ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು. ಅತೀ ಚಿಕ್ಕವಯಸ್ಸಿಗೇ ಕೇವಲ 19 ರ ಹರೆಯದಲ್ಲಿ ನೇಣುಗಂಬ ವೇರಿದ ಪ್ರಥಮ ಬಲಿದಾನಿ ಖುದಿರಾಮ್ ಬೋಸ್.
ಕಿಂಗ್ಸ್ ಫೊರ್ಡ್ ಎಂಬ ಬ್ರಿಟೀಷ್ ನ್ಯಾಯಾಧೀಶ ಕಲ್ಕತ್ತಾದಲ್ಲಿ ಸ್ವಾತಂತ್ರ್ಯಹೋರಾಟಗಾರರಿಗೆ ಘೋರಾತಿಘೋರ ಶಿಕ್ಷೆಗಳನ್ನು ಕೊಡುತ್ತಾ ವಿಕೃತ ಆನಂದವನ್ನು ಅನುಭವಿಸುತ್ತಿದ್ದ. ಭಾರತೀಯರ ಮೇಲೆ ಆತನ ದೌರ್ಜನ್ಯ ಮಿತಿಮೀರಿತ್ತು. ಈತನ ಕ್ರೌರ್ಯಕ್ಕೆ ಕೊನೆಹಾಡಬೇಕೆಂದು ನಿರ್ಧರಿಸಿದ ಖುದಿರಾಮ್ ಕಿಂಗ್ಸ್ ಫೊರ್ಡ್ ನನ್ನ ಕೊಲ್ಲುವ ಯತ್ನ ಮಾಡಿದ. ಆದರೆ ಕಿಂಗ್ಸ್ ಫೊರ್ಡ್ ಬಚಾವಾದ. ಆದರೂ ಆಪ್ರಯತ್ನದಲ್ಲಿ ಈ ಪ್ರಖರ ದೇಶಭಕ್ತನಿಗೆ ಗಲ್ಲುಶಿಕ್ಷೆಯಾಯ್ತು.
ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಈಘಟನೆಯ ಪರಿಣಾಮ ಮಹತ್ತರವಾದದ್ದು. ಬ್ರಿಟಿಷ್ ಸಾಮ್ರಾಜ್ಯದ ದರ್ಪವನ್ನು ನುಚ್ಚುನೂರು ಮಾಡಿದ ಈ ಕೆಲಸದ ರೂವಾರಿ ಹತ್ತೊಂಭತ್ತರ ಹುಡುಗ ಖುದಿರಾಮ್ ಭೋಸ್. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮೊದಲ ಬಾರಿಗೆ ಬಾಂಬ್ ಬಳಸಿದ್ದು ಕೂಡ ಇದೇ ಖುದಿರಾಮ್ ಬೋಸ್!.
1889 ನೆಯ ಡಿಸೆಂಬರಿನಲ್ಲಿ ಜನ್ಮತಾಳಿದ ಖುದಿರಾಮ್ ಬೋಸ್ ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡರು. ಅವರ ಅಕ್ಕ ಭಾವನ ಅಕ್ಕರೆಯಲ್ಲಿ ಬೆಳೆದ ಖುದಿರಾಮ್ ಬೋಸರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಕ್ರಾಂತಿಕಾರಿಗಳೊಂದಿಗೆ ಗುರುತಿಸಿಕೊಂಡರು. ಬಂಕಿಮಚಂದ್ರರು ಬರೆದ ‘ಆನಂದ ಮಠ’ ಮತ್ತು ‘ಆನಂದದಾತ’ ಕಾದಂಬರಿಗಳೂ ಅವರ ಮೇಲೆ ಅತ್ಯಂತ ಪ್ರಭಾವ ಬೀರಿದ್ದವು. `ವಂದೇ ಮಾತರಂ’ ಗೀತೆಯಂತೂ ಇವರ ನರನಾಡಿಗಳಲ್ಲಿ ದೇಶ ಭಕ್ತಿ ಉಕ್ಕಿ ಹರಿಯುವಂತೆ ಮಾಡಿತ್ತು. ಹೀಗಾಗಿ ಸುಮಾರು ಹದಿನೈದರ ಹರೆಯದಲ್ಲಿಯೇ ದೇಶಭಕ್ತಿಯನ್ನು ಮೈಗೂಡಿಸಿಕೊಂಡ ಬೋಸ್ ಕ್ರಾಂತಿಕಾರಿ ಸಂಘಟನೆಗಳ ಜೊತೆಗೆ ನಿಕಟ ಸಂಬಂಧವನ್ನಿಟ್ಟುಕೊಂಡದ್ದಲ್ಲದೇ ಅದರ ಪ್ರಚಾರ ಕಾರ್ಯಕ್ಕೆ ತೊಡಗಿ ಕರಪತ್ರಗಳನ್ನು ಹಂಚುತ್ತಿದ್ದಾಗ ಸಿಕ್ಕಿಬಿದ್ದು ಪುನಃ ಬಿಡುಗಡೆಗೊಂಡರು.
