ಬೆಳ್ತಂಗಡಿ: ತಾಲೂಕಿನ 46ಗ್ರಾ.ಪಂ.ನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು 22 ಪಂಚಾಯತ್ ಗಳಲ್ಲಿ ಬಹುಮತದ ಜಯಭೇರಿ ಬಾರಿಸಿ ಮೊದಲ ಸ್ಥಾನದಲ್ಲಿದ್ದರೆ, 17 ಪಂ.ಗಳಲ್ಲಿ ಕಾಂಗ್ರೇಸ್ ಬೆಂಬಲಿತರು ವಿಜಯಿಯಾಗಿದ್ದಾರೆ.
ಎ.29ರಂದು ಗ್ರಾ.ಪಂ.ಗಳಿಗೆ ನಡೆದ ಚುನಾವಣೆಯ ಮತ ಎಣಿಕಾ ಕಾರ್ಯ ಶುಕ್ರವಾರ ಉಜಿರೆ ಎಸ್.ಡಿ.ಎಂ ಪಿಯು ಕಾಲೇಜಿನಲ್ಲಿ ವ್ಯವಸ್ಥಿತವಾಗಿ ನಡೆಯಿತು. ಮತ ಎಣಿಕೆ ಕೇಂದ್ರದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಬಿ.ಆರ್. ಲಿಂಗಪ್ಪ ಪೂಜಾರಿ ನೇತ್ರತ್ವದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಭೇಟಿ ನೀಡಿದರು. ಪ್ರತಿ ಮತ ಎಣಿಕೆ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮತಪತ್ರಗಳ ಎಣಿಕೆಯಾದ ಕಾರಣ ನಿಧಾನಗತಿಯ ಮತಗಳ ಎಣಿಕೆಯಿಂದಾಗಿ ತಡರಾತ್ರಿಯವರಿಗೆ ಅದು ಮುಂದುವರಿಯುವಂತಾಯಿತು. ಫಲಿತಾಂಶಗಳಲ್ಲಿ 20 ಪಂ.ಗಳಲ್ಲಿ ಬಿಜೆಪಿ ಬೆಂಬಲಿತರು, 17 ಪಂಚಾಯತ್ ಗಳಲ್ಲಿ ಕಾಂಗ್ರೇಸ್ ಬೆಂಬಲಿತರು, 1 ಪಂ.ನಲ್ಲಿ ಜೆಡಿಎಸ್ ಬೆಂಬಲಿತರು, 6ಪಂ.ಗಳು ಅತಂತ್ರ ಸ್ಥಿತಿಯಲ್ಲಿವೆ.
ಫಲಿತಾಂಶದ ಪ್ರಮುಖ ಅಂಶಗಳು : ಕಲ್ಮಂಜ, ಕೊಯ್ಯೂರು, ಮಚ್ಚಿನ, ಅಂಡಿಂಜೆ, ಸುಲ್ಕೇರಿ, ಬಳಂಜ, ಶಿರ್ಲಾಲು, ಮೆಲಂತಬೆಟ್ಟು, ಮಲವಂತಿಗೆ, ಮಿತ್ತಬಾಗಿಲು, ಶಿಬಾಜೆ, ಮಡಂತ್ಯಾರು, ಧರ್ಮಸ್ಥಳ, ಕುವೆಟ್ಟು, ಬಂದಾರು, ನಿಡ್ಲೆ, ನಾವೂರು, ಚಾರ್ಮಾಡಿ,ಲಾಯಿಲ,ಕಣಿಯೂರು, ಬಾರ್ಯ ಹಾಗೂ ಕಳೆಂಜ ಪಂ.ಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಿ ಹಿಡಿಯಲಿದ್ದಾರೆ. ಅರಸಿನಮಕ್ಕಿ ಪಂ.ನಲ್ಲಿ ಜೆಡಿಎಸ್ ಬೆಂಬಲಿತರು ಬಹುಮತದ ಸ್ಥಾನಗಳನ್ನು ಪಡೆದಿದ್ದಾರೆ.
ಮರೋಡಿ, ಹೊಸಂಗಡಿ, ಕಾಶಿಪಟ್ಣ, ಅಳದಂಗಡಿ, ಕುಕ್ಕೇಡಿ, ಪಡಂಗಡಿ, ಕಡಿರುದ್ಯಾವರ, ಮುಂಡಾಜೆ, ಕಳಿಯ, ತೆಕ್ಕಾರು, ಇಳಂತಿಲ, ಪುದುವೆಟ್ಟು, ಕೊಕ್ಕಡ, ಶಿಶಿಲ, ಉಜಿರೆ, ನಾರಾವಿ, ತಣ್ಣೀರುಪಂತ ಪಂಚಾಯತ್ ಗಳಲ್ಲಿ ಕಾಂಗ್ರೇಸ್ ಬೆಂಬಲಿತರು ಬಹುಮತ ಪಡೆದಿದ್ದಾರೆ.
