ಮಂಗಳೂರು : ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 35 ನೇ ಶ್ರಮದಾನವನ್ನು ನಗರದ ಹೊರವಲಯದ ಯಕ್ಕೂರಿನಲ್ಲಿ ಆಯೋಜನೆ ಮಾಡಲಾಗಿತ್ತು. 10-6-2018 ರವಿವಾರದಂದು ಬೆಳಿಗ್ಗೆ 7.30 ಕ್ಕೆ ಸ್ವಾಮಿ ಜಿತಕಾಮಾನಂದಜಿ ಮಹರಾಜ್ ಸಮಕ್ಷಮದಲ್ಲಿ ಶ್ರೀಮತಿ ದೇವಕಿ ಮುತ್ತುಕೃಷ್ಣನ್, ಪೂರ್ವ ನಿರ್ದೇಶಕರು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇವರು ಶ್ರಮದಾನಕ್ಕೆ ಚಾಲನೆ ನೀಡಿದರು. ಅಭಿಯಾನದ ಮಾರ್ಗದರ್ಶಿ ಕ್ಯಾ. ಗಣೇಶ್ ಕಾರ್ಣಿಕ್ ಸಮಸ್ತರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮೋಹನ್ ಭಟ್, ಕಮಲಾಕ್ಷ ಪೈ, ಭಾಸ್ಕರ್ ಶೆಟ್ಟಿ, ಶ್ರೀಮತಿ ವಸಂತಿ ನಾಯಕ್, ಯಶೋಧರ ಚೌಟ್, ಕಿರಣ್ ಫರ್ನಾಂಡಿಸ್, ಮಸಾ ಹಿರೊ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.
ಶ್ರೀಮತಿ ದೇವಕಿ ಮುತ್ತುಕೃಷ್ಣನ್ ಮಾತನಾಡಿ ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಸ್ವಚ್ಛ ಮನಸ್ಸು ಎಂಬ ಕಾರ್ಯಕ್ರಮಗಳು ನಡೆಯುತ್ತಿರುವುದು ಅತ್ಯಂತ ಶ್ರೇಷ್ಠ ಕಾರ್ಯ. ಮನಸ್ಸುಗಳು ಹಸನಾದರೆ ನಮ್ಮ ಪರಿಸರ ಸಹಜವಾಗಿಯೇ ಸ್ವಚ್ಛವಾಗುತ್ತದೆ. ಈ ದೆಸೆಯಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ಈ ಯಶಸ್ವಿ ಸ್ವಚ್ಛತಾ ಅಭಿಯಾನ ದೇಶಾದ್ಯಂತ ರಾಮಕೃಷ್ಣ ಮಿಷನ್ನಿನ ಮಾರ್ಗದರ್ಶನದಲ್ಲಿ ನಡೆಯುವಂತಾಗಬೇಕು. ಇಲ್ಲಿನ ಕಾರ್ಯಕರ್ತರ ಬದ್ಧತೆ ಹಾಗೂ ಶ್ರಮವನ್ನಿಂದು ಕಾಣಬಹುದು. ಮಳೆಗಾಳಿಯನ್ನೂ ಲೆಕ್ಕಿಸದೇ ಮಾಡುವ ಈ ನಿಸ್ವಾರ್ಥ ಕಾರ್ಯ ಅಭಿನಂದನೀಯ ಮತ್ತು ಅನುಕರಣೀಯ ಎಂದು ಹೇಳಿ ಶುಭಹಾರೈಸಿದರು.
