ಬೆಳ್ತಂಗಡಿ: ಭಾರತೀಯ ಜೀವ ವಿಮಾ ನಿಗಮದ ಅಧ್ಯಕ್ಷರಾದ ಎಸ್. ಕೆ. ರಾಯ್ ಅವರು ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಧಳಕ್ಕೆ ಭೇಟಿ ನೀಡಿ ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆಯವರನ್ನು ನಿಗಮದ ಪರವಾಗಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಯ್ ಅವರು ಧರ್ಮಸ್ಧಳ ಗ್ರಾಮಾಭಿವೃದ್ಧಿ ಯೋಜನೆ ಎಲ್.ಐ.ಸಿ. ಯ ಜೀವನ್ ಮಧುರ ಪಾಲಿಸಿಗಳನ್ನು ರಾಜ್ಯದ ಗ್ರಾಮೀಣ ಜನರಿಗೆ ತಲುಪಿಸುವ ಕಾರ್ಯವನ್ನು ಮಾಡಿದೆ. ಕರ್ನಾಟಕದಲ್ಲಿ ಕಳೆದ ಏಳು ವರ್ಷಗಳಲ್ಲಿ 18.68 ಲಕ್ಷ ಜೀವನ್ ಮಧುರ ಪಾಲಿಸಿಗಳು ಮಾರಾಟವಾಗಿದ್ದು ಅದರಲ್ಲಿ 11.33 ಲಕ್ಷ ಪಾಲಿಸಿಗಳನ್ನು ಧರ್ಮಸ್ಧಳ ಗ್ರಾಮಾಭಿವೃದ್ಧಿ ಯೋಜನೆ ನಿರ್ವಹಿಸಿದೆ. ಇದು ದೇಶದಲ್ಲಿಯೇ ಶ್ರೇಷ್ಠ ಸಾಧನೆಯಾಗಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜೀವನ್ ಮಧುರ ಕಾರ್ಯಕ್ರಮದಲ್ಲಿ 6320 ಸದಸ್ಯರಿಗೆ ಮರಣ ಸಾಂತ್ವನವಾಗಿದ್ದರೂ 10.20 ಕೋಟಿಯನ್ನು ಹಾಗೂ 20,314 ಸದಸ್ಯರಿಗೆ ರೂ. 14 ಕೋಟಿ ಮೆಚ್ಯೂರಿಟಿ ಮೊತ್ತವನ್ನು ಪಾವತಿಸಲಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯು ತನ್ನ ಸದಸ್ಯರುಗಳಲ್ಲಿ ಈ ಬಗ್ಗೆ ಅರಿವು ಮೂಡಿಸಿರುವ ಕಾರಣದಿಂದಾಗಿ ಶೇ. 90ಕ್ಕಿಂತಲೂ ಹೆಚ್ಚು ಸದಸ್ಯರು ತಮ್ಮ ಪಲಿಸಿಗಳನ್ನು ಪುನರ್ ನವೀಕರಿಸುತ್ತಿದ್ದು, ಈ ಪ್ರಕ್ರಿಯೆಯಲ್ಲಿಯೂ ದೇಶದಲ್ಲಿಯೇ ಪ್ರಥಮ ಸ್ಧಾನದಲ್ಲಿದೆ ಎಂದರು.
ಈ ವರ್ಷದಿಂದ ಜೀವ ವಿಮಾ ನಿಗಮವು ಜೀವನ್ ಮಧುರ ಬದಲಿಗೆ ಹೊಸದಾಗಿ ಭಾಗ್ಯ ಲಕ್ಷ್ಮಿ ವಿಮಾ ಪಾಲಿಸಿಗಳನ್ನು ಹೊರತಂದಿದ್ದು, ಇದು ಗ್ರಾಮೀಣ ಜನರಿಗೆ ಇನ್ನಷ್ಟು ಪ್ರಯೋಜನಕಾರಿಯಾಗಿದೆ. ಇದನ್ನು ಜನರ ಬಳಿ ಕೊಂಡೊಯ್ಯುವ ಕಾರ್ಯದಲ್ಲಿಯೂ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರ ಕೋರಿದರು.