ಇಂದಬೆಟ್ಟು, ನೆರಿಯಾ, ಬೆಳಾಲು, ಪಟ್ರಮೆ, ಮಾಲಾಡಿ, ನಡ ಪಂಚಾಯತ್ ಗಳಲ್ಲಿ ಯಾವುದೇ ಪಕ್ಷದ ಬೆಂಬಲಿಗರಿಗೆ ಬಹುಮತ ದೊರೆತಿಲ್ಲ. ಈ ಪಂ.ಗಳಲ್ಲಿ ಪಕ್ಷೇತರರು ನಿರ್ಣಾಯಕರಾಗಿದ್ದಾರೆ.
ಬಾರ್ಯ ಪಂ.ನ ಪುತ್ತಿಲ ವಾರ್ಡ್ನ ಇಬ್ಬರು ಅಭ್ಯರ್ಥಿಗಳು ಸಮಾನ ಮತಗಳು ಪಡೆದ ಹಿನ್ನಲೆಯಲ್ಲಿ ನಾಣ್ಯ ಚಿಮ್ಮುಗೆಯ ಮೂಲಕ ಕಾಂಗ್ರೇಸ್ ಬೆಂಬಲಿತ ಚಂದ್ರಶೇಖರ ಅವರನ್ನು ವಿಜೇತರೆಂದು ಪ್ರಕಟಿಸಲಾಯಿತು. ಕೆಲವು ಪಂ.ಗಳಲ್ಲಿ ಒಂದೇ ಪಕ್ಷದ ಬೆಂಬಲಿತರು ಎಲ್ಲಾ ಸ್ಥಾನಗಳನ್ನು ಗೆದ್ದು ಕೊಂಡಿದ್ದಾರೆ. ಕಾಶಿಪಟ್ಣ(7), ಕುಕ್ಕೇಡಿ(11) ತೆಕ್ಕಾರು(9) ಪಂ.ಗಳಲ್ಲಿ ಕಾಂಗ್ರೇಸ್ ಬೆಂಬಲಿತರು ಎಲ್ಲಾ ಸ್ಥಾನಗಳನ್ನು ಗೆದ್ದು ಕೊಂಡರೆ, ಕಲ್ಮಂಜ(10) ಹಾಗೂ ಶಿಬಾಜೆ(6) ಪಂಚಾಯತ್ ಗಳಲ್ಲಿ ಎಲ್ಲಾ ಬಿಜೆಪಿ ಬೆಂಬಲಿತರು ಆಯ್ಕೆ ಆಗಿದ್ದಾರೆ.
ನಾರಾವಿ ಗ್ರಾ.ಪಂ. ವ್ಯಾಪ್ತಿಯ ಕುತ್ಲೂರು ವಾರ್ಡ್ನಲ್ಲಿ ಸ್ಪರ್ಧಿಸಿದ್ದ ನಕ್ಸಲ್ ಸಂಪರ್ಕದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ವಿಠಲ ಮಲೆಕುಡಿಯ ಕೇವಲ 30 ಮತಗಳನ್ನು ಮಾತ್ರ ಪಡೆದು ಪರಾಭವಗೊಂಡಿದ್ದಾರೆ. ಅವರ ಎದುರಾಳಿ ಕಾಂಗ್ರೇಸ್ ಬೆಂಬಲಿತ ಕೃಷ್ಣಪ್ಪ 270 ಮತಗಳನ್ನು ವಿಜಯಿಯಾಗಿದ್ದಾರೆ.
ಲಾಯಿಲ ಗ್ರಾ.ಪಂ.ನ 6 ನೇ ವಾರ್ಡನಲ್ಲಿ ಹಿಂದುಳಿದ ವರ್ಗ ಎ ಮಹಿಳೆ ಸ್ಥಾನಕ್ಕೆ ಸ್ಪರ್ಧಿಸಿದ್ದ ವಸಂತಿಯವರು ಈ ಕ್ಷೇತ್ರದಲ್ಲಿ271ಮತಗಳಿಂದ ಸೋಲುಂಡರೂ ಬಳಿಕ ಅದೇ ಕ್ಷೇತ್ರದಲ್ಲಿದ್ದ ಸಾಮಾನ್ಯ ಮಹಿಳಾ ಸ್ಥಾನದಿಂದ ಚುನಾಯಿತರಾಗಿದ್ದಾರೆ. ಸಾಮಾನ್ಯ ಮಹಿಳಾ ಸ್ಥಾನಕ್ಕೆ ಸ್ಪರ್ಧಿಸಿದ್ದ ಇಬ್ಬರೂ ಅಭ್ಯರ್ಥಿಗಳು ಇವರಿಗಿಂತ ಕಡಿಮೆ ಮತಗಳನ್ನು ಪಡೆದಿದ್ದ ಹಿನ್ನೆಲೆಯಲ್ಲಿ ವಸಂತಿಯವರನ್ನು ಚುನಾವಣಾಧಿಕಾರಿಗಳು ವಿಜಯಿ ಎಂದು ಘೋಷಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.