ನೇತಾಜಿ ಸುಭಾಷ್ ಚಂದ್ರ ಬೋಸ್ ಹೆಸರೇ ರೋಮಾಂಚನಕಾರಿ.
ಭಾರತೀಯ ಯುವಜನಾಂಗದ ಆಸೆ ಆಕಾಂಕ್ಷೆಗಳ ಮೂರ್ತಿವೆತ್ತ ರೂಪ. ಭಾರತಕ್ಕೆ ಪೂರ್ಣ ಸ್ವಾತಂತ್ಯ್ರ ತಂದುಡಬೇಕೆಂಬ ದೃಢ ನಿಶ್ಚಯ. ದೇಶದೊಳಗಡೆಯಷ್ಟೆ ಸಾಲದು ಹೊರದೇಶಗಳಲ್ಲೂ ಸಂಚರಿಸಿ ಭಾರತ ಭಕ್ತರ ಶಕ್ತಿ ಸಂಚಯಿಸಿ ಹೋರಾಡಲು ಚಿಂತಿಸಿದರು. ಯುದ್ಧಕಾಲದಲ್ಲಿ ಜರ್ಮನಿಯ ಪರವಾಗಿ ರಷ್ಯಾ ಇರುವುದರಿಂದ ಇಂಗ್ಲೆಂಡಿನ ಕೋಪಕ್ಕೊಳಗಾಗಿದ್ದು, ಶತ್ರುವಿನ ಶತ್ರು ನಮ್ಮ ಮಿತ್ರ ಎಂಬ ರಣನೀತಿಗನುಸಾರ ಅವರನ್ನು ಬಳಸಿಕೊಳ್ಳಲು ರಷ್ಯಾಕ್ಕೆ ಹಾರಲು ನಿರ್ಧಾರ. ಜಿಯಾಉದ್ದೀನ್ ಹೆಸರಲ್ಲಿ ಗಡ್ಡಾಮೀಸೆ ಬೆಳೆಸಿ ವೇಷ ಮರೆಸಿ ಪೇಷಾವರ್ ಮಾರ್ಗವಾಗಿ ಮಾರ್ಗದಲ್ಲಿ ಬಂದ ಅಡ್ಡಿಗಳನ್ನು ಚತುರತೆಯಿಂದ ನಿಭಾಯಿಸಿ ಕಾಬೂಲ್ ತಲುಪುತ್ತಾರೆ.
ಸ್ಥಳೀಯ ರೇಡಿಯೊ ವ್ಯಾಪಾರಿ ಉತ್ತಮಚಂದರು ಆಶ್ರಯ ನೀಡುತ್ತಾರೆ. (ಈ ಸತ್ಕಾರ್ಯಕ್ಕೆ ಪ್ರತಿಫಲವಾಗಿ ಅವರು ಜೈಲಿಗೂ ಹೋಗುತ್ತಾರೆ!). ರೋಮ್ ಅಥವಾ ಮಾಸ್ಕೋ ಪಾಸ್ ಪೋರ್ಟ್ಗೆ ಪ್ರಯತ್ನಿಸುತ್ತಾರೆ. ಅಂತಿಮವಾಗಿ ಬರ್ಲಿನ್ಗೆ ಹೊರಟಾಗ ಅವರ ಪಾಸ್ ಪೋರ್ಟ್ನಲ್ಲಿದ್ದ ‘ಮೊಝಾತಿಓ’ (ಇಟಾಲಿಯನ್ ಹೆಸರು) ಹೆಸರಲ್ಲೇ ಮುಂದಿನ ಕಾರ್ಯ ನಡೆಸುತ್ತಾರೆ.
1941ರ ಜನವರಿ 15ರಂದು ಪ್ರಾರಂಭವಾದ ಅವರ ‘ಪಲಾಯನ’ ಮಾರ್ಚ್ 28ಕ್ಕೆ ಮುಕ್ತಾಯವಾಯಿತು.
ಭಾರತ ಸ್ವಾತಂತ್ರ್ಯಕ್ಕೆ ಶ್ರಮಿಸುತ್ತಿದ್ದ ಶಾಂತಿ ಮಾರ್ಗದವರಂತೆಯೇ ಮತ್ತೊಂದು ರೀತಿಯ ಕ್ರಾಂತಿಮಾರ್ಗದ ಪ್ರತಿಪಾದಕರಾಗಿದ್ದ ಸುಭಾಷರು 1940ರ ಜೂನ್ 22ರಂದು ವೀರ ಸಾವರ್ಕರ್ರನ್ನು ಭೇಟಿಯಾದರು. ದೀರ್ಘ ಚರ್ಚೆ ನಡೆಸಿದರು. ಕಲ್ಕತ್ತೆಯ ಹಾಲ್ವೆಲ್ ಪ್ರತಿಮೆ ಕಿತ್ತು ಹಾಕುವ ಚಳುವಳಿ ಕುರಿತು ‘ಹೀಗೆ ಮಾಡಿ ಜೈಲಿನಲ್ಲಿ ಕೊಳೆಯುವುದರ’ ಬಗ್ಗೆ ಸಾವರ್ಕರರ ಸಕಾರಾತ್ಮಕ ಅಭಿಪ್ರಾಯವಿರಲಿಲ್ಲ. “ಜನರ ಮನಸ್ಸಿನಲ್ಲಿ ಬ್ರಿಟೀಷರ ವಿರುದ್ಧ ಬೆಂಕಿ ಹೊತ್ತಿಸಲೋಸುಗ ಈ ಚಳುವಳಿ” ಎಂಬುದು ಸುಭಾಷರ ನಿರ್ಧಾರ. ಸಾವರ್ಕರ್ರ ಸಲಹೆ – “ಜಪಾನಿನಲ್ಲಿರುವ ಕ್ರಾಂತಿಕಾರಿ ದಾಸ್ ಬಿಹಾರಿ ಬೋಸ್ ಪತ್ರದಂತೆ ವರ್ಷಾಂತ್ಯದಲ್ಲಿ ಯುದ್ಧ ಆರಂಭವಾಗಲಿದ್ದು ಜರ್ಮನಿ-ಜಪಾನ್ ಶಸ್ತ್ರಾಸ್ತ್ರ ಸಹಾಯ ಪಡೆದು ಹೊರದೇಶಗಳಲ್ಲಿರುವ ಭಾರತೀಯ ಸೈನಿಕರ ಪಡೆಕಟ್ಟಿ ಹೊರಗಿನಿಂದ ಭಾರತದಲ್ಲಿದ್ದ ಬ್ರಿಟಿಷರ ವಿರುದ್ಧ ಹೋರಾಟ ಮಾಡುವಲ್ಲಿ ನಿಮ್ಮ ನೇತೃತ್ವ ಅತ್ಯಗತ್ಯ. ” ಏಕಾಗ್ರಚಿತ್ತದಿಂದ ಸಾವರ್ಕರರ ಮಾತನ್ನಾಲಿಸಿದರೂ ಕಲ್ಕತ್ತೆಯ ಚಳುವಳಿಯ ನಂತರ ಯೋಚಿಸುವ ನಿರ್ಧಾರ ಸುಭಾಷರದು.
