ಬೆಳ್ತಂಗಡಿ: ಇಂದಿನ ಆಧುನಿಕ ಪ್ರಪಂಚದಲ್ಲಿ ಇಂಧನವು ದಿನನಿತ್ಯದ ಪ್ರಮುಖ ಅಂಶವಾಗಿದೆ. ವಿಶ್ವದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಅಭಾವ ಮತ್ತು ಅದರ ಬೆಲೆ ಗಗನಕ್ಕೇರುತ್ತಿರುವುದರಿಂದ ದೇಶದಲ್ಲಿ ಇಂಧನ ಕೊರತೆ ತೀವ್ರವಾಗಿದೆ. ಅನೇಕ ರಾಜ್ಯಗಳಲ್ಲಿ ವಿದ್ಯುಚ್ಚಕ್ತಿಯ ಅಭಾವದಿಂದ ಕೈಗಾರಿಕಾ ಮತ್ತು ಕೃಷಿ ಕ್ಷೇತ್ರದಲ್ಲಿ ಸಾವಿರಾರು ಕೋಟಿ ನಷ್ಟ ಅನುಭವಿಸುತ್ತಿದೆ.
ಗ್ರಾಮೀಣ ಪ್ರದೇಶದಲ್ಲಿ ಇಂಧನ ಸಮಸ್ಯೆ ತೀವ್ರವಾಗಿದೆ. ಸಾಂಪ್ರದಾಯಿಕವಾಗಿ ಬಳಸುತ್ತಿದ್ದ ಸೌದೆಯಿಂದ ಅರಣ್ಯ ನಾಶಗೊಂಡು ಇದೀಗ ಗ್ರಾಮೀಣ ಇಂಧನ ಲಭ್ಯತೆಯು ಇಲ್ಲವಾಗಿದೆ. ಹೀಗಾಗಿ ನಾವು ಹಸಿರು ಇಂಧನ ಮೂಲಗಳ ಬಗ್ಗೆ ಹೆಚ್ಚಿನ ಪ್ರಚಾರ ಮತ್ತು ಪ್ರಾಮುಖ್ಯತೆಯನ್ನು ಕೊಡಬೇಕಾಗಿದೆ.
ವಿಶೇಷ ವ್ಯವಸ್ಥೆ: ಈ ನಿಟ್ಟಿನಲ್ಲಿ ಧರ್ಮಸ್ಥಳದ ಧರ್ಮಾಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ವಿಶೇಷ ಆಸಕ್ತಿ ವಹಿಸಿದ್ದು, ಧರ್ಮಸ್ಥಳ ಗ್ರಾಮವನ್ನು ಹಸಿರು ಗ್ರಾಮವನ್ನಾಗಿ ಪರಿವರ್ತನೆ ಮಾಡಲು ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಬಿಸಿ ನೀರನ್ನು ಒದಗಿಸಲು ದಿನವೊಂದಕ್ಕೆ ೨ ಲಕ್ಷ ಲೀಟರ್ ಬಿಸಿ ನೀರು ಪೂರೈಕೆ ಮಾಡಲು ಸಾಮರ್ಥ್ಯವಿರುವ ಸೌರ ಬಿಸಿ ನೀರಿನ ಘಟಕಗಳನ್ನು ಸ್ಥಾಪಿಸಿದ್ದಾರೆ. ದೇವಳದಲ್ಲಿ ಮತ್ತು ಧರ್ಮಸ್ಥಳದ ಎಲ್ಲಾ ಪ್ರೇಕ್ಷಣೀಯ ಸ್ಥಳಗಳಲ್ಲಿ ಸೌರ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಅಲ್ಲದೆ ೮೦ ಘನ ಮೀಟರ್ ಗಾತ್ರದ ಬೃಹತ್ ಜೈವಿಕ ಅನಿಲ ಘಟಕವು ದಿನವಹಿ500 ಮಂದಿಗೆ ಬೇಕಾಗುವ ಅಡಿಗೆ ವ್ಯವಸ್ಥೆಗೆ ಅನಿಲವನ್ನು ಒದಗಿಸುತ್ತದೆ.
ಇದರಿಂದ ಪ್ರೇರಣೆಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕುಗ್ರಾಮಗಳಲ್ಲಿ ವಿದ್ಯುತ್ ಸೌಲಭ್ಯದಿಂದ ವಂಚಿತರಾಗಿರುವ ಜನರನ್ನು ಸಂಘಟಿಸಿ ತರಬೇತಿ ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ಹಸಿರು ಇಂಧನ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಿ ಸೋಲಾರ್ ದೀಪ, ಪರಿಸರ ಸ್ನೇಹಿ ಒಲೆ, ಕಿರು ಜಲ ವಿದ್ಯುತ್ ಘಟಕ ಮತ್ತು ಜೈವಿಕ ಅನಿಲ ಘಟಕಗಳನ್ನು ಪಾಲುದಾರ ಕುಟುಂಬಗಳಲ್ಲಿ ಅನುಷ್ಠಾನ ಮಾಡುತ್ತಿದೆ. ಜೈವಿಕ ಅನಿಲದಿಂದಅಡುಗೆಗೆ ಬೇಕಾದಉತ್ತಮಗುಣ ಮಟ್ಟದ ನಿರಂತರ ಅನಿಲ, ಸ್ವಚ್ಛ ಪರಿಸರ, ಉತ್ತಮಗುಣಮಟ್ಟದ ಸಾವಯವಗೊಬ್ಬರ ಹಾಗೂ ಸೋಲಾರ್ ಅಳವಡಿಕೆಯಿಂದ ನಿರಂತರ ಬೆಳಕಿನ ವ್ಯವಸ್ಥೆ ಲಭ್ಯವಾಗುತ್ತದೆ.
