥಾ ಸಿನಿಮಾಗಳು ಮತ್ತೆ ಮತ್ತೆ ರಿಲೀಸ್ ಆಗಬೇಕು. ಈಗಿನ ಕಾಲಮಾನಕ್ಕೆ ಇಂಥಾ ಚಿತ್ರಗಳ ಅವಶ್ಯಕತೆ ಇದೆ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಸಮಾಜದಲ್ಲಿ ಒಂದು ಹೆಣ್ಣನ್ನು ಹೇಗೆ ಗೌರವಿಸಬೇಕು ಎಂದು ತಿಳಿಯಲು.
2. ಮದುವೆಯ ಪ್ರಾಮುಖ್ಯತೆ ಹಾಗೂ ಪವಿತ್ರತೆಯ ಕುರಿತು ತಿಳಿಯಲು.
3. ಸಮಾಜದಲ್ಲಿ ಮತ್ತೊಂದು ಕುಟುಂಬವನ್ನು ಹೇಗೆ ಗೌರವಿಸುವುದು ಎಂದು ತಿಳಿಯಲು.
4. ಇದಲ್ಲದೇ ಇಂದಿನ ಪೀಳಿಗೆಯವರು, ಹೆಣ್ಣನು ಗೌರವಿಸುವ, ಮದುವೆಯ ಪಾವಿತ್ರ್ಯತೆಯ ಬಗ್ಗೆ ತಿಳಿಯುವ, ಹಾಗೂ ಸಂಸಾರದಲ್ಲಿ ತಿಳಿದು ತಿಳಿದೂ ಮಾಡುತ್ತಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಈ ಸಿನಿಮಾ ನೋಡಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.