ಜುಲೈ 2ರಂದು ಬಂಧನ, ರಾಜದ್ರೋಹದ ಆರೋಪ. ಕಾರಾಗೃಹದ ಏಕಾಂತವಾಸದಲ್ಲಿ ದೀರ್ಘಚಿಂತನೆ. ಆಮರಣಾಂತ ಉಪವಾಸದ ನಿರ್ಧಾರ. ಗಡ್ಡ ಮೀಸೆ ಬೆಳೆಸಿ ಗೃಹಬಂಧನದಿಂದ ಆಶ್ಚರ್ಯಕರ ರೀತಿಯ ‘ಪಲಾಯನ’
ಮಾರ್ಚ್ 28ಕ್ಕೆ ಬರ್ಲಿನ್ಗೆ ತಲುಪಿ ಹಿಟ್ಲರನ ಭೇಟಿ ಮಾಡಿದರು. ಮೊದಲ ಯುದ್ಧದಲ್ಲಿ ವಿಫಲವಾದ ಉದ್ದೇಶದ ಪೂರ್ತಿಗಾಗಿ ಕೆಳಬಿದ್ದ ಹೋರಾಟದ ಧ್ವಜವನ್ನು ಕೈಗೆತ್ತಿಕೊಂಡರು. ಸುತ್ತಲ ರಾಜ್ಯಗಳ ಸ್ವಾತಂತ್ರ ಕಬಳಿಸಿದ್ದ ಹಿಟ್ಲರನೇನೂ ಉದಾತ್ತ ಉದ್ದೇಶದಿಂದ ಸಹಕರಿಸುವುದಿಲ್ಲ ಎಂದು ಸುಭಾಷರಿಗೆ ತಿಳಿದಿತ್ತು. ಆದರೆ ಬ್ರಿಟಿಷರಿಗೆ ಕ್ರಾಂತಿಕಾರಿಗಳು ಕಿರುಕುಳ ಕೊಡಲೆಂದು ಕೈ ಜೋಡಿಸವನೆಂಬಾಸೆಯಿತ್ತು. ಅದೂ ಅಲ್ಲದೆ ಲಿಬಿಯಾದಲ್ಲಿ ಯಶಸ್ವಿ ಯುದ್ಧ ಮಾಡುತ್ತಿದ್ದ ಸೈನಿಕರಲ್ಲಿ ಹೆಚ್ಚಿನವರು ಭಾರತೀಯರೆಂದು ಹಿಟ್ಲರನಿಗೆ ತಿಳಿದಿತ್ತು. ಅವರು ದಂಗೆ ಏಳಬೇಕೆಂಬುದು ಹಿಟ್ಲರನ ಇಚ್ಛೆ. ಇಷ್ಟಿದ್ದರೂ ಸ್ವಾಭಿಮಾನಿ ಸುಭಾಷರು ಸ್ಪಷ್ಪ ಮಾತುಗಳಲ್ಲಿ ಆತನಿಗೆ ಹೇಳಿದ್ದೆಂದರೆ – “ಜರ್ಮನ್ ರೇಡಿಯೋ ಬಿಟ್ಟುಕೊಡಬೇಕು, ತನ್ಮೂಲಕ ದೇಶಬಾಂಧವರ ಜಾಗೃತಿ ಮಾಡಬಹುದು. ವಶದಲ್ಲಿರುವ ಭಾರತೀಯ ಸೈನಿಕರನ್ನು ಒಪ್ಪಿಸಬೇಕು. ನಂತರ ಜರ್ಮನಿ ಮತ್ತು ಮಿತ್ರರಾಷ್ಟ್ರಗಳು ಕ್ರಾಂತಿ ಸೈನ್ಯಕ್ಕೆ ಸಹಕರಿಸುವುದಾಗಿ ಪ್ರಕಟಿಸಬೇಕು. ಮುಖ್ಯ ಕಛೇರಿಯಲ್ಲಿ ಭೇಟಿ. ನಕ್ಷೆ ತೋರಿಸಿ ದೂರದ ನೆಪವೊಡ್ಡಿ ಹಿಂದೆ ಸರಿದ ಹಿಟ್ಲರ್.