ಆಗ ತಾನೇ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಕಾಳ್ಗಿಚ್ಚಾಗಿ ಭುಗಿಲೆದ್ದಿತು. ಇದಕ್ಕೆ ಹಲವಾರು ಪತ್ರಿಕೆಗಳು ಕುಮ್ಮಕ್ಕು ನೀಡುತ್ತಿದ್ದವು. ಹೀಗಾಗಿ ಬ್ರಿಟಿಷರ ವಿರುದ್ಧವಾಗಿ ಬರೆದ ಪತ್ರಿಕೆಗಳ ಮೇಲೆ ಮೊಕದ್ದಮೆ ಹೂಡಲಾಗುತ್ತಿತ್ತು. ಅರವಿಂದ ಘೋಷರ ಪ್ರಕಾಶನದಲ್ಲಿ ಹೊರಬರುತ್ತಿದ್ದ ‘ವಂದೇ ಮಾತರಂ’ ಪತ್ರಿಕೆಯೂ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಮೊಕದ್ದಮೆಯ ವಿಚಾರಣೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ನಿರಾಯುಧ ಗುಂಪಿನ ಮೇಲೆ ಬ್ರಿಟಿಷರು ಅನವಶ್ಯಕವಾಗಿ ಲಾಠಿ ಪ್ರಹಾರ ಮಾಡಿದರು. ಇದರಿಂದ ಕೆರಳಿದ ಹದಿನೈದು ವರ್ಷದ ಸುಶೀಲ್ ಸೇನ್ ಬ್ರಿಟಿಷ್ ಅಧಿಕಾರಿಗೆ ತಿರುಗಿಸಿ ಹೊಡೆದರು. ಇದರಿಂದ ರೊಚ್ಚಿಗೆದ್ದ ಬ್ರಿಟಿಷ್ ಅಧಿಕಾರಿ ಕಿಂಗ್ಸ್ ಫೋರ್ಡನು ಆ ಯುವಕನನ್ನು ಮ್ಯಾಜಿಸ್ಟ್ರೇಟ್ ಮುಂದೆ ನಿಲ್ಲಿಸಿ ಆತನ ವಯಸ್ಸನ್ನು ಲೆಕ್ಕಿಸದೆ 15 ಛಡಿ ಏಟಿನ ಶಿಕ್ಷೆ ವಿಧಿಸಿ ವಿಕೃತಿ ಮೆರೆದನು.
ಸುಶೀಲ್ ಕುಮಾರರೇನೋ ಶಿಕ್ಷೆಯನ್ನು ಸಂತೋಷದಿಂದಲೇ ಸ್ವೀಕರಿಸಿದರು. ಆದರೆ ಈ ಅಪ್ರಾಪ್ತ ಬಾಲಕನ ಮೇಲೆ ಲಾಠಿ ಬೀಸಿದ್ದಲ್ಲದೆ, ಉಗ್ರಶಿಕ್ಷೆಗಳನ್ನು ನೀಡುತ್ತಿದ್ದ ಬ್ರಿಟಿಷರ ದಬ್ಬಾಳಿಕೆಯನ್ನು ಸಹಿಸದ ಕ್ರಾಂತಿಕಾರಿಗಳು ಕಿಂಗ್ಸ್ ಫೋರ್ಡನನ್ನು ಮುಗಿಸಲು ತೀರ್ಮಾನಿಸಿದರು. ಇದರ ಸುಳಿವು ಹತ್ತಿದ ಬ್ರಿಟಿಷ್ ಸರ್ಕಾರ ಕಿಂಗ್ಸ್ ಫೋರ್ಡನನ್ನು ಮುಜಾಫರಪುರಕ್ಕೆ ವರ್ಗ ಮಾಡಿತು.
ಹೇಗಾದರಾಗಲಿ ಕಿಂಗ್ಸ್ ಫೋರ್ಡನನ್ನು ಕೊಲ್ಲಲೇಬೇಕು ಎನ್ನುವ ದೃಢ ನಿರ್ಧಾರ ಮಾಡಿದ್ದ ಕ್ರಾಂತಿಕಾರಿಗಳು, ಈ ಕಾರ್ಯವನ್ನು ಯುಗಾಂತರ ಗುಂಪಿನ ನಾಯಕರಾದ ಸತ್ಯೇಂದ್ರನಾಥ ಬೋಸ್, ಖುದಿರಾಮ್ ಬೋಸ್ ಮತ್ತು ಆತನ ಸಹ ಕ್ರಾಂತಿಕಾರಿ ಪ್ರಫುಲ್ ಚಾಕಿಗೆ ವಹಿಸಿದರು. ಆಜ್ಞೆಯಂತೆ ತೆರಳಿದ ಈ ಕ್ರಾಂತಿಕಾರಿಗಳು ಕಿಂಗ್ಸ್ ಫೋರ್ಡನ ಚಲನವಲನಗಳನ್ನು ಗಮನಿಸತೊಡಗಿದರು.
