ಮೈಸೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಮಾರ್ಚ್ 30 ಮತ್ತು 31 ರಂದು ಹಳೇ ಮೈಸೂರು ಭಾಗದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಮಿತ್ ಷಾ ಅವರು ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಒಟ್ಟು 26 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಈ 4 ಜಿಲ್ಲೆಗಳು ಒಕ್ಕಲಿಗರ ಭದ್ರಕೋಟೆ ಎಂದು ಹೇಳಲಾಗುತ್ತದೆ.
ಮಾರ್ಚ್ 30 ರಂದು ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಜೊತೆ ಮಾತುಕತೆ ನಡೆಸಲಿದ್ದಾರೆ. ನಂತರ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಕುಟುಂಬದವರನ್ನು ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಕ್ಯಾತಮಾರನಹಳ್ಳಿ ನಿವಾಸಿ ಬಿಜೆಪಿಯ ಕಾರ್ಯಕರ್ತ ರಾಜು ಅವರ ಮನೆಗೆ ತೆರಳಿ ಸಂತಾಪ ಸೂಚಿಸಲಿದ್ದಾರೆ. ಚಾಮರಾಜ ಕ್ಷೇತ್ರದ ಬಿಜೆಪಿ ನವಶಕ್ತಿ ಸಮಾವೇಶ, ತದನಂತರ ರಾಜೇಂದ್ರ ಕಲಾಮಂದಿರದಲ್ಲಿ ದಲಿತ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ.
ನಂತರ ಚಾಮರಾಜನಗರ ಪ್ರವಾಸ ಕೈಗೊಳ್ಳಲಿರುವ ಅಮಿತ್ ಷಾ ಅವರು ಕೊಳ್ಳೆಗಾಲದ ವಿಧಾನ ಕ್ಷೇತ್ರಗಳ ನವಶಕ್ತಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಚಾಮರಾಜನಗರದ ಡಾ. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಪರಿಶಿಷ್ಟ ವರ್ಗದ ನಾಯಕರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ನಂತರ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೇವಾಲಯ ಹಾಗೂ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ.
ಜನರಿಗೆ ಸರ್ಕಾರದ ವೈಫಲ್ಯ ತಿಳಿಯಲು ಯುವ ಮೋರ್ಚಾ ವತಿಯಿಂದ ಕರುನಾಡ ಯುವ ಜಾಗೃತಿ ಯಾತ್ರೆ ಆಯೋಜಿಸಲಾಗಿದ್ದು, ಈ ಯಾತ್ರೆಯು ಮಾರ್ಚ್ 29 ರಿಂದ ಏಪ್ರಿಲ್ 5 ರ ವರೆಗೆ ನಡೆಯಲಿದೆ.
ಮಾರ್ಚ್ 31 ರಂದು ಮೈಸೂರಿನಲ್ಲಿ ಕರುನಾಡು ಯುವ ಜಾಗೃತಿ ಯಾತ್ರೆಯ ಬೈಕ್ ರ್ಯಾಲಿಗೆ ಚಾಲನೆ ನೀಡಲಿದ್ದಾರೆ. ನಂತರ ಶ್ರೀರಂಗಪಟ್ಟಣದ ಚನ್ನೇನಹಳ್ಳಿಯಲ್ಲಿ ಆತ್ಮಹತ್ಯೆಗೆ ಶರಣಾದ ರೈತ ದಿ. ರಾಜೇಂದ್ರಪ್ಪ ಅವರ ಮನೆಗೆ ಭೇಟಿ ನೀಡಲಿದ್ದಾರೆ ಹಾಗೂ ಮುಷ್ಠಿ ಧಾನ್ಯ ಸಂಗ್ರಹ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ. ನಂತರ ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ಭೇಟಿ, ಮಂಡ್ಯದಲ್ಲಿ ಸಾವಯವ ಕೃಷಿಕರು, ಮಹಿಳೆಯರೊಂದಿಗೆ ಸಂವಾದ, ರೈತರೊಂದಿಗೆ ಭೋಜನ, ೫ ಜಿಲ್ಲೆಗಳ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಚನ್ನಪಟ್ಟಣದ ಕರಕುಶಲದ ಪಾರ್ಕ್ಗೆ ಭೇಟಿ ನೀಡಲಿದ್ದಾರೆ. ಅಲ್ಲದೆ ರೇಷ್ಮೆ ಬೆಳೆಗಾರರು, ರೇಷ್ಮೆ ಉದ್ದಿಮೆದಾರರೊಂದಿಗೆ ಸಂವಾದ ನಡೆಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.