ಇಟಲಿ ವಿದೇಶ ಮಂತ್ರಿ ಕಿಯಾನೋ ಮೂಲಕ ಮುಸಲೋನಿ ಭೇಟಿ – ಮಾತುಕತೆ. ಆತ ರೋಮ್ನಲ್ಲಿದ್ದು ಹಂಗಾಮಿ ಸರ್ಕಾರ ರಚಿಸಲು ಸಲಹೆ ನೀಡಿದ. ಆದರೆ ಸಿದ್ಧತೆ ಸಾಲದು, ಅದಲ್ಲದೇ ಏಷ್ಯಾ ಖಂಡದಲ್ಲಿ ಸ್ಥಾಪಿಸಿದಲ್ಲಿ ಮುಂದಿನ ಯೋಜನೆಗೆ ಸಹಕಾರಿ ಎಂಬುದು ಸುಭಾಷರ ನಿಲುವು. ಸಹಾಯಕ್ಕೆ ಸಿದ್ಧನೆಂದ ಮುಸಲೋನಿ.
ಈ ನಡುವೆ ಇಟಲಿ-ಜರ್ಮನಿಯ ಭಾರತೀಯ ಯುದ್ಧ ಕೈದಿಗಳ ಭೇಟಿ ಮುಂದುವರೆಯಿತು. ದೇಶಭಕ್ತಿ ಜಾಗೃತಿ, ಸ್ವತಂತ್ರ ಯೋಧರ ಶಿಬಿರ ಕಂಡು ಸುಭಾಷರಿಗೆ ಸಮಾಧಾನ. 3 ಬೆಟಾಲಿಯನ್ಗಳಾಗಿ ವಿಂಗಡನೆ. ಹೊಸ ಸೈನಿಕರು ಜರ್ಮನ್ ಸೈನ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಗುಪ್ತಚರರ ಕೆಲಸ ನಿರ್ವಹಿಸಿ ಬೆಟಾಲಿಯನ್ ಗಳು ವಾಯುವ್ಯ ಪ್ರಾಂತ ಪ್ರವೇಶಿಸಿದಾಗ ನಾಗರೀಕರು ಸಹಕರಿಸಲು ಸಿದ್ಧಗೊಳಿಸುವುದು. ವಾಯುವ್ಯ ಪ್ರಾಂತ ಕೈವಶವಾದಲ್ಲಿ ಭಾರತದಲ್ಲಿನ ಬ್ರಿಟಿಷ್ ರಕ್ಷಣಾ ವ್ಯೂಹ ಕುಸಿಯುವುದೆಂಬ ಯೋಚನೆ. ತಮ್ಮ ಕಚೇರಿಗೆ ‘ ಸ್ವತಂತ್ರ ಹಿಂದುಸ್ತಾನ ಕೇಂದ್ರ’ ಎಂದು ಹೆಸರಿಟ್ಟರು.
1941 ಡಿಸೆಂಬರ್ ಮಧ್ಯದಲ್ಲಿ ‘ಆಜಾದ್ ಹಿಂದ್ ಆಕಾಶವಾಣಿ ನಿಲಯ’ ಆರಂಭಿಸಿದರು. ರಾಷ್ಟ್ರಗೀತೆಯ ನಂತರ ‘ಜೈ ಹಿಂದ್’ ಘೋಷಣೆ ಮೊಳಗಿಸಲಾಗುತ್ತಿತ್ತು. ಸಮವಸ್ತ್ರ ಧರಿಸಿದ ಸುಭಾಷರನ್ನು ಸೈನಿಕರು ಪ್ರೀತಿಯಿಂದ ‘ನೇತಾಜಿ’ ಎನ್ನಲಾರಂಭಿಸಿದರು. ಬ್ರಿಟಿಷ್ ಸೈನ್ಯ ಶಕ್ತಿಯನ್ನು ಸದೆಬಡಿಯುತ್ತಾ ಜಪಾನ್ ಸೈನ್ಯ ಹಾಂಕಾಂಗ್, ಈಸ್ಟ್ ಇಂಡೀಸ್, ಬರ್ಮಾ ಮುಂತಾದ ದೇಶಗಳನ್ನು ಗೆದ್ದು ಭಾರತದ ಪೂರ್ವಗಡಿ ತಲುಪಿತು. ಬ್ರಿಟಿಷ್ ಸಿಂಗಾಪುರ ಬಿಟ್ಟು ಬರ್ಮಾದೆಡೆ ಓಟಕೀಳುವುದನ್ನು ಕಂಡು ಸ್ವತಃ ಸುಭಾಷರೇ 1942 ಫೆ.22ರಂದು ಸ್ವತಃ ಆಕಾಶವಾಣಿ ಭಾಷಣ ಮಾಡಿದರು. ‘ನಾವಿರುವವರೆಗೆ ಕಾದಿದ್ದ ಕ್ಷಣ ಬಂದಿದೆ. ಬ್ರಿಟಿಷ್ ಸಾಮ್ರಾಜ್ಯ ಮುರಿದು ಬೀಳುತ್ತಿದೆ. ಭಾರತ ಸ್ವಾತಂತ್ರ್ಯ ಸಮೀಪಿಸಿದೆ. ಬ್ರಿಟನ್ ಶತ್ರು ರಾಷ್ಟ್ರಗಳೆಲ್ಲಾ ಒಟ್ಟಾಗಿ ಸಾಮ್ರಾಜ್ಯದ ಅಂತಿಮ ವಿಸರ್ಜನೆ ಮಾಡೋಣ. ಇದಕ್ಕಾಗಿ ನಾವು ಬ್ರಿಟಿಷರ ವಿರುದ್ಧ ಯುದ್ಧ ಘೋಷಿಸಿದ್ದೇವೆ’ ಎಂದು ಭಾರತೀಯ ಸೈನಿಕರನ್ನು ಹುರಿದುಂಬಿಸಿದರು.