ಭವಿಷ್ಯದ ಹಸಿರು ಇಂಧನ- ಜೈವಿಕ ಅನಿಲ: ಗ್ರಾಮೀಣ ಜನರ ಎಲ್.ಪಿ.ಜಿ.ಯೆಂದೇಖ್ಯಾತವಾಗಿರುವಜೈವಿಕ ಅನಿಲ ಘಟಕಗಳ ರಚನೆಗಾಗಿ ಈ ತನಕ ಒಟ್ಟು 20,508 ಕುಟುಂಬಗಳಿಗೆ ಮಾಹಿತಿ ನೀಡಿ ಘಟಕಗಳನ್ನು ಅನುಷ್ಠಾನಿಸಿರುತ್ತದೆ. 2014-15 ನೇ ಸಾಲಿನಲ್ಲಿಒಟ್ಟು ೨೧೯೭ ಘಟಕಗಳ ರಚನೆಯಾಗಿದ್ದು, 15 -16 ನೇ ಸಾಲಿಗೆ 4984 ಘಟಕಗಳ ರಚನೆಯಗುರಿ ಹೊಂದಲಾಗಿದೆ.
ಯೋಜನೆಯು ಕಾರ್ಯನಿರ್ವಹಿಸುತ್ತಿರುವ 25 ಜಿಲ್ಲೆಗಳಲ್ಲಿ ಒಟ್ಟು ೬೨ ಗುತ್ತಿಗೆದಾರರು ಜೈವಿಕ ಅನಿಲ ಘಟಕರಚನೆಗೆ ಸಹಕಾರ ನೀಡುತ್ತಿದ್ದಾರೆ. ಜೈವಿಕ ಅನಿಲ ಘಟಕರಚನೆಗೆ ನುರಿತ ಮೇಸ್ತ್ರಿಗಳು ಸಕಾಲದಲ್ಲಿ ದೊರಕುವುದಿಲ್ಲ. ಸದ್ರಿ ಸಮಸ್ಯೆಗೆ ಪರಿಹಾರಒದಗಿಸಲು 2012-13ನೇ ಸಾಲಿನಲ್ಲಿಆಯ್ದ ೬೯ ಮಂದಿಗೆ ಒಂದು ವಾರದ ತರಬೇತಿಯನ್ನು ನೀಡಲಾಗಿದೆ. ಈ ಪೈಕಿ 28 ಮಂದಿ ಈಗಾಗಲೇ 380 ಘಟಕಗಳ ರಚನೆಯನ್ನು ಮಾಡಿರುತ್ತಾರೆ.
ಸೌರ ವಿದ್ಯುತ್ ದೀಪಗಳು: ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಅಸಾಧ್ಯವಾಗಿರುವ ಮತ್ತು ಅಸಮರ್ಥರಾಗಿರುವ 28046 ಕುಟುಂಬಗಳಿಗೆ ಪ್ರೇರಣೆ ನೀಡಿ ಸೌರ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. 2014-15 ನೇ ಸಾಲಿನಲ್ಲಿ 10435 ಘಟಕಗಳನ್ನು ಅಳವಡಿಸಿದ್ದು, 2015 -16ನೇ ಸಾಲಿನಲ್ಲಿ ೧೨೩೫೯ ಘಟಕ ಅಳವಡಿಕೆಯ ಗುರಿ ಹೊಂದಲಾಗಿದೆ.
ಕಿರು ಜಲ ವಿದ್ಯುತ್ ಘಟಕಗಳು: ಪ್ರಕೃತಿದತ್ತವಾದ ನೀರನ್ನು ಬಳಕೆ ಮಾಡಿ ದಿನ ಬಳಕೆಗೆ ಬೇಕಾಗುವಷ್ಟು ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹ ನೀಡಿರುವ ಯೋಜನೆಯು ಒಟ್ಟು 185 ಕುಟುಂಬಗಳಿಗೆ ಮಾಹಿತಿ ನೀಡಿ ಅನುಷ್ಠಾನಿಸಿರುತ್ತದೆ. ಪ್ರಸ್ತುತ ವರ್ಷ 25 ಘಟಕಗಳನ್ನು ಅಳವಡಿಸಲಾಗುವುದು.
