ಸ್ವ ಉದ್ಯೋಗದೆಡೆಗೆ ಯುವಕರು ಮನ ಮಾಡಬೇಕು : ಸಂಜೀವ ಮಠಂದೂರು
ಪುತ್ತೂರು: ಉದ್ಯೋಗಸ್ಥರಾಗುವುದೆಂದರೆ ದೂರದೂರದ ನಗರಿಗಳಿಗೇ ಹೋಗಬೇಕಿಲ್ಲ. ವಿದೇಶದ ಮುಖವನ್ನು ನೋಡಬೇಕಿಲ್ಲ. ನಮ್ಮ ನಮ್ಮ ಊರುಗಳಲ್ಲೇ ಸ್ವಂತ ನೆಲೆಯಿಂದಲೂ ಉದ್ಯೋಗವನ್ನು ಸೃಜಿಸುವ ತನ್ಮೂಲಕ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳುವ ಅವಕಾಶ ಈಗಿನ ಯುವ ಸಮುದಾಯಕ್ಕಿದೆ. ಆದರೆ ಪ್ರತಿಯೊಬ್ಬನೂ ತನ್ನೊಳಗಿನ ಶಕ್ತಿಯನ್ನು ಅರಿಯುವುದು ಅತೀ ಅಗತ್ಯ ಎಂದು ಪುತ್ತೂರಿನ ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾರ್ಗದರ್ಶನದಲ್ಲಿ ವಿವೇಕಾನಂದ ಉದ್ಯೋಗ ಮಾಹಿತಿ ಮತ್ತು ತರಬೇತಿ ಕೇಂದ್ರವು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ ವಿವೇಕ ಉದ್ಯೋಗ ಮೇಳ 2018 ಅನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.
ವ್ಯಕ್ತಿಯೊಳಗೆ ಛಲ ಹಾಗೂ ಉತ್ಕಟ ಬಯಕೆ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಮುಂಬೈಯಲ್ಲಿನ ಸ್ಟಾರ್ ಹೋಟೇಲೊಂದರ ಮಾಲಿಕ ಕೇವಲ ಹತ್ತನೆಯ ತರಗತಿ ಓದಿರುವುದು ಮತ್ತು ಉದ್ಯೋಗಿಗಳು ಹೋಟೆಲ್ ಮ್ಯಾನೇಜ್ಮೆಂಟ್ ಸ್ನಾತಕೋತ್ತರ ಪದವಿ ಹೊಂದಿರುವುದು ಅದನ್ನು ನೋಡಿದವರಿಗೆ ಅಚ್ಚರಿ ತರುತ್ತದೆ. ಹಾಗಾಗಿ ನಾವೇನು ಓದಿದ್ದೇವೆ ಅನ್ನುವುದಕ್ಕಿಂತ ನಮ್ಮೊಳಗಿನ ಕನಸುಗಳೇನು ಅನ್ನುವುದು ಬಹಳ ಮುಖ್ಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಬಸವರಾಜ್ ಎಸ್. ಜವಳಿ ಮಾತನಾಡಿ ಇಂದು ಒಂದು ವಿಶಿಷ್ಟ ಸಂಗತಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಒಂದೆಡೆ ಓದಿದವರಿಗೆ ಉದ್ಯೋಗ ದೊರಕುತ್ತಿಲ್ಲ, ಇನ್ನೊಂದೆಡೆ ಉದ್ದಿಮೆದಾರರಿಗೆ ಉದ್ಯೋಗಿಗಳು ಸಿಗುತ್ತಿಲ್ಲ. ಇದನ್ನು ಕಾಣುವಾಗ ಎಲ್ಲೋ ಸಣ್ಣ ಹೊಂದಾಣಿಕೆಯ ಕೊರತೆ ಕಾಣುತ್ತಿದೆ.ಇದನ್ನು ಸರಿಪಡಿಸಿದಾಗ ವ್ಯವಸ್ಥೆ ಸಸೂತ್ರವಾಗಿ ಮುಂದುವರೆಯುವುದಕ್ಕೆ ಸಾಧ್ಯ ಎಂದು ನುಡಿದರು.