ಸುಭಾಷರೊಡನೆ ಚರ್ಚಿಸಲು ಜಪಾನ್ ಪ್ರಧಾನಿ ಟೋಜೋರಿಂದ ಆಹ್ವಾನ. ರಾಸ್ಬಿಹಾರಿಯವರೊಡನೆ ಸಹಭಾಗಿಯಾಗಲು ನಿಶ್ಚಯ. ಅವರು ಪೂರ್ವ ಏಷ್ಯಾದ ಭಾರತೀಯ ಕ್ರಾಂತಿಕಾರಿಗಳ ಸಮ್ಮೇಳನವನ್ನು ಬ್ಯಾಂಕಾಕ್ ನಲ್ಲಿ ಆಯೋಜಿಸಿದ್ದರು. ಸುಭಾಷರು ತಮ್ಮ ಸಂದೇಶದಲ್ಲಿ “ಜಗತ್ತಿನ ಭಾರತೀಯರೆಲ್ಲ ಒಗ್ಗೂಡಿ ಪರರನ್ನವಲಂಬಿಸದೇ ಸ್ವಾತಂತ್ರ್ಯಯುದ್ಧ ಆರಂಭಿಸುವ ಕಾಲಬಂದಿದೆ’ ಎಂದು ತಿಳಿಸಿದ್ದರು.
ಬ್ರಿಟಿಷರ ಅಪಪ್ರಚಾರಕ್ಕೆ ಬಲಿಯಾಗಿ ಕಾಂಗ್ರೆಸ್ ನವರೂ ತಮ್ಮ ವಿಷಯದಲ್ಲಿ ತಪ್ಪು ತಿಳಿದಿದ್ದು ಸುಭಾಷರಿಗೆ ನೋವುಂಟುಮಾಡಿತ್ತು. ಬಾನುಲಿ ಭಾಷಣದಲ್ಲಿ – ‘ಗುರಿ ಸಾಧನೆಗಾಗಿ ಜರ್ಮನ್-ಇಟಲಿ-ಜಪಾನ್ ಸಹಕಾರ ಕೇಳಿರುವೆ. ಅವರ ಹಸ್ತಕವಲ್ಲ. ‘ಹಿಂದೂಸ್ಥಾನದ ಸ್ವಾತಂತ್ರ’ ಬಿಟ್ಟು ಬೇರಾವ ಶಬ್ದಗಳೂ ನನಗೆ ಪ್ರಿಯವಲ್ಲ. ಭಾರತ ಸ್ವತಂತ್ರಗೊಂಡ ತಕ್ಷಣವೇ ಮಾತೃಭೂಮಿಯ ಸೇವೆಗೆ ಓಡೋಡಿ ಬರುವೆ” ಎಂದು ಸಾರಿದರು.
ತಮ್ಮ ಸ್ವತಂತ್ರ ಹಿಂದೂಸ್ಥಾನ ಕೇಂದ್ರಕ್ಕೆ ಕಾಂಗ್ರೆಸ್ ತಿರಂಗಿ ಧ್ವಜವನ್ನೇ ಆರಿಸಿಕೊಂಡಿದ್ದರು. ಚರಖಾದ ಬದಲು ‘ಹಾರುವ ಹುಲಿಯ’ ಚಿತ್ರ ನಿರ್ಧರಿಸಿದ್ದರು.
1943 ಜನವರಿಯಲ್ಲಿ ಪ್ಯಾರಿಸ್ ಗೆ ಹೋಗಿದ್ದರು. ಜಪಾನ್ ಪ್ರಯಾಣ ನಿಶ್ಚಯವಾದುದು ತಿಳಿದು ಬರ್ಲಿನ್ ಗೆ ವಾಪಸ್ಸಾದರು. ಜನವರಿ 26ರಂದು ಭಾರತ ಸ್ವಾತಂತ್ರ ದಿನವನ್ನು 600 ಪ್ರಮುಖ ನಾಗರಿಕರೊಡನೆ ಆಚರಿಸಿದರು. 28ರಂದು ಭಾರತೀಯ ಸೈನಿಕರ ಮುಂದೆ ಕಡೇ ಭಾಷಣ-” ಸ್ವತಂತ್ರ ಭಾರತದ ಚರಿತ್ರೆಯಲ್ಲಿ ನಿಮ್ಮ ಹೆಸರು ಸುವರ್ಣಾಕ್ಷರದಲ್ಲಿ ಬರೆಯಲ್ಪಡುವುದು. ಭಾರತ ಪ್ರವೇಶ ನಿಶ್ಚಿತ. ಜೈ ಹಿಂದ್”
1943 ಫೆ.8 ಹ್ಯಾಂಬರ್ ಬಂದರಿನಿಂದ ಜಲಾಂತರ್ಗಾಮಿಗೆ ಹಾಸನ್ ರೊಡನೆ ಪ್ರವೇಶಿಸಿ ಜಪಾನ್ಗೆ ಜೂನ್ 13ರಂದು ಪರಿಶ್ರಮದ ಪ್ರಯಾಣದ ನಂತರ ರಾಜಧಾನಿಗೆ ಕಾಲಿಟ್ಟರು. ಈ ದೀರ್ಘ ಅವಧಿಯಲ್ಲಿ ‘ದಿ ಇಂಡಿಯನ್ ಸ್ಟ್ರಗಲ್’ನ ಹೊಸ ಆವೃತ್ತಿ ಸಿದ್ಧಪಡಿಸುತ್ತಿದ್ದರು. ಜಪಾನಿಗೆ ಸುಭಾಷರು ಬಂದುದು ಪೂರ್ವ ಏಷ್ಯಾದಲ್ಲಿ ಭಾರತೀಯರಿಗೆ ರೋಮಾಂಚನ ಉಂಟುಮಾಡಿತು. ಪ್ರಧಾನೀ ಟೋಜೋರೊಂದಿಗೆ ಮಾತುಕತೆಯಲ್ಲಿ “ಆಜಾದ್ ಹಿಂದ್ ಸೈನ್ಯವು ಜಪಾನ್ ಸಹಕಾರದಿಂದ ಬ್ರಿಟಿಷರೊಡನೆ ಯುದ್ಧಮಾಡಿ ಆಡಳಿತ ಮಾಡುವುದು” ಎಂದು ಸ್ಪಷ್ಟಪಡಿಸಿದರು. ಜೂನ್ 16ರಂದು ಜಪಾನ್ ಸಂಸತ್ತಿನಲ್ಲಿ ‘ಭಾರತೀಯರ ಪ್ರಯತ್ನಕ್ಕೆ ಬೆಂಬಲವಿದೆ’ ಎಂದು ಟೋಜೋ ಘೋಷಿಸಿದರು.
ರಾಸ್ ಬಿಹಾರಿಯವರೊಡನೆ ಅವರ ‘ದಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್’ ಕುರಿತು ತಿಳಿದುಕೊಂಡರು.
ಜೂನ್ 19ರಂದು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಕಾರ್ಯದ ರೂಪುರೇಷೆ ವಿವರಿಸಿದರು. ಪೂರ್ವ ಏಷ್ಯಾದ ಭಾರತೀಯರನ್ನುದ್ದೇಶಿಸಿ ಆಕಾಶವಾಣಿಯ ಮೂಲಕ ಎರಡು ಭಾಷಣ ಮಾಡಿದರು. ಬ್ರಿಟಿಷರ ಮತ್ತು ಕಾಂಗ್ರೆಸ್ ನ ಕೆಲವು ಹಳೆಯ ವಿರೋಧಿಗಳ ಅಪಪ್ರಚಾರಕ್ಕೆ ದೇಶಬಾಂಧವರು ಮೋಸ ಹೋಗಬಾರದೆಂದು ಜೂನ್ 24ರ ತಮ್ಮ ಟೋಕಿಯೋ ಭಾಷಣದಲ್ಲಿ – ‘ನನ್ನ ಮೇಲೆ ನಂಬಿಕೆಯಿಡಿ. ಯಾರ ಕುಟಿಲ ಪ್ರಯೋಭನೆಗೂ ಒಳಗಾಗಲಾರೆ. ಬ್ರಿಟಿಷರಿಗೆ ಪೆಟ್ಟು ನೀಡಿದ ದೇಶಗಳ ಸಹಾಯದಿಂದಲೇ ಸ್ವಾತಂತ್ರಗಳಿಸುವನೆಂಬ ಭ್ರಮೆ ನನಗಿಲ್ಲ. ನಮ್ಮ ರಕ್ತಚೆಲ್ಲಿಯೇ ಗಳಿಸುವ-ರಕ್ಷಿಸುವ ಜವಾಬ್ದಾರಿ ನಮ್ಮ ಮೇಲೆಯೇ ಇದೆ’ ಎಂದು ಘೋಷಿಸಿದರು.
ಜುಲೈ 2ರ ಸಿಂಗಾಪುರ ಭೇಟಿ ದೇವದುರ್ಲಭವಾಗಿತ್ತು.
ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ನ ಅಧ್ಯಕ್ಷರಾಗಿ ಆಯ್ಕೆಯಾದರು. ಹೀಗೆ ಭಾರತದ ಹೊರಗೆ ಆರಂಭಿತ ಸಶಸ್ತ್ರ ಕ್ರಾಂತಿಯ ಸೇನಾಧಿಪತಿಯಾದರು. ಸೈನಿಕರ ಮೆಚ್ಚಿನ ‘ನೇತಾಜಿ’ಯಾದರು. ಜುಲೈ 5ರಂದು ಆಜಾದ್ ಹಿಂದ್ ಸೈನ್ಯದ ಶಸ್ತ್ರಧಾರಿ ವೀರಯೋಧರನ್ನುದ್ದೇಶಿಸಿ ‘ಚಲೋ ದಿಲ್ಲಿ’ ಕರೆಕೊಟ್ಟರು. ಅವರ ಸುಪ್ರಸಿದ್ದ “ತುಮ್ ಮುಝೇ ಖೂನ್ ದೋ, ಮೈ ತುಝೆ ಆಜಾದ್ ದೂಂಗಾ! ” (ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ ಕೊಡುತ್ತೇನೆ!” ಎಂದು ಘರ್ಜನೆ ಮೊಳಗಿದ್ದಿಲ್ಲೇ. ಜುಲೈ 6 ಆಜಾದ್ ಹಿಂದ್ ಸೇನೆಯ 60000 ಸಾವಿರ ಸೈನಿಕರ ಪೆರೇಡ್ ಗೆ ಜಪಾನ್ ಪ್ರಧಾನಿ ಟೋಜೋರರವರೂ ಬಂದಿದ್ದರು.
ಆಗಸ್ಟ್ ನಲ್ಲಿ ಬರ್ಮಾ ಸ್ವಾತಂತ್ರ್ಯೋತ್ಸವಕ್ಕಾಗಿ ರಂಗೂನ್ ಪ್ರಯಾಣ. ನಂತರ ಬ್ಯಾಂಕಾಕ್-ಸೈಹಾನ್ ಗೂ ಭೇಟಿ. ಸೈನ್ಯ ಬಲಪಡಿಸಲಿಕ್ಕಾಗಿ ಚರ್ಚೆ, ಪ್ರಯಾಣ, ಸಭೆ, ಸೈನಿಕರ ಪರೀಕ್ಷೆ, ಸಮಾಲೋಚನೆ, ಭಾಷಣ ಇತ್ಯಾದಿ ದಿನವಿಡೀ ಪರಿಶ್ರಮಿಸಿದರು. ಎಲ್ಲೆಡೆ ‘ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್’ ನ ಶಾಖೆ ತೆರೆದರು.