ಪರಿಸರ ಸ್ನೇಹಿ ಒಲೆಗಳು: ಗ್ರಾಮೀಣ ಮಹಿಳೆಯರಿಗೆ ವರದಾನವಾಗಿರುವ ಪರಸರ ಸ್ನೇಹಿ ಒಲೆಗಳನ್ನು ಪರಿಚಯಿಸಿ ೭೫೮೨೧ ಕುಟುಂಬಗಳಲ್ಲಿ ಅಳವಡಿಸಲಾಗಿರುತ್ತದೆ. ೨೦೧೪-೧೫ ನೇ ಸಾಲಿನಲ್ಲಿ ೭೨೪೯೦ ಕುಟುಂಬಗಳಲ್ಲಿ ಅಳವಡಿಸಲಾಗಿರುತ್ತದೆ.
ಹಸಿರು ಇಂಧನ ಘಟಕಗಳನ್ನು ಗ್ರಾಮೀಣ ಮಟ್ಟದಲ್ಲಿ ಕ್ರಮವತ್ತಾಗಿ ಅನುಷ್ಠಾನಿಸಿದ್ದಕ್ಕಾಗಿ ಸಂಸ್ಥೆಗೆ 2012ನೇ ಸಾಲಿನ ಪ್ರತಿಷ್ಠಿತಜಾಗತಿಕ ಆಶ್ಡೆನ್ ಚಿನ್ನದ ಪ್ರಶಸ್ತಿ ಗೌರವ ದೊರಕಿರುತ್ತದೆ. 2012 ರ ನಂತರ ರೈತರಿಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿ ಪರ್ಯಾಯ ಇಂಧನಗಳ ಕುರಿತು ನಿರಂತರವಾಗಿ ಚಿಂತನೆ ಮಾಡಿ ರೈತರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಪ್ರಗತಿ ಹಾಗೂ ಅನುದಾನಗಳನ್ನು ವಿತರಣೆ ಮಾಡಿ ಸಕಾಲದಲ್ಲಿ ಅನುಪಾಲನೆ ಮಾಡಲು ಕೇಂದ್ರ ಕಛೇರಿಯಲ್ಲಿ ಹಸಿರು ಇಂಧನ ವಿಭಾಗ ಎಂಬ ಪ್ರತ್ಯೇಕ ವಿಭಾಗವನ್ನು ಕೃಷಿ ವಿಭಾಗದಲ್ಲಿ ರಚನೆ ಮಾಡಲಾಗಿದೆ. ೨೫ ಜಿಲ್ಲೆಗಳಲ್ಲಿ 217ಮಂದಿ ಎನರ್ಜಿ ಆಫೀಸರ್ಗಳು ಹಸಿರು ಇಂಧನ ಕಾರ್ಯಕ್ರಮಗಳನ್ನು ಮೇಲ್ವಿಚಾರಕರ ಮತ್ತು ಸೇವಾ ಪ್ರತಿನಿಧಿಗಳ ಸಹಕಾರದೊಂದಿಗೆ ಅನುಷ್ಠಾನಿಸಲಾಗುತ್ತದೆ.
ಹಸಿರು ಇಂಧನಗಳ ಘಟಕ ರಚನೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪಾಲುದಾರರಿಗೆ ಹಸಿರು ಇಂಧನ ವ್ಯವಸ್ಥೆಗಳನ್ನು ಕೈಗೊಳ್ಳಲು ಅಗತ್ಯವಿರುವ ಪ್ರೇರಣೆ, ತರಬೇತಿ ಮತ್ತುಘಟಕ ಸ್ಥಾಪನೆಗೆ ಆರ್ಥಿಕ ಸಹಕಾರವನ್ನು ನೀಡುತ್ತದೆ. ಯೋಜನಾ ವತಿಯಿಂದ ಘಟಕರಚನೆಗೆ ಪ್ರಗತಿನಿ (ಸಾಲ) ಮತ್ತು ಶೇಕಡಾ ೧೦ರಂತೆ ಅನುದಾನಒದಗಿಸಲಾಗುತ್ತದೆ.
ಇದುವರೆಗೆ 20508 ಜೈವಿಕ ಅನಿಲ ಘಟಕ, ೨೮೦೪೬ ಸೋಲಾರ್ ಘಟಕಗಳು ಮತ್ತು 185 ಜಲ ವಿದ್ಯುತ್ ಯೋಜನೆಗಳ ಅನುಷ್ಠಾನಕ್ಕಾಗಿ ಬ್ಯಾಂಕುಗಳಿಂದ ರೂ.30.26 ಕೋಟಿಗೂ ಮಿಕ್ಕಿದ ಪ್ರಗತಿನಿ ಸಾಲ ಮತ್ತು ಯೋಜನೆಯಿಂದ ಘಟಕವೊಂದರ ರೂ. 1000ದಂತೆ ಪ್ರಸ್ತುತ ವರ್ಷ ರೂ.60.69 ಲಕ್ಷ ಇದುವರೆಗೆ ರೂ. 2.76 ಕೋಟಿ ಅನುದಾನ ವಿತರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.