News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 24th December 2024


×
Home About Us Advertise With s Contact Us

ಬಾಗಲಕೋಟೆಯಲ್ಲಿ ಸಚಿವ ಜಾರ್ಜ್ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಬಾಗಲಕೋಟೆ: ಸಚಿವ ಕೆ.ಜೆ. ಜಾರ್ಜ್ ರಾಜಿನಾಮೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಬಿಜೆಪಿ ನಗರದ ಮಂಡಲ ಅಧ್ಯಕ್ಷ ರಾಜು ನಾಯ್ಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ರೇವಣಕರ, ಮುಖಂಡರಾದ ಯಲ್ಲಪ್ಪ ಬೆಂಡಿಗೇರಿ, ಬಸವರಾಜ ಅವರಾದಿ, ಶಿವಾನಂದ ಟವಳಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಸಚಿವ ಜಾರ್ಜ್ ಕೂಡಲೇ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಡಿವೈಎಸ್‌ಪಿ ಗಣಪತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದು ಗೃಹಸಚಿವರಾಗಿದ್ದ ಜಾರ್ಜ್ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ರಾಜಿನಾಮೆ ನೀಡಿದ್ದರು. ಬಳಿಕ ಸರ್ಕಾರ ಪ್ರಕರಣದ ಕುರಿತು ಕಾಟಾಚಾರದ ತನಿಖೆ ನಡೆಸಿ ಅವರಿಗೆ ಕ್ಲೀನ್ ಚೀಟ ನೀಡಿತು. ಅಷ್ಟೆ ಅಲ್ಲದೆ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ತೆಗೆದುಕೊಳ್ಳುವ ಮೂಲಕ ಗಣಪತಿ ಕುಟುಂಬಕ್ಕೆ ಅನ್ಯಾಯ ಮಾಡಿದರು ಎಂದು ಅವರು ಆರೋಪಿಸಿದರು.

ಗಣಪತಿ ಕುಟುಂಬ ತಮಗಾದ ಅನ್ಯಾಯಕ್ಕೆ ನ್ಯಾಯ ಪಡೆಯಲು ಹೋದಾಗ ನ್ಯಾಯಾಲಯ ಪ್ರಕರಣವನ್ನು ಮತ್ತೊಮ್ಮೆ ತನಿಖೆಗೆ ಒಳಪಡಿಸುವಂತೆ ನಿರ್ದೇಶನ ನೀಡಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಲು ಸಚಿವ ಜಾರ್ಜ್ ರಾಜಿನಾಮೆ ನೀಡಬೇಕು. ಇಲ್ಲವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಿನಾಮೆ ಪಡೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಗಣಪತಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಸರ್ಕಾರ ಈ ವಿಷಯದಲ್ಲೇನಾದರೂ ಹಿಂದೇಟು ಹಾಕಿದಲ್ಲಿ ಬಿಜೆಪಿ ಉಗ್ರ ಹೋರಾಟ ನಡೆಸಲಿದೆ. ಸಿಎಂ ರಾಜಿನಾಮೆಗೆ ಒತ್ತಾಯಿಸಿ ಜಿಲ್ಲಾದ್ಯಂತ ಪ್ರತಿಭಟನೆ ಆರಂಭಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಇದೇ ವೇಳೆ ಸರ್ಕಾರದ ಆಡಳಿತ ವೈಫಲ್ಯವನ್ನು ತರಾಟೆಗೆ ತೆಗೆದುಕೊಂಡ ಮುಖಂಡರು, ಕಳೆದ ನಾಲ್ಕುವರೆ ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೇ ಜನರನ್ನು ಗೋಳಿಟ್ಟುಕೊಂಡಿದ್ದಾರೆ. ಸರ್ಕಾರದ ದುರಾಡಳಿತಕ್ಕೆ ಜನ ಬೇಸತ್ತು ಹೋಗಿದ್ದಾರೆ ಎಂದು ಅವರು ದೂರಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲೇ ಮಂಜೂರಾತಿ ಸಿಕ್ಕ ಕಾಮಗಾರಿಗಳನ್ನು ಮುಂದುವರಿಸಿಕೊಂಡು ಬಂದಿರುವ ಕಾಂಗ್ರೆಸ್ ಸರ್ಕಾರ ಹೊಸದಾಗಿ ಏನನ್ನೂ ಮಾಡಿಲ್ಲ. ಅವುಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಪೂರ್ಣಗೊಂಡ ಕಾಮಗಾರಿಗಳನ್ನು ತಾವೇ ಮಾಡಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ ಎಂದು ಅವರು ಕಿಡಿ ಕಾರಿದರು.

ಕಳೆದ ಐದು ವರ್ಷಗಳಲ್ಲಿ ಸರ್ಕಾರ ಜಾರಿಗೆ ತಂದಿರುವ ಕೆಲ ಕಾರ್ಯಕ್ರಮಗಳು ನಿಜವಾದ ಫಲಾನುಭವಿಗಳಿಗೆ ತಲುಪಿಲ್ಲ. ಅವುಗಳು ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗೆ ಎನ್ನುವಂತಾಗಿವೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಸರ್ಕಾರದ ಆಡಳಿತಾವಧಿ ಇನ್ನು ಕೇಲವೆ ತಿಂಗಳು ಮಾತ್ರ ಬಾಕಿ ಉಳಿದಿವೆ. ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಜನ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ನುಡಿದರು.

ಬಳಿಕ ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರಿಗೆ ಸಲ್ಲಿಸಿದರು.

ನಗರಸಭೆ ಅಧ್ಯಕ್ಷ ದ್ಯಾವಪ್ಪಣ್ಣ ರಾಯಕುಂಪಿ, ಮಹೇಶ ಕಮತಗಿ, ಬಸವರಾಜ ಕಟಗೇರಿ, ಮಹಾಂತೇಶ ಹಿರೇಮಠ, ಭಾಗ್ಯಶ್ರೀ ಹಂಡಿ,ಸವಿತಾ ಲೆಂಕೆಣ್ಣವರ, ಶ್ವೇತಾ ಕೋಲಾರ, ಭಾರತಿ ಕೂಡಗಿ, ಶಂಕರಗೌಡ ಪಾಟೀಲ ಇತರರು ಇದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top