ಮನಸ್ಸುಗಳನ್ನು ಬೆಸೆಯಬೇಕಾದ ಹಬ್ಬ; ಗೋಡೆ ಕಟ್ಟಿಕೊಳ್ಳುವ ಹಂತಕ್ಕೆ ಬಂದು ನಿಂತು!
ಧಾರವಾಡ : ಕಾನೂನನ್ನು ಸರ್ಕಾರಗಳು ಶಾಸನಿಸಿದರೆ.. ನಡಾವಳಿ ಮಾತ್ರ ಪ್ರಜ್ಞಾವಂತ ಸಮಾಜವೇ ರೂಪಿಸಬೇಕು. ಆದರೆ, ಈಗ ಪ್ರತಿ ಹಂತದಲ್ಲೂ ಸಂಘರ್ಷಕ್ಕೆ ಅವಕಾಶವೀಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕಾರಣ, ಲೋಪ ಎರಡೂ ಬದಿಗಿದೆ.
ಆಚರಣೆ ಹೆಸರು..!
‘ನೀ ಕೊಡೆ.. ನಾ ಬಿಡೆ..’ ಹಗ್ಗಜಗ್ಗಾಟದ ಮಧ್ಯೆ ಈ ವರ್ಷದ ಗಣೇಶೋತ್ಸವಕ್ಕೆ ತುಸು ಹೆಚ್ಚೇ ರಂಗೇರುತ್ತಿದೆ. ಹಾನಿಕಾರಕ ಬಣ್ಣ, ಆಕ್ಸೈಡ್ ಲೇಪಿತ ಪಿಓಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಬೇಡ ಎಂದು ಪರಿಸರ ಸ್ವಯಂಸೇವಕರು ಒಂದೆಡೆ; ಮಣ್ಣಿನ ಗಣಪತಿ ತಯಾರಿಕೆ ಬೇಡಿಕೆಗೆ ತಕ್ಕಷ್ಟಿಲ್ಲ; ಮಣ್ಣಿನ ಗಣಪತಿಗಳ ಬೆಲೆ ಜಾಸ್ತಿ, ಪಿಓಪಿ ಮೂರ್ತಿಗಳು ಈಗಾಗಲೇ ಮಾರಾಟಕ್ಕೆ ಸಜ್ಜಾಗಿವೆ.. ಖರೀದಿಸಿ ತಂದು ಮಾರಾಟಕ್ಕಿಟ್ಟಿರುವ ‘ನವ ಕಲಾವಿದ’ರ ನಷ್ಟ ಭರಿಸುವವರಾರು? ಮತ್ತೊಂದು ವಾದ.
ಹಾಗೊಂದು ವೇಳೆ, ಆಡಳಿತದ ಚುಕ್ಕಾಣಿ ಹಿಡಿದವರು ಒತ್ತಾಯಕ್ಕೆ ಅಂತಿಮ ಕ್ಷಣದಲ್ಲಿ ಮಣಿದರೆ.. ಮಣ್ಣಿನ ಗಣಪತಿ ತಯಾರಿಸಿದವರ ಪಾಡೇನು? ಈ ಎಲ್ಲ ವಿಘ್ನಗಳನ್ನು ಗಣೇಶನೇ ನಿವಾರಿಸಿಕೊಳ್ಳಬೇಕು.. ಅಷ್ಟು ಗೊಂದಲ ಈಗ ಸೃಷ್ಟಿಯಾಗಿದೆ. ಮನಸ್ಸುಗಳನ್ನು ಬೆಸೆಯಬೇಕಾದ ಹಬ್ಬ, ಹಣ ಕೇಂದ್ರಿತವಾದ ಹಿನ್ನೆಲೆ ಗೋಡೆ ಕಟ್ಟಿಕೊಳ್ಳುವ ಹಂತಕ್ಕೆ ಬಂದು ನಿಂತಿದೆ.
ಜಲ ಮೂಲಗಳ ಶುದ್ಧತೆ ಮತ್ತು ಅಳಿದುಳಿದ ಕೆರೆ-ಬಾವಿಗಳ ಸುರಕ್ಷತೆಯ ದೃಷ್ಟಿಯಿಂದ ಮಣ್ಣಿನ ಗಣಪತಿಗಳ ಪ್ರತಿಷ್ಠಾಪನೆ ಮತ್ತು ಮನೆ ಅಂಗಳದಲ್ಲಿಯೇ ವಿಸರ್ಜನೆ.. ಮೂಲಕ ಪರಿಸರ ಸಂರಕ್ಷಣೆಗೇ ಈಗ ಮೊದಲ ಆದ್ಯತೆ ಸಿಗಬೇಕಿರುವುದು.. ಪರಿಸರ ಸ್ನೇಹಿ ಹಬ್ಬದಾಚರಣೆ ನಿರ್ವಿವಾದದ ಸಂಗತಿ.
