ಮಂಗಳೂರು : ಜೀವನದಲ್ಲಿ ಯಾವ ರೀತಿಯಲ್ಲಿ ಸಾಧನೆ ಮಾಡಬಹುದು, ಯಾವ ರೀತಿಯಲ್ಲಿ ನಡೆದರೆ ಯಶಸ್ಸನ್ನು ಪಡೆಯಬಹುದು ಎಂಬುದನ್ನು ಇದೇ ಕಾಲೇಜಿನಲ್ಲಿ ಕಲಿತು ಇಂದು ಉದ್ಯಮ ಕ್ಷೇತ್ರ, ಕಲಾಕ್ಷೇತ್ರ, ಸಂಗೀತ ಕ್ಷೇತ್ರ, ಪತ್ರಿಕಾ ಮಾಧ್ಯಮ, ಸಮಾಜ ಸೇವೆ ಹೀಗೆ ನಾನಾ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಯ ಮೂಲಕ ಜಗತ್ತಿಗೆ ಚಿರಪರಿಚಿತರಾಗಿರುವ ದುಬೈಯ ಖ್ಯಾತ ಉದ್ಯಮಿ ಹಾಗೂ ‘ಮಾರ್ಚ್ -22’ ಕನ್ನಡ ಸಿನಿಮಾದ ನಿರ್ಮಾಪಕರಾದ ಶ್ರೀಯುತ ಹರೀಶ್ ಶೇರಿಗಾರ್ ಅವರನ್ನು ನೋಡಿ ಕಲಿಯಿರಿ ಎಂದು ಖ್ಯಾತ ಚಲನ ಚಿತ್ರ ನಟ ಅನಂತ್ ನಾಗ್ ಹೇಳಿದರು.
ಅವರು ಶನಿವಾರ ಮಂಗಳೂರಿನ ಶ್ರೀ ಗೋಕರ್ಣನಾಥ ಕಾಲೇಜ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಗೋಕರ್ಣನಾಥ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಹರೀಶ್ ಶೇರಿಗಾರ್ ಅವರು ಒಬ್ಬ ಸಾಧನೆಯ ಮಾದರಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅವರು ಮಂಗಳೂರಿಗೆ, ನಮ್ಮ ಜಿಲ್ಲೆಗೆ, ನಮ್ಮ ನಾಡಿಗೆ, ನಮ್ಮ ದೇಶಕ್ಕೆ ಸಾಧನೆಯಿಂದ ಏನು ಬೇಕಾದರೂ ಸಾಧಿಸಬಹುದೆಂಬುವುದನ್ನು ತೋರಿಸಿಕೊಟ್ಟವರು. ಅವರ ಹಾದಿಯಲ್ಲಿ ನಡೆದರೆ ಹೇಗೆ ಸಾಧನೆ ಮಾಡಬಹುದೆಂಬುವುದನ್ನು ತಿಳಿದುಕೊಳ್ಳಬಹುದು. ತಾನು ಕಲಿತ ಸಂಸ್ಥೆಯನ್ನು ಮರೆಯದೆ ಸದಾ ನೆನೆಯುತ್ತಾ ಕೊಡುಗೆಗಳನ್ನು ಸಲ್ಲಿಸುವುದರ ಜೊತೆಗೆ ವಿದ್ಯಾ ಸಂಸ್ಥೆಯ ಅಭಿವೃದ್ಧಿಗೆ ಸಹಾಯ ಹಸ್ತ ನೀಡುತ್ತಿರುವ ಹರೀಶ್ ಶೇರಿಗಾರ್ ಅವರ ಮಾದರಿಯನ್ನು ವಿದ್ಯಾರ್ಥಿ ಜೀವನದಿಂದಲೇ ಕಣ್ಮುಂದೆ ಇಟ್ಟುಕೊಂಡು ಗುರು ಹಿರಿಯರನ್ನು, ತಂದೆ ತಾಯಿಗಳನ್ನು ಸ್ಮರಿಸುತ್ತಾ ಜೀವನದಲ್ಲಿ ಯಶಸ್ಸು ಕಾಣಿರಿ ಎಂದು ವಿದ್ಯಾರ್ಥಿಗಳಿಗೆ ಅನಂತ್ ನಾಗ್ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆಕ್ಮೆ ( ACME) ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಆಡಳಿತಾ ನಿರ್ದೇಶಕ ಹಾಗೂ ಮಾರ್ಚ್ – 22 ಕನ್ನಡ ಸಿನಿಮಾದ ನಿರ್ಮಾಪಕ, ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಅವರು ಮಾತನಾಡಿ, ಕಠಿಣ ಪರಿಶ್ರಮದಿಂದ ಕಲಿತು ಸತತ ಸಾಧನೆ ಮಾಡಿದರೆ ಜೀವನದಲ್ಲಿ ಯಶಸ್ಸು ಖಂಡಿತ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ತಾವೆಲ್ಲಾ ಸಾಧನೆಯ ಹಾದಿಯಲ್ಲಿ ನಡೆಯ ಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಯಾರೂ ಕೂಡ ಹುಟ್ಟುವಾಗಲೇ ಬುದ್ಧಿವಂತರಾಗಿರುವುದಿಲ್ಲ. ವಿದ್ಯಾಭ್ಯಾಸ, ನಮ್ಮ ಶೃಮ ನಮ್ಮನ್ನು ಬುದ್ಧಿವಂತರನ್ನಾಗಿ ಮಾಡುತ್ತದೆ. ಬರೀ ಮಾರ್ಕ್ ತೆಗೆಯುವುದು ಮಾತ್ರ ವಿದ್ಯಾಭ್ಯಾಸವಲ್ಲ. ನಮ್ಮ ಸಾಧನೆಗೆ ನಮ್ಮ ಬುದ್ದಿವಂತಿಗೆ ಮತ್ತು ಲೋಕಜ್ಞಾನ ಕೂಡ ಪೂರಕವಾಗುತ್ತದೆ. ದೃಡವಾದ ನಂಬಿಕೆಯಿಂದ ಮುನ್ನುಗ ಬೇಕು. ಉತ್ತಮ ಸಾಧನೆಯ ಮೂಲಕ ದೇಶ ವಿದೇಶಗಳಲ್ಲಿ ಕಾಲೇಜಿನ ಹೆಸರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯ ಬೇಕು ಎಂದು ಹೇಳಿದರು.
ನೂತನವಾಗಿ ಅಸ್ತಿತ್ವಕ್ಕೆ ಬಂದಂತಹ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸ ಬೇಕು ಎಂದು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಸಲಹೆ ನೀಡಿದ ಅವರು ಸಂಘದ ನೂತನ ಪದಾಧಿಕಾರಿಗಳಿಗೆ ಶುಭಕೋರಿದರು.
ಮಂಗಳೂರು ಲಯನ್ಸ್ ಕ್ಲಬ್ನ ಅಧ್ಯಕ್ಷ ಲಯನ್ ವೆಂಕಟೇಶ್ ಬಾಳಿಗಾ, ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘದ ಕಾರ್ಯದರ್ಶಿ ವಸಂತ್ ಕಾರಂದೂರ್ ಅತಿಥಿಗಳಾಗಿದ್ದರು. ಕಾಲೇಜಿನ ಸಂಚಾಲಕರಾದ ಎಸ್. ಜಯವಿಕ್ರಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜು ಆಡಳಿತ ಸಮಿತಿ ಸದಸ್ಯರಾದ ಡಾ. ಬಿ.ಜಿ ಸುವರ್ಣ, ಶೇಖರ್ ಪೂಜಾರಿ, ಪ್ರೋ. ರೇಣುಕಾ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುನೀಲ್ ದತ್ತ್ ಪೈ, ನೂತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರವನ್ ವಿ. ಪುತ್ರನ್, ಕಾರ್ಯದರ್ಶಿ ಚೇತಾನ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಗಂಗಾಧರ್ ಬಿ ಸ್ವಾಗತಿಸಿದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಉಮ್ಮಪ್ಪ ಪೂಜಾರಿ ನೂತನವಾಗಿ ಅಯ್ಕೆಯಾದ ಸಂಘದ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಪ್ರಮಾಣ ವಚನ ಭೋಧಿಸಿದರು. ವಿದ್ಯಾರ್ಥಿ ಸಂಘದ ಸಹಕಾರ್ಯದರ್ಶಿ ದೀಕ್ಷಿತಾ ಧನ್ಯಾವಾದ ಸಮರ್ಪಿಸಿದರು.
ವರದಿ / ಚಿತ್ರ : ಸತೀಶ್ ಕಾಪಿಕಾಡ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.