ಧರ್ಮಸ್ಧಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕವಾಗಿ ನಡೆಯುತ್ತಿರುವ ಕಾರ್ಯಗಳು ದೇಶದ ಜನಸಾಮಾನ್ಯರಿಗಾಗಿ ಈ ಕೆಲಸವಾಗಿದೆ. ಈ ಎಲ್ಲ ಕಾರ್ಯಗಳನ್ನು ಗುರುತಿಸಿ ಸರಕಾರ ಈ ಅತ್ಯುನ್ನತ ಗೌರವ ನೀಡಿದೆ. ಈ ಸೇವಾ ಚಟುವಟಿಕೆಗಳು ಇನ್ನಷ್ಟು ಮುಂದುವರಿಯಲಿ. ಯೊಜನೆಯ ಹಾಗೂ ಎಲ್.ಐ. ಸಿ. ಯ ಗುರಿ ಜನಸಾಮಾನ್ಯರ ಬದುಕನ್ನು ಉತ್ತಮ ಪಡಿಸುವುದೇ ಆಗಿದೆ. ಭಾರತೀಯ ಜೀವ ವಿಮಾ ನಿಗಮವು ಯೋಜನೆಯೊಂದಿಗೆ ಇನ್ನಷ್ಟು ಕೈಜೋಡಿಸಲು ಸಿದ್ಧವಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಸ್ಧಳದ ಧರ್ಮಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಸಮಾಜದ ಅತಿ ದುರ್ಬಲ ವರ್ಗದ ಜನರಿಗೆ ನೆರವಾಗುವ ಉದ್ದೇಶದಿಂದ ಗ್ರಾಮಾಭಿವೃದ್ಧಿ ಯೋಜನೆಯ ವಿವಧ ಸೌಲಭ್ಯಗಳು ಅವರಿಗೆ ಸುಲಭವಾಗಿ ತಲುಪುವಂತೆ ನೋಡಿಕೊಳ್ಳುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್ಗಳೊಂದಿಗೆ, ಭಾರತೀಯ ಜೀವ ವಿಮಾ ನಿಗಮದೊಂದಿಗೆ, ಕೇಂದ್ರ ಮತ್ತು ರಾಜ್ಯ ಸರಕಾರಗಳೊಂದಿಗೆ ಒಪ್ಪಂದ ಮಾಡಿಕೊಂಡು ಜನರಿಗೆ ಸೇವೆ ಒದಗಿಸಲಾಗುತ್ತದೆ. ಜನರ ಜೀವನ ಮಟ್ಟವನ್ನು ಉತ್ತಮ ಪಡಿಸಲು ಇದು ಸಹಕಾರಿಯಾಗಿದೆ ಎಂದರು. ಜನರಲ್ಲಿ ಉಳಿತಾಯದ ಮನೋಭಾವನೆಯನ್ನು ಮೂಡಿಸಲು ಯೋಜನೆ ಪ್ರಯತ್ನಿಸುತ್ತಿದೆ. ಜೀವ ವಿಮಾ ನಿಗಮದ ಯೋಜನೆಯನ್ನು ಉಳಿತಾಯದ ದೃಷ್ಟಿಯಲಿ ಜನರಿಗೆ ಹೆಚ್ಚು ಪರಿಚಯಿಸಲಗಿದೆ. ಈ ವರ್ಷ ಸಂಪೂರ್ಣ ಸುರಕ್ಷಾ ಯೋಜನೆಯಲ್ಲಿ 13 ಲಕ್ಷ ಮಂದಿ ಸದಸ್ಯರು ನೋಂದಾವಣೆಯಾಗಿದ್ದು ೪೮ ಕೋಟಿ ಪ್ರೀಮಿಯಂ ಸಂಗ್ರಹಿಸಲಾಗಿದೆ. ಈ ಮೂಲಕವಾಗಿ ಜನರ ಅರೋಗ್ಯ ಸಂರಕ್ಷಣೆಯ ಕಾರ್ಯ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎಲ್ ಹೆಚ್. ಮಂಜುನಾಧ್ ಜೀವ ವಿಮಾ ನಿಗಮದ ಅಧಿಕಾರಿಗಳಾದ ದಕ್ಷಿಣ ಕೇಂದ್ರ ವಿಭಾಗದ ಮಹಾಪ್ರಭಂಧಕ ಗಣೇಶ್, ಪ್ರಾದೇಶಿಕ ಪ್ರಭಂಧಕರಾದ ಕೆ. ಕೆ.ದಾಸ್, ಉಡುಪಿ ವಿಭಾಗೀಯ ಪ್ರಭಂಧಕ ವಿಶ್ವನಾಧ್ ಗೌಡ, ಶಶಿಧರ್ ಧರ್ಮಸ್ಧಳ, ಶ್ಯಾಮಸುಂದರ್, ಯೋಜನೆಯ ನಿರ್ಧೇಶಕರಾದ ಶಾಂತರಾi ಪೈ, ಸಂಪತ್ಕುಮಾರ್, ಯೋಜನಾಧಿಕಾರಿ ಪ್ರಶಾಂತ್ ಸಿ ಎಸ್ ಉಪಸ್ಧಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.