ಬಸ್ ತಂಗುದಾಣ ನಿರ್ಮಾಣ ಹಾಗೂ ಲೋಕಾರ್ಪಣೆ: ಎಕ್ಕೂರ್ ಜಂಕ್ಷನ್ನಲ್ಲಿ ಸ್ಥಳಿಯರ ಸಹಕಾರದಿಂದ ನೂತನವಾಗಿ ಬಸ್ ತಂಗುದಾಣವನ್ನು ನಿರ್ಮಿಸಲಾಗಿದೆ. ಸಾರ್ವಜನಿಕರ ಬಹುದಿನಗಳಿಂದ ಬಸ್ ತಂಗುದಾಣಕ್ಕೆ ಸಂಬಂಧಪಟ್ಟ ಸರಕಾರಿ ಇಲಾಖೆಗಳಿಗೆ ಬೇಡಿಕೆಯಿಟ್ಟಿದ್ದರೂ ಇಲ್ಲಿಯತನಕ ಯಾವುದೇ ತೆರನಾದ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ಸ್ವಚ್ಛ ೆಕ್ಕೂರ ತಂಡದ ವತಿಯಿಂದ ರಾಮಕೃಷ್ಣ ಮಿಷನ್ ಸಹಕಾರದೊಂದಿಗೆ ಬಸ್ ತಂಗುದಾಣವನ್ನು ನಿರ್ಮಿಸಲು ಉದ್ದೇಶಿಸಲಾಯಿತು. ಮಳೆಗಾಲದಲ್ಲಿ ಹೆಚ್ಚು ಉಪಯುಕ್ತವಾಗುವ ಈ ಬಸ್ ನಿಲ್ದಾಣವನ್ನು ಕೇವಲ ಐದೇ ದಿನಗಳಲ್ಲಿ ಕಾರ್ಯಕರ್ತರು ಮಳೆಗಾಳಿಯನ್ನೂ ಲೆಕ್ಕಿಸದೇ ಶ್ರಮವಹಿಸಿ ನಿರ್ಮಿಸಿದ್ದಾರೆ. ಮೇಲ್ಚಾವಣಿ, ಸ್ವತಂತ್ರ ಆಸನ ವ್ಯವಸ್ಥೆ, ಕಾಂಕ್ರೀಟ್ ನೆಲಹಾಸು, ಸಾಮಾಜಿಕ ಸಂದೇಶವುಳ್ಳ ಫಲಕಗಳನ್ನು ಈ ತಂಗುದಾಣವು ಒಳಗೊಂಡಿದೆ. ಇಂದು ತಂಗುದಾಣಗಳಿಗೆ ಆಸನಗಳಿಗೆ ಬಣ್ಣ ಬಳಿದು, ಸುತ್ತಮುತ್ತಲಿನ ಜಾಗೆಯನ್ನು ಸ್ವಚ್ಛಗೊಳಿಸಲಾಯಿತು. ಪ್ರಯಾಣಿಕರು ಉಪಯೋಗಿಸುವುದರ ಮೂಲಕ ತಂಗುದಾಣ ಲೋಕಾರ್ಪಣೆಯಾಗಲ್ಪಟ್ಟಿತು.
ಶ್ರಮದಾನ: ಆರಂಭದಲ್ಲಿ ಮಳೆಯಿದ್ದರೂ ಲೆಕ್ಕಿಸದ ಕಾರ್ಯಕರ್ತರು ಸುಮಾರು ಹತ್ತುಗಂಟೆಯ ತನಕ ಶ್ರಮದಾನ ಮಾಡಿದರು. ಮೊದಲು ನೂತನವಾಗಿ ನಿರ್ಮಾಣ ಮಾಡಲ್ಪಟ್ಟ ತಂಗುದಾಣದ ಸುತ್ತಮುತ್ತ ಕಸಹೆಕ್ಕಿದರು. ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಪೇಪರ್ ತೆಗೆದು ಶುಚಿಗೊಳಿಸಿದರು. ಯಕ್ಕೂರ್ ಜಂಕ್ಷನ್ ನಿಂದ ಸುಮಾರು ದೂರದ ವರೆಗೆ ಹೆದ್ದಾರಿಯ ಪಕ್ಕದಲ್ಲಿ ದೊಡ್ದದಾಗಿ ಬೆಳೆದಿದ್ದ ಹುಲ್ಲು ಪೊದೆ ಕತ್ತರಿಸಿ ತೆರವು ಮಾಡಿ ಟಿಪ್ಪರಿಗೆ ಹಾಕಿ ಸಾಗಿಸಲಾಯಿತು. ನಂತರ ಜೆಸಿಬಿ ಸಹಾಯದಿಂದ ನೆಲವನ್ನು ಸಮತಟ್ಟು ಮಾಡಲಾಯಿತು. ಹುಲ್ಲು ಬೆಳೆದು ಕಸತುಂಬಿಕೊಂಡಿದ್ದ ಜಾಗವನ್ನೀಗ ಸ್ವಚ್ಛವಾಗಿ ಸಮತಟ್ಟಾಗಿ ಆಟೋರಿಕ್ಷಾ ನಿಲ್ದಾಣವಾಗಿ ಬಳಸಲಾಗುತ್ತಿದೆ. ಅಭಿಯಾನದ ಮುಖ್ಯಸಂಯೋಜಕ ಉಮಾನಾಥ್ ಕೋಟೆಕಾರ್ ಮಾರ್ಗದರ್ಶಿಸಿದರು. ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಯಕ್ಕೂರಿನ ಅಂಗಡಿ ಹಾಗೂ ಮನೆಗಳನ್ನು ಸಂಪರ್ಕಿಸಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.