ಕಿಂಗ್ಸ್ ಫೋರ್ಡನು ಸಂಜೆ ಕ್ಲಬ್ಬಿನಿಂದ ಮನೆಗೆ ಬರುವ ದಾರಿಯಲ್ಲಿ ಕಾರಿನ ಮೇಲೆ ಬಾಂಬ್ ಹಾಕಲು ನಿರ್ಧರಿಸಲಾಗಿತ್ತು. ಎಂದಿನಂತೆ ಕಾರು ಹೊರಟು ಬಂದಿತು. ಅದರೊಳಗೆ ಯಾರಿದ್ದಾರೆಂದು ಗಮನಿಸದೆ ಬೋಸ್ ಮತ್ತು ಚಾಕಿ ಬಾಂಬ್ ಎಸೆದರು. ಕಿಂಗ್ಸ್ ಫೋರ್ಡ್ ಬದಲಾಗಿ ಅದರಲ್ಲಿದ್ದ ಇಬ್ಬರು ಮಹಿಳೆಯರು ಅಸುನೀಗಿದರು. ಇತ್ತ ಕಿಂಗ್ಸ್ ಫೋರ್ಡನನ್ನು ಕೊಂದೆವೆಂದುಕೊಂಡ ಈ ಹುಡುಗರು ಒಂದೊಂದು ದಿಕ್ಕಿಗೊಬ್ಬರು ಓಡಿದರು. ಈ ಘಟನೆ ನಡೆದದ್ದು 1908ನೆ ಏಪ್ರಿಲ್ 30ರಂದು.
ಕ್ರಾಂತಿಕಾರಿಗಳು ಎಸೆದ ಬಾಂಬು ಕಿಂಗ್ಸ್ ಫೋರ್ಡನನ್ನು ಕೊಲ್ಲಲಿಲ್ಲವಾದರೂ, ಇಡೀ ಬ್ರಿಟಿಷ್ ಸಾಮ್ರಾಜ್ಯಕ್ಕೇ ಮೊದಲ ನಡುಕ ಹುಟ್ಟಿಸಿಬಿಟ್ಟಿತ್ತು. ಈ ಹುಡುಗರು ಎಸೆದ ಬಾಂಬು ಕೇವಲ ಕಿಂಗ್ಸ್ ಫೋರ್ಡನ ವಾಹನ ಚೂರು ಚೂರು ಮಾಡಿದ್ದಲ್ಲದೆ ಬ್ರಿಟಿಷ್ ಸಾಮ್ರಾಜ್ಯದ ಅಹಂಕಾರ ಮತ್ತು ದರ್ಪವನ್ನು ನುಚ್ಚುನೂರು ಮಾಡಿ ಹಾಕಿತ್ತು.
ಮುಜಾಫುರದಿಂದ ಸುಮಾರು, 25 ಮೈಲುಗಳಾಚೆ ಯುವಕ ಖುದಿರಾಮ್ ಬೋಸರನ್ನು ಸೆರೆಹಿಡಿಯಲಾಯಿತು. ತಪ್ಪಿಸಿಕೊಳ್ಳಲು ಆತ ಮಾಡಿದ ಎಲ್ಲ ಸಾಹಸಗಳು ವ್ಯರ್ಥವಾಗಿ ಬಂಧನವಾಗಿ ಹೋಯಿತು. ಅವರ ಮೇಲೆ ವಿಚಾರಣೆ ಎಂಬ ನಾಟಕ ನಡೆದು ಕೊನೆಗೆ ಮರಣದಂಡನೆಯನ್ನು ವಿಧಿಸಲಾಯಿತು. 1908 ರ ಆಗಸ್ಟ್ 11 ರಂದು ಗಲ್ಲಿಗೇರಿಸಲಾಯಿತು.
ಇತ್ತ ಪ್ರಫುಲ್ ಚಾಕಿ ಪೊಲೀಸರೊಂದಿಗೆ ಹೋರಾಡುತ್ತಿರುವಾಗ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದು ಗೊತ್ತಾಗುತ್ತಿದ್ದಂತೆ ತಮ್ಮ ರಿವಾಲ್ವರ್ನಿಂದ ತಾವೇ ಸುಟ್ಟುಕೊಂಡು ಅಮರರಾದನು.
1908 ರ ದಿನದಂದು ಕೇವಲ ತನ್ನ ಹದಿನೆಂಟರ ಹರೆಯದಲ್ಲೇ ಯುವ ಕಿಡಿಯೊಂದು ದೇಶಕ್ಕಾಗಿ ತನ್ನ ತಲೆಯನ್ನು ನೇಣುಗಂಬಕ್ಕೆ ಒಡ್ಡಿಕೊಂಡಿತು. ಆ ಮಹಾನ್ ಚೇತನವೇ ಖುದಿರಾಮ್ ಬೋಸ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.