ಶ್ರೀಸಾಮಾನ್ಯ ಗೊಂದಲದಿಂದ ದೂರ!
ಶ್ರೀಸಾಮಾನ್ಯರಲ್ಲಿ ಮಾತ್ರ ಈ ಬಗ್ಗೆ ಗೊಂದಲವಿಲ್ಲ. ಆದರೆ, ಅನ್ಯ ರಾಜ್ಯಗಳಿಂದ ಪಿಓಪಿ ಮೂರ್ತಿಗಳನ್ನು ಮಾರಾಟಕ್ಕೆ ಖರೀದಿಸಿ ತಂದವರು ಜಿಲ್ಲಾಡಳಿತದ ಮೇಲೆ ಅನುಚಿತ ಪ್ರಭಾವ ಬೀರುತ್ತ, ಕಾನೂನು ಬಲ್ಲವರೂ ’ಜನರ ಬೇಡಿಕೆಯೇ ಹಾಗಿದೆ’ ಎಂದು ಬಿಂಬಿಸುವ ಪ್ರಯತ್ನಕ್ಕಿಳಿದಿರುವುದು ಕಾಳಜಿವುಳ್ಳವರಲ್ಲಿ ಕಳವಳ ಹೆಚ್ಚಿಸಿದೆ.
’ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ವಿಷಯದಲ್ಲಿ ಅವರೇನಾದರೂ ಮಾಡಿಕೊಳ್ಳಲಿ. ವಯಕ್ತಿಕವಾಗಿ ಮನೆ, ಮನೆಗಳ ಪ್ರತಿಷ್ಠಾಪನೆ ನಮ್ಮ ಸ್ವಾತಂತ್ರ್ಯ..’ ಎಂಬ ನಿರ್ಲಿಪ್ತ ಧೋರಣೆ ಶ್ರೀಸಾಮಾನ್ಯ ತಳೆದು, ಮೌನಕ್ಕೆ ಶರಣಾಗಿದ್ದಾನೆ. ಈ ಮಧ್ಯೆ ಅಧಿಕಾರಿಗಳ ಪರಿಸ್ಥಿತಿ ದೇವರಿಗೇ ಪ್ರೀತಿ. ನಿಜಾರ್ಥದಲ್ಲಿ ನಮ್ಮ ಪ್ರತಿನಿಧಿಗಳು ಇವರೇ? ಎಂಬ ಜಿಜ್ಞಾಸೆ ಆರಿಸಿದ ಪ್ರಜೆಗಳದ್ದು. ಈ ಗೊಂದಲದಲ್ಲಿ ಮೇಲುಗೈ ಸಾಧಿಸಿದವರದ್ದೇ ಜಯ!
ಪ್ರತಿಷ್ಠಾಪನೆಗೇ ಇಷ್ಟು ಗೊಂದಲ; ವಿಸರ್ಜನೆಯ ಪರಿ ಎಂತು?
ಇನ್ನೂ ಏನೇನು ಕಾಯ್ದಿದೆ ಎಂಬ ಆತಂಕ ಈಗ ಶ್ರೀಸಾಮಾನ್ಯರಲ್ಲಿ ಮನೆ ಮಾಡಿದೆ. ಜುಲೈ 30, 2002 ರಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾ.ಎಂ.ಎಫ್. ಸಾಲ್ಡಾನಾ ಅವರು ನೀಡಿರುವ ಸ್ಪಷ್ಟ ನಿರ್ದೇಶನ. ಶಬ್ದ ಮಾಲಿನ್ಯದ ದೂರುಗಳನ್ನು ದಾಖಲಿಸಲು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ರಿಜಿಸ್ಟರ್ ಮತ್ತು ದೂರು ಬಂದ ತತ್ಕ್ಷಣ ಕ್ರಮ ಕೈಗೊಳ್ಳಬೇಕು. ರಾಜ್ಯಾಡಳಿತವೇ ಕ್ರಮ ಕೈಗೊಳ್ಳಬೇಕಿರುವುದರಿಂದ ದೂರುದಾರರ ವಿಳಾಸ ಅಪ್ರಸ್ತುತ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೇಮಿಸಿರುವ ಶಬ್ದ ಮಾಲಿನ್ಯ ಹತೋಟಿಯ ರಾಷ್ಟ್ರೀಯ ಸಮಿತಿ, ಎಲ್ಲ ಉಪಕರಣ ಮತ್ತು ಲೇಬಲ್ಲಿನ ಮೇಲೆ ಅವುಗಳ ಸದ್ದಿನ ತೀವ್ರತೆ ಸೂಚಿಸುವುದು ಕಡ್ಡಾಯ ಎಂದು 1999ರಲ್ಲಿ ಸ್ಪಷ್ಟ ನಿರ್ದೇಶನ ನೀಡಿದೆ.