ಜಪಾನ್ ಸೇನೆಯ ಈಶಾನ್ಯ ಭಾರತದ ‘ಇಂಫಾಲ್’ ಪ್ರವೇಶ ಸಂದರ್ಭದಲ್ಲಿ ತಮ್ಮ ಸೈನ್ಯಕ್ಕೆ ಅವಕಾಶವಿಲ್ಲವೆಂದು ವಿರೋಧಿಸಿದಾಗ ‘ಇದು ವಿಶ್ವಾಸಘಾತ. ಜಪಾನ್ ಪರಾಕ್ರಮದಿಂದ ಸಿಕ್ಕ ಸ್ವಾತಂತ್ರ್ಯ ಗುಲಾಮಗಿರಿಗಿಂತ ಹೇಯ. ನಮ್ಮ ದೇಶದ ಪ್ರತಿಷ್ಠೆಯ ಪ್ರಶ್ನೆ. ನಮ್ಮ ರಕ್ತಧಾರೆಯಿಂದಲೇ ಸ್ವಾತಂತ್ರ ಹೂವು ಅರಳಬೇಕು” ಎಂದು ಗುಡುಗಿದ್ದರು. ಮಲಯಾದಲ್ಲಿ ಸೈನಿಕರ ಪ್ರಶಿಕ್ಷಣ ಕೇಂದ್ರ ತೆರೆದು 3 ರೆಜಿಮೆಂಟ್ ಸ್ಥಾಪಿಸಿದರು. ಮೊದರ ರೆಜೆಮೆಂಟ್ ಗೆ ‘ಸುಭಾಷ್ ರೆಜಿಮೆಂಟ್’, ಹುಡುಗರಿಗಾಗಿ ‘ಬಾಲಸೇನಾ’ ಮತ್ತು ಮಹಿಳೆಯರಿಗಾಗಿ ‘ಝಾನ್ಸಿ ರಾಣಿ ರೆಜಿಮೆಂಟ್’ ಎನ್ನಲಾಯಿತು. ‘ಬಹಾದ್ದೂರ್ ಘಟಕ’ ದ ಮೂಲಕ ಶತ್ರುವಿನ ಚಲನವಲನ ತಿಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಂಡರು.
ಬರ್ಮಾ-ಫಿಲಿಫೈನ್ಸ್ ನಂತೆಯೇ ತಮ್ಮ ಸೈನ್ಯಕ್ಕೂ ಸ್ವಾತಂತ್ರ್ಯ ಘೋಷಿಸಿ ಆಶ್ವಾಸನೆ ಪೂರೈಸಲು ಜಪಾನಿಗೆ ಕರೆಯಿತ್ತರು. ಆದರೆ ಕಾಯುತ್ತಾ ಕೂರಲಿಲ್ಲ. ಆಜಾದ್ ಹಿಂದ್ ಸರ್ಕಾರದ ಮಂತ್ರಿ ಮಂಡಲ ರಚಿಸಿದರು.
ಭಗವದ್ಗೀತೆಯನ್ನು ಸದಾ ಅಧ್ಯಯನ ಮಾಡುತ್ತಿದ್ದರು. ಸಾವರ್ಕರ್ ರ 1857ರ ಸ್ವಾತಂತ್ರ ಗ್ರಂಥದ ವಿಶೇಷ ಆವೃತ್ತಿ ಪ್ರಕಟಿಸಿ ಸೇನೆಯ ಉಪಯೋಗಕ್ಕೆ ಮೀಸಲಿಟ್ಟಿದ್ದರು.
1943 ಅಕ್ಟೋಬರ್ 21 ಸಿಂಗಾಪುರದ ಕಥೆ ಥಿಯೇಟರ್ ನಲ್ಲಿ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಮಹಾದಂಡಾಧಿಪತಿ ವೇಷದಲ್ಲಿದ್ದ ನೇತಾಜಿ ಸುಭಾಷ್ ಚಂದ್ರ ಬೋಸರು ಕುಶಾಲು ತೋಪುಗಳ ಸೆಲ್ಯೂಟ ನಡುವೆ ‘ಆಜಾದ್ ಹಿಂದ್ ಸರ್ಕಾರ’ ಸ್ಥಾಪನೆಯನ್ನು ಘೋಷಿಸಿದರು-ಪ್ರತಿಜ್ಞೆ ಸ್ವೀಕರಿಸಿದರು. ತಮ್ಮದೇ ನೋಟು ಮುದ್ರಿಸಲು ಟೋಕಿಯೋ ಟಂಕಸಾಲೆಗೆ ಒಪ್ಪಿಸಲಾಯ್ತು. ರಾಷ್ಟ್ರಭಾಷೆ ‘ಹಿಂದುಸ್ಥಾನಿ’ ಭಾರತದ ಧ್ವಜವಾಗಿ ‘ತ್ರಿವರ್ಣ ಧ್ವಜ’ ಪರಸ್ಪರ ವಂದಿಸುವಾಗ ‘ಜೈಹಿಂದ್’ ಘೋಷಣೆ… ತೀರ್ಮಾನಿಸಲಾಯ್ತು. ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ BBCಯಲ್ಲಿ ಈ ವಿಷಯ ಪ್ರಮುಖ ಸುದ್ದಿಯಾಗಿ ಬಿತ್ತರಗೊಂಡಿತು.
