ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಅಧ್ಯಯನ ವರದಿ ನೀಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸರಕಾರವು ಸೂಚಿಸಿತ್ತು. ಆ ಪ್ರಕಾರ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಸಮಿತಿಯ ಸದಸ್ಯರಾದ ಡಾ. ಚಂದ್ರಶೇಖರ ದಾಮ್ಲೆ, ಮೈಸೂರಿನ ಪ. ಮಲ್ಲೇಶ್, ಶಿಕ್ಷಣ ತಜ್ಞರಾದ ಪ್ರೊ. ನಿರಂಜನಾರಾಧ್ಯ ಇವರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೆ 21 ಶಿಫಾರಸುಗಳ ವರದಿಯನ್ನು ಸಲ್ಲಿಸಿದ್ದಾರೆ.
ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಕಡ್ಡಾಯ ಅನುಷ್ಟಾನ, ಪೂರ್ವ ಪ್ರಾಥಮಿಕ ತರಗತಿಗಳ ಆರಂಭ, ಶಿಕ್ಷಕರಿಕೆ ಕಲಿಕೇತರ ಕೆಲಸಗಳಿಂದ ಮುಕ್ತಿ, ಪ್ರತಿ ಶಾಲೆಗೂ ಕನಿಷ್ಟ ತರಗತಿಗೊಬ್ಬ ಶಿಕ್ಷಕ, ಒಂದನೇ ತರಗತಿಯಿಂದಲೇ ಸಮರ್ಥ ಇಂಗ್ಲಿಷ್ ಕಲಿಕೆ, ಪಠ್ಯೇತರ ಶಿಕ್ಷಣಕ್ಕೆ ಒತ್ತು, ಕೇಂದ್ರ ಸರಕಾರವು ತನ್ನ ಆಯವ್ಯಯದಲ್ಲಿ ಕನಿಷ್ಟ 10% ಹಾಗೂ ರಾಜ್ಯಸರಕಾರವು ಕನಿಷ್ಟ ೨೫% ಮೊತ್ತವನ್ನು ಶಿಕ್ಷಣಕ್ಕಾಗಿ ತೆಗೆದಿರಿಸಬೇಕು ಮುಂತಾದ ಶಿಫಾರಸುಗಳಲ್ಲದೆ ಮುಖ್ಯವಾಗಿ ಸರಕಾರಿ ಶಾಲೆಗಳ ವ್ಯಾಪ್ತಿಯ ಎಲ್ಲಾ ಜನಪ್ರತಿನಿಧಿಗಳು ಮತ್ತು ಸರಕಾರಿ ನೌಕರರು ಕಡ್ಡಾಯವಾಗಿ ಅವರ ಮಕ್ಕಳನ್ನು ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಿಗೆ ಸೇರಿಸುವಂತೆ ಕೂಡಲೇ ಸುಗ್ರೀವಾಜ್ಞೆಯನ್ನು ಹೊರಡಿಸಬೇಕೆಂದು ಸಮಿತಿ ಶಿಫಾರಸು ಮಾಡಿದೆ.
ಇನ್ನು, ಪ್ರಮುಖವಾಗಿ ಆರ್.ಟಿ.ಇ. ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಸೇರಿದ ವಿದ್ಯಾರ್ಥಿಗಳ ಶುಲ್ಕವನ್ನು ಸರಕಾರವು ಭರಿಸುವುದನ್ನು ನಿಲ್ಲಿಸಬೇಕೆಂದೂ ಆ ಹಣವನ್ನು ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಉಪಯೋಗಿಸಬೇಕೆಂದೂ ಸಮಿತಿ ಶಿಫಾರಸು ಮಾಡಿದೆ. ಆರ್.ಟಿ.ಇ. ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಖಾಸಗಿ ಶಾಲೆಗಳ ಸಾಮಾಜಿಕ ಜವಾಬ್ದಾರಿಯಾಗಿದೆ ಎಂಬುದು ಸಮಿತಿಯ ಅಭಿಪ್ರಾಯವಾಗಿದೆ. ಸಮಿತಿಯ ಶಿಫಾರಸುಗಳನ್ನು ಬೇಗನೇ ಶಾಸನವನ್ನಾಗಿ ರೂಪಿಸಿ ಅನುಷ್ಟಾನಗೊಳಿಸಬೇಕೆಂಬ ಸಮಿತಿಯ ಒತ್ತಾಯವನ್ನು ಸಕಾರಾತ್ಮಕವಾಗಿ ಒಪ್ಪಿರುವ ಮುಖ್ಯಮಂತ್ರಿಯವರು ಅಲ್ಲಿ ಉಪಸ್ಥಿತರಿದ್ದ ಶಿಕ್ಷಣ ಸಚಿವರಲ್ಲಿ ವರದಿಯನ್ನು ಅಧ್ಯಯನ ಮಾಡಿ ಮುಂದಿನ ಚರ್ಚೆಗೆ ತರಬೇಕೆಂದು ಸೂಚಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಡಾ.ಚಂದ್ರಶೇಖರ ದಾಮ್ಲೆಯವರು ಶಿಕ್ಷಕರನ್ನು ನೇಮಿಸದ ಹೊರತು ಸರಕಾರಿ ಶಾಲೆಗಳು ಜನರಲ್ಲಿ ಭರವಸೆ ಮೂಡಿಸುವುದಿಲ್ಲ, ಕೂಡಲೇ ಶಿಕ್ಷಕರ ನೇಮಕವಾಗಬೇಕು ಎಂದುದಕ್ಕೆ ಸಿಎಂ ಸಿದ್ದರಾಮಯ್ಯ ಗುಣಾತ್ಮಕವಾಗಿ ಸ್ಪಂದಿಸಿದರು.
ಆರಂಭದಲ್ಲಿ ಸಮಿತಿಯ ಕಾರ್ಯದರ್ಶಿ ಶ್ರೀ. ಕೆ. ಮುರಳಿಧರ್ ಅವರು ಸ್ವಾಗತಿಸಿದರು. ಪ್ರಾಅಧಿಕಾರದ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ, ಮುಖ್ಯಮಂತ್ರಿ ಚಂದ್ರು, ಎಲ್. ಹನುಮಂತಯ್ಯ ಮುಂತಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.