ನಿಜವಾಗಿ ಉದ್ಯೋಗಿಗಳ ಕೈಹಿಡಿಯುವವರು ಸಣ್ಣ ಕೈಗಾರಿಕೋದ್ಯಮಿಗಳೇ ಹೊರತು ದೊಡ್ಡವರಲ್ಲ. ಉದ್ಯೋಗ ಆರಂಭಿಸುವಾಗ ಹೊಸಬರಿಗೆ ಅವಕಾಶ ಕಲ್ಪಿಸಿಕೊಡುತ್ತಿರುವವರು ಸಣ್ಣ ಉದ್ಯೋಗದಾತರು. ಆದರೆ ಒಮ್ಮೆ ಕೆಲಸ ಕಲಿತ ನಂತರ ಉದ್ಯೋಗಿಗಳು ದೊಡ್ಡ ದೊಡ್ಡ ಕೈಗಾರಿಕೆಗಳೆಡೆಗೆ ಮನ ಮಾಡುವುದು ಸಮಸ್ಯೆಯಾಗಿ ಪರಿಣಮಿಸುತ್ತಿದೆ ಎಂದರಲ್ಲದೆ ಸ್ವಂತ ಉದ್ದಿಮೆ ಸ್ಥಾಪಿಸಬಯಸುವವರಿಗೆ ಕೈಗಾರಿಕಾ ಸಂಘ ಸಕಲ ನೆರವನ್ನೂ ನೀಡುತ್ತದೆ ಎಂದು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ಕಲ್ಲಡ್ಕ ಮಾತನಾಡಿ ಪ್ರತಿಯೊಬ್ಬನೂ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು. ಭಾರತದಲ್ಲಿ ನೂತನ ಉದ್ದಿಮೆ ಸ್ಥಾಪಿಸುವುದಕ್ಕೆ ಎಷ್ಟು ಅವಕಾಶವಿದೆಯೋ ಅಷ್ಟೇ ಅವಕಾಶ ಒಬ್ಬ ಉದ್ಯೋಗಿಯಾಗಿ ಬೆಳೆಯುವುದಕ್ಕೂ ಇದೆ. ತಾನು ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ಇನ್ನಷ್ಟು ಹೊಸತನ ತರುವ ದೃಷ್ಟಿಯಿಂದ ಹೇಗೆ ಕಾರ್ಯನಿರ್ವಹಿಸಬಹುದೆಂಬುದನ್ನು ಉದ್ಯೋಗಿಗಳು ಯೋಚಿಸಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಿವೇಕಾನಂದ ಉದ್ಯೋಗ ಮಾಹಿತಿ ಮತ್ತು ತರಬೇತಿ ಕೇಂದ್ರದ ಬಗೆಗಿನ ಕಿರು ಪುಸ್ತಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಅಂತೆಯೇ ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ಕರ್ನಾಟಕ ರಾಜ್ಯ ಸಣ್ಣಕೈಗಾರಿಕೆ ಸಂಘದ ನಡುವಿನ ಒಡಂಬಡಿಕೆಗೆ ಎರಡೂ ಸಂಸ್ಥೆಗಳ ಕಾರ್ಯದರ್ಶಿಗಳು ಸಹಿ ಹಾಕಿದರು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ಸಣ್ಣ ಕೈಗಾರಿಕೆ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಕುಲಕರ್ಣಿ ಉಪಸ್ಥಿತರಿದ್ದರು.