ಅಂಡಮಾನ್-ನಿಕೋಬಾರ್ ದ್ವೀಪಗಳು ಸಮುದ್ರ ಯುದ್ಧಕ್ಕೆ ಮಹತ್ವಪೂರ್ಣವಾದುದಾಗಿತ್ತು. ಇದನ್ನು ತಮಗೆ ನೀಡಿದಾಗಲೇ ‘ಸಹಕಾರ’ದ ಮಾತಿಗೆ ನಿಜಾರ್ಥವೆಂದು ಟೋಜೋರಿಗೆ ಸ್ಪಷ್ಟಪಡಿಸಿದರು. ನವೆಂಬರ್ 5ರ ಟೋಕಿಯೋ ಸಮ್ಮೇಳನದಲ್ಲಿ ವೀಕ್ಷಕರಾಗಿ ಭಾಗವಹಿಸಿ ಮಾಡಿದ್ದ ಸುಭಾಷರ ಭಾಷಣದ ‘ಭಾರತ ಸ್ವಾತಂತ್ರ್ಯಗೊಂಡರೆ ಪೂರ್ವ ಏಷ್ಯಾದಲ್ಲಿ ಆಂಗ್ಲೋ-ಅಮೇರಿಕನ್ ಸಾಮ್ರಾಜ್ಯಕ್ಕೆ ಚರಮಗೀತೆ ಹಾಡಿದಂತೆ’ ಎಂಬ ಸ್ಪಷ್ಟ ನುಡಿಗಳ ಪ್ರಭಾವದಿಂದಾಗಿ ಜಪಾನ್ ಅಧೀನದಲ್ಲಿದ್ದ ಎರಡು ದ್ವೀಪಗಳನ್ನು ಸುಭಾಷರಿಗೆ ಬಿಟ್ಟುಕೊಡಲಾಯಿತು. ತಕ್ಷಣವೇ ‘ಶಹೀದ್’ ಮತ್ತು ‘ಸ್ವರಾಜ್ಯ’ ದ್ವೀಪವೆಂದು ನಾಮಕರಣ ಮಾಡಿದರು. ಡಿಸೆಂಬರ್ 29ರಂದು ಸುಭಾಷರು (ಅಂಡಮಾನ್) ಶಹೀದ್ ದ್ವೀಪಕ್ಕೆ ಭೇಟಿಯಿತ್ತು ಕ್ರಾಂತಿಕಾರರ ವಾಸ್ತವ್ಯದಿಂದ ಪುನೀತವಾದ ಸೆಲ್ಯೂಲರ್ ಜೈಲನ್ನು ಸಂದರ್ಶಿಸಿ ಪುಳಕಿತರಾದರು. ವೀರಸಾವರ್ಕರ್ ‘ಸೈನಿಕೀಕರಣ’ ಕಾರ್ಯಕ್ರಮದಿಂದಲೇ ತಮ್ಮ ಸೇನೆಗೆ ಸೈನಿಕರು ದೊರೆತದ್ದೆಂದು ತಿಳಿಸಿದರು. ಪೌರಾಡಳಿತವನ್ನು ಆಜಾದ್ ಹಿಂದ್ ಸರ್ಕಾರದ ಪರವಾಗಿ ನೋಡಿಕೊಳ್ಳಲು ಲೆ.ಕ.ಲೋಕನಾಥನ್ ರನ್ನು ಚೀಫ್ ಕಮೀಷನರ್ ಆಗಿ ನೇಮಿಸಿದರು.
1944 ಮಾರ್ಚ್ 19ರಂದು ಆಜಾದ್ ಹಿಂದ್ ಸೈನ್ಯ ಜಪಾನ್ ಸೇನೆಯೊಡನೆ ಭಾರತದ ಗಡಿ ಪ್ರವೇಶಿಸಿತು. ‘ವರವಾದ ಪ್ರದೇಶಗಳ ಮೇಲೆ ಆಜಾದ್ ಹಿಂದ್ ಸರ್ಕಾರದ ಅಧಿಕಾರವಿರುತ್ತದೆಯೆಂದು’ 2 ದಿನಗಳ ನಂತರ ಜಪಾನ್ ಸಂಸತ್ತಿನಲ್ಲಿ ಟೋಜೋ ಘೋಷಿಸಿದರು. ಏಪ್ರಿಲ್ 7ರಂದು ‘ಇಂಫಾಲ’ ದ ಮೇಲೆ ಯುದ್ಧ ಪ್ರಾರಂಭವಾಯಿತು. ಮೊಯ್ ರಾಂಗ್ ಪ್ರದೇಶವನ್ನು ಮುಕ್ತಗೊಳಿಸಿ INA ಧ್ವಜ ನೆಡಲಾಯಿತು. ಹೀಗೆ ಭಾರತ ನೆಲದಲ್ಲಿ ಮೊದಲ ವಿಜಯ ಪ್ರಾಪ್ತಿಯಾಯಿತು. ಭಾರತ ಭೂಮಿಯ ಮೇಲೆ ಮೊದಲು INA ಸೈನಿಕರ ರಕ್ತ ಚೆಲ್ಲಬೇಕೆಂದೂ, ಸ್ವಾತಂತ್ರ್ಯ ಯುದ್ಧದ ಜನಕರೆಂಬ ಕೀರ್ತಿ ತಮ್ಮದಾಗಬೇಕೆಂಬ ಸುಭಾಷರ ಆಶಯ ಪೂರ್ತಿಯಾಯ್ತು. ಜಪಾನ್ ಜನರಲ್ ಮತಾಗುಚಿಯ ಆತುರದ ಯೋಚನೆಗಳು ಅಡ್ಡಿಯಾಯ್ತು. ದುರ್ಗಮ ಪರ್ವತ ಪ್ರದೇಶ, ಆಹಾರ ಸಾಮಗ್ರಿ-ಸೈನ್ಯ ಸಾಗಾಣಿಕೆಯ ಪರಿಶ್ರಮ, ಸಮೀಪವಿದ್ದ ಮಳೆಗಳ ಇವುಗಳ ಬಗ್ಗೆ ಗಂಭೀರ ಯೋಚನೆಯ ಕೊರತೆಯಿತ್ತು. ಇಂಫಾಲ್-ಕೊಹಿಯಾ ರಸ್ತೆ ಧ್ವಂಸ ಬೇಡ. ಬ್ರಿಟಿಷ್ ಸೈನ್ಯ ಅಲ್ಲೇ ಉಳಿದು ಸಹಾಯ ದೊರೆತಲ್ಲಿ ತಮಗೆ ಅಡ್ಡಿ ಬಂದ ಸುಭಾಷರ ಸಲಹೆಗೆ ಮತಾಗುಚಿ ಕಿವಿಗೊಡಲಿಲ್ಲ. ಬ್ರಿಟಿಷರ ಹತಾಶೆಯ ಮೋಸದ ನುಡಿಗಳಿಗೆ ಮತಾಗುಚಿ ಬಲಿಯಾಗಿದ್ದ.
