ಕುಂಬಳೆ : ದೇಶವನ್ನು ವಿಭಜಿಸಿದಂತೆ ಈ ರಾಷ್ಟ್ರದ ಸ್ವಾತಂತ್ರ್ಯ ಹೋರಾಟವನ್ನೂ ಎರಡು ವಿಭಾಗಳಾಗಿ ವಿಭಜಿಸಿ ಒಂದು ವಿಭಾಗವನ್ನು ಮೂಲೆಗುಂಪು ಮಾಡಿದ ಹುನ್ನಾರ ಕಂಡುಬಂದಿದೆ. ಸ್ವದೇಶಿ ಚಿಂತನೆಗಳನ್ನು ಮೊತ್ತಮೊದಲಾಗಿ ಭಿತ್ತಿ,ಸ್ವಾತಂತ್ರ್ಯ ಸಂಗ್ರಾಮಕ್ಕೆ ಮದನ್ ಲಾಲಾ ಢೀಂಗ್ರಾರಂತ ಆತ್ಮಾರ್ಪಣೆಮಾಡಿಕೊಂಡ ವೀರ ಯೋಧರ ತಯಾರಿಗೆ ಮುಖ್ಯ ಕಾರಣೀಕರ್ತರಾದ ವೀರ ಸಾಮರ್ಕರ್ ರ ಚಿಂತನೆಗಳು ಯುವ ಸಮೂಹಕ್ಕೆ ರಾಷ್ಟ್ರ ಪ್ರೇಮಕ್ಕೆ ಮಾದರಿಯೆಂದು ಪತ್ರಕರ್ತ ಗಣೇಶ್ ಪಿ.ಎಂ.ಮುಂಡಾನ್ತಡ್ಕ ಅಭಿಪ್ರಾಯಪಟ್ಟರು.
ಯುವ ಬ್ರಿಗೇಡ್ ಕಾಸರಗೋಡು ಘಟಕದ ವತಿಯಿಂದ ಗುರುವಾರ ಸಂಜೆ ಕುಂಬಳೆಯ ಅನ್ನಪೂರ್ಣ ಸಭಾ ಭವನದಲ್ಲಿ ನಡೆದ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.ಸ್ವಾತಂತ್ರ್ಯ ಚಳವಳಿ,ಸ್ವದೇಶಿ ಚಿಂತನೆಗಳ ಬಗ್ಗೆ ಕೀಳರಿಮೆ ಸಲ್ಲದು. ತೀವ್ರಗಾಮಿ ಹೋರಾಟದ ಮೂಲಕ ಸ್ವಾತಂತ್ರ್ಯದ ಕಿಚ್ಚನ್ನು ಬಡಿದೆಬ್ಬಿಸಿದ್ದ ವೀರ ಸಾವರ್ಕರ್ ಸಹಿತ ಇತರ ಹೋರಾಟಗಾರರನ್ನು ಸ್ವಾತಂತ್ರ್ಯದ ಬಳಿಕ ಮೂಲೆಗುಂಪಾಗಿಸಿದ ರಾಜಕೀಯ ಹುನ್ನಾರಗಳ ಬಗ್ಗೆ ಇಂದಿನ ಯುವಜನತೆ ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆಯೆಂದು ಅವರು ತಿಳಿಸಿದರು. ನೈಜ ದೇಶಭಕ್ತಿಯ, ಸಮಗ್ರ ಭಾರತದ ಕನಸುಕಂಡ ವೀರ ಸೇನಾನಿಗಳ ಮರು ಓದು ಇಂದು ಅಗತ್ಯವಿದೆಯೆಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಗೈದು ಮಾತನಾಡಿದ ಯುವ ಚಿಂತಕ ಕುಂಟಾರು ಶ್ರೀಧರ ಉಡುಪ ಮಾತನಾಡಿ ರಾಷ್ಟ್ರ ಪ್ರೇಮ,ಸ್ವದೇಶ ಚಿಂತನೆ ಹಾಗೂ ಸಾಮರಸ್ಯದ ಬದುಕಿಗೆ ಎಲ್ಲಾ ಮತಗಳ ಅನುಯಾಯಿಗಳನ್ನು ಒಂದೇ ಸೂರಿನಡಿ ಕರೆದೊಯ್ಯುವ ಚಿಂತನೆ ಅಗತ್ಯವಿದೆ.ಸಾವರ್ಕರ್ ರಂತಹ ಅಪ್ರತಿಮ ವೀರ ಸೇನಾನಿಗಳನ್ನು ಮರೆಯುವಂತಹ ವಾತಾವರಣ ಸ್ವಾತಂತ್ರ್ಯಾನಂತರ ನಿರ್ಮಾಣಗೊಳಿಸಿದ ರಾಜಕೀಯ ನೀತಿಗಳು ರೇಜಿಗೆ ತರುವಂತದ್ದು ಎಂದು ತಿಳಿಸಿದ ಅವರು ಯುವ ಜನಾಂಗಕ್ಕೆ ರಾಷ್ಟ್ರ ಪ್ರೇಮ,ಸ್ವಾತಂತ್ರ್ಯ ಹೋರಾಟ ಹಾಗೂ ಇಲ್ಲಿನ ಮೂಲ ಸಂಸ್ಕೃತಿಗೆ ಮೌಲ್ಯ ನೀಡುವಂತಹ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕೆಂದು ಕರೆಯಿತ್ತರು. ಭಾರತದಂತಹ ಪ್ರಾಚೀನ ಹಿನ್ನೆಲೆ,ಮೌಲ್ಯಗಳುಳ್ಳ ರಾಷ್ಟ್ರ ಸಂಸ್ಕೃತಿ ಮರೆತರೆ ಅದರ ಜೊತೆಗೆ ರಾಷ್ಟ್ರವೂ ಅವನತಿಹೊಂದಿದಂತೆ ಎಂದು ತಿಳಿಸಿದ ಅವರು ಸಂಸ್ಕೃತಿ,ಜೀವನ ಶೈಲಿಗಳಲ್ಲಿ ವಿದೇಶೀಯ ಅಂಧಾನುಕರಣ ಬೇಡವೆಂದು ತಿಳಿಸಿದರು.
ತುರ್ತುಪರಿಸ್ಥಿತಿ ಹೋರಾಟಗಾರ ಯಂ.ನಾರಾಯಣ ಶೆಣೈ ಕುಂಬಳೆ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.ಅಮಿತ್ ಎ.ಎಸ್ ಮಂಗಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು.ಮಹೇಶ್ ಪ್ರಾರ್ಥಿಸಿದರು.ಕೃಷ್ಣಪ್ರಸಾದ್ ಸ್ವಾಗತಿಸಿ,ರಾಮಚಂದ್ರ ಬಲ್ಲಾಳ್ ನಾಟೆಕಲ್ಲು ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.