ಸಂಬಂಧಗಳ ಸಾಲಲ್ಲಿ ಅಪ್ಪನಿಗೆ ಎರಡನೇ ಸ್ಥಾನ, ಮೊದಲ ಸ್ಥಾನವೇನಿದ್ದರೂ ಅಮ್ಮನದ್ದು ಎಂಬ ಅನಿಸಿಕೆ ಸಹಜವಿರಬಹುದು. ಆದರೆ ನಾನೆಂದೂ ಅಪ್ಪನನ್ನು ಎರಡನೇ ಸ್ಥಾನಕ್ಕೆ ಇಳಿಸಲಾರೆ. ಜನ್ಮ ಕೊಟ್ಟ ನನ್ನಮ್ಮನಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಎಲ್ಲಾ ಅರ್ಹತೆ ನನ್ನಪ್ಪನಿಗಿದೆ. ಯಾಕೆಂದರೆ ಆತ ನನಗೆ ಜೀವನ ಕೊಟ್ಟಿದ್ದಾನೆ. ನನ್ನನ್ನು ಪೋಷಿಸಿದ್ದಾನೆ. ಕಷ್ಟ, ಸವಾಲುಗಳ ನಡುವೆಯೂ ವಿದ್ಯೆ ಕೊಡಿಸಿದ್ದಾನೆ. ಎಲ್ಲದಕ್ಕೂ ಮಿಗಿಲಾಗಿ ನನ್ನಿಷ್ಟದ ಬದುಕು ಕಟ್ಟಿಕೊಳ್ಳುವ ಸ್ವಾತಂತ್ರ್ಯ ಕೊಟ್ಟಿದ್ದಾನೆ.
ಆತ ವಿದ್ಯಾವಂತನಲ್ಲ, ಪದವಿಗಳ ಸರ್ಟಿಫಿಕೇಟ್ ಅವನ ಬಳಿ ಇಲ್ಲ. ಆದರೆ ಯಾವ ವಿಶ್ವವಿದ್ಯಾನಿಲಯಕ್ಕೂ ಕಲಿಸಲಾಗದಷ್ಟು ಜೀವನಾನುಭವವಿದೆ. ಆತ ಗರಿ ಗರಿ ನೋಟು ಎನಿಸುವ ಉದ್ಯೋಗಿಯಲ್ಲ, ಆದರೆ ಭೂ ತಾಯಿಯ ಒಡಲಲ್ಲಿ ಬೆವರಿಳಿಸಿ ದುಡಿದು ಹೊಟ್ಟೆಗೆ ಹಿಟ್ಟು ಸಂಪಾದಿಸುವ ಕಲೆ ಆತನಿಗೆ ಗೊತ್ತಿದೆ.
ಕೈತುಂಬಾ ಹಣ, ಮೈತುಂಬಾ ಒಡವೆಯ ದುಬಾರಿ ಬದುಕನ್ನು ನನಗಾತ ಕೊಟ್ಟಿಲ್ಲದೇ ಇರಬಹುದು ಆದರೆ ಕಷ್ಟಗಳನ್ನು ಒಂಟಿಯಾಗಿ ಎದುರಿಸಿ ಬದುಕುವುದನ್ನು ಕಲಿಸಿಕೊಟ್ಟ. ದುಡಿದು ಬದುಕುವ, ಸರಳವಾಗಿಯೂ ಸುಂದರ ಬದುಕು ಕಟ್ಟಿಕೊಳ್ಳುವ ಪಾಠ ಕಲಿಸಿದ. ಎಲ್ಲದಕ್ಕೂ ಹೆಚ್ಚಾಗಿ ಮನುಷ್ಯರನ್ನು, ಪ್ರಾಣಿ-ಪಕ್ಷಿಗಳನ್ನು, ಪ್ರಕೃತಿಯನ್ನು ಪ್ರೀತಿಸೋದು ಹೇಗೆಂದು ತೋರಿಸಿಕೊಟ್ಟ.
ಅಮ್ಮನಷ್ಟು ಪ್ರೀತಿ, ವಾತ್ಸಲ್ಯವನ್ನು ಆತ ತೋರಿಸಿಲ್ಲದೇ ಇರಬಹುದು ಆದರೆ ಹೃದಯದಲ್ಲಿ ಆತ ಬಚ್ಚಿಟ್ಟ ಆ ಪ್ರೀತಿ, ವಾತ್ಸಲ್ಯ ಆಗಾಗ ಆತನ ಎದೆಗೂಡಿಂದ ಹೊರಗೆ ಇಣುಕುತ್ತಿದ್ದುದನ್ನು ನಾನು ಗಮನಿಸಿದ್ದೇನೆ. ಅಮ್ಮನಷ್ಟು ಬಲಿಷ್ಠ ಮಾನಸಿಕತೆ ಆತನಿಗೆ ಇಲ್ಲ ಎಂಬುದು ನಿಜ. ಆದರೆ ಆತನ ಮೃದು ಮನಸ್ಸಿನ ಹಿಂದೆಯೂ ಕಠಿಣತೆಯ ಹಾದಿಯನ್ನು ತುಳಿದು ಬಂದ ಅನುಭವವಿದೆ. ಕಠಿಣ ಪರಿಸ್ಥಿತಿಯನ್ನು ಕೈಚೆಲ್ಲದೆ ಬದುಕಿದ ಹಠವಿದೆ.
ಆತನ ಕಣ್ಣಿರನ್ನು ನಾನೆಂದೂ ಕಂಡಿಲ್ಲ, ಹಾಗೆಂದು ಆತ ನೋವನ್ನೇ ಉಂಡಿಲ್ಲ ಎಂದು ನನಗನಿಸೋದಿಲ್ಲ. ಬಹುಶಃ ಆತ ತನ್ನ ಕಣ್ಣೀರನ್ನು ಎಂದಿಗೂ ಯಾರಿಗೂ ಕಾಣಲು ಬಿಡುವುದಿಲ್ಲ. ಅದು ಆತನೊಳಗೆ ಬತ್ತಿ ಹೋಗುತ್ತಿರಬಹುದು. ಭಾವನೆಗಳನ್ನು ಹಂಚಿಕೊಳ್ಳಲು ತಿಳಿಯದ ಆತನಿಗೆ ಇದೆಲ್ಲ ಸಹಜವೇ ಇರಬಹುದು.
ನನ್ನ ಅಪ್ಪ ನಾನು ಕಂಡ ಮೊದಲ ಹೀರೋ, ನನ್ನ ಮೊದಲ ಪ್ರೀತಿ. ದೇವರು ಕೊಟ್ಟ ವರ. ಎಲ್ಲದಕ್ಕೂ ಮಿಗಿಲಾಗಿ ಆತ ಅಪಾರ ಜೀವಾನಾನುಭವುಳ್ಳ ನನ್ನೊಲುಮೆಯ ಒರ್ವ ಶ್ರೇಷ್ಠ ತಂದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.