ಪರಿಸ್ಥಿತಿ ಕಠಿಣವಾಗಿದ್ದರೂ ಸುಭಾಷರ ಸೈನ್ಯ ಮುನ್ನುಗುತ್ತಿತ್ತು. ಆದರೆ 1944 ಜುಲೈ 26ರಂದು ಜಪಾನ್ ಸೋತು ಯುದ್ಧ ನಿಲ್ಲಿಸಿರುವುದಾಗಿ ಘೋಷಿಸಿಬಿಟ್ಟಿತು. ಹವಾಮಾನ ಅನುಕೂಲವಾದಾಗ ಮತ್ತಷ್ಟು ಬಲವಾದ ಸೈನ್ಯ ನಿರ್ಮಿಸಿ ಹೋರಾಡೋಣ ಎಂದು ಆಲೋಚಿಸಿ, ಸೂಕ್ಷ್ಮ ಅವಲೋಕನದಿಂದಾಗಿ ರಷ್ಯಾದ ಸಹಕಾರ ಪಡೆಯಲು ಸುಭಾಷರು ಚಿಂತಿಸಿದರು.
ಕ್ಯಾಪ್ಟನ್ ಇಝುಮಿ (ಜಪಾನ್ ಸೈನ್ಯಾಧಿಕಾರಿ)-‘INA ಸೈನಿಕರ ಪರಾಕ್ರಮ ಚಿರಸ್ಮರಣೀಯವಾದದ್ದು’ ಎಂದು ಬರೆದಿಟ್ಟಿದ್ದಾನೆ.
ನೇತಾಜಿ ಸುಭಾಷರ ಕಡೆಯ ಸಂದೇಶಗಳಲ್ಲಿ INA ಗೆ ‘ನಮ್ಮ ಸೋಲು ತಾತ್ಕಾಲಿಕ. ದಿಲ್ಲಿಗೆ ಹೋಗಲು ಅನೇಕ ಮಾರ್ಗಗಳಿವೆ. ಜಗತ್ತಿನ ಯಾವ ಶಕ್ತಿಯು ಹಿಂದೂಸ್ಥಾನವನ್ನು ಗುಲಾಮಗಿರಿಯಲ್ಲಿಡಲು ಸಾಧ್ಯವಿಲ್ಲವೆಂದು ನಂಬಿ’ ಎಂದು ಕರೆಕೊಟ್ಟು ಸೈನಿಕರನ್ನು ಹುರಿದುಂಬಿಸಿದರು.
ಭಾರತದ ನಿಜ ಸಾಮರ್ಥ್ಯವನ್ನು ಎಚ್ಚರಿಸಿ ಶತ್ರುವಿಗೆ ಅವರ ರೀತಿಯಲ್ಲೇ ಉತ್ತರಿಸಲು ದೇಶದೊಳಗೆ ‘ತಮ್ಮವರದೇ’ ವಿರೋಧವನ್ನು ಎದುರಿಸಿ ಶ್ರಮಿಸಿದ ಸುಭಾಷರ ಪ್ರಯತ್ನಗಳು ನೈಜ ದೇಶಭಕ್ತರಿಗೆ ಮುಜುಗರ ಉಂಟುಮಾಡುವುದು ಸಹಜ. ಆದರೆ ಪರಿಸ್ಥಿತಿಗಳು ತಮ್ಮ ಶೌರ್ಯ-ಪರಾಕ್ರಮಕ್ಕೆ ಸಹಕಾರಿಯಾಗಿಲ್ಲವೆಂದರಿತು ವೀರ ಸಾವರ್ಕರ್ ರ ಸಲಹೆಯಂತೆ ಬ್ರಿಟಿಷರ ಕಣ್ತಪ್ಪಿಸಿ, ಅವರ ತಂತ್ರಕ್ಕೆ ಚಳ್ಳೆಹಣ್ಣು ತಿನ್ನಿಸಿ, ರೋಚಕವಾಗಿ ಪಲಾಯನ ಮಾಡಿದ ಸುಭಾಷರ ಶೌರ್ಯಗಾಥೆ. ಯುವಜನಾಂಗಕ್ಕೆ ರೋಮಾಂಚನ ಉಂಟುಮಾಡುವುದು ನಿಶ್ಚಿತ. ಬ್ರಿಟಿಷರನ್ನು ಬಗ್ಗು ಬಡಿಯಲು ವಿವಿಧ ದೇಶಗಳಲ್ಲಿ ಸಂಚರಿಸಿ-ಅಲ್ಲಿನ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟು ಯುದ್ಧ ಕೈದಿಗಳಾಗಿ ಜೈಲಿನಲ್ಲಿದ್ದ-ಅಲ್ಲಲ್ಲಿನ ಸೈನ್ಯದ ಸೇವೆಯಲ್ಲಿದ್ದ ಭಾರತೀಯ ಸೈನಿಕರನ್ನು ಸಂಘಟಿಸಿ, ಆಧುನಿಕ ಸೈನಿಕ ಶಿಕ್ಷಣ ಕೊಟ್ಟು ಆಜಾದ್ ಹಿಂದ್ ಫೌಜ್-Indian National Army ಸ್ಥಾಪಿಸಿದ ನೇತಾಜಿ ಸುಭಾಷ್ ಚಂದ್ರ ಬೋಸರ ಪ್ರಯತ್ನದ 75ನೇ ವಾರ್ಷಿಕೋತ್ಸವ ಸ್ಮರಣೆ ಮಾಡಿಕೊಳ್ಳಬೇಕಾದ್ದು ಯುವ ಭಾರತದ ಕರ್ತವ್ಯ.
21.10.2017 ಬಲಿಷ್ಠ ಭಾರತ ನಿರ್ಮಾಣದ ಸಂಕಲ್ಪ ದಿನವಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.