ಉಪನ್ಯಾಸಕಿಯರಾದ ನಿರುಪಮ, ಸಂಗೀತ ಪ್ರಾರ್ಥಿಸಿದರು. ವಿವೇಕಾನಂದ ಉದ್ಯೋಗ ಮತ್ತು ಮಾಹಿತಿ ಕೇಂದ್ರದ ಕಾರ್ಯದರ್ಶಿ ರಾಜಗೋಪಾಲ್ ಸ್ವಾಗತಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಅಧಿಕಾರಿ ವೆಂಕಟೇಶ್ ಪ್ರಸ್ತಾವನೆಗೈದರು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ಸತೀಶ್ರಾವ್ ವಂದಿಸಿದರು. ವಿವೇಕಾನಂದ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ರೋಹಿಣಾಕ್ಷ ಕಾರ್ಯಕ್ರಮ ನಿರ್ವಹಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ಕರ್ನಾಟಕರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ನಡುವಿನ ಒಡಂಬಡಿಕೆಯಲ್ಲಿನ ವಿವಿಧ ವಿಚಾರಗಳು
- ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು ನೂತನವಾಗಿ ಆರಂಭಗೊಳ್ಳಲಿರುವ ಸಣ್ಣ ಕೈಗಾರಿಕೆಗಳಿಗೆ ತಾಂತ್ರಿಕ ಸಹಕಾರ ಹಾಗೂ ಮಾರ್ಗದರ್ಶನವನ್ನು ನೀಡುವ ಕಾರ್ಯವನ್ನು ಮಾಡುತ್ತದೆ.
- ಅದೇ ರೀತಿ ವಿವೇಕಾನಂದ ವೃತ್ತಿ ಮಾರ್ಗದರ್ಶನ ಕೇಂದ್ರದ ಮೂಲಕ ಗಾಮೀಣ ವಿದ್ಯಾರ್ಥಿಗಳಿಗೆ ಬೇಕಾದ ಸೂಕ್ತ ಮಾರ್ಗದರ್ಶನ ಮತ್ತು ಕೌಶಲ್ಯ ಅಭಿವೃದ್ಧಿ ಬಗೆಗಿನ ತರಬೇತಿ ನೀಡುತ್ತದೆ.
- ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು ವಿದ್ಯಾಸಂಘದ ಮೂಲಕ ಅದರ ಸಿಬ್ಬಂದಿಗಳಿಗೆ ಕೈಗಾರಿಕೆಗಳಲ್ಲಾಗುತ್ತಿರುವ ತಾಂತ್ರಿಕ ಬೆಳವಣಿಗೆಯ ಬಗ್ಗೆ ತರಬೇತಿಯನ್ನು ನೀಡುವ ಕಾರ್ಯ ಮಾಡುತ್ತದೆ.
- ವಿವೇಕಾನಂದ ವಿಧ್ಯಾವರ್ಧಕ ಸಂಘವು ಅವಶ್ಯ ಮೂಲ ಸೌಕರ್ಯ ಒದಗಿಸುವ ಮೂಲಕ ತರಬೇತಿ ಕಾರ್ಯಗಳಿಗೆ ಸಹಕಾರವನ್ನು ನೀಡುತ್ತದೆ.
- ವಿವೇಕಾನಂದ ವಿಧ್ಯಾವರ್ಧಕ ಸಂಘವು ಉದ್ಯೋಗ ಮೇಳದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಉದ್ಯೋಗಾಕಾಂಕ್ಷಿಗಳು ಹಾಗೂ ಕಂಪೆನಿಗಳ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತದೆ.
- ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು ತನ್ನ ಸಂಘಟನೆಯಲ್ಲಿ ಇಂಟರ್ನ್ಶಿಪ್ ಗೆ ಅವಕಾಶವನ್ನು ಕಲ್ಪಿಸಲು ಸಹಾಯ ಮಾಡುತ್ತದೆ.
- ನಿಯತಕಾಲಿಕವಾಗಿ ಸಭೆಯನ್ನು ನಡೆಸುವುದರ ಮೂಲಕ ನಾನಾಪ್ರಕ್ರಿಯೆಗಳನ್ನು ಗಮನಿಸಲಾಗುತ್ತದೆ.
- ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು ವಿವೇಕಾನಂದ ವಿಧ್ಯಾವರ್ಧಕ ಸಂಘದ ವಿದ್ಯಾರ್ಥಿಗಳ ಕ್ರಿಯಾಶೀಲತೆ ಕಾರ್ಯಕ್ಷೇತ್ರದಲ್ಲಿ ಕಾಣಿಸಿಕೊಳ್ಳಲು ಬೇಕಾದಂತಹ ಸೂಕ್ತ ವೇದಿಕೆಯನ್ನು ಒದಗಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.