ಸದ್ದಿನ ತೀವ್ರತೆಯ ಗರಿಷ್ಠ ಮಿತಿ ನಿಗದಿ
ವಾಸದ ಮನೆಗಳಿರುವ ಪ್ರದೇಶದಲ್ಲಿ ಸದ್ದಿನ ಗರಿಷ್ಠ ಮಿತಿ ಹಗಲು 55 ಡೆಸಿಬಲ್ಗಳು ಮತ್ತು ರಾತ್ರಿ 45 ಡೆಸಿಬಲ್ಸ್. ಗರಿಷ್ಠ ಮಿತಿಯ 85 ಡೆಸಿಬಲ್ಸ್ಗಿಂತ ಹೆಚ್ಚು ಸದ್ದು ಸೌಂಡ್ ಸಿಸ್ಟಿಮ್ ಹೊರಡಿಸುತ್ತಿದ್ದರೆ ಕಾನೂನು ಪ್ರಕಾರ ಕ್ರಮ ನಿಶ್ಚಿತ. ಅಂದಹಾಗೆ, ಡಾಲ್ಬಿ ಸೌಂಡ್ ಸಿಸ್ಟಿಮ್ ಸ್ಪೀಕರ್ಗಳ ಒಟ್ಟು ಶಬ್ದದ ತೀವ್ರತೆ 90 ಡೆಸಿಬಲ್ಗಳಿಂದ 140 ಡೆಸಿಬಲ್ಗಳ ವರೆಗೆ! ಜೆಟ್ ವಿಮಾನದ ಹಾರುವ ಸದ್ದಿನಷ್ಟು ರಾತ್ರಿಯ ವೇಳೆ ಅಬ್ಬರ, ಜೊತೆಗೆ 110 ಡೆಸಿಬಲ್ ತೀವ್ರತೆಯಲ್ಲಿ ಸಂಗೀತ..! ಶಿಕ್ಷಾರ್ಹ ಅಪರಾಧವಿದು.
ಕಿವಿಗೆ ಅರಿವಾಗುವ ಸದ್ದಿನ ತೀವ್ರತೆ 0 ಡೆಸಿಬಲ್, ಮತ್ತು ಕಿವಿಗೆ ನೋವು ನೀಡುವ ಸದ್ದಿನ ತೀವ್ರತೆ 140 ಡೆಸಿಬಲ್! ಗಮನಿಸಿ: ಕಿವಿಯಲ್ಲಿ ನೋವುಂಟುಮಾಡುವ ಸದ್ದಿನ ತೀವ್ರತೆಯು ಕಿವಿ ಕೇಳುವ ಅತ್ಯಂತ ಸೂಕ್ಷ್ಮ ಸದ್ದಿನ ತೀವ್ರತೆಗಿಂತ 10 ಮಿಲಿಯನ್ ಪಟ್ಟು ಅಧಿಕ! ಇದು ಬೇಕೆ? ನಮ್ಮಂತೆ ಇತರ ಪ್ರಾಣಿ-ಪಕ್ಷಿಗಳೂ ಈ ಭೂಮಿಯ ಮೇಲೆ ಇವೆಯಲ್ಲ! ಪಟಾಕಿಯ ಸದ್ದೂ ಈ ಸಾಲಿಗೇ ಸೇರುತ್ತದೆ! ಪಟಾಕಿಗಳಿಂದ ವಾಯು ಮಾಲಿನ್ಯವೂ ಅಧಿಕ. ಬಳಕೆಗೂ ಮಿತಿ ಇಲ್ಲ. ಮಾರಾಟಗಾರರೂ, ಬಳಕೆದಾರರ ಹಿತ ಕಾಯಲು ಶ್ರೀಸಾಮಾನ್ಯ ಅನುಭವಿಸಬೇಕಾದ ಶಿಕ್ಷೆಗಳಿವು.. ಹಬ್ಬದ ಹೆಸರಿನಲ್ಲಿ.