ನಿರ್ವಹಣೆ: ತ್ಯಾಜ್ಯ ಬಿಸಾಡುತ್ತಿದ್ದ ಜಾಗೆಗಳನ್ನು ಸ್ವಚ್ಛಗೊಳಿಸಿ ಹೂಕುಂಡಗಳನ್ನಿಟ್ಟು ಸುಂದರಗೊಳಿಸಲಾಗಿತ್ತು. ಇಂದು ಕಾರ್ಯಕರ್ತರಾದ ಉದಯ ಕೆ ಪಿ ನೇತೃತ್ವದಲ್ಲಿ ಕಾಸ್ಸಿಯಾ ಪ್ರೌಢಶಾಲೆಯ ಮುಂಭಾಗದ ಪುಟ್ಪಾಥ್ ಸ್ವಚ್ಛಗೊಳಿಸಿ, ಹೂಕುಂಡಗಳ ಹತ್ತಿರದ ಜಾಗೆಯ ಸುತ್ತಮುತ್ತ ಬೆಳೆದಿದ್ದ ಹುಲ್ಲು ತೆಗೆದು ಶುಚಿಗೊಳಿಸಲಾಯಿತು. ಅದೇ ರೀತಿ ಮಾರ್ನಮಿಕಟ್ಟೆಯ ಹತ್ತಿರದ ಹೂಕುಂಡಗಳನ್ನಿಟ್ಟ ಜಾಗೆಯನ್ನು ಸ್ವಚ್ಛಗೊಳಿಸಿ ನಿರ್ವಹಣೆ ಮಾಡಲಾಯಿತು. ಚಿರಾಗ್, ಪ್ರಜ್ವಲ್, ವೈಶಾಖ್ ಮತ್ತಿತರರು ಶ್ರಮದಾನ ಮಾಡಿದರು. ಫ್ಲೆಕ್ಸ್ ಬ್ಯಾನರ್ ಅಲ್ಲಲ್ಲಿ ಕಟ್ಟುವುದನ್ನು ತಡೆಗಟ್ಟುವ ಸಲುವಾಗಿ ಪ್ರತಿ ವಾರದಂತೆ ಈ ಸಲವೂ ಸೌರಜ್ ಮಂಗಳೂರು, ಸಂದೀಪ್ ಕೋಡಿಕಲ್ ಹಾಗೂ ಕಾರ್ಯಕರ್ತರು ತಂಡಗಳನ್ನು ರಚಿಸಿಕೊಂಡು ಯಕ್ಕೂರು, ಪಂಪವೆಲ್, ಪಡೀಲ್ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು ಐನೂರಕ್ಕೂ ಅಧಿಕ ಬ್ಯಾನರಗಳನ್ನು ತೆರವುಗೊಳಿಸಿದರು.
ಯಕ್ಕೂರಿನ ಹಿಂದೂಯುವಸೇನೆ, ಅಯ್ಯಪ್ಪ ಭಜನಾ ಮಂದಿರ, ನಂದಾದೀಪ ಮಹಿಳಾ ಮಂಡಳಿಯ ಸದಸ್ಯರು ಹಾಗೂ ಸ್ಥಳೀಯರು ಅಭಿಯಾನದಲ್ಲಿ ಪಾಲ್ಗೊಂಡು ಶ್ರಮದಾನ ಮಾಡಿದರು. ಬಾಬಾ ಯಕ್ಕೂರ್, ಸತೀಶ್ ಟಿ, ತೇಜಸ್ವಿನಿ ಬಿ ಆಚಾರ್ಯ, ಶರಣಬಸವ, ಅವಿನಾಶ್ ಅಂಚನ್, ರಾಜೇಶ್ವರಿ ವಿಜಯರಾಜ್ ಅಭಿಷೇಕ್ ವಿ ಎಸ್ ಸೇರಿದಂತೆ ಅನೇಕ ಕಾರ್ಯಕರ್ತರು ಶ್ರಮದಾನಗೈದರು. ಶುಭೋದಯ ಆಳ್ವ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು. ಅಭಿಯಾನದ ಬಳಿಕ ಎಲ್ಲರಿಗೂ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಅಭಿಯಾನಕ್ಕೆ ಎಂ ಆರ್ಪಿಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.