ಕಾರ್ಕಳ : ಉಚಿತ ಅಕ್ಕಿ ವಿತರಣೆಯ ಮೂಲಕ ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯ ಎಂದು ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಹೇಳಿದ್ದಾರೆ.ಅವರು ಕಾಂಗ್ರೆಸ್ ಕಛೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಡವರಿಗೆ ಉಚಿತ ಅಕ್ಕಿಯನ್ನು ವಿತರಿಸುವ ಕ್ರಾಂತಿಕಾರಿ ಹೆಜ್ಜೆಯನ್ನು ನಮ್ಮ ರಾಜ್ಯ ಸರಕಾರ ಹಮ್ಮಿಕೊಂಡಿದೆ. ಇದು ಸೋನಿಯಾ ಗಾಂಧಿ ಅವರ ಕನಸ್ಸಾಗಿದ್ದು, ಅದು ಇಂದು ಸಕಾರಗೊಂಡಿದೆ ಎಂದರು. ಮಹಾತ್ಮ ಗಾಂಧೀಜಿಯವರು ಬಡವರಿಗೆ ಭೂಮಿ ಕೊಡುವ ಯೋಜನೆ ಹಮ್ಮಿಕೊಂಡಿದ್ದರೆ, ಇಂದಿರಾ ಗಾಂಧಿ ಅವರು ಭೂಮಸೂಧೆ ಕಾಯ್ದೆಯ ಮೂಲಕ ಅದನ್ನು ಸಕಾರಗೊಳಿಸಿದ್ದರು. ಅಂದು ಈ ಜನಪರ ಯೋಜನೆಗೆ ಜನಸಂಘ ಅಂದರೆ ಇಂದಿನ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು ಎಂದರು.
ಕೇಂದ್ರದಲ್ಲಿ ಯುಪಿಎ ಸರಕಾರವಿದ್ದ ಸಂದರ್ಭ ಕಡಿಮೆ ದರದಲ್ಲಿ ಅಕ್ಕಿ ವಿತರಣೆ, ಕನಿಷ್ಠ ಕೂಲಿ ಒದಗಿಸುವ ಮೂಲಕ ಉದ್ಯೋಗ ಭದ್ರತೆಗಾಗಿ ಉದ್ಯೋಗಖಾತ್ರಿ ಯೋಜನೆ, ಪ್ರತಿ ಮಕ್ಕಳ ಶಿಕ್ಷಣಕ್ಕಾಗಿ ಕಡ್ಡಾಯ ಶಿಕ್ಷಣ ಕಾಯ್ದೆ, ಪ್ರತಿಯೊಬ್ಬ ಪ್ರಜೆಗೂ ಮಾಹಿತಿ ಒದಗಿಸುವ ಮಾಹಿತಿ ಹಕ್ಕು ಕಾಯ್ದೆ ಮುಂತಾದ ನೂರಾರು ಯೋಜನೆಗಳನ್ನು ಜಾರಿಗೊಲಿಸಲಾಯಿತು. 2020 ರಲ್ಲಿ ಭಾರತ ಸುಪರ್ ಪವರ್ ರಾಷ್ಟ್ರವಾಗಿ ಮೂಡಿ ಬರಲು ಪೂರಕವಾದ ಮಹತ್ವದ ಹೆಜ್ಜೆಯನ್ನು ನಮ್ಮ ಯುಪಿಎ ಸರಕಾರ ಇಟ್ಟಿರುವ ಜತೆಗೆ, ಇಂದು ವಿಶ್ವದಲ್ಲೇ ಭಾರತವನ್ನು ದಿಟ್ಟಿಸಿ ನೋಡುವಂತಹ ಹಂತಕ್ಕೆ ನಾವು ತಲುಪುವಂತಾಯಿತು ಎಂದು ಶ್ಲಾಘಿಸಿದರು.
2009 ರಲ್ಲಿ ಆರ್ಥಿಕ ಕುಸಿತ ಕಂಡಾಗ ಅಮೇರಿಕಾ ಹಾಗೂ ಯೂರೋಪ್ ದೇಶಗಳು ತತ್ತರಿಸಿದ ಸಂದರ್ಭವೂ ಭಾರತವು ತನ್ನ ಆರ್ಥಿಕ ಸ್ಥಿರತೆಯನ್ನು ಉಳಿಸಿಕೊಂಡಿದ್ದರೆ, ಅದು ಬ್ಯಾಂಕ್ಗಳ ರಾಷ್ಟ್ರೀಕರಣಗಳಿಂದಾಗಿ ಎನ್ನುವುದನ್ನು ಮರೆಯುವಂತಿಲ್ಲ. ಕಳೆದ 40 ವರ್ಷಗಳ ಹಿಂದೆಯೇ ಬ್ಯಾಂಕ್ಗಳ ರಾಷ್ಟ್ರೀಕರಣವನ್ನು ಇಂದಿರಾ ಗಾಂಧಿ ಮಾಡಿದ್ದರೆ, ಪ್ರಸ್ತುತ ಅಮೇರಿಕಾದಂತಹ ದೇಶಗಳು ಈ ಬಗ್ಗೆ ಗಮನಹರಿಸುತ್ತಿದೆ ಎಂದರು. ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ಸಂದರ್ಭ ಪಂಚಾಯಿತಿ ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸಿ, ವಿಕೇಂದ್ರೀಕರಣದ ಆಡಳಿತದ ಮೂಲಕ ಜನತೆಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಜತೆಗೆ ಮಹಿಳೆಯರನ್ನು ಪ್ರೋತ್ಸಾಹಿಸುವ ದೃಷ್ಟಿಯಲ್ಲಿ ಶೇ.೫೦ರಷು ಮೀಸಲಾತಿ ಹಾಗೂ ಯುವಕರನ್ನು ಪ್ರೋತ್ಸಾಹಿಸುವ ನಿಟ್ಟನಲ್ಲಿ ೧೮ ವರ್ಷಕ್ಕೆ ಮತದಾನದ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದರು.
ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ, ಕಾಂಗ್ರೆಸ್ನ ಮಾಜಿ ಜಿಲ್ಲಾಧ್ಯಕ್ಷ ಎಂ.ಎ.ಗಫೂರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ್ ಕೋಟ್ಯಾನ್, ಕೋಶಾಧಿಕಾರಿ ಉಮೇಶ್ ರಾವ್ ಚಿರಾಗ್, ನಗರಾಧ್ಯಕ್ಷ ಸುಭಿತ್ ಎನ್.ಆರ್, ಪುರಸಭೆ ಅಧ್ಯಕ್ಷೆ ರೆಹಮತ್ ಎನ್.ಶೇಖ್, ಯುವ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ವಕ್ತಾರ ಬಿಪಿನ್ಚಂದ್ರಪಾಲ್ ನಕ್ರೆ, ಜೋರ್ಜ್ ಕ್ಯಾಸ್ತಲಿನೋ ನಕ್ರೆ, ದಯಾನಂದ ಬಂಗೇರ ಬಜಗೋಳಿ ಮತ್ತು ಜಗದೀಶ್ ಶೆಟ್ಟಿ ಮುದೆಲ್ಕಡಿ ಅಜೆಕಾರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.