ಪ್ಲಾಸ್ಟಿಕ್ ಮತ್ತು ಫೈಬರ್ ವಸ್ತುಗಳದ್ದೇ ಭರಾಟೆ
ಈ ಬಾರಿ ಗಣೇಶೊತ್ಸವ ಅಲಂಕಾರಕ್ಕೆ ದೀಪಗಳಿಂದ ಹಿಡಿದು ಹಣ್ಣುಗಳ ವರೆಗೆ, ತೋರಣದಿಂದ ಹಿಡಿದು ಹೂಗಳ ವರೆಗೆ ಪ್ಲಾಸ್ಟಿಕ್ ಮತ್ತು ಫೈಬರ್ ವಸ್ತುಗಳದ್ದೇ ಭರಾಟೆ. ‘ಚೀಪ್ ಆಂಡ್ ಬೆಸ್ಟ್’ ಮಾದರಿಯಲ್ಲಿ, ‘ಬಳಸು-ಬಿಸಾಕು’ ಶೈಲಿಯ ಈ ವಸ್ತುಗಳನ್ನು ಹಬ್ಬದ ನಂತರ ಎಲ್ಲಿ ಮತ್ತು ಹೇಗೆ? ಜಿಲ್ಲಾಡಳಿತ, ತಾಲೂಕಾಡಳಿತಗಳು ವಿಸರ್ಜಿಸಬೇಕು? ಕೊಂಡು ತಂದು, ಬಳಸಿ ನಂತರ ಕಸದ ತೊಟ್ಟಿಗೆ ನೇರವಾಗಿ ಬಿಸಾಕಿದರೆ ನಮ್ಮ ಕೆಲಸ ಮುಗಿಯಿತು! ನಮ್ಮ ಓಣಿಗಳ ಒಳ ಚರಂಡಿ ವ್ಯವಸ್ಥೆ ಮತ್ತು ಗಟಾರು ಪ್ಲಾಸ್ಟಿಕ್ನಿಂದ ತಾಳ್ಮೆಗೆಟ್ಟು ಸತತ ರಂಪ ಮಾಡುತ್ತಿರುವುದು, ರಸ್ತೆಗಳ ಮೇಲೆ ಹೊಲಸು ಗಬ್ಬೆದ್ದು ಹರಡಿ, ಅನಾರೋಗ್ಯ ವಾತಾವರಣ ಉಂಟುಮಾಡುತ್ತಿರುವುದು ನಮ್ಮ ಅನುಭವಕ್ಕಿದೆ.
ಗೀಜಗನ ಗೂಡೂ ಅಲಂಕಾರಕ್ಕೆ!
ಇಷ್ಟು ಸಾಲದು ಎಂಬಂತೆ, ತನ್ನ ವಂಶಾಭಿವೃದ್ಧಿಗೆಂದು ಸಂಗಾತಿಯನ್ನು ಓಲೈಸಿ, ಆಕರ್ಷಿಸಲು ಗೀಜಗ ಹಾಳು ಬಾವಿ, ಪಾಳು ಕೊತ್ತಲ, ಕೆರೆಗಳ ಬದಿಯ ಬಳ್ಳಾರಿ ಜಾಲಿ ಮುಳ್ಳು ಕಂಟಿ ಪೊದೆಗೆ ಹೆಣೆಯುವ ಗೂಡುಗಳನ್ನು ಜೀವ ಒತ್ತೆ ಇಟ್ಟು ಮರಿ, ತತ್ತಿಗಳ ಸಮೇತ ಕಿತ್ತು ತಂದು, ಇಪ್ಪತ್ತು ರೂಪಾಯಿಗೆ ಮಾರುವವರಿದ್ದಾರೆ. ಗಣೇಶನ ಅಲಂಕಾರಕ್ಕೆಂದು ಕೊಂಡುಕೊಳ್ಳುವವರಿದ್ದಾರೆ. ಬೆಳ್ಳಂಬೆಳಗ್ಗೆ ಈ ಮಾರಣಹೋಮ ಸದ್ದಿಲ್ಲದೇ ನಡೆದುಹೋಗುತ್ತದೆ. ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ 1972, ಭಾಗ ೩ರಲ್ಲಿ ನಮೂದಿಸಿದಂತೆ ಮಾರುವವರು ಮತ್ತು ಖರೀದಿಸುವವರು ಇಬ್ಬರ ಮೇಲೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಅವಕಾಶವಿದೆ.
ಮತ್ತೆ ಈ ಬಾರಿ ವನ್ಯಜೀವಿಗಳ ಗೌರವ ಕ್ಷೇಮ ಪಾಲಕರು, ಪರಿಸರಾಸಕ್ತ ಸ್ವಯಂ ಸೇವಕರು ಹಾಗೂ ಅರಣ್ಯ ಸಿಬ್ಬಂದಿ ತಂಡಗಳನ್ನು ರಚಿಸಿಕೊಂಡು, ಗ್ರಾಮೀಣ ಭಾಗದಲ್ಲಿ ಗೂಡುಗಳ ಮೇಲೆ ದಾಳಿ ನಡೆಸದಂತೆ, ಅವುಗಳನ್ನು ರಕ್ಷಿಸುವಂತೆ ತಿಳಿವಳಿಕೆ ಮೂಡಿಸಲು ಮುಂದಾಗಿದ್ದಾರೆ.
ಗಣೇಶನ ಅಕ್ಕ-ಪಕ್ಕ ಅಲಂಕಾರಕ್ಕೆಂದು, ದುಡ್ಡಿಗಾಗಿ ಮುಳ್ಳುಕಂಟಿ ಕಡಿದು ತರುವವರು, ಹಕ್ಕಿಗಳ ಗೂಡು, ಮರಿ, ಮೊಟ್ಟೆಗಳನ್ನು ಹಾಳುಗೆಡವಿ ತರುತ್ತಾರೆ ಎಂಬ ಪಾಪಪ್ರಜ್ಞೆ ನಮ್ಮನ್ನು ಕಾಡಬೇಕು. ಮೇಲಾಗಿ, ಇವು ಯಾವವೂ ಅವಶ್ಯಕ ಪೂಜಾ ಸಾಮಗ್ರಿಗಳಲ್ಲ. ಇವೆಲ್ಲ ಇಲ್ಲದೆಯೂ ಗಣೇಶನನ್ನು ಸಂಪ್ರೀತಗೊಳಿಸಲು ಸಾಧ್ಯವಿದೆ. ಹಬ್ಬಕ್ಕೊಂದು ಹೊಸ ಭಾಷ್ಯ ಸೃಷ್ಟಿಸಬಹುದಾಗಿದೆ.
ಮೇಲಾಗಿ, ಗಣೇಶ ವಿಘ್ನನಿವಾರಕ; ನಮ್ಮಂತೆ ವಿಘ್ನ ಸಂತೋಷಿ ಅಲ್ಲ!
ಹಬ್ಬಗಳು, ಆಚರಣೆಗಳು ಶಾಂತಿ, ನೆಮ್ಮದಿ, ಸುಖ ತಂದರೆ, ಮನಸ್ಸನ್ನು ಅರಳಿಸಿದರೆ ಅದಕ್ಕೊಂದು ಅರ್ಥ. ಹೌದು, ನಮ್ಮ ಮುಂದಿನ ಪೀಳಿಗೆಗೆ ನಾವು ಹಾಕಿಕೊಡುತ್ತಿರುವ ಸಂಪ್ರದಾಯವಾದರೂ ಎಂತಹುದು?
ಮನಸ್ಸನ್ನು ಅರಳಿಸುವ ಬದಲು ಕೆರಳಿಸುವ ಅರ್ಥಹೀನ, ತೋರಿಕೆಯ, ಪ್ರತಿಷ್ಠೆಯ, ಧರ್ಮ-ದೇವರ ಹೆಸರಿನಲ್ಲಿ ಢಂಬಾಚಾರ ಮತ್ತು ಕಂದಾಚಾರದ ಆಚರಣೆಗಳ ಅಬ್ಬರ ಹಬ್ಬಗಳ ಮೂಲ ಆಶಯವನ್ನೇ ಕಳೆಯುತ್ತದೆ ಎಂಬ ವಿವೇಕ, ವಿವೇಚನೆ ಈ ನೆಲದ ಎಲ್ಲ ಕಾನೂನುಗಳನ್ನು ಮೀರಿದ ನೈತಿಕವಾದ ಮೇಲ್ಪಂಕ್ತಿಯ ನಡವಳಿಕೆ.. ನಮ್ಮದಾಗಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.