ಮಂಗಳೂರು: ತುಳುವನ್ನು ತೃತೀಯ ಭಾಷೆಯಾಗಿ ಕಲಿತು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ 416 ವಿದ್ಯಾರ್ಥಿಗಳಲ್ಲಿ ಎಲ್ಲರೂ ಪಾಸಾಗಿದ್ದು ಶೇಕಡಾ 100 ಫಲಿತಾಂಶ ದಾಖಲಿಸಿದ್ದಾರೆ. ದ.ಕ ಜಿಲ್ಲೆಯ 35 ಶಾಲೆಗಳಲ್ಲಿ 8, 9 ಮತ್ತು 10 ನೇ ತರಗತಿಗಳಲ್ಲಿ ತುಳು ಭಾಷೆಯ ಪಠ್ಯ ಕಲಿಸಲಾಗುತ್ತಿದ್ದು ಈ ಪೈಕಿ 22 ಶಾಲೆಗಳ 10 ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಪಾಸಾಗಿದ್ದು ಈ ಪೈಕಿ ೮೯ ಮಕ್ಕಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ. 24 ಮಂದಿ 99 ಅಂಕ ಪಡೆದಿದ್ದಾರೆ ಹಾಗೆಯೇ 107 ವಿದ್ಯಾರ್ಥಿಗಳು 90 ರಿಂದ 98 ಅಂಕ ಪಡೆದು ದಾಖಲೆ ನಿರ್ಮಿಸಿದ್ದಾರೆ. ಪರೀಕ್ಷೆಗೆ ಹಾಜರಾದ ಮಕ್ಕಳಲ್ಲಿ ಶೇಕಡಾ 50 ಮಕ್ಕಳು A+ ಶ್ರೇಣಿ ಪಡೆದಿದ್ದಾರೆ.
ತುಳುವಿನಲ್ಲಿ ಶೇಕಡಾ 100 ಫಲಿತಾಂಶ ಬರುವ ಮೂಲಕ ಶಾಲೆಗಳ ಫಲಿತಾಂಶ ಹಾಗೂ ಜಿಲ್ಲೆಯ ಒಟ್ಟು ಫಲಿತಾಂಶದಲ್ಲಿ ಏರಿಕೆಯಾಗಿರುವುದು ಕಂಡು ಬರುತ್ತದೆ. ಇದಕ್ಕೆ ಕಾರಣರಾದ ದ.ಕ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಲೆಗಳ ಮುಖ್ಯ ಶಿಕ್ಷಕರು, ತುಳು ಭಾಷಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ ಭಂಡಾರಿ ತಿಳಿಸಿದ್ದಾರೆ.
ತುಳು ಪಠ್ಯ ಭೋದನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು 2018-19 ನೇ ಸಾಲಿನಲ್ಲಿ 100 ಕ್ಕೂ ಅಧಿಕ ಶಾಲೆಗಳಲ್ಲಿ ತುಳು ಪಠ್ಯವನ್ನು ಭೋದನೆ ಮಾಡಲು ಕ್ರಮವಹಿಸಲಾಗಿದೆ. ತೃತೀಯ ಐಚ್ಛಿಕ ಭಾಷೆಯಾಗಿ ತುಳುವನ್ನು ಆಯ್ಕೆ ಮಾಡುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗುತ್ತಿದ್ದು ಈ ಮೂಲಕ ಶಾಲೆಗಳು ಕೂಡಾ ಫಲಿತಾಂಶದಲ್ಲಿ ದಾಖಲೆ ನಿರ್ಮಿಸುತ್ತಿದೆ. ಎಂದು ಹೇಳಿರುವ ಎ.ಸಿ ಭಂಡಾರಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಶಾಲೆಗಳ ಶಿಕ್ಷಕ ವರ್ಗ ಹಾಗೂ ಆಡಳಿತ ಮಂಡಳಿಗೆ ಕೃತಜ್ಞತೆ